ಭಾರತೀಯ ಅಂಚೆ ಇಲಾಖೆಯ ಸಾಹಸಮಯ ಕತೆಗಳು ಸಾಕಷ್ಟಿವೆ. ಸದ್ಯ ಮಹತ್ವದ ಅಭಿಯಾನವೊಂದಕ್ಕೆ ಕೈಜೋಡಿಸಿರುವ ಬೆಂಗಳೂರಿನ ಪೂರ್ವ, ಪಶ್ಚಿಮ ಮತ್ತು ದಕ್ಷಣ ಅಂಚೆ ವಲಯಗಳು ಎಲ್ಲರ ಗಮನ ಸೆಳೆದಿವೆ.
ಸರ್ಕಾರೇತರ ಸಂಸ್ಥೆಗಳಾದ Saahas (ಸಾಹಸ್) ಮತ್ತು Environmental Synergies in Development (ENSYDE) ಜಂಟಿಯಾಗಿ ರೂಪಿಸಿರುವ ಎಲೆಕ್ಟ್ರಾನಿಕ್ ತ್ಯಾಜ್ಯ (ಇ-ವೇಸ್ಟ್) ಸಂಗ್ರಹಣಾ ಅಭಿಯಾನಕ್ಕೆ ಅಂಚೆ ಇಲಾಖೆ ಸಾಥ್ ನೀಡಿದೆ. ಸ್ವಾರಸ್ಯ ಎಂದರೆ, Saahas ಮತ್ತು ENSYDE ಈ ಇ-ತ್ಯಾಜ್ಯ ಸಂಗ್ರಹ ಅಭಿಯಾನ ಆರಂಭಿಸಿದ್ದು ಅಂಚೆ ಇಲಾಖೆಯ ಸಿಬ್ಬಂದಿಯನ್ನಷ್ಟೆ ಗಮನದಲ್ಲಿ ಇಟ್ಟುಕೊಂಡು. ಆದರೆ, ಅಭಿಯಾನದಲ್ಲಿ ಸಾರ್ವಜನಿಕರೂ ಪಾಲ್ಗೊಳ್ಳುವಂತೆ ಅವಕಾಶ ಕಲ್ಪಿಸಿರುವ ಅಂಚೆ ಇಲಾಖೆ, ಈ ಮಹತ್ವದ ಕಾರ್ಯವನ್ನು ಜನಮುಖಿಯಾಗಿಸಿದೆ.
ಮೇ ಒಂದರಿಂದ ಆರಂಭವಾಗಿರುವ ಈ ಅಭಿಯಾನ ಮೇ ಒಂಬತ್ತಕ್ಕೆ (ಇದೇ ಗುರುವಾರ) ಮುಕ್ತಾಯ ಕಾಣಲಿದೆ. ನೀವು ಈಗಾಗಲೇ ಬಳಸಿ ಎತ್ತಿಟ್ಟಿರುವ ರೆಫ್ರಿಜರೇಟರ್, ಗ್ರೈಂಡರ್, ಮೈಕ್ರೋವೇವ್ಸ್, ಬ್ಯಾಟರಿಗಳು, ಹೇರ್ ಡ್ರೈಯರ್, ಟ್ರಿಮ್ಮರ್, ವಾಟರ್ ಪ್ಯೂರಿಫೈಯರ್, ಎಲೆಕ್ಟ್ರಿಕ್ ಹೀಟರ್, ಏರ್ ಕಂಡೀಷನರ್ (ಎ.ಸಿ), ವ್ಯಾಕ್ಯೂಮ್ ಕ್ಲೀನರ್, ಎಲೆಕ್ಟ್ರಿಕ್ ಆಟಿಕೆಗಳು, ಸಿಎಫ್ಎಲ್/ ಟ್ಯೂಬ್ ಲೈಟ್, ಫ್ಯಾನ್, ಗಡಿಯಾರ, ವಾಷಿಂಗ್ ಮಷಿನ್, ಕಂಪ್ಯೂಟರ್, ಸಿಪಿಯು, ಮೌಸ್, ಕೀಬೋರ್ಡ್, ಸ್ಕ್ಯಾನರ್, ಚಾರ್ಜರ್‌ಗಳು, ಮೊಬೈಲ್, ಸಿ.ಡಿ/ಡಿವಿಡಿ, ಫ್ಲೋಪಿ ಡಿಸ್ಕ್, ವಿಸಿಆರ್/ ಕ್ಯಾಸೆಟ್, ಪೆನ್‌ಡ್ರೈವ್, ಹೆಡ್‌ಫೋನ್, ಯುಪಿಎಸ್, ರೇಡಿಯೋ, ಟಿ.ವಿ, ಪ್ರಿಂಟರ್, ಲ್ಯಾಪ್‌ಟಾಪ್, ಕ್ಯಾಮೆರಾ, ಆಂಪ್ಲಿಫೈಯರ್, ಟೆಲಿಫೋನ್, ಕೇಬಲ್/ ವಯರ್ ಇತ್ಯಾದಿ ವಸ್ತುಗಳನ್ನು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಹೋಗಿ, ಅಲ್ಲಿನ ಇ-ವೇಸ್ಟ್ ಡ್ರಾಪ್ ಬಾಕ್ಸ್‌ಗೆ ಹಾಕಬಹುದು. ಸಂಗ್ರಹಿಸಿದ ನಂತರ ಇ-ವೇಸ್ಟ್ ಅನ್ನು ಸರ್ಕಾರಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ತಲುಪಿಸಲಾಗುತ್ತದೆ.

ಅಸಲಿಗೆ ಇಂಥದ್ದೊಂದು ಅಭಿಯಾನವನ್ನು Saahas ಮತ್ತು ENSYDE ಸಂಸ್ಥೆಗಳು 2016ರಿಂದಲೇ ಆರಂಭಿಸಿದ್ದವು. ಆಗಿನಿಂದಲೂ ಅಂಚೆ ಇಲಾಖೆ ಇ-ತ್ಯಾಜ್ಯ ಸಂಗ್ರಹ ಅಭಿಯಾನಕ್ಕೆ ಸಾಥ್ ನೀಡುತ್ತಲೇ ಬಂದಿದೆ. “ಜಯನಗರ 3ನೇ ಬ್ಲಾಕ್, ಜೆ.ಪಿ.ನಗರ ಮತ್ತು ಬಸವನಗುಡಿ ಅಂಚೆ ಕಚೇರಿಗಳಲ್ಲಿ ಕಳೆದ ವರ್ಷ ಇ-ತ್ಯಾಜ್ಯ ಸಂಗ್ರಹ ಅಭಿಯಾನವನ್ನು ಪ್ರಾಯೋಗಿಕವಾಗಿ ಮಾಡಲಾಗಿತ್ತು. ಈ ಅಂಚೆ ಕಚೇರಿಗಳಲ್ಲಿ ಇ-ವೇಸ್ಟ್ ಡ್ರಾಪ್ ಬಾಕ್ಸ್ ಕೂಡ ಇಡಲಾಗಿತ್ತು. ಈ ಬಾರಿ ಬೆಂಗಳೂರಿನ ಮೂರು ಅಂಚೆ ವಲಯಗಳಲ್ಲಿನ ಎಲ್ಲ 111 ಡೆಲವರಿ ಪೋಸ್ಟ್ ಆಫೀಸ್‌ಗಳಲ್ಲಿ ಈ ಅಭಿಯಾನ ರೂಪಿಸಲಾಗಿದೆ. ಜನರ ಸ್ಪಂದನೆ ಚೆನ್ನಾಗಿದೆ. ಸ್ಪಂದನೆ ಹೆಚ್ಚಾಗಿ ಕಂಡುಬಂದರೆ ಸದ್ಯ ಮೇ 9ರವರೆಗೆ ಇರುವ ಈ ಅಭಿಯಾನವನ್ನು ಇನ್ನೊಂದು ವಾರ ವಿಸ್ತರಿಸಬಹುದು. ಈ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಮಾತನಾಡಲಾಗುವುದು,” ಎನ್ನುತ್ತಾರೆ, ಬೆಂಗಳೂರು ದಕ್ಷಿಣ ಅಂಚೆ ವಲಯದ (ಜಯನಗರ) ಸೀನಿಯರ್ ಸೂಪರಿಂಟೆಂಡೆಂಟ್ ಆಫ್ ಪೋಸ್ಟ್ ಆಫೀಸಸ್ ಟಿ.ಎಸ್ ಅಶ್ವತ್ಥನಾರಾಯಣ.
“ಮೂಲದಲ್ಲಿ ಈ ಯೋಜನೆ ರೂಪಿಸಿದ್ದು ಅಂಚೆ ಕಚೇರಿ ಸಿಬ್ಬಂದಿಗಾಗಿ. ಆದರೆ, ಅಂಚೆ ಇಲಾಖೆ ಇದನ್ನು ದೊಡ್ಡ ಮಟ್ಟಕ್ಕೆ ಕೊಂಡುಹೋಗಿದೆ. ಹಾಗಾಗಿ ನಮಗೆ ಖುಷಿಯಾಗಿದೆ. ಅಂಚೆ ಇಲಾಖೆ ಜೊತೆ ಮತ್ತಷ್ಟು ದೊಡ್ಡ ಯೋಜನೆ, ಅಭಿಯಾನಗಳನ್ನು ರೂಪಿಸುವ ಆಲೋಚನೆ ಸಂಸ್ಥೆಗಿದೆ,” ಎನ್ನುತ್ತಾರೆ, ENSYDEನ ಪ್ರಾಜೆಕ್ಟ್ ಕೋಆರ್ಡಿನೇಟರ್ ಅಂಕಿತ್ ಕುಮಾರ್.
ಈ ಅಭಿಯಾನಕ್ಕೆ ವಿಶೇಷ ಒತ್ತು ನೀಡಿ, ಅಂಚೆ ಸಿಬ್ಬಂದಿ ಮೂಲಕ ಮಾಹಿತಿ ಪ್ರಚಾರಕ್ಕೆ ಮುಂದಾಗಿರುವ ಬೆಂಗಳೂರು ದಕ್ಷಿಣ ಅಂಚೆ ವಲಯವು, ಜಯನಗರದ ಕೇಂದ್ರ ಕಚೇರಿ ಸೇರಿದಂತೆ ಎಲ್ಲ ಅಂಚೆ ಕಚೇರಿ ವ್ಯಾಪ್ತಿಯಲ್ಲೂ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳುವಂತೆ ಕಾಳಜಿ ವಹಿಸಿದೆ. ಈ ಅಭಿಯಾನದ ಕುರಿತು ಅಂಚೆ ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ನಿರತರಾಗಿದ್ದಾರೆ ಜಯನಗರ ಮುಖ್ಯ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಯೋಗಾನಂದ ಕೆ.ಎಸ್ ಮತ್ತು ಪೋಸ್ಟಲ್ ಅಸಿಸ್ಟೆಂಟ್ ರೇಣುಕಾ ಸಿ.ಕೆ. ಇನ್ನೆರಡು ದಿನದಲ್ಲಿ ಮುಗಿಯಲಿರುವ ಈ ಅಭಿಯಾನದಲ್ಲಿ ನೀವೂ ಪಾಲ್ಗೊಂಡರೆ, ಇ-ತ್ಯಾಜ್ಯ ಸಂಗ್ರಹದಂಥ ಮಹತ್ವದ ಅಭಿಯಾನ ಯಶಸ್ವಿಯಾದೀತು ಮತ್ತು ವೈಯಕ್ತಿಕವಾಗಿ ಲಾಭದಾಯಕವಲ್ಲದ ಇಂಥ ಜನಮುಖಿ ಕಾರ್ಯಗಳಲ್ಲಿನ ಅಂಚೆ ಇಲಾಖೆಯ ಉತ್ಸಾಹ ಹೆಚ್ಚಾದೀತು.