ಸಿದ್ದರಾಮಯ್ಯ ನೇತೃತ್ವ ಸರ್ಕಾರದಲ್ಲಿ ಜಾರಿಗೆ ತಂದ ಹಲವು ಯೋಜನೆಗಳಲ್ಲಿ ಯಶಸ್ವಿಯಾಗಿದ್ದು ಅನ್ನಭಾಗ್ಯ ಮತ್ತು ಇಂದಿರಾ ಕ್ಯಾಂಟೀನ್. ಅದರಲ್ಲೂ ಮಹತ್ವಾಕಾಂಕ್ಷೆಯ ಯೋಜನೆ ಎಂದರೆ ಇಂದಿರಾ ಕ್ಯಾಂಟೀನ್. ನಾಗರಿಕರಿಗೆ ಕಡಿಮೆ ದರದಲ್ಲಿ ಪೂರೈಕೆ ಮಾಡುವ ಊಟ, ತಿಂಡಿ ಬಡವರ ಹಸಿವನ್ನು ನೀಗಿಸುತ್ತಿದೆ. ಪೌರಕಾರ್ಮಿಕರು, ಕೂಲಿ ಕಾರ್ಮಿಕರು, ಆಟೋ ಚಾಲಕರು ಹಾಗೂ ಹೊರ ರಾಜ್ಯದಿಂದ ಬರುವ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್ ವ್ಯವಸ್ಥೆಯಿಂದ ಸಾಕಷ್ಟು ಉಪಯೋಗವಾಗುತ್ತಿದೆ. ಆದರೆ ಪ್ರಸ್ತುತ ದಿನಗಳ ರಾಜ್ಯ ಸರ್ಕಾರದ ಕಾರ್ಯ ವೈಖರಿಯನ್ನು ಗಮನಿಸುತ್ತಿದ್ದರೆ ಇನ್ನು ಮುಂದೆ ಇಂದಿರಾ ಕ್ಯಾಂಟೀನ್ ವ್ಯವಸ್ಥೆಯನ್ನೇ ಮುಚ್ಚಲಾಗುವುದೋ ಎಂಬ ಅನುಮಾನ ಆರಂಭವಾಗಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯಲ್ಲಿ ಗೆಲುವು ಸಾಧಿಸಿದ ಮರುಕ್ಷಣದಲ್ಲೇ, ‘ನಾನು ಯಾವುದೇ ಕಾರಣಕ್ಕೂ ದ್ವೇಷ ರಾಜಕಾರಣ ಮಾಡುವುದಿಲ್ಲ’ ಎಂದು ಹೇಳಿದ್ದರು. ಆದರೆ ದಿನೇ ದಿನೇ ಅವರು ಹೊರಡಿಸುತ್ತಿರುವ ಆದೇಶಗಳೆಲ್ಲವೂ ದ್ವೇಷ ರಾಜಕಾರಣಕ್ಕೆ ಸಮೀಕರಿಸಿದಂತಿದೆ. “ಪ್ರಸ್ತುತ ವರ್ಷದಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಹಣವನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ, ಬಿಬಿಎಂಪಿ ಬತ್ತಳಿಕೆಯಲ್ಲಿರುವ ಹಣದಲ್ಲೇ ಕ್ಯಾಂಟೀನ್ ನಿರ್ವಹಣೆ ಮಾಡಬೇಕು” ಎಂದು ನಗರಾಭಿವೃದ್ಧಿ ಇಲಾಖೆ ಸ್ಪಷ್ಟಪಡಿಸಿದೆ.
ಅನುದಾನಕ್ಕೆ ಕಡಿವಾಣ ಹಾಕುತ್ತಿರುವ ಸರ್ಕಾರ
ಇಂದಿರಾ ಕ್ಯಾಂಟೀನ್ ನಿರ್ವಹಣೆ ವಹಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕ್ಯಾಂಟೀನ್ ಇನ್ಮುಂದೆ ಭಾರೀ ಹೊರೆಯಾಗುವ ಸಾಧ್ಯತೆ ಕಾಣುತ್ತಿದೆ. ಕಾಂಗ್ರೆಸ್ ಸರ್ಕಾರ, 15 ಆಗಸ್ಟ್2017ರಂದು ಇಂದಿರಾ ಕ್ಯಾಂಟೀನ್ ಜಾರಿಗೆ ತಂದು, ಇದರ ನಿರ್ವಹಣೆಗೆ ರಾಜ್ಯ ಸರ್ಕಾರವೇ ಅನುದಾನ ಒದಗಿಸುವ ಭರವಸೆ ಸಹ ನೀಡಿತ್ತು. ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರ ಒದಗಿಸಿದ ಅನುದಾನ ಹಣ ಸಾಕಾಗದೆ, ಹೆಚ್ಚುವರಿ ಹಣವನ್ನು ಬಿಬಿಎಂಪಿ ಭರಿಸುತ್ತಿದೆ. 2017-18ನೇ ಸಾಲಿನಲ್ಲಿ ಸರ್ಕಾರ ಘೋಷಣೆ ಮಾಡಿದಷ್ಟೇ, ರೂ. 100 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಆದರೆ ಆ ವರ್ಷ ಕ್ಯಾಂಟೀನ್ ನಿರ್ವಹಣೆಗೆ ತಗುಲಿದ ವೆಚ್ಚ ರೂ. 124 ಕೋಟಿ. 2018-19ರಲ್ಲಿ ಸರ್ಕಾರ ರೂ. 145 ಕೋಟಿ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಆದರೆ, ಬಿಡುಗಡೆ ಮಾಡಿದ್ದು ರೂ. 115 ಕೋಟಿ. ಆದರೆ ಪಾಲಿಕೆಗೆ ತಗುಲಿದ ವೆಚ್ಚ ರೂ. 137 ಕೋಟಿ. ಅಂತೆಯೇ ಬಿಬಿಎಂಪಿ, 2019-20ನೇ ಸಾಲಿನಲ್ಲಿ ರೂ. 152 ಕೋಟಿ ಬೇಕಿದೆ ಎಂದು ಅಂದಾಜು ಮಾಡಿರುವುದಲ್ಲದೆ, ಎರಡು ವರ್ಷದ ಬಾಕಿ ಹಣ ರೂ. 58 ಕೋಟಿ ಸೇರಿ ರೂ.210 ಕೋಟಿ ಬಿಡುಗಡೆ ಮಾಡಬೇಕೆಂದು ನಗರಾಭಿವೃದ್ಧಿ ಇಲಾಖೆಗೆ ಮನವಿ ಮಾಡಿತ್ತು. ಆದರೆ ಇಲಾಖೆ ಬಾಕಿ ಹಣ ಹಾಗೂ 2019-20ನೇ ಸಾಲಿನ ಅನುದಾನವನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್.ಅನಿಲ್ ಕುಮಾರ್ ಈ ಬಗ್ಗೆ “ಇಂದಿರಾ ಕ್ಯಾಂಟೀನ್ ಗೆ ಬಜೆಟ್ ನಲ್ಲಿ ಹಣ ನಿಗದಿಯಾಗಿಲ್ಲ. ಸ್ಥಳೀಯ ಸಂಪನ್ಮೂಲದಿಂದಲೇ ನಿರ್ವಹಣೆ ಮಾಡಿಕೊಳ್ಳಲು ಬಿಬಿಎಂಪಿಗೆ ತಿಳಿಸಲಾಗಿದೆ” ಎಂದು ಹೇಳಿಕೆಯನ್ನು ನೀಡಿದ್ದಾರೆ.

ಈಗಾಗಲೇ ಬಿಬಿಎಂಪಿಗೆ ಆರ್ಥಿಕ ಮುಗ್ಗಟ್ಟು ಉಂಟಾಗಿರುವುದರಿಂದ ಇಂದಿರಾ ಕ್ಯಾಂಟೀನ್ ನಡೆಸಲು ಅಸಾಧ್ಯವಾಗುವುದಂತು ನಿಶ್ಚಿತ. ಅಲ್ಲದೆ, ಪ್ರಸಕ್ತ ವರ್ಷದ ಜೂನ್ ತಿಂಗಳ ಅಂತ್ಯಕ್ಕೆ ರೂ. 26 ಕೋಟಿ ಹಣವನ್ನು ಇಂದಿರಾ ಕ್ಯಾಂಟೀನ್ ನಿರ್ವಹಣೆಗಾಗಿ ಖರ್ಚು ಮಾಡಿದೆ.
ನಗರದಲ್ಲಿ ಸ್ಥಿರ ಹಾಗೂ ಮೊಬೈಲ್ ಕ್ಯಾಂಟೀನ್ ಸೇರಿದಂತೆ 191 ಇಂದಿರಾ ಕ್ಯಾಂಟೀನ್ ಗಳು ಮತ್ತು 18 ಅಡುಗೆ ಮನೆಗಳಿವೆ. ಅಲ್ಲದೆ, ಪ್ರತಿದಿನ ಪ್ರತಿ ಇಂದಿರಾ ಕ್ಯಾಂಟೀನ್ ನಲ್ಲಿ 1000ಕ್ಕೂ ಹೆಚ್ಚು ಮಂದಿ ಸೇರಿದಂತೆ 191 ಕ್ಯಾಂಟೀನ್ ಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಊಟ, ತಿಂಡಿ ಮಾಡುತ್ತಿದ್ದಾರೆ. ಈಗಾಗಲೇ ಎರಡು ವರ್ಷದಿಂದ ಸರ್ಕಾರದ ಹಣ ಸಾಕಾಗದೆ, ಬಿಬಿಎಂಪಿ, ನಗರದ ಕಾಮಗಾರಿಗಳ ಹಣವನ್ನು ಇಂದಿರಾ ಕ್ಯಾಂಟೀನ್ ನಿರ್ವಹಣೆಗಾಗಿ ಖರ್ಚು ಮಾಡುತ್ತಿದೆ. ಈಗ ಅನುದಾನ ಹಣವನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟರೆ, ಬಿಬಿಎಂಪಿ ಕ್ಯಾಂಟೀನ್ ನಿರ್ವಹಣೆ ಮಾಡುವುದು ಅಸಾಧ್ಯ.
“ನಾನು ಎರಡು ವರ್ಷದಿಂದ ದಿನನಿತ್ಯ ಇಂದಿರಾ ಕ್ಯಾಂಟೀನ್ ನಲ್ಲಿ ಊಟ ಮಾಡುತ್ತಿದ್ದೇನೆ. ಇಲ್ಲಿ ಕಡಿಮೆ ದರದಲ್ಲಿ, ರುಚಿಕರವಾದ ಆಹಾರ ಸಿಗುತ್ತಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಮಾಡಿದ ಒಳ್ಳೆಯ ಯೋಜನೆ ಇದು. ಇಲ್ಲಿ ಬಡವರು, ಕೂಲಿ ಕಾರ್ಮಿಕರು, ಆಟೋ ಚಾಲಕರು ಮಾತ್ರ ಊಟ ಮಾಡುವುದಕ್ಕೆ ಬರುವುದಿಲ್ಲ. ಅನುಕೂಲ ಉಳ್ಳವರು ಕೂಡ ಬರುತ್ತಾರೆ. ಈ ಕ್ಯಾಂಟೀನ್ ವ್ಯವಸ್ಥೆಯಿಂದ ಶಾಲಾ-ಕಾಲೇಜು ಮಕ್ಕಳಿಗೂ ಉಪಯೋಗವಾಗುತ್ತದೆ. ಸರ್ಕಾರದಿಂದ ಹಣ ಕೊಡಲಿಲ್ಲ ಎಂದು ಬಿಬಿಎಂಪಿ ಇಂದಿರಾ ಕ್ಯಾಂಟೀನ್ ನಿಲ್ಲಿಸಿದರೆ ಸಾಕಷ್ಟು ಬಡ ಜನರಿಗೆ ಹೊಡೆತ ಬೀಳುತ್ತದೆ”-ಮೋಹನ್, ಗಾಯತ್ರಿ ನಗರ ನಿವಾಸಿ
“ನಾನು ದಿನಕ್ಕೆ ಮೂರು ಸಮಯ ಇಂದಿರಾ ಕ್ಯಾಂಟೀನ್ ನಲ್ಲಿ ಊಟ ಮಾಡುತ್ತೇನೆ. ನನಗೆ ಒಂದು ದಿನಕ್ಕೆ ಊಟಕ್ಕೆ ಬೀಳುವ ಖರ್ಚು ರೂ. 25-30. ಈ ಕ್ಯಾಂಟೀನ್ ವ್ಯವಸ್ಥೆ ಇಲ್ಲದಿದ್ದರೆ ಹೋಟೆಲ್ ಗೆ ಹೋದರೆ ನನಗೆ ರೂ. 100-150 ಖರ್ಚು ಬೀಳುತ್ತದೆ. ಕ್ಯಾಂಟೀನ್ ಏನಾದರೂ ನಿಲ್ಲಿಸಿದರೆ, ನನ್ನಂತೆ ಸಾಕಷ್ಟು ಬಡವರಿಗೆ ತಿಂಗಳಿಗೆ ರೂ. 1500-2000 ಹೊರೆಯಾಗುವುದಂತು ನಿಶ್ಚಿತ. ಇಲ್ಲಿ ಸಮಸ್ಯೆಯಾಗಿರುವುದು ಹೆಸರು. ಕಾಂಗ್ರೆಸ್ ನವರು ಇಟ್ಟಿರುವ ಹೆಸರು ಬಿಜೆಪಿಯವರಿಗೆ ಇಷ್ಟವಿಲ್ಲ, ಬಿಜೆಪಿಯವರ ಹೆಸರು ಕಾಂಗ್ರೆಸ್ ಗೆ ಇಷ್ಟವಿಲ್ಲ. ಹೀಗಾಗಿ ಯಾರಿಗೂ ಜಗಳ ಬೇಡವೆಂದು ಸರ್ಕಾರಿ ಕ್ಯಾಂಟೀನ್ ಎಂಬ ಹೆಸರನಿಟ್ಟು,ನನ್ನಂತ ಬಡವರ ಹಸಿವನ್ನು ನೀಗಿಸಲಿ” –ಗೋಪಿ, ಆಟೋ ಚಾಲಕ
ಅಡುಗೆ ಗುತ್ತಿಗೆದಾರರ ಅವಧಿ ಮುಂದುವರಿಸುವುದಕ್ಕೆ ಅನುಮತಿ ವಿಳಂಬ
ಇಂದಿರಾ ಕ್ಯಾಂಟೀನ್ ಗಳಿಗೆ ಆಹಾರ ಸರಬರಾಜು ಮಾಡುವುದಕ್ಕೆ ರಿವಾರ್ಡ್ಸ್ (Rewards) ಮತ್ತು ಶೆಫ್ ಟಾಕ್ ಫುಡ್ & ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ.ಲಿ. (ChefTalk Food & Hospitality Services Private Limited) ಎಂಬ ಎರಡು ಸಂಸ್ಥೆಗಳು ಗುತ್ತಿಗೆ ಪಡೆದುಕೊಂಡಿವೆ. ಈ ಸಂಸ್ಥೆಗಳ ಗುತ್ತಿಗೆಯ ಅವಧಿ ಇದೇ ತಿಂಗಳ ಅಗಸ್ಟ್ 16ರಂದು ಕೊನೆಗೊಳ್ಳಲಿದ್ದು, ಈ ವರ್ಷವು ಸಹ ತಮಗೆ ಗುತ್ತಿಗೆ ನೀಡಬೇಕೆಂದು ಬಿಬಿಎಂಪಿಯಲ್ಲಿ ಮನವಿ ಸಲ್ಲಿಸಿವೆ. ಆದರೆ ಬಿಬಿಎಂಪಿ ಆಯುಕ್ತರಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಆಹಾರ ಸರಬರಾಜು ಮಾಡುತ್ತಿರುವ ರಿವಾರ್ಡ್ ಸಂಸ್ಥೆಯ ಮ್ಯಾನೇಜರ್ (ಆಡಳಿತ) ಬಲ್ ದೇವ್ ಸಿಂಗ್ ‘ಪ್ರತಿಧ್ವನಿ’ಯೊಂದಿಗೆ ಮಾತನಾಡಿ, “ಕಳೆದ ಎರಡು ವರ್ಷದಿಂದ 87 ಇಂದಿರಾ ಕ್ಯಾಂಟೀನ್ ಗಳಿಗೆ ನಾವು ಆಹಾರ ಸರಬರಾಜು ಮಾಡುತ್ತಿದ್ದೇವೆ, ನಮ್ಮಲ್ಲಿ ಒಟ್ಟು 800 ಸಿಬ್ಬಂದಿಗಳಿದ್ದಾರೆ. ಈ ವರ್ಷವು ಬಿಬಿಎಂಪಿ ನಮಗೆ ಗುತ್ತಿಗೆಯನ್ನು ಕೊಟ್ಟರೆ ನಿಟ್ಟುಸಿರು ಬಿಡುತ್ತೇವೆ. ಗುತ್ತಿಗೆ ಕೊಡದಿದ್ದರೆ ನಮಗೆ ಸಾಕಷ್ಟು ತೊಂದರೆ ಎದುರಾಗುತ್ತದೆ. ಸಿಬ್ಬಂದಿಗಳಿಗೆ ಸಮಸ್ಯೆಯಾಗುತ್ತದೆ. ಮುಂದಿನ ಗುತ್ತಿಗೆ ಸಿಗುವವರೆಗೂ ಸಿಬ್ಬಂದಿಗಳು ಅಲೆದಾಡಬೇಕಾಗುತ್ತದೆ. ಅಲ್ಲದೆ, ಅಡುಗೆಗೆ ಬಳಸುವುದಕ್ಕಾಗಿ ಕಾವೇರಿ ನೀರನ್ನು ಸಹ ಜಲಮಂಡಳಿಯು ವಿನಾಯಿತಿ ದರದಲ್ಲಿ ಸರಬರಾಜು ಮಾಡುತ್ತಿಲ್ಲ. ಹೀಗಾಗಿ ನಿಗದಿತ ಬೆಲೆಯನ್ನು ಕೊಟ್ಟು ಖಾಸಗಿ ಮತ್ತು ಜಲಮಂಡಳಿಯಿಂದ ನೀರನ್ನು ಸರಬರಾಜು ಮಾಡಿಸಿಕೊಳ್ಳುತ್ತಿದ್ದೇವೆ. ಹಾಗೂ ವಿದ್ಯುತ್ ಪೂರೈಕೆಯಲ್ಲಿಯೂ ಸಹ ಯಾವುದೇ ಸೌಲಭ್ಯವನ್ನು ಸರ್ಕಾರ ಒದಗಿಸಿಲ್ಲ. ಈ ವರ್ಷ ಮತ್ತೊಮ್ಮೆ ನಮಗೆ ಗುತ್ತಿಗೆಯನ್ನು ಕೊಟ್ಟರೆ, ಜನರ ಸೇವೆ ಮಾಡಲು ನಾವು ಸಿದ್ಧರಿದ್ದೇವೆ. ಇನ್ನೆರಡು ದಿನಗಳಲ್ಲಿ ಬಿಬಿಎಂಪಿ ಆಯುಕ್ತರಿಂದ ಒಳ್ಳೆಯ ಪ್ರತಿಕ್ರಿಯೆ ಬರಬಹುದು ಎಂದು ನಂಬಿದ್ದೇವೆ”

ಸದ್ಯದ ಸ್ಥಿತಿಯಲ್ಲಿ ಯಡಿಯೂರಪ್ಪ, ಕಾಂಗ್ರೆಸ್ ಸರ್ಕಾರದಲ್ಲಿ ಜಾರಿಗೆ ತಂದ ಟಿಪ್ಪು ಜಯಂತಿ, ನಿಗಮ-ಮಂಡಳಿಗಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯಲ್ಲಿನ ಅಕಾಡೆಮಿಗಳ ಅಧ್ಯಕ್ಷರ ನಾಮ ನಿರ್ದೇಶನ ರದ್ದು ಮಾಡಿದ ಹಾಗೆ, ಇಂದಿರಾ ಕ್ಯಾಂಟೀನ್ ಮುಚ್ಚಲು ಮುಂದಾಗುವರೇ ಎಂದು ಇನ್ನೂ ಕಾದು ನೋಡಬೇಕಿದೆ.