ಅಧಿಕಾರ ಉಳಿಸಿಕೊಳ್ಳುವ ಅಥವಾ ಪಡೆಯಬೇಕು ಎಂಬ ಬಯಕೆ ದುರಾಸೆಯಾಗುವುದರ ಜತೆಗೆ ಎಲ್ಲವೂ ತಕ್ಷಣವೇ ಆಗಬೇಕು ಎಂಬ ಹಪಾಹಪಿ ಉಂಟಾದರೆ ಏನಾಗುತ್ತದೆ ಎಂಬುದಕ್ಕೆ ಕರ್ನಾಟಕದ ರಾಜಕೀಯವೇ ಉದಾಹರಣೆ. ರಾಜಕೀಯ ವಿಚಾರದಲ್ಲಿ ನಮ್ಮದು ಕರ್ ನಾಟಕ ಮಾತ್ರವಲ್ಲ, ಕರ್ ಬೃಹನ್ನಾಟಕ ಎನ್ನುವ ಹಂತಕ್ಕೆ ತಲುಪಿದೆ.
ಶಾಸಕರ ರಾಜಿನಾಮೆಯಿಂದ ಅಲ್ಪಮತಕ್ಕೆ ಕುಸಿದಿರುವ ಸರ್ಕಾರವೊಂದನ್ನು ಉಳಿಸಿಕೊಳ್ಳಲು ರಾಜಿನಾಮೆ ನೀಡಿದ ಶಾಸಕರನ್ನು ಕತ್ತು ಹಿಡಿದು ಎಳೆದೊಯ್ದು ಕೊಠಡಿಯಲ್ಲಿ ಕೂಡಿ ಹಾಕುವಂತಹ ಪರಿಸ್ಥಿತಿ ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ, ಅರ್ಧ ಶತಮಾನಕ್ಕೂ ಹೆಚ್ಚು ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷಕ್ಕೆ ಬಂದಿದೆ ಎಂದರೆ ಆ ಪಕ್ಷ ಎಷ್ಟೊಂದು ಹತಾಶೆಗೊಳಗಾಗಿದೆ ಎಂಬುದು ಒಂದೆಡೆಯಾದರೆ, ತಾನು ಹೇಗೆ ವರ್ತಿಸಬೇಕು ಎಂಬ ಪ್ರಜ್ಞೆಯೇ ಇಲ್ಲದೆ ಅಧಿಕಾರ ಹಿಡಿಯುವ ಹಪಾಹಪಿಯಲ್ಲಿರುವ ಬಿಜೆಪಿ ನೇರವಾಗಿ ಕಾಂಗ್ರೆಸ್ ಜತೆ ಜಟಾಪಟಿಗೆ ಇಳಿದಿರುವ ಸ್ಥಿತಿ ಇನ್ನೊಂದೆಡೆ.
ಇದು ರಾಜಕೀಯವಾಗಿ ನಾಟಕೀಯ ಬೆಳವಣಿಗೆಗಳ ಕಾರಣದಿಂದ “ಕರ್ ನಾಟಕ’ ಎಂದು ಕರೆಸಿಕೊಳ್ಳುತ್ತಿರುವ ಕರ್ನಾಟಕದಲ್ಲಿ ಇದೀಗ ನಡೆಯುತ್ತಿರುವ ಬೃಹನ್ನಾಟಕ ರಾಜ್ಯವನ್ನೇ ನಗೆಪಾಟಲೀಗಿಡಾಗುವಂತೆ ಮಾಡಿದೆ.
ಮೈತ್ರಿ ಸರ್ಕಾರದ 14 ಶಾಸಕರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ಬಳಿಕ ಈ ರಾಜಿನಾಮೆಗೆ ಬಿಜೆಪಿಯೇ ಕಾರಣ, ಸರ್ಕಾರ ಕೆಡವಲು ಆಪರೇಷನ್ ಕಮಲದ ಮೂಲಕ ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ ಎಂದೆಲ್ಲಾ ಬೆಳಗ್ಗಿನಿಂದ ಕಾಂಗ್ರೆಸ್ ಪ್ರತಿಭಟನೆ, ರಾಜಭವನ ಚಲೋ ನಡೆಸಿತು. ಸಂಜೆಯ ವೇಳೆಗೆ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ರಾಜ್ಯದ ಶಕ್ತಿ ಕೇಂದ್ರ, ಜನರ ರಕ್ಷಣೆಯ ಕಾನೂನುಗಳನ್ನು ರಚಿಸುವ ವಿಧಾನಸೌಧದಲ್ಲೇ ತನ್ನದೇ ಪಕ್ಷದ ಶಾಸಕರೊಬ್ಬರನ್ನು ಕತ್ತು ಹಿಡಿದು ಎಳೆದೊಯ್ದು ಕೊಠಡಿಯಲ್ಲಿ ಕೂಡಿ ಹಾಕುವ ಮೂಲಕ ಪುರಾಣ ಓದೋಕೆ, ಬದನೇಕಾಯಿ ತಿನ್ನೋಕೆ ಎಂಬುದನ್ನು ಸ್ಪಷ್ಟವಾಗಿ ಒಪ್ಪಿಕೊಂಡಿದೆ.
ಅತ್ತ ಕಾಂಗ್ರೆಸ್ ರಾಜಿನಾಮೆ ನೀಡಿದ ತನ್ನದೇ ಪಕ್ಷದ ಶಾಸಕರೊಬ್ಬರನ್ನು ಸಚಿವರ ಸಮ್ಮುಖದಲ್ಲೇ ಎಳೆದಾಡಿ ಸಚಿವರ ಕೊಠಡಿಯಲ್ಲಿ ಕೂಡಿ ಹಾಕಿದರೆ, ಇತ್ತ ಬಿಜೆಪಿ ಆ ಶಾಸಕರನ್ನು ಬಂಧಮುಕ್ತಗೊಳಿಸಿ ಎಂದು ಪ್ರತಿಭಟನೆಗಿಳಿದಿದ್ದು, ಈ ಮೂಲಕ ವಿಧಾನಸೌಧ ರಾಜಕೀಯ ಕುರುಕ್ಷೇತ್ರದ ಯುದ್ಧಭೂಮಿಯಂತಾಗಿದೆ. ಈ ಮಧ್ಯೆ ಪೊಲೀಸರು, ಕಾರ್ಯಕರ್ತರ ಮಧ್ಯೆ ತಳ್ಳಾಟವೂ ನಡೆದಿದ್ದು, ಒಂದು ರೀತಿಯಲ್ಲಿ ರಣಾಂಗಣ ಎನ್ನುವಂತಾಗಿದೆ. ಬೆಳಗ್ಗೆಯಿಂದ ನಡೆಯುತ್ತಿದ್ದ ಪ್ರಹಸನದ ಕ್ಲೈಮ್ಯಾಕ್ಸ್ ಎಂಬಂತೆ ಸಂಜೆ ನಡೆದ ಈ ಘಟನೆ ಕರ್ನಾಟಕದ ರಾಜಕೀಯ ಕರ್ ನಾಟಕ ಮಾತ್ರವಲ್ಲ, ಅದು ಬೃಹನ್ನಾಟಕವೂ ಹೌದು ಎಂಬುದನ್ನು ಸಾಬೀತುಪಡಿಸಿದೆ.
ಇದರ ಮಧ್ಯೆಯೇ ಇದುವರೆಗೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ 14 ಮಂದಿಯ ಜತೆಗೆ ಬುಧವಾರ ಮತ್ತಿಬ್ಬರು ಕಾಂಗ್ರೆಸ್ ಶಾಸಕರು (ಸಚಿವ ಎಂ. ಟಿ. ಬಿ. ನಾಗರಾಜ್ ಮತ್ತು ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್) ತಮ್ಮ ಸ್ಥಾನಕ್ಕೆ ರಾಜಿನಾಮೆಯನ್ನು ಸ್ಪೀಕರ್ ಅವರಿಗೆ ಸಲ್ಲಿಸಿದ್ದಾರೆ. ಅಲ್ಲಿಗೆ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನಡೆಸುತ್ತಿರುವ ಪ್ರಯತ್ನಕ್ಕೆ ಮತ್ತಷ್ಟು ಹಿನ್ನಡೆಯಾದಂತಾಗಿದೆ. ಆದರೂ ಅಷ್ಟು ಸುಲಭವಾಗಿ ಬಿಜೆಪಿಗೆ ಅಧಿಕಾರ ಬಿಟ್ಟುಕೊಡುವುದಿಲ್ಲ ಎನ್ನುತ್ತಿರುವ ಕಾಂಗ್ರೆಸ್, ಯಾವ ಮಟ್ಟಕ್ಕೆ ಬೇಕಾದರೂ ಎಳೆದಾಡಲು ಸಿದ್ಧವಾಗಿದೆ.
ಸರ್ಕಾರ ಉಳಿಸಿಕೊಳ್ಳಲು ಮತ್ತು ಕೆಡವಲು ಒಂದೊಂದು ಪರದೆಯಲ್ಲಿ ಒಂದೊಂದು ನಾಟಕ ಎಂಬಂತೆ ಬೆಳಗ್ಗೆಯಿಂದ ಹಲವು ನಾಟಕಗಳು ನಡೆದಿವೆ.

ನಾಟಕ 1- ಸಚಿವ ಡಿ. ಕೆ. ಶಿವಕುಮಾರ್ ತಮ್ಮನ್ನು ಭೇಟಿ ಮಾಡಲು ಬರುತ್ತಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಶಿವಕುಮಾರ್ ವಿರುದ್ಧ ದೂರು ನೀಡಿ ಅವರನ್ನು ಹೋಟೆಲ್ ಒಳಗೆ ಬರಲು ಅವಕಾಶ ನೀಡದಂತೆ ಮನವಿ ಮಾಡಿಕೊಂಡ ಮುಂಬೈನಲ್ಲಿರುವ ಅತೃಪ್ತ ಶಾಸಕರು. ಎಲ್ಲಿ ಬಂದು ತಮ್ಮ ಮನ ಪರಿವರ್ತನೆ ಮಾಡುತ್ತಾರೆ ಎಂಬ ಆತಂಕದಿಂದ ಶಿವಕುಮಾರ್ ಭೇಟಿಗೆ ನಿರಾಕರಣೆ.
ನಾಟಕ 2- ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಮುಂಬೈನಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಭೇಟಿಯಾಗಲು ತೆರಳಿ ಹೋಟೆಲ್ ಒಳಗೆ ಹೋಗಲು ಅವಕಾಶ ಸಿಗದೆ ಸಚಿವರಾದ ಡಿ. ಕೆ. ಶಿವಕುಮಾರ್ ನೇತೃತ್ವದ ಸಚಿವರು, ಶಾಸಕರು ಅಲ್ಲೇ ಸುಮಾರು ಐದು ಗಂಟೆ ಕುಳಿತರು. ಬಳಿಕ ಪೊಲೀಸರು ಬಲವಂತದಿಂದ ಅವರನ್ನು ವಶಕ್ಕೆ ಪಡೆದು ತಮ್ಮ ವಾಹನಗಳಲ್ಲಿ ಅಲ್ಲಿಂದ ದೂರಕ್ಕೆ ಕರೆದೊಯ್ದರು.
ನಾಟಕ 3- ತಾವು ಈಗಾಗಲೇ ಸಲ್ಲಿಸಿದ ರಾಜಿನಾಮೆಯನ್ನು ಶೀಘ್ರ ಅಂಗೀಕರಿಸುವಂತೆ ಸ್ಪೀಕರ್ ಅವರಿಗೆ ನಿರ್ದೇಶಿಸಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅತೃಪ್ತ ಶಾಸಕರಿಂದ ತಕ್ಷಣ ಅರ್ಜಿ ವಿಚಾರಣೆಗೆ ಪರಿಗಣಿಸುವಂತೆ ಮನವಿ. ಆದರೆ, ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ ಕೋರ್ಟ್ ನಿಂದ ನಾಳೆ ಅರ್ಜಿ ವಿಚಾರಣೆಗೆ ಪರಿಗಣಿಸುವುದಾಗಿ ಭರವಸೆ.
ನಾಟಕ 4- ಮೈತ್ರಿ ಸರ್ಕಾರದ 14 ಶಾಸಕರು ರಾಜಿನಾಮೆ ನೀಡಿದ್ದರಿಂದ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ತಕ್ಷಣ ರಾಜಿನಾಮೆ ನೀಡಬೇಕು ಎಂದು ಬಿಜೆಪಿಯಿಂದ ವಿಧಾನಸೌಧದ ಆವರಣದಲ್ಲಿ ಧರಣಿ. ಶಾಸಕರ ರಾಜಿನಾಮೆ ಶೀಘ್ರ ಅಂಗೀಕರಿಸುವಂತೆ ಸ್ಪೀಕರ್ ಅವರಿಗೆ ಮನವಿ. ರಾಜ್ಯಪಾಲರನ್ನು ಭೇಟಿಯಾಗಿ ಮಧ್ಯಪ್ರವೇಶಿಸುವಂತೆ ಮನವಿ ಸಲ್ಲಿಸಿದ ಬಿಜೆಪಿ ನಾಯಕರು.
ನಾಟಕ 5- ಕಾಂಗ್ರೆಸ್ ನಿಂದ ರಾಜ್ಯಪಾಲರು ಮತ್ತು ಬಿಜೆಪಿ ವಿರುದ್ಧ ಸಮರ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರಿಂದ ರಾಜಭವನಕ್ಕೆ ಮುತ್ತಿಗೆ ಯತ್ನ. ಬಿಜೆಪಿ ಕಚೇರಿ ಎದುರು ಧರಣಿ. ಇದರ ಮಧ್ಯೆಯೇ ಮತ್ತಷ್ಟು ಶಾಸಕರು ಪಕ್ಷ ತೊರೆಯದಂತೆ ಅಸಮಾಧಾನಗೊಂಡಿರುವ ಶಾಸಕರೊಂದಿಗೆ ಸತತ ಸಂಪರ್ಕಕ್ಕೆ ಯತ್ನ.
ಕೊನೆಯದಾಗಿ ನಡೆದಿದ್ದು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರಬಂದ ಡಾ. ಸುಧಾಕರ್ ಅವರನ್ನು ಕಾಂಗ್ರೆಸ್ ನಾಯಕರು ಕತ್ತು ಹಿಡಿದು ಎಳೆದಾಡಿ ಕೊಠಡಿಯಲ್ಲಿ ಕೂಡಿ ಹಾಕಿದ್ದು. ಇದು ದಿನದ ಹೈಲೈಟ್ಸ್ ಮಾತ್ರವಲ್ಲ, ಕ್ಲೈಮ್ಯಾಕ್ಸ್ ಹಂತವೂ ಆಗಿದ್ದು, ನಾಳಿನ ಬೆಳವಣಿಗೆಗಳನ್ನು ಇನ್ನಷ್ಟು ಕುತೂಹಲದಿಂದ ಕಾದು ನೋಡುವಂತೆ ಮಾಡಿದೆ..
ಇಷ್ಟಕ್ಕೆಲ್ಲಾ ಕಾರಣವಾಗಿದ್ದು, 8 ಶಾಸಕರ ರಾಜಿನಾಮೆ ಸಮರ್ಪಕವಾಗಿಲ್ಲ ಎಂದು ಸ್ಪೀಕರ್ ಅವರು ಮಂಗಳವಾರ ನೀಡಿದ ನಿರ್ಣಯ. ಇದರ ಬೆನ್ನಲ್ಲೇ ಶಾಸಕರ ರಾಜಿನಾಮೆ ಅಂಗೀಕಾರ ವಿಳಂಬವಾಗುತ್ತದೆ ಎಂದು ಗೊತ್ತಾದ ಕಾಂಗ್ರೆಸ್ ಸಿಕ್ಕಿದ ಕಾಲಾವಕಾಶದಲ್ಲಿ ಹೇಗಾದರೂ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂಬ ಕಾರಣಕ್ಕೆ ಸಾಕಷ್ಟು ಪ್ರಯತ್ನಗಳನ್ನು ಆರಂಭಿಸಿತು. ಎಐಸಿಸಿ ಪಾಲಿನ ‘ಟ್ರಬಲ್ ಶೂಟರ್’ ಗುಲಾಮ್ ನಬಿ ಆಜಾದ್ ಬೆಂಗಳೂರಿಗೆ ಬಂದರು. ಅಷ್ಟೆ, ಸರ್ಕಾರ ಕೆಡವಲು ತುದಿಗಾಲಲ್ಲಿ ನಿಂತಿರುವ ಬಿಜೆಪಿ ಮತ್ತು ಅತೃಪ್ತ ಶಾಸಕರು ಗಲಿಬಿಲಿಗೊಳಗಾದರು. ಕಾಂಗ್ರೆಸ್ ಪಕ್ಷಕ್ಕೂ ಏನು ಮಾಡಬಹುದು ಎಂಬ ಸ್ಪಷ್ಟತೆ ಸಿಗಲಿಲ್ಲ. ಹೀಗಾಗಿಯೇ ದಿನವಿಡೀ ಕರ್ನಾಟಕದ ರಾಜಕಾರಣ ‘ಕರ್ ನಾಟಕ’ ಎನ್ನುವಂತಾಯಿತು.
ಉಗುರಲ್ಲಿ ಹೋಗೋದಿಕ್ಕೆ ಕೊಡಲಿ ತೆಗೆದುಕೊಂಡರು
ಮುಂಬೈನಲ್ಲಿ ಬೀಡುಬಿಟ್ಟಿದ್ದ ಅತೃಪ್ತ ಶಾಸಕರಿಗೆ ಕಾಂಗ್ರೆಸ್ ನ ಬೆಳವಣಿಗೆಗಳು ಗೊಂದಲ ಉಂಟುಮಾಡಿದವು. ಎಲ್ಲಿ ಮತ್ತೆ ತಮ್ಮ ಮನಸ್ಸು ಬದಲಾಗುವುದೋ ಎಂಬ ಆತಂಕದಿಂದ ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡಂತೆ, ಕ್ರಮಬದ್ಧ ರಾಜಿನಾಮೆಯೊಂದಿಗೆ ಸ್ಪೀಕರ್ ಮುಂದೆ ಬಂದು ರಾಜಿನಾಮೆ ಅಂಗೀಕರಿಸುವಂತೆ ಒತ್ತಡ ಹೇರುವ ಬದಲು ತಮ್ಮ ರಾಜಿನಾಮೆ ಅಂಗೀಕರಿಸುವಂತೆ ಸ್ಪೀಕರ್ ಅವರಿಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋದರು.
ಅತೃಪ್ತ ಶಾಸಕರ ಈ ಕ್ರಮ ರಾಜಿನಾಮೆ ಅಂಗೀಕಾರ ಪ್ರಕ್ರಿಯೆಯನ್ನು ಇನ್ನಷ್ಟು ವಿಳಂಬ ಮಾಡುವ ಆತಂಕ ತಂದೊಡ್ಡಿದೆ. ಪ್ರಸ್ತುತ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳದಲ್ಲಿರುವುದರಿಂದ ಅದು ಇತ್ಯರ್ಥವಾಗುವವರೆಗೆ ತಾವೇನೂ ಮಾಡಲು ಸಾಧ್ಯವಿಲ್ಲ ಎಂದು ಸ್ಪೀಕರ್ ಕೈಚೆಲ್ಲಿ ಕುಳಿತುಕೊಳ್ಳಬಹುದು. ಶಾಸಕರ ರಾಜಿನಾಮೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳಿವೆ. ಆ ನಿಯಮಾವಳಿ ಪ್ರಕಾರ ರಾಜಿನಾಮೆ ಪತ್ರಗಳು ಇರಲಿಲ್ಲ ಎಂಬ ಕಾರಣಕ್ಕೆ ಸ್ಪೀಕರ್ ಅವರು ಎಂಟು ಶಾಸಕರ ರಾಜಿನಾಮೆ ಕ್ರಮಬದ್ಧವಲ್ಲ ಎಂದು ಹೇಳಿದ್ದರು. ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆಗೆ ಬಂದಾಗ ಸ್ಪೀಕರ್ ಕಚೇರಿ ಇದೇ ಮಾಹಿತಿಯನ್ನು ಸುಪ್ರೀಂ ಕೋರ್ಟ್ ಗೆ ನೀಡಬಹುದು. ಆಗ ಸುಪ್ರೀಂ ಕೋರ್ಟ್, ಕ್ರಮಬದ್ಧವಾಗಿ ರಾಜಿನಾಮೆ ಸಲ್ಲಿಸಿ ಎಂದು ಶಾಸಕರಿಗೆ ಮತ್ತು ಈ ರಾಜಿನಾಮೆಗಳನ್ನು ಆದಷ್ಟು ತ್ವರಿತವಾಗಿ ಇತ್ಯರ್ಥಗೊಳಿಸಿ ಎಂದು ಸ್ಪೀಕರ್ ಅವರಿಗೆ ನಿರ್ದೇಶನ ನೀಡಬಹುದು. ಹೀಗಾಗಿ ರಾಜಿನಾಮೆ ಮತ್ತು ಅಂಗೀಕಾರದ ಪ್ರಹಸನ ಇನ್ನಷ್ಟು ದಿನ ಬೆಳೆಯುವ ಸಾಧ್ಯತೆ ಇದೆ.
ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲವೇ?
ದಿನವಿಡೀ ಧರಣಿ, ಪ್ರತಿಧರಣಿ, ರಾಜಭವನಕ್ಕೆ ಮುತ್ತಿಗೆ, ಅತೃಪ್ತ ಶಾಸಕರನ್ನು ಸಂಪರ್ಕಿಸುವ ವಿಫಲ ಪ್ರಯತ್ನ, ರಾಜಿನಾಮೆಗಳನ್ನು ಶೀಘ್ರ ಅಂಗೀಕರಿಸುವಂತೆ ಒತ್ತಡ ಹೇರುವ ತಂತ್ರ… ಹೀಗೆ ನಾನಾ ಬೆಳವಣಿಗೆಗಳು ನಡೆದವಾದರೂ ಇದರಿಂದ ಏನು ಪ್ರಯೋಜನ ಎಂಬುದು ಈ ಪ್ರಕ್ರಿಯೆಗಳ ನೇತೃತ್ವ ವಹಿಸಿದವರಿಗೇ ಗೊತ್ತಿಲ್ಲ ಎನ್ನುವಂತಾಗಿದೆ. ಶಾಸಕರು ತಮ್ಮ ರಾಜಿನಾಮೆಗೆ ಬದ್ಧರಾಗಿದ್ದರೆ ಯಾರೇನೂ ಮಾಡಲು ಸಾಧ್ಯವಿಲ್ಲ ಮತ್ತು ಸರ್ಕಾರ ಉರುಳುವದನ್ನು ತಪ್ಪಿಸುವುದಕ್ಕಾಗುವುದಿಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಇದು ಒಂದೆರಡು ದಿನ ವಿಳಂಬವಾಗಬಹುದೇ ಹೊರತು ಅಂತಿಮ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಆದರೆ, ಅಧಿಕಾರ ಪಡೆಯುವ ಆತುರ, ಇರುವ ಅಧಿಕಾರ ಉಳಿಸಿಕೊಳ್ಳುವ ಹಪಾಹಪಿಯಲ್ಲಿ ಏನು ಮಾಡಬೇಕು ಎಂಬುದನ್ನು ತಿಳಿಯದೆ ಏನೇನೋ ಮಾಡಲು ಹೋದರೆ ಹೇಗಾಗುತ್ತದೆ ಎಂಬುದಕ್ಕೆ ದಿನದ ವಿದ್ಯಮಾನ ಸಾಕ್ಷಿಯಾಯಿತು. ಈ ಮಧ್ಯೆ ನಾಯಕರ ನಡುವಿನ ಮಾತಿನ ಸಮರಗಳಿಂದ ಜನರಿಗೆ ಪುಕ್ಕಟೆ ಮನರಂಜನೆ ಸಿಕ್ಕಿತೇ ಹೊರತು ಯಾರೇನೂ ಸಾಧಿಸಲು ಸಾದ್ಯವಾಗುವುದಿಲ್ಲ.