ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮೇಲಿನ ಅನುಮಾನ ಇಂದು ನಿನ್ನೆಯದಲ್ಲ. ಸಾರ್ವತ್ರಿಕ ಚುನಾವಣೆಗಳಲ್ಲಿ ಇವಿಎಂ ಬಳಕೆ ಆರಂಭವಾದಾಗಿನಿಂದಲೂ ಈ ಯಂತ್ರಗಳ ಕುರಿತ ಅಪಸ್ವರ ಅಲ್ಲಲ್ಲಿ ಏಳುತ್ತಲೇ ಇತ್ತು. ಆದರೆ ಇತ್ತೀಚೆಗೆ ಭಾರತೀಯ ಜನತಾ ಪಕ್ಷ ನೇತೃತ್ವದ ಎನ್ ಡಿ ಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಈ ಅಪಸ್ವರ ಆರೋಪವಾಗಿ ಬದಲಾಗಿದೆ. ಕೇಂದ್ರ ಸರ್ಕಾರದ ನಡೆ, ಭಾರತದ ಮುಖ್ಯ ಚುನಾವಣಾ ಆಯೋಗ ಮತ್ತು ಇವಿಎಂ ಯಂತ್ರಗಳನ್ನು ತಯಾರಿಸುವ ಸಂಸ್ಥೆಗಳ ಅನುಮಾನಾಸ್ಪದ ಪ್ರತಿಕ್ರಿಯೆಗಳು ಸಹ ಈ ಆರೋಪಗಳಿಗೆ ಮತ್ತಷ್ಟು ಇಂಬು ಕೊಡುವಂತಿವೆ.
ಪಾರದರ್ಶಕ ಮತ್ತು ಪ್ರಾಮಾಣಿಕ ಆಡಳಿತದ ಹೆಸರಿನಲ್ಲಿ ಮತ್ತೆ ಅಧಿಕಾರಕ್ಕೆ ಬಂದಿರುವ ಎನ್ ಡಿ ಎ – 2 ಸರ್ಕಾರ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದು, ಈ ಕಾಯ್ದೆಯನ್ನು ಹಲ್ಲಿಲ್ಲದ ಹಾವನ್ನಾಗಿಸಿದೆ. ಇದರಿಂದಾಗಿ ಅಗತ್ಯ ಮಾಹಿತಿಯನ್ನು ತಿಳಿಯುವ ನಾಗರಿಕರ ಹಕ್ಕುಗಳನ್ನು ಮೊಟಕು ಮಾಡಲಾಗಿದೆ.
ಕಾಮನ್ವೆಲ್ತ್ ಹ್ಯೂಮನ್ ರೈಟ್ಸ್ ಇನಿಷಿಯೇಟಿವ್ ನ ಆಕ್ಸೆಸ್ ಟು ಇನ್ಫಾರ್ಮೇಷನ್ ಕಾರ್ಯಕ್ರಮ ಮುಖ್ಯಸ್ಥ ವೆಂಕಟೇಶ್ ನಾಯಕ್ ಅವರು ಇವಿಎಂ, ವಿವಿಪ್ಯಾಟ್ ಯುನಿಟ್ ಗಳು ಮತ್ತು ಸಿಂಬಲ್ ಲೋಡಿಂಗ್ ಯುನಿಟ್ ಗಳ (ಎಸ್ ಎಲ್ ಯು) ಮಾಹಿತಿ ಕೋರಿ ಭಾರತ ಸರ್ಕಾರದ ಉದ್ದಿಮೆಗಳಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಮತ್ತು ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಇಸಿಐಎಲ್) ಗೆ ಮಾಹಿತಿ ಹಕ್ಕು ಕಾಯ್ದೆ ಅನ್ವಯ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ನಕಾರಾತ್ಮಕ ಉತ್ತರ ಬಂದಿದೆ.
ಇವಿಎಂ ಮೂಲಕ ಚಲಾವಣೆಯಾಗುವ ಮತಗಳನ್ನು ಮುದ್ರಿಸುವ ವಿವಿಪ್ಯಾಟ್ ನ ಸಾಮರ್ಥ್ಯವನ್ನು ಮತಗಟ್ಟೆ ಮಟ್ಟದ ಒಟ್ಟು ನೋಂದಾಯಿತ ಮತದಾರರು ಮತ್ತು ಒಟ್ಟು ಮತದಾನದ ಅಂಕಿಅಂಶದೊಂದಿಗೆ ಹೋಲಿಸಿನೋಡಿದರೆ ಹಾಗೂ ಆರ್ ಟಿ ಐ ಉತ್ತರದ ರೀತಿಯನ್ನು ಗಮನಿಸಿದರೆ ಇಡೀ ಚುನಾವಣಾ ಪ್ರಕ್ರಿಯೆ ಬಗ್ಗೆಯೇ ಆತಂಕಕಾರಿ ಪ್ರಶ್ನೆಗಳು ಹುಟ್ಟುತ್ತವೆ ಎಂಬುದಾಗಿ ವೆಂಕಟೇಶ್ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.
2019 ರ ಏಪ್ರಿಲ್-ಮೇ ತಿಂಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಎನ್ ಡಿ ಎ ಅಭೂತಪೂರ್ವ ಬಹುಮತದೊಂದಿಗೆ ಎರಡನೇ ಬಾರಿಗೆ ಅಧಿಕಾರಕ್ಕೇರಿತು. ದೇಶದಾದ್ಯಂತ ನಡೆಸಲಾದ ಈ ಚುನಾವಣೆಯ ರೀತಿಯ ಕುರಿತು ದೊರೆತ ಅಲ್ಪ ಮಾಹಿತಿ ಬಗ್ಗೆ ಅಸಮಾಧಾನಗೊಂಡ ಕೆಲ ಪ್ರಮುಖರು ಮತ್ತು ಮಾಧ್ಯಮ ವ್ಯಕ್ತಿಗಳು, ಕೆಲ ಮತಗಟ್ಟೆಗಳಲ್ಲಿ ಆಗಿರುವ ಮತದಾನ ಮತ್ತು ವಿವಿಪ್ಯಾಟ್ ಮುದ್ರಿತ ಮತಗಳ ನಡುವಿನ ವ್ಯತ್ಯಾಸದ ಕುರಿತು ಮಾಹಿತಿ ಪಡೆಯಲು ಆರ್ ಟಿ ಐ ಕಾಯ್ದೆ ಉಪಯೋಗಿಸಿದರು. ಇವಿಎಂ ನಲ್ಲಿ ದಾಖಲಾಗಿರುವ ಮತಗಳು ಮತ್ತು ವಿವಿಪ್ಯಾಟ್ ಮುದ್ರಿತ ಮತಗಳ ನಡುವಿನ ವ್ಯತ್ಯಾಸ, ತಯಾರಿಕಾ ಕಂಪನಿಗಳಿಂದ ಮತ ಕ್ಷೇತ್ರಗಳಿಗೆ ಇವಿಎಂ ಮತ್ತು ವಿವಿಪ್ಯಾಟ್ ಗಳನ್ನು ಸಾಗಿಸಿದ ರೀತಿ ಹಾಗೂ ಪ್ರಭಾವಿ ರಾಜಕಾರಣಿಗಳು ನಡೆಸಿರುವ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಳ ಕುರಿತೂ ಮಾಹಿತಿ ಕೋರಲಾಗಿತ್ತು. ಆದರೆ ಇಂತಹ ಬಹುತೇಕ ಅರ್ಜಿಗಳಿಗೆ ಸಂಬಂಧಪಟ್ಟ ಸಂಸ್ಥೆಗಳಿಂದ ಮಾಹಿತಿ ನಿರಾಕರಣೆಯ ಉತ್ತರ ದೊರೆತಿದೆ.

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ವೆಂಕಟೇಶ್ ನಾಯಕ್ ಅವರು 2019, ಜೂನ್ 17 ರಂದು ಭಾರತದ ಚುನಾವಣಾ ಆಯೋಗವು ತನ್ನ ಜಾಲತಾಣದಲ್ಲಿ ಪ್ರಕಟಿಸಿದ ಮಾಹಿತಿ ಮತ್ತು ಅಂಕಿಅಂಶಗಳನ್ನು ಪರಿಶೀಲಿಸಿದ ನಂತರ, ತಯಾರಿಸಿ ಸರಬರಾಜು ಮಾಡಿರುವ ಇವಿಎಂ ಮತ್ತು ವಿವಿಪ್ಯಾಟ್ ಗಳ ಸಂಖ್ಯೆ ಹಾಗೂ ವಿವಿಪ್ಯಾಟ್ ನಲ್ಲಿ ಮುದ್ರಣಕ್ಕೆ ಬಳಸಲಾಗಿರುವ ಥರ್ಮಲ್ ಕಾಗದದ ಪ್ರಮಾಣ ಮತ್ತಿತರ ಮಾಹಿತಿ ಕೋರಿ ಬಿಇಎಲ್ ಮತ್ತು ಇಸಿಐಎಲ್ ಸಂಸ್ಥೆಗಳಿಗೆ ಒಂದೇ ರೀತಿಯ ಆರ್ ಟಿ ಐ ಅರ್ಜಿ ಸಲ್ಲಿಸಿದ್ದರು.
ಭಾರತದ ರಕ್ಷಣಾ ಸಚಿವಾಲಯದ ಆಡಳಿತ ವ್ಯಾಪ್ತಿಗೊಳಪಡುವ, ಸಾರ್ವಜನಿಕ ವಲಯದ ನವರತ್ನ ಉದ್ದಿಮೆಗಳಲ್ಲೊಂದಾದ ಬಿಇಎಲ್ ನ ಕೇಂದ್ರ ಮುಖ್ಯ ಮಾಹಿತಿ ಅಧಿಕಾರಿಯು (ಸಿಪಿಐಒ) ಮೊದಲಿಗೆ, ಅರ್ಜಿದಾರರು ಕೇಳಿದ ಮಾಹಿತಿ ಒದಗಿಸಲು 717 ಪುಟಗಳ ಅಗತ್ಯವಿದ್ದು, 1,434 ರೂ.ಗಳ ವೆಚ್ಚ ತಗುಲುತ್ತದೆ ಎಂಬ ಸೂಚನಾ ಮಾಹಿತಿ ಕಳುಹಿಸಿ ಅವರಿಂದ ಅಷ್ಟು ಶುಲ್ಕ ಕಟ್ಟಿಸಿಕೊಳ್ಳುತ್ತಾರೆ. ಆದರೆ 40 ದಿನಗಳಾದರೂ ಉತ್ತರ ಬರುವುದಿಲ್ಲ. ಮಾಹಿತಿ ನೀಡದಿರುವುದರ ವಿರುದ್ಧ ಆರ್ ಟಿ ಐ ಕಾಯ್ದೆ ಸೆಕ್ಷನ್ 19(1) ರ ಪ್ರಕಾರ ವೆಂಕಟೇಶ್ ನಾಯಕ್ ಅವರು ಮೇಲ್ಮನವಿ ಸಲ್ಲಿಸಿದಾಗ, “ನೀವು ಕೇಳಿರುವ ಬಹುತೇಕ ಮಾಹಿತಿ ನಮ್ಮ ಬಳಿ ಇಲ್ಲ” ಎಂಬ ಉತ್ತರ ಸಿಪಿಐಒ ಅವರಿಂದ ಬರುತ್ತದೆ. ಜೊತೆಗೆ ಅವರು ಪಾವತಿಸಿದ್ದ ಶುಲ್ಕದ ಮೊತ್ತದ ಬ್ಯಾಂಕ್ ಡ್ರಾಫ್ಟ್ ಸಹ ಹಿಂದಿರುಗಿಸಲಾಗುತ್ತದೆ.
ಮೊದಲು ಮಾಹಿತಿ ನೀಡಲು ಒಪ್ಪಿ, ಅದಕ್ಕೆ 717 ಪುಟಗಳು ಬೇಕಾಗುತ್ತದೆ ಎಂಬ ಅಂದಾಜನ್ನೂ ಮಾಡಿದ್ದ ಸಿಪಿಐಒ ಕೊನೆಗೆ ಮಾಹಿತಿ ನಿರಾಕರಿಸಿರುವುದರ ಹಿಂದೆ ಯಾವುದೋ ಒತ್ತಡ ಕೆಲಸ ಮಾಡಿದೆ ಎಂಬುದಾಗಿ ಅರ್ಜಿದಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಬಿಇಎಲ್ ಬಳಿ ಮಾಹಿತಿ ಇದ್ದಿದ್ದರಿಂದಲೇ ಅದನ್ನು ನೀಡಲು ಇಷ್ಟೇ ಪುಟಗಳು ಬೇಕಾಗುತ್ತದೆ ಎಂದು ಲೆಕ್ಕ ಹಾಕಿದೆ ಎಂಬುದು ಅವರ ತರ್ಕವಾಗಿದೆ. ಅಲ್ಲದೆ, “ನೀವು ಕೇಳಿದ ಮಾಹಿತಿ ಬಹಿರಂಗಪಡಿಸುವಿಕೆಯು ಸಂಸ್ಥೆಯ ಇಂಜಿನಿಯರ್ ಗಳ ಜೀವಕ್ಕೆ ಕುತ್ತು ತರಬಹುದು” ಎಂಬ ಉಲ್ಲೇಖವೂ ಸಿಪಿಐಒ ಉತ್ತರದಲ್ಲಿ ಇದೆ. ಇಸಿಐಎಲ್ ಸಹ ಮೊದಲಿಗೆ ಕೆಲ ಮಾಹಿತಿಯನ್ನು ಆರ್ ಟಿ ಐ ನ ಆನ್ ಲೈನ್ ಪೋರ್ಟಲ್ ಗೆ ಅಪ್ಲೋಡ್ ಮಾಡಿತಾದರೂ, ಅರ್ಜಿದಾರರು ಕೇಳಿದ್ದ ಕೆಲ ಮುಖ್ಯ ಮಾಹಿತಿ ಒದಗಿಸಲು ನಿರಾಕರಿಸಿದೆ. ಚುನಾವಣಾ ಆಯೋಗದ ಜಾಲತಾಣದಲ್ಲಿ ಸಹ ಸಂಪೂರ್ಣ ಮಾಹಿತಿ ಇಲ್ಲ.

ಇವಿಎಂ ಮತ್ತು ವಿವಿಪ್ಯಾಟ್ ಗಳನ್ನು ಟ್ಯಾಂಪರ್ ಮಾಡಲು ಸಾಧ್ಯವೇ ಇಲ್ಲ, ಪ್ರತಿ ಮತಕ್ಷೇತ್ರಕ್ಕೆ ಈ ಯಂತ್ರಗಳನ್ನು ಹಂಚುವ ಮುನ್ನ ಮತ್ತು ಮತಗಟ್ಟೆಗೆ ಕಳುಹಿಸುವ ಮುನ್ನ ಎರಡು ಬಾರಿ ರಾಂಡಮೈಸ್ ಮಾಡಲಾಗುತ್ತದೆ ಎಂಬುದಾಗಿ ಚುನಾವಣಾ ಆಯೋಗ ಮತ್ತು ಈ ಯಂತ್ರಗಳನ್ನು ತಯಾರಿಸುವ ಸಂಸ್ಥೆಗಳ ಪರಿಣತರು ವಾದಿಸುತ್ತಾರೆ. ಆದರೆ, ಪ್ರತಿ ಮತಗಟ್ಟೆಯಲ್ಲಿನ ನೋಂದಾಯಿತ ಮತದಾರರ ಸಂಖ್ಯೆಯಲ್ಲಿ ಏಕರೂಪತೆ ಇಲ್ಲದಿರುವುದರಿಂದ ಹಾಗೂ ಬಿಇಎಲ್ ಮತ್ತು ಇಸಿಐಎಲ್ ತಯಾರಿಸುವ ವಿವಿಪ್ಯಾಟ್ ಗಳ ಸಾಮರ್ಥ್ಯದಲ್ಲಿ ವ್ಯತ್ಯಾಸ ಇರುವುದರಿಂದ ನಿಜವಾದ ರಾಂಡಮೈಸೇಷನ್ ಹೇಗೆ ಸಾಧ್ಯ ಎಂಬುದು ಅರ್ಜಿದಾರರ ಪ್ರಶ್ನೆಯಾಗಿದೆ. ಈ ಮೂಲ ಪ್ರಶ್ನೆಗೆ ಭಾರತದ ಚುನಾವಣಾ ಆಯೋಗ ಹಾಗೂ ಇವಿಎಂ ಮತ್ತು ವಿವಿಪ್ಯಾಟ್ ಗಳ ತಯಾರಿಕಾ ಸಂಸ್ಥೆಗಳಾದ ಬಿಇಎಲ್ ಮತ್ತು ಇಸಿಐಎಲ್ ತುರ್ತಾಗಿ ಉತ್ತರಿಸಬೇಕಿದೆ.
(ಕೃಪೆ: ದಿ ವೈರ್)