Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಇಷ್ಟೆಲ್ಲ ಆದ ಮೇಲೂ ಗಣಿ ಕಂಪನಿಗಳ ದಾಳದಿಂದ ದೂರ ಉಳಿದಿಲ್ಲ ಕಪ್ಪತಗುಡ್ಡ!

ಹಲವು ಸಂಘಟನೆಗಳ ಅವಿರತ ಹೋರಾಟದ ನಂತರ ಕೊನೆಗೂ ಕಪ್ಪತಗುಡ್ಡ ರಕ್ಷಣೆಯಾಯಿತು ಎಂದು ನೀವೇನಾದರೂ ಭಾವಿಸಿದ್ದರೆ ಅದು ಭ್ರಮೆ ಆದೀತು!
ಇಷ್ಟೆಲ್ಲ ಆದ ಮೇಲೂ ಗಣಿ ಕಂಪನಿಗಳ ದಾಳದಿಂದ ದೂರ ಉಳಿದಿಲ್ಲ ಕಪ್ಪತಗುಡ್ಡ!
Pratidhvani Dhvani

Pratidhvani Dhvani

May 6, 2019
Share on FacebookShare on Twitter

ಏನೆಲ್ಲ ಸವಾಲುಗಳು ಎದುರಾದರೂ ಧೃತಿಗೆಡದ ಪರಿಸರಪ್ರೇಮಿಗಳು, ಸ್ವಾಮೀಜಿಗಳು ಹಾಗೂ ಜನರು ಧೃತಿಗೆಡದೆ ಹೋರಾಡಿ ಕೊನೆಗೂ ಕಪ್ಪತಗುಡ್ಡವನ್ನು ವನ್ಯಧಾಮವನ್ನಾಗಿ ಮಾಡಿಸಿದರು. ಹಾಗಂತ ಸುಮ್ಮನೆ ಕೂಡುವ ಕಾಲ ಇದಲ್ಲ. ಕಾರಣ, ಇದು ಅಷ್ಟಕ್ಕೇ ಮುಗಿದಿಲ್ಲ! ಹಲವರ ಹದ್ದಿನ ಕಣ್ಣುಗಳು ಇಲ್ಲಿನ ಸಂಪತ್ತು ದೋಚಲು ತೆರೆಮರೆಯಲ್ಲಿ ಸಂಚು ರೂಪಿಸುತ್ತಲೇ ಇವೆ.

ಹೆಚ್ಚು ಓದಿದ ಸ್ಟೋರಿಗಳು

ಬೆಂಗಳೂರು ಜೈಲಿನಿಂದಲೇ ವಿಡಿಯೋ ಪೋಸ್ಟ್‌ ಮಾಡಿದ ಹರ್ಷ ಕೊಲೆ ಆರೋಪಿ!

ಸರಳ ವಾಸ್ತುಗೂ ಮುನ್ನ ಚಂದ್ರಶೇಖರ್‌ ಗುರೂಜಿ ಏನಾಗಿದ್ದರು ಗೊತ್ತಾ?

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಧರೆಗುರುಳಿದ ವಿದ್ಯುತ್ ಕಂಬಗಳು!

ಕಪ್ಪತಗುಡ್ಡವನ್ನು ಸಂರಕ್ಷಿತ ಪ್ರದೇಶ ಅಥವಾ ವನ್ಯಧಾಮವೆಂದು ಸರ್ಕಾರ ಘೋಷಿಸಬೇಕೆಂದು ಪರಿಸರ ಪ್ರೇಮಿಗಳು ಒತ್ತಾಯ ಮಾಡಿದ್ದು ಹಲವು ಗಣಿಗಾರಿಕೆ ಮತ್ತು ಪವನ ವಿದ್ಯುತ್ ಉತ್ಪಾದಿಸುವ ಕಂಪನಿಗಳಿಗೆ ನಡುಕ ಹುಟ್ಟಿಸಿತ್ತು. ಆಗ ಕೆಲವು ಸಂಸ್ಥೆಗಳು, ಕಪ್ಪತಗುಡ್ಡ ಬರಡು ಪ್ರದೇಶವಾಗಿದ್ದು ಇಲ್ಲಿ ಯಾವುದೇ ಔಷಧೀಯ ಸಸ್ಯ, ಅಳಿವಿನಂಚಿನಲ್ಲಿರುವ ಹಾಗೂ ವಿಶೇಷ ವನ್ಯ ಜೀವಿಗಳಿಲ್ಲ ಎಂದು ಪ್ರತಿಪಾದಿಸಿದ್ದವು. ಇಲ್ಲಿ ಕರಡಿ, ಚಿರತೆಗಳಿಲ್ಲ, ಸಾರಂಗ, ನವಿಲುಗಳಿಲ್ಲ, ಇಲ್ಲಿರುವುದು ಬರೀ ಕಾಗೆ ಮತ್ತು ನಾಯಿಗಳು ಎಂದು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿ, ಗುಡ್ಡವನ್ನು ಕೊಳ್ಳೆ ಹೊಡೆಯಲು ಯತ್ನಿಸಿದ್ದವು.

2009ರಲ್ಲಿ ಪರಿಸರ ಪ್ರೇಮಿಗಳ ತಂಡವೊಂದು ಕಪ್ಪತಗುಡ್ಡಕ್ಕೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ನೀಡಿತ್ತು. ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ.ಕೋಟ್ರೇಶ್ ಎಂಬುವವರು ಅಧ್ಯಯನ ವರದಿ ಸಲ್ಲಿಸಿದ್ದರು. 2010ರಲ್ಲಿ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಕಪ್ಪತಗುಡ್ಡವನ್ನು ವನ್ಯಧಾಮವೆಂದು ಘೋಷಿಸುವ ಬಗ್ಗೆ ನಿರ್ಣಯಿಸಲಾಗಿತ್ತು. ನಂತರ 21.02.2013ರಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಉಪಾಧ್ಯಕ್ಷರಾಗಿದ್ದ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಮುಂಡರಗಿ ತಾಲೂಕಿನ ಡಂಬಳದಲ್ಲಿ ಸಭೆ ನಡೆಸಲಾಗಿತ್ತು. ಇದಾದ ಒಂದು ತಿಂಗಳ ಬಳಿಕ, 15.03.2013ರಂದು ರಾಜ್ಯ ವನ್ಯಜೀವಿ ಮಂಡಳಿ ಸಭೆ ಸೇರಿ ಸಮಾಲೋಚನೆ ನಡೆಸಿ, ವರದಿ ಆಧಾರದ ಮೇಲೆ ಈ ಗುಡ್ಡವನ್ನು ವನ್ಯಧಾಮವೆಂದು ಘೋಷಿಸಲು ನಿರ್ಧರಿಸಿತ್ತು. ಆದರೆ, ಸಂಚುಕೋರರ ಪ್ರಭಾವದಿಂದಾಗಿ ಆ ನಿರ್ಧಾರ ಆದೇಶವಾಗಿ ಹೊರಬೀಳಲಿಲ್ಲ.

ಮೊದಲೇ ಘೋಷಿಸಿದ್ದ ಸ್ಥಾನಮಾನವನ್ನು ಸರ್ಕಾರವು 2016 ಅಂತ್ಯದಲ್ಲಿ ಹಿಂಪಡೆಯಿತು. ತಕ್ಷಣವೇ ಗಣಿ ಕಂಪನಿಗಳ ಚಟುವಟಿಕೆಗಳು ಬಿರುಸುಗೊಂಡವು. ಇದರ ಬಗ್ಗೆ ಸರ್ಕಾರಕ್ಕೆ ಮಾಧ್ಯಮಗಳ ಮೂಲಕ ತಿಳಿಸಿದಾಗ ಪ್ರತಿಸ್ಪಂದನೆ ಸಿಗಲಿಲ್ಲ. ಜನವರಿ ಅಂತ್ಯಕ್ಕೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಗೆ ಸೂಕ್ತ ವೇದಿಕೆ ಕಲ್ಪಿಸಲು ಗದಗಿನ ಹತ್ತಿರದಲ್ಲಿರುವ ಡಂಬಳದಲ್ಲಿ ಸಭೆ ಏರ್ಪಡಿಸಲಾಯಿತು. ಅಲ್ಲಿ ಗಣಿಗಾರಿಕೆ ಸಂಸ್ಥೆಗಳ ಕೆಲ ಪ್ರತಿನಿಧಿಗಳು ಸುಳ್ಳು ದಾಖಲೆ ನೀಡಿ ಅಪಹಾಸ್ಯಕ್ಕೀಡಾದರು. ಆ ಪ್ರತಿನಿಧಿಗಳು ಕೆಲ ಸಂಘಟನೆಯ ಲೆಟರ್ ಹೆಡ್‌ಗಳನ್ನು ತೆಗೆದುಕೊಂಡು ಬಂದು ಅವುಗಳನ್ನೇ ದಾಖಲೆಗಳು ಹಾಗೂ ಕೆಲ ಸಂಘಟನೆಗಳು ಸ್ಥಾನಮಾನ ಬೇಡ ಎನ್ನುತ್ತಿವೆ ಎಂದು ಪ್ರತಿಪಾದಿಸಿದರು. ಇದಾದ ಕೆಲವೇ ಕ್ಷಣಗಳಲ್ಲಿ ಆಯಾ ಸಂಘಟನೆಗಳು ಈ ಪ್ರತಿನಿಧಿಗಳು ತಮ್ಮ ಲೆಟರ್ ಹೆಡ್‌ಗಳನ್ನು ಸುಳ್ಳು ಹೇಳಿ ಪಡೆದುಕೊಂಡಿವೆ ಎಂದು ತಿಳಿಸಿದಾಗ, ಬಂದ ಮೂವರು ಅಧಿಕಾರಿಗಳು ಸುಮ್ಮನೆ ವಾಪಸಾದರು. ಇಷ್ಟೆಲ್ಲ ಆದರೂ ರಾಜ್ಯ ಸರ್ಕಾರ ಇದಕ್ಕೆ ಸಮ್ಮತಿಸಲಿಲ್ಲ.

ಗದಗಿನ ಪರಿಸರ ಪ್ರೇಮಿಗಳು, ಸಾಹಿತಿಗಳು, ಚಿಂತಕರು ಹಾಗೂ ಸಾರ್ವಜನಿಕರೆಲ್ಲರೂ ಸೇರಿ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಫೆಬ್ರುವರಿ 13, 2017ರಂದು 3 ದಿನಗಳ ಅಹೋರಾತ್ರಿ ಉಪವಾಸ ಕೈಗೊಂಡರು. ಹೋರಾಟದ ಕಾವು ದಿನೇದಿನೇ ಏರತೊಡಗಿತು. ಸರ್ಕಾರದ ಬಗ್ಗೆ ಅನುಮಾನ, ಅಪಸ್ವರಗಳು ಆರಂಭವಾಗತೊಡಗಿದವು. ಏಪ್ರಿಲ್ 11, 2017ರಂದು ಕೊನೆಗೂ ರಾಜ್ಯ ಸರ್ಕಾರ, 80 ಸಾವಿರ ಎಕರೆ ವಿಸ್ತೀರ್ಣದ ಕಪ್ಪತಗುಡ್ಡದ 17,872 ಹೆಕ್ಟೇರ್ ಪ್ರದೇಶವನ್ನು ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಎಂದು ಘೋಷಣೆ ಮಾಡಿತು.

ಅದಾದ ನಂತರ ಸೆಪ್ಟೆಂಬರ್ ತಿಂಗಳಲ್ಲಿ ಗಣಿಗಾರಿಕೆ ಕಂಪನಿಯೊಂದು ಮತ್ತೊಮ್ಮೆ ಚಿನ್ನದ ಗಣಿಗಾರಿಕೆ ಮಾಡಲು ಅರ್ಜಿ ಸಲ್ಲಿಸಿತು. ಮುಂಡರಗಿ ತಾಲೂಕಿನ ಅತ್ತಿಕಟ್ಟೆ ಗ್ರಾಮದಲ್ಲಿ ಕಂಪನಿ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದನ್ನು ಕಂಡು ಗ್ರಾಮದ ಜನರು ಆಕ್ಷೇಪ ವ್ಯಕ್ತಪಡಿಸಿದರು. ಸರ್ವೆ ನಂಬರ್ 46, 47ರಲ್ಲಿ ಅವರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದನ್ನು ಕಂಡು ಗದಗಿನ ‘ಜಯ ಕರ್ನಾಟಕ’ ಸಂಘದವರು ತಕ್ಷಣವೇ ದೌಡಾಯಿಸಿ ಖಂಡಿಸಿದರು. ಈ ವಿಷಯವಾಗಿ ಸೆಪ್ಟೆಂಬರ್ 21ರಂದು ಹೈಕೋರ್ಟ್‍ಗೆ ಬಲ್ದೋಟಾ ಕಂಪನಿ ಅರ್ಜಿ ಸಲ್ಲಿಸಿತ್ತು. ಆಗ ಬಳ್ಳಾರಿ ಮೂಲದ ಸಂತೋಷ ಮಾರ್ಟಿನ್ ಎಂಬ ಪರಿಸರವಾದಿ ಇವರ ವಿರುದ್ಧ ಪ್ರಶ್ನಿಸಿ ಕೋರ್ಟ್‍ನಲ್ಲಿ ಗೆಲವು ಸಾಧಿಸಿದರು.

ಗಣಿ ಉದ್ಯಮಿಗಳ ಈ ಬಗೆಯ ಸಂಚುಗಳು ಇದೇ ಮೊದಲೇನಲ್ಲ. 105 ವರ್ಷಗಳ ಹಿಂದೆ, ಅಂದರೆ, 1912ರಲ್ಲಿ ‘ಧಾರವಾಡ ಗೋಲ್ಡ್ ಮೈನ್ಸ್ ಲಿಮಿಟೆಡ್’ ಎಂಬ ಸಂಸ್ಥೆ ಎಂಟು ವರ್ಷ ಕಪ್ಪತಗುಡ್ಡದಲ್ಲಿ ಚಿನ್ನದ ಅದಿರು ತೆಗೆದಿತ್ತು. ನಂತರ ಎಷ್ಟೋ ವರ್ಷಗಳವರೆಗೆ ಇಲ್ಲಿ ಗಣಿಗಾರಿಕೆ ಇರಲಿಲ್ಲ. ಈ ಗುಡ್ಡದ ವ್ಯಾಪ್ತಿಯಲ್ಲಿರುವ ಶಿರಹಟ್ಟಿ ತಾಲೂಕಿನ ಜಿಲ್ಲಿಗೆರೆ ಗ್ರಾಮದಲ್ಲಿ ‘ಸಾಂಗ್ಲಿ ಗೋಲ್ಡ್ ಮೈನ್ಸ್’ ಎಂಬ ಕಂಪನಿ ಒಟ್ಟು 98 ಎಕರೆ 6 ಗುಂಟೆ ಪ್ರದೇಶಕ್ಕೆ ನಿರಾಕ್ಷೇಪಣಾ ಪತ್ರಕ್ಕಾಗಿ ಅರ್ಜಿ ಸಲ್ಲಿಸಿತ್ತು. ಆದರೆ, ಅರ್ಜಿ ಜೊತೆಗೆ ಮೂಲ ದಾಖಲೆಗಳು ಹಾಗೂ ನಕಾಶೆ ಇರದ ಕಾರಣ ಅರಣ್ಯ ಇಲಾಖೆ ಅರ್ಜಿಯನ್ನು ತಳ್ಳಿಹಾಕಿತ್ತು. “ಇದೇ ಪ್ರದೇಶದಲ್ಲಿ ಆರು ವರ್ಷಗಳ ಕಾಲ ಗಣಿಗಾರಿಕೆ ಮಾಡಬಹುದು. ಇಲ್ಲಿ ಮಧ್ಯಮ ಗುಣಮಟ್ಟದ ಚಿನ್ನ ಇದೆ ಹಾಗೂ ಇಲ್ಲಿ ಅಂದಾಜು 11 ಲಕ್ಷ ಟನ್ ಚಿನ್ನದ ಅದಿರು ಇದೆ,” ಎಂದು ಗಣಿ ಕಂಪನಿಯೊಂದು ಅರ್ಜಿ ಸಲ್ಲಿಸಿತ್ತು. ಇದೂ ಕೋರ್ಟ್‌ವರೆಗೂ ಹೋಯಿತು.

ಕಪ್ಪತಗುಡ್ಡ ಎಂಬ ಜೀವವೈವಿಧ್ಯ ತಾಣ

ಗದುಗಿನ ಬಿಂಕದಕಟ್ಟಿ ಗ್ರಾಮದಂಚಿನಿಂದ ಆರಂಭವಾಗುವ ಕಪ್ಪತಗುಡ್ಡವು ಮುಂಡರಗಿ ತಾಲೂಕಿನ ಶಿಂಗಟಾಲೂರಿನವರೆಗೆ ಚಾಚಿಕೊಂಡಿದೆ. ಈ ಗುಡ್ಡವು ಒಟ್ಟು 63 ಕಿಮೀಗಳಷ್ಟು ಉದ್ದವಿದ್ದು, 32,346.524 ಹೆಕ್ಟೇರ್‌ನಷ್ಟು ವಿಸ್ತಾರವಾಗಿದೆ. ಕೆಂಪು ಮಿಶ್ರಿತ ಮಣ್ಣಿನಿಂದ ಕೂಡಿರುವ ಈ ಗುಡ್ಡದ ಒಡಲಲ್ಲಿ ಹೆಮಟೈಟ್, ಲಿಮೋನೈಟ್, ತಾಮ್ರ, ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ಚಿನ್ನ ಸೇರಿದಂತೆ ಹಲವು ಖನಿಜಗಳಿವೆ. ಇಲ್ಲಿ 300ಕ್ಕೂ ಅಧಿಕ ಜಾತಿಯ ಔಷಧೀಯ ಸಸ್ಯಗಳಿದ್ದು, ಚಿರತೆ, ಕರಡಿ, ತೋಳ, ನರಿ, ಪುನುಗ ಬೆಕ್ಕು, ಕಾಡು ಕುರಿ, ಚುಕ್ಕೆ ಜಿಂಕೆ, ಮುಳ್ಳು ಹಂದಿ, ಸಾರಂಗ ಹಾಗೂ 13 ಸಾವಿರಕ್ಕೂ ಹೆಚ್ಚು ನವಿಲುಗಳಿವೆ.

ಗದಗ ಜಿಲ್ಲೆಯಲ್ಲಿ ಉತ್ತರದಿಂದ ದಕ್ಷಿಣಕ್ಕೆ ಕವಲುಕವಲಾಗಿ ಹರಡಿಕೊಂಡಿರುವ ಚಿಕ್ಕ-ದೊಡ್ಡ ಗುಡ್ಡದ ಸಾಲುಗಳೇ ಕಪ್ಪತಗುಡ್ಡಗಳು. ಅದರಲ್ಲೊಂದು ಸರಣಿ ಮುಂಡರಗಿ ತಾಲೂಕಿನ ಸಿಂಗಟಾಲೂರು ಕ್ಷೇತ್ರದವರೆಗೂ ಚಾಚಿಕೊಂಡಿದೆ. ಡೋಣಿ ಗ್ರಾಮದಿಂದ 4 ಕಿಮೀಗಳಷ್ಟು ಅಂತರದಲ್ಲಿ ಬೃಹದಾಕಾರದ ಶಿಖರಗಳನ್ನೊಳಗೊಂಡ ಬೆಟ್ಟಗಳ ಸಮುಚ್ಚಯ ಮಾತ್ರವೇ ಕಪ್ಪತಗುಡ್ಡ ಎಂಬುದು ಪ್ರತೀತಿ. ಆದರೆ, ಬಹುತೇಕರಿಗೆ ಇದು ಗೊತ್ತಿಲ್ಲ. ಬಿಂಕದಕಟ್ಟಿಯಿದ ಶಿಂಗಟಾಲೂರಿನವರೆಗೆ ಇರುವ ಗಿರಿಗಳ ಸಮುಚ್ಚಯವೆಲ್ಲ ಕಪ್ಪತಗುಡ್ಡವೇ. ಹಿಂದೆ ಬಹುಸಂಖ್ಯೆಯಲ್ಲಿ ಪಾರಿವಾಳಗಳ ನೆಲೆ ಇದಾಗಿದ್ದರಿಂದ ‘ಕಪೋತಗಿರಿ’ ಎಂಬುದು ವಾಡಿಕೆಯಲ್ಲಿರುವ ಹೆಸರು. ಕಪ್ಪತಮಲ್ಲಯ್ಯ ಹಾಗೂ ನಂದಿವೇರಿ ಬಸವಣ್ಣ ಇಲ್ಲಿನ ಅಧಿದೇವತೆಗಳು.

ಕಪ್ಪತಗುಡ್ಡ ಖನಿಜ ಸಂಪತ್ತಿನ ಆಗರ. ಹಿಂದೊಮ್ಮೆ ಅಮೂಲ್ಯ ಹಾಗೂ ಅಪರೂಪದ ನೂರಾರು ಔಷಧೀಯ ಸಸ್ಯಗಳ ಬೀಡಾಗಿ, ಗಿಡಮರಗಳಿಂದ ತುಂಬಿಕೊಂಡು, ಪಶುಪಕ್ಷಿಗಳ ಸಂಕುಲ, ಕಲರವದೊಂದಿಗೆ ಪ್ರಕೃತಿಯ ರಮ್ಯ ನಿಗೂಢತೆ, ಚೆಲುವು, ಭವ್ಯತೆಯಿಂದ ಬೀಗುತ್ತ ಮಾಧುರ್ಯದ ರಸಭಕ್ಷ್ಯವನ್ನುಣಿಸುತ್ತಿದ್ದ ಈ ಬೆಟ್ಟ ಪ್ರದೇಶವು, ಕಳೆದ ಆರೆಂಟು ದಶಕಗಳಲ್ಲಿ ಶೋಷಣೆಗೀಡಾಗಿ ಬೆತ್ತಲು ಗುಡ್ಡವಾಗಿ ರಣರಣಿಸಿ ಕಂಗೆಟ್ಟು ಕಳೆದ ಶತಮಾನದ ಕೊನೆಯಲ್ಲಿ ವಿಕೃತಿಯ ಪರಾಕಾಷ್ಠೆ ತಲುಪಿ ಸೋತು ಸೊರಗಿತ್ತು. ನಂತರ ಅದು ಹಸುರಾಗಿದ್ದು ವಿಸ್ಮಯವೇ ಸರಿ.

ಅಪರೂಪದ ಸಸ್ಯ, ಮರಗಳ ಬೆಟ್ಟಶ್ರೇಣಿ

ಆಲ, ಅಂಕೇರಿ, ಅಮತಬಳ್ಳಿ, ಅರಳಿ, ಅಮಟೆ, ಅನಂತಮೂಲ, ಅಜವಾನ, ಅತ್ತಿ ಅಡಸೋಗಿ, ನಕರಿಸೊಪ್ಪು, ಚಿತ್ರಮೂಲ, ಸಂಜೀವಿನಿ, ಕಾಡು ಬಾದಾಮಿ, ರಕ್ತಚಂದನ ಕಾರಿ, ಕಕ್ಕಿ ಕವಳೆ, ಕಣಗಲ, ಬಸವನಪಾದ, ಹನಮ ಹಸ್ತ, ಕಾಡಿಗ್ಗರಗ, ಉತ್ತರಾಣಿ, ಕಾಡನಿಂಬೆ, ಗಜಗಕಾಸರಕ್, ಕೇಶ ಕೆಜೋರಾ, ಕರ್ಪೂರ, ಲೋಬಾನ, ಕರಿಎಕ್ಕ, ಬಿಳಿಎಕ್ಕ, ಗುಲಗಂಜಿ, ಚೊಗಚಿ, ಗೊರಂಟೆ, ತೇಗ, ತಪಸಿ, ಪಾಷಾಣ ಬೇದಿ, ಪಾರಿಜಾತ, ಪುಷ್ಕರ ಮೂಲ, ಬಕುಲಾಬಾಲಿ, ರುದ್ರಾಕ್ಷಿ ಸಪ್ತ ವರ್ಣ, ಮೂಚ ಪತ್ತಿ, ಶಂಕಪುಷ್ಪ ಹೊಗ್ಗೂಳ, ಹಿರೇಮದ್ದು, ಹಿಪ್ಪಲ ಸೊನಕ್ಕೆ, ಶಿಖಕಲ್ಲಿ ಸಬ್ಬಸಗಿ, ಪಚಗ, ಕಾಡು ಸಬ್ಬಸಗಿ, ಹೊಂಗೆ, ಬೇವು, ಹುಣಸಿ, ನೆಲ್ಲಿ, ತಪಸಿ, ಬಿಲ್ವಪತ್ರಿ, ಆಂಜನ, ಮುತ್ತಲ, ಬಳವಲ, ಬಾರಿ, ಅರಳಿ, ಬಸರಿ, ಬನ್ನಿ ಮುಂತಾದ ಸಸ್ಯ ಮತ್ತು ಮರಗಳಿವೆ ಇಲ್ಲಿ.

ಜನ, ಅಧಿಕಾರಿಗಳು ಏನಂತಾರೆ?

ಪ್ರಭುರಾಜಗೌಡ ಪಾಟೀಲ, ಸಮಾಜ ಸೇವಕ ಗುಡ್ಡದ ಅಂಚಿನ ಜನರಿಗೆ ಬೇರೆ ಕಡೆಗೆ ವ್ಯವಸ್ಥೆ ಮಾಡುವುದು ಸೂಕ್ತ. ಇಲ್ಲಿನ ಕೆಲ ಕುರಿಗಾಹಿಗಳು ಮರಗಳಡಿ ಅಡುಗೆ ಮಾಡಿ ಊಟ ಮಾಡಿ, ಎಲ್ಲವನ್ನೂ ಅಲ್ಲಿಯೇ ಉಳಿಸಿಹೋಗುತ್ತಿದ್ದಾರೆ. ಇದರಿಂದ ಇಲ್ಲಿನ ಪ್ರಾಣಿ, ಪಕ್ಷಿಗಳಿಗೆ ತೊಂದರೆ ಆಗುತ್ತಿದೆ. ನವಿಲುಗಳ ಸಂಖ್ಯೆ ಕಡಿಮೆಯಾಗಲು ಇದೇ ಕಾರಣ.
ಮಂಜುನಾಥ ನಾಯಕ, ಸ್ಥಳೀಯರುಕಪ್ಪತಗುಡ್ಡ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾಗಿದೆ ಎಂದು ಕೈಕಟ್ಟಿ ಕೂಡುವಂತಿಲ್ಲ. ಗಣಿ ಕಂಪನಿಗಳ ವಾರೆಗಣ್ಣು ಗಿರಿಯತ್ತ ಇನ್ನೂ ಇದೆ. ಅದರ ಜೊತೆಗೆ, ಪವನ ವಿದ್ಯುತ್ ಸ್ಥಾವರಗಳು ಅಲ್ಲಿ ಕಾಲಿಟ್ಟಿವೆ. ಒಟ್ಟಾರೆ ಎಲ್ಲ ಪರಿಸರವಾದಿಗಳು ಮತ್ತು ಪರಿಸರ ಪ್ರೇಮಿಗಳು ಗುಡ್ಡವನ್ನು ಕಾಯುವ ಪರಿಸ್ಥಿತಿ ಇನ್ನೂ ಇದೆ.
ಮಂಜುನಾಥ ಡೋಣಿ, ಸಂಭಾಪೂರಈ ಗುಡ್ಡದ ಅಂಚಿನಲ್ಲಿ ವಾಸಿಸುವ ಕೆಲವರು ಬೇಸಿಗೆ ಪ್ರಾರಂಭವಾದ ಕೂಡಲೇ ತಮ್ಮನ್ನೆಲ್ಲ ಒಕ್ಕಲೆಬಿಸುತ್ತಾರೆ ಎಂದು ಗುಡ್ಡಕ್ಕೆ ಬೆಂಕಿ ಇಡುತ್ತಾರೆ. ಈ ರೀತಿ ಬೆಂಕಿ ಇಟ್ಟರೆ ವರ್ಷವೆಲ್ಲ ಒಳ್ಳೆಯದಾಗುತ್ತದೆ ಎಂಬ ಮೌಢ್ಯ ಬಿತ್ತಲಾಗಿದೆ. ಈಗ ಅರಣ್ಯ ಇಲಾಖೆಯ ರಕ್ಷಕರು (ಗಾರ್ಡ್ಸ್) ಹೆಚ್ಚಿರುವುದರಿಂದ ಅದೆಲ್ಲ ನಿಯಂತ್ರಣವಾಗಿದೆ.
ಸೋನಲ್ ವೃಶ್ನಿ, ಗದಗ ಜಿಲ್ಲಾ ಅರಣ್ಯಾಧಿಕಾರಿಕಪ್ಪತಗುಡ್ಡದ ಕುರಿತು ಜನರಿಗೆ ತುಂಬಾ ಪ್ರೀತಿ, ಕಾಳಜಿ ಇದೆ. ಗುಡ್ಡದ ಬಗ್ಗೆ ಏನಾದರೂ ಕಾರ್ಯಕ್ರಮ ಮಾಡಿದರೆ ಗ್ರಾಮಸ್ಥರು ಆಸಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಜನರ ಬೆಂಬಲ ಸಿಕ್ಕಿದ್ದು ಖುಷಿಯ ವಿಚಾರ. ಬರಡಾಗಿದ್ದ ಗುಡ್ಡವನ್ನು ಹಸಿರು ಮಾಡಿದ್ದು ರೋಚಕ ಕತೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆ ತಂದಿದೆ.
ಎಸ್.ಬಿ.ಪೂಜಾರ್, ಅರಣ್ಯ ಇಲಾಖೆ ಸಿಬ್ಬಂದಿಕಪ್ಪತಗುಡ್ಡ ನೋಡಲು ಸುತ್ತಲ ಜಿಲ್ಲೆಗಳಿಂದಷ್ಟೇ ಅಲ್ಲ, ಸುತ್ತಮುತ್ತಲ ರಾಜ್ಯದಿಂದಲೂ ಜನ ಬರುತ್ತಾರೆ. ಜೂನ್‌ನಿಂದ ಅಕ್ಟೋಬರ್‌ವರೆಗೆ ಪ್ರವಾಸಿಗರ ದಂಡು ಇದ್ದೇ ಇರುತ್ತದೆ. ಉತ್ತರ ಕರ್ನಾಟಕ ಎಂದರೆ ಬರ, ಬಿಸಿಲು ಎಂದುಕೊಂಡವರು ಕಪ್ಪತಗುಡ್ಡವನ್ನು ನೋಡಿದರೆ ನಿಬ್ಬೆರಗಾಗುವುದರಲ್ಲಿ ಸಂಶಯವಿಲ್ಲ.
RS 500
RS 1500

SCAN HERE

don't miss it !

ಇದೀಗ

ನಮ್ಮ ತೀರ್ಮಾನದಿಂದ ಸಂತಸಗೊಂಡಿದ್ದಾರೆ: ಬೊಮ್ಮಾಯಿ

by ಪ್ರತಿಧ್ವನಿ
July 5, 2022
ಡಿಕೆಶಿ ಬೆಳವಣಿಗೆಗೆ ತೋಡಿರುವ ಗುಂಡಿಯೇ ಸಿದ್ದರಾಮೋತ್ಸವ : ಬಿಜೆಪಿ ಸರಣಿ ಟ್ವೀಟ್‌
ಕರ್ನಾಟಕ

ಡಿಕೆಶಿ ಬೆಳವಣಿಗೆಗೆ ತೋಡಿರುವ ಗುಂಡಿಯೇ ಸಿದ್ದರಾಮೋತ್ಸವ : ಬಿಜೆಪಿ ಸರಣಿ ಟ್ವೀಟ್‌

by ಪ್ರತಿಧ್ವನಿ
July 4, 2022
ಎಸಿಬಿ ಟ್ರ್ಯಾಪ್ ಕಾರ್ಯಾಚರಣೆ: ಬೆಂಗಳೂರಿನ ಉಪ ತಹಶೀಲ್ದಾರ್/ ಮ್ಯಾನೇಜರ್ ಬಲೆಗೆ!
ಕರ್ನಾಟಕ

ಎಸಿಬಿ ಟ್ರ್ಯಾಪ್ ಕಾರ್ಯಾಚರಣೆ: ಬೆಂಗಳೂರಿನ ಉಪ ತಹಶೀಲ್ದಾರ್/ ಮ್ಯಾನೇಜರ್ ಬಲೆಗೆ!

by ಪ್ರತಿಧ್ವನಿ
July 5, 2022
5ನೇ ಟೆಸ್ಟ್:‌ ಭಾರತ 245ಕ್ಕೆ ಆಲೌಟ್‌, ಇಂಗ್ಲೆಂಡ್‌ 377 ರನ್‌ ಗುರಿ
ಕ್ರೀಡೆ

5ನೇ ಟೆಸ್ಟ್:‌ ಭಾರತ 245ಕ್ಕೆ ಆಲೌಟ್‌, ಇಂಗ್ಲೆಂಡ್‌ 377 ರನ್‌ ಗುರಿ

by ಪ್ರತಿಧ್ವನಿ
July 4, 2022
ಭಾರೀ ಮಳೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳಿಗೆ ಇಂದು ರಜೆ ಘೋಷಣೆ!
ಕರ್ನಾಟಕ

ಭಾರೀ ಮಳೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳಿಗೆ ಇಂದು ರಜೆ ಘೋಷಣೆ!

by ಪ್ರತಿಧ್ವನಿ
June 30, 2022
Next Post
‘ಕಾಸರಗೋಡು’ ಶಾಲೆ ದತ್ತು ಪಡೆದ ರಿಷಬ್ ಶೆಟ್ಟಿ!

‘ಕಾಸರಗೋಡು’ ಶಾಲೆ ದತ್ತು ಪಡೆದ ರಿಷಬ್ ಶೆಟ್ಟಿ!

ಇದು ಬೆಂಗಳೂರಿಗರಿಗೆ ಮಾತ್ರ; ತುರ್ತಾಗಿ ಹತ್ತಿರದ ಅಂಚೆ ಕಚೇರಿಗೆ ಹೋಗಿಬನ್ನಿ!

ಇದು ಬೆಂಗಳೂರಿಗರಿಗೆ ಮಾತ್ರ; ತುರ್ತಾಗಿ ಹತ್ತಿರದ ಅಂಚೆ ಕಚೇರಿಗೆ ಹೋಗಿಬನ್ನಿ!

2014ರ ಚುನಾವಣೆಯ ಅಂಕಿ-ಅಂಶಗಳು 2019ರ ಚುನಾವಣೆಯಲ್ಲಿ ಹೇಗೆ ಬದಲಾಗಲಿದೆ?

2014ರ ಚುನಾವಣೆಯ ಅಂಕಿ-ಅಂಶಗಳು 2019ರ ಚುನಾವಣೆಯಲ್ಲಿ ಹೇಗೆ ಬದಲಾಗಲಿದೆ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist