ದಿನದಿಂದ ದಿನಕ್ಕೆ ಮೊಬೈಲ್ ಬಳಕೆ ಹೆಚ್ಚಾದಂತೆ, ಮೊಬೈಲ್ ಟವರ್ ಗಳು ಕೂಡ ಅಂಬರಕ್ಕೆ ಚುಂಬನ ಕೊಡುವ ಹಾಗೆ ತಲೆ ಎತ್ತಿ ನಿಲ್ಲುತ್ತಲೇ ಇವೆ. ಒಂದು ಹೊತ್ತು ಊಟ ಬಿಟ್ಟರೂ ಮೊಬೈಲ್ ಬಿಟ್ಟಿರುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ. ದಿನದ 24 ಗಂಟೆಯೂ ಮನರಂಜನೆಯಲ್ಲಿಯೇ ಮುಳುಗಿರಬೇಕು ಎಂಬ ಮನೋಭಾವನೆಯಲ್ಲಿ ಸಾಕಷ್ಟು ಯುವಜನತೆ ಮೊಬೈಲ್ ನ ದಾಸರಾಗಿದ್ದಾರೆ. ಇದರ ಪರಿಣಾಮದಿಂದ ನಗರದ ಗಲ್ಲಿ ಗಲ್ಲಿಗಳಲ್ಲಿ ನಾಲ್ಕೈದು ಟವರ್ ಗಳು ಕೂಡ ರಾಜ ಗಾಂಭಿರ್ಯದಂತೆ ನಿಂತಿವೆ. ಈ ಮೊಬೈಲ್ ಟವರ್ ಕಡಿವಾಣಕ್ಕೆ ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
ಟವರ್ ನಿಂದ ಆಗುತ್ತಿರುವ ಹಾನಿ ಅರಿತ ರಾಜ್ಯ ಸರ್ಕಾರ, ಶಾಲೆ, ಆಸ್ಪತ್ರೆಗಳಲ್ಲಿ 50 ಮೀಟರ್ ಪರಿಧಿಯೊಳಗೆ ಯಾವುದೇ ಟವರ್ ಅಳವಡಿಕೆ ಮಾಡುವಂತಿಲ್ಲ ಎಂಬ ಆದೇಶ ಹೊರಡಿಸಿರುವುದು ನಿಜಕ್ಕೂ ಶ್ಲಾಘನೀಯ. “ಟೆಲಿಕಮ್ಯೂನಿಕೆಷನ್ ಇನ್ಫ್ರಾಸ್ಟ್ರಕ್ಚರ್ ಟವರ್ ರೆಗ್ಯೂಲೇಷನ್ 2019ರ ಪ್ರಕಾರ ರಾಜ್ಯ ಸರ್ಕಾರ, ಮಕ್ಕಳ ಹಾಗೂ ರೋಗಿಗಳ ಆರೋಗ್ಯ ದೃಷ್ಟಿಯನ್ನಿಟ್ಟುಕೊಂಡು ಈ ಕ್ರಮಕ್ಕೆ ಮುಂದಾಗಿದೆ” ಎಂದು ನಗರಾಭಿವೃದ್ಧಿ ಸಚಿವ ಯು. ಟಿ. ಖಾದರ್ ತಿಳಿಸಿದ್ದಾರೆ.
ತಿಂಗಳಿಗೆ ಬಾಡಿಗೆ ಬರುತ್ತದೆ ಎಂಬ ಅತಿಯಾಸೆಯಿಂದ ಕೆಲ ಕಟ್ಟಡ ಮಾಲೀಕರು ಶಾಲೆಗಳನ್ನು, ಆಸ್ಪತ್ರೆಗಳನ್ನು ಗಮನಕ್ಕೆ ತೆಗೆದುಕೊಳ್ಳದೆ, ಮೊಬೈಲ್ ಟವರ್ ಅನ್ನು ನಿರ್ಮಿಸುವುದಕ್ಕೆ ನೆಟ್ ವರ್ಕ್ ಸಂಸ್ಥೆಗಳಿಗೆ ತಮ್ಮ ತಮ್ಮ ಕಟ್ಟಡಗಳಲ್ಲಿ ಜಾಗವನ್ನು ಕೊಡುತ್ತಾರೆ. ತಿಂಗಳ ಬಾಡಿಗೆ ಮಾತ್ರ ಸರಿಯಾದ ಸಮಯಕ್ಕೆ ಬರುತ್ತದೆ. ಆದರೆ ಸಾರ್ವಜನಿಕರ ಆರೋಗ್ಯದ ಮೇಲೆ ಮತ್ತು ಸಾಮರ್ಥ್ಯವಿಲ್ಲದ ಕಟ್ಟಡಗಳ ಮೇಲೆ ಟವರ್ ಗಳನ್ನುಅಳವಡಿಕೆ ಮಾಡುತ್ತಿರುವುದರಿಂದ ಎಂದಾದರು ಒಂದು ದಿನ ದೊಡ್ಡ ಪರಿಣಾಮ ಬೀರುವುದಂತು ನಿಶ್ಚಿತ ಅಲ್ಲವೇ?
ನಗರದಲ್ಲಿ 6,700 ಮೊಬೈಲ್ ಟವರ್ ಗಳಿವೆ. ಅದರಲ್ಲಿ 5,500 ಟವರ್ ಗಳು ಅನಧಿಕೃತ ಕಟ್ಟಡಗಳಲ್ಲಿ ನಿರ್ಮಿಸಿಲಾಗಿದೆ ಎಂದು ಬಿಬಿಎಂಪಿ ಅಂದಾಜಿಸಿದೆ.
ಹೀಗಾಗಿ “ಮೊಬೈಲ್ ಮತ್ತು ಮೊಬೈಲ್ ಟವರ್ ಗಳಿಂದ ಯುವಜನತೆಯ ಮೇಲೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹೇಗೆ ಪರಿಣಾಮ ಬೀರುತ್ತಿದೆ” ಎಂಬ ವರದಿಗಳನ್ನು ದಿನ ನಿತ್ಯ ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಆದರೆ ಎಷ್ಟೇ ವರದಿಗಳು ಬಂದರು ಮೊಬೈಲ್ ಬಳಸುವುದನ್ನು ಕಡಿಮೆ ಮಾಡುವುದಂತು ಸವಾಲಿನ ವಿಷಯವಾಗಿ ಬಿಟ್ಟಿದೆ.
ಸದ್ಯ ರಾಜ್ಯ ಸರ್ಕಾರ ಹಾಕಿಕೊಂಡಿರುವ ಈ ವ್ಯವಸ್ಥೆಯಿಂದ ಸಾರ್ವಜನಿಕರ ಆರೋಗ್ಯವನ್ನು ಸ್ವಲ್ಪ ಮಟ್ಟಿಗಾದರು ಕಾಪಾಡಬಹುದು. ಸರ್ಕಾರದ ಈ ಆದೇಶ ಶಾಲೆ ಮತ್ತು ಆಸ್ಪತ್ರೆಗೆ ಮಾತ್ರ ಸೀಮಿತವಲ್ಲ. ಪಾರಂಪರಿಕ ಕಟ್ಟಡಗಳಿಂದ ಕನಿಷ್ಠ 100 ಮೀಟರ್ ಮತ್ತು ವಸತಿ ಪ್ರದೇಶದಲ್ಲಿ ಬಫರ್ ಜೋನ್ ನಿಂದ ಕನಿಷ್ಠ 3 ಮೀಟರ್ ದೂರದಲ್ಲಿರಬೇಕು. ಕೆರೆ, ಕಾಲುವೆ ಹಾಗೂ ರಾಜಕಾಲುವೆಗಳ ವಲಯದಿಂದ ಕನಿಷ್ಠ 6 ಮೀಟರ್ ಅಂತರದಲ್ಲಿ ಟವರ್ ನಿರ್ಮಿಸಬೇಕು. ರೈಲ್ವೆ ಮಾರ್ಗ ಹಾಗೂ ರೈಲ್ವೆ ಇಲಾಖೆಗೆ ಸಂಬಂಧ ಪಟ್ಟ ಕಟ್ಟಡಗಳ ವಲಯದಿಂದ 30 ಮೀಟರ್ ಅಂತರ ಇರಲೇಬೇಕು. ಹಾಗೂ ಹೈಟೆನ್ಷನ್ ವಿದ್ಯುತ್ ಮಾರ್ಗದ ಸಾಮರ್ಥ್ಯಕ್ಕೆ ಅನುಗುಣವಾಗಿ ಟವರ್ ಗಳ ಅಂತರವನ್ನು ಕಾಯ್ದುಕೊಳ್ಳಬೇಕು.
ಹೊಸದಾಗಿ ಟವರ್ ಅಳವಡಿಕೆಗೆ ಅನುಮತಿಗೆ ಅರ್ಜಿ ಸಲ್ಲಿಸುವ ವೇಳೆ ಸ್ಥಳ ನಕ್ಷೆ, ನಿವೇಶನ ನಕ್ಷೆ, ಸ್ಟ್ರಕ್ಷರಲ್ ಸ್ಟೆಬಿಲಿಟಿ ಸರ್ಟಿಫಿಕೇಟ್, ಕಟ್ಟಡದ ಮಾಲೀಕರ ಮಾಹಿತಿ ಮತ್ತು ಗುತ್ತಿಗೆ ದಾಖಲೆಗಳು, ಅಳವಡಿಕೆಯಾಗುವ ಟವರ್ ತೂಕ (ಟನ್ ಗಳಲ್ಲಿ) ಮಾಹಿತಿಯನ್ನು ನೀಡಬೇಕು. ಅಗ್ನಿಶಾಮಕ ದಳದಿಂದ ನಿರಾಕ್ಷೇಪಣ ಪತ್ರ ಮತ್ತು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಟವರ್ ಅಳವಡಿಸುವುದಾದರೆ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯಬೇಕು. ಒಂದು ವೇಳೆ ಈ ನಿಯಮವನ್ನು ಪಾಲಿಸದಿದ್ದರೆ, ಅಳವಡಿಸಿದ ಟವರ್ ಗಳನ್ನು ಮುಲಾಜಿಲ್ಲದೇ ಸ್ಥಳಾಂತರ ಮಾಡಲಾಗುವುದು ಎಂದು ಕೂಡ ಸಚಿವರು ಎಚ್ಚರಿಗೆ ಕೊಟ್ಟಿದ್ದಾರೆ. ಇದರ ಜೊತಗೆ ಈಗಾಗಲೇ ಅಳವಡಿಸಿರುವ ಟವರ್ ಗಳು ಕೂಡ ಇವೆಲ್ಲ ಮಾಹಿತಿಯೊಂದಿಗೆ ಇನ್ನು ಮೂರು ತಿಂಗಳ ಒಳಗೆ ನೋಂದಣಿ ಮಾಡಿಕೊಂಡು ಅಂತರವನ್ನು ಕಾಯ್ದುಕೊಳ್ಳಬೇಕು.
ಹೊಸದಾಗಿ ಟವರ್ ಅಳವಡಿಕೆಯ ಮಾಡುವ ನೆಟ್ ವರ್ಕ್ ಸಂಸ್ಥೆಗಳು, ಪ್ರದೇಶಗಳ ತಕ್ಕಂತೆ ಶುಲ್ಕವನ್ನು ಪಾವತಿಸಬೇಕು. ಅಂದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ – 1 ಲಕ್ಷ ರೂ, ಬಿಬಿಎಂಪಿ ಹೊರತುಪಡಿಸಿ ಇತರೆ ಪಾಲಿಕೆಗಳು – 50 ಸಾವಿರ ರೂ, ನಗರ ಸಭೆ – 35 ಸಾವಿರ ರೂ, ಪುರಸಭೆ – 25 ಸಾವಿರ ರೂ, ಪಟ್ಟಣ ಪಂಚಾಯಿತಿ – 20 ಸಾವಿರ ರೂ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ – 15 ಸಾವಿರ ರೂ. ಹಣವನ್ನು ಪಾವತಿಸಬೇಕು.
ಸರ್ಕಾರ ಹೊರಡಿಸಿರುವ ಈ ಆದೇಶವನ್ನು ಎಲ್ಲಾ ನೆಟ್ ವರ್ಕ್ ಸಂಸ್ಥೆಗಳು ಪಾಲಿಸುವಂತೆ ಕ್ರಮ ಕೈಗೊಂಡರೆ ನಿಜಕ್ಕೂ ಆರೋಗ್ಯ ಪೂರ್ಣ ಸಮಾಜವನ್ನು ರೂಪಿಸುವುದಕ್ಕೆ ಇಂದೊದು ಮೆಟ್ಟಿಲು ಎಂದು ಹೇಳಬಹುದು. ಅಲ್ಲದೇ ಈ ಟವರ್ ಸ್ಥಳಾಂತರದ ಜೊತೆಗೆ ಅಧಿಕಾರಗಳ ಭ್ರಷ್ಟಚಾರ ನಡೆಯದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ.