“ಅಂತರ್ಜಾಲ ಬಳಸುವ ಹಕ್ಕು ಸಂವಿಧಾನದ 21ನೇ ವಿಧಿ ಅಡಿ ಖಾಸಗಿತನದ ಹಕ್ಕಿನ ಒಂದು ಭಾಗವಾಗಿದೆ, ಜೊತೆಗೆ ಶಿಕ್ಷಣ ಹಕ್ಕಿನ ಒಂದು ಭಾಗ ಸಹ ಆಗಿದೆ” ಎಂಬ ಮಹತ್ವಪೂರ್ಣ ತೀರ್ಪನ್ನು ಕೇರಳದ ಉಚ್ಚ ನ್ಯಾಯಾಲಯವು ನೀಡಿದೆ.
ಕೇರಳದ ಕೊಯಿಕ್ಕೋಡ್ ಜಿಲ್ಲೆಯ ಚೆಲ್ಲನ್ನೂರು ಶ್ರೀ ನಾರಾಯಣಗುರು ಕಾಲೇಜಿನ ಇಂಗ್ಲಿಷ್ ಬಿಎ ಪದವಿ 3ನೇ ಸೆಮಿಸ್ಟರ್ ವಿದ್ಯಾರ್ಥಿನಿ ಆರ್. ಕೆ. ಫಹೀಮಾ ಶಿರೀನ್ ಎಂಬ ವಿದ್ಯಾರ್ಥಿನಿ ಸಲ್ಲಿಸಿದ್ದ ರಿಟ್ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ಕೇರಳ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠದ ನ್ಯಾಯಮೂರ್ತಿ ಪಿ. ವಿ. ಆಶಾ ಈ ಮಹತ್ವಪೂರ್ಣ ತೀರ್ಪು ನೀಡಿದ್ದಾರೆ.
ಶ್ರೀ ನಾರಾಯಣಗುರು ಕಾಲೇಜಿನ ಮಹಿಳಾ ವಿದ್ಯಾರ್ಥಿನಿಯಲದಲ್ಲಿ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮೊಬೈಲ್ ಫೋನ್ ಬಳಕೆ ನಿರ್ಬಂಧಿಸಿರುವುದನ್ನು ವಿರೋಧಿಸಿದ್ದಕ್ಕೆ ವಿದ್ಯಾರ್ಥಿನಿ ಆರ್. ಕೆ. ಫಹೀಮಾ ಶಿರೀನ್ ಅವರನ್ನು ವಿದ್ಯಾರ್ಥಿನಿಲಯದಿಂದ ಹೊರಹಾಕಲಾಗಿತ್ತು. ಕಾಲೇಜಿನ ಈ ಕ್ರಮವನ್ನು ವಿರೋಧಿಸಿ ಶಿರೀನ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ವಿ. ಆಶಾ ಅವರು ಅಂತರ್ಜಾಲ ಬಳಕೆ ಕುರಿತು ಮೈಲಿಗಲ್ಲಾಗುವ ತೀರ್ಪಿತ್ತಿದ್ದಾರೆ.
“ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯು, ಅಂರ್ತಜಾಲ ಬಳಕೆಯ ಹಕ್ಕು ಒಂದು ಮೂಲಭೂತ ಸ್ವಾತಂತ್ರವಾಗಿದೆ ಮತ್ತು ಶಿಕ್ಷಣ ಹಕ್ಕನ್ನು ಖಾತ್ರಿಗೊಳಿಸುವ ಒಂದು ಸಾಧನವಾಗಿದೆ ಎಂದು ಹೇಳಿದೆ. ವಿದ್ಯಾರ್ಥಿಯ ಈ ಹಕ್ಕಿಗೆ ಧಕ್ಕೆ ತರುವ ಯಾವುದೇ ನಿಯಮ ಅಥವಾ ಸೂಚನೆಯು ಕಾನೂನಿನ ಕಣ್ಣಿನಲ್ಲಿ ಸಿಂಧುವಾಗುವುದಿಲ್ಲ” ಎಂಬುದಾಗಿ ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಮೊಬೈಲ್ ಫೋನ್ ಬಳಕೆ ಮೊಟಕುಗೊಳಿಸುವ ಮೂಲಕ ಅಂರ್ತಜಾಲ ಬಳಕೆಯ ನಿರ್ಬಂಧ ವಿಧಿಸುವುದು ಭಾರತೀಯ ಸಂವಿಧಾನದ 19(1)(ಎ) ಅಡಿ ಅಭಿವ್ಯಕ್ತಿ ಸ್ವಾತಂತ್ರ್ವದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಹಾಗೂ ಮೊಬೈಲ್ ಫೋನ್ ಅಥವಾ ಲ್ಯಾಪ್ ಟಾಪ್ ಮೂಲಕ ಅಂತರ್ಜಾಲ ಬಳಸುವುದು ವಿದ್ಯಾರ್ಥಿಗಳಿಗೆ ಜ್ಞಾನ ಸಂಗ್ರಹಿಸುವ ಮತ್ತು ತಮ್ಮನ್ನು ತಾವು ಅಭಿವ್ಯಕ್ತಿಸಿಕೊಳ್ಳುವ ವಿಶಾಲಮಾರ್ಗ ಒದಗಿಸುತ್ತದೆ ಎಂಬ ಅರ್ಜಿದಾರರ ವಾದವನ್ನು ನ್ಯಾಯಾಲಯವು ಒಪ್ಪಿದೆ.
2014 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂರ್ತಜಾಲದ ಹಕ್ಕನ್ನು ಮಾನವ ಹಕ್ಕು ಎಂಬುದಾಗಿ ಘೋಷಿಸಿರುವ ಅಂಶದೆಡೆಗೂ ಅರ್ಜಿದಾರರ ವಕೀಲ ಲೆಜಿತ್ ಟಿ ತೊಟ್ಟಕ್ಕಲ್ ಅವರು ನ್ಯಾಯಾಲಯದ ಗಮನ ಸೆಳೆದಿದ್ದರು.

‘ಕೇರಳ ಸರ್ಕಾರ ಅಂತರ್ಜಾಲ ಹಕ್ಕನ್ನು ಮಾನವ ಹಕ್ಕು ಎಂಬುದಾಗಿ ಪರಿಗಣಿಸಿದೆ ಮತ್ತು ಎಲ್ಲರಿಗೂ ಅಂತರ್ಜಾಲ ದೊರೆಯುವಂತೆ ಮಾಡಲು ಪ್ರಯತ್ನಿಸಲಾಗುತ್ತಿದೆ” ಎಂಬುದಾಗಿ 2017 ರಲ್ಲಿ ಕೇರಳದ ಹಣಕಾಸು ಸಚಿವ ಡಾ. ಥಾಮಸ್ ಐಸಾಕ್ ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದ್ದನ್ನು ಸಹ ಅರ್ಜಿದಾರರು ಉಲ್ಲೇಖಿಸಿದ್ದರು. ಕೇರಳ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯು ಇ-ಆಡಳಿತಕ್ಕಾಗಿ ‘ಮೊಬೈಲ್ ಮೊದಲು’ ಎಂಬ ಕಾರ್ಯಕ್ರಮ ಅಳವಡಿಸಿಕೊಂಡಿದ್ದು, ರಾಜ್ಯದಾದ್ಯಂತ ಮೊಬೈಲ್ ಸಂಪರ್ಕಜಾಲ ಹೆಚ್ಚಿಸುವ ಕಾರ್ಯದಲ್ಲಿ ತೊಡಗಿದೆ ಎಂಬ ಅಂಶವನ್ನು ಸಹ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ನ್ಯಾಯಮೂರ್ತಿ ಪಿ.ವಿ. ಆಶಾ ಅವರು ತಮ್ಮ ತೀರ್ಪಿನಲ್ಲಿ, “ಒಂದು ಕಾಲದಲ್ಲಿ ಐಷಾರಾಮಿ ಸಾಧನವಾಗಿದ್ದ ಮೊಬೈಲ್ ಫೋನ್ ಇಂದು ದೈನಂದಿನ ಬದುಕಿನ ಭಾಗವಾಗಿದೆ. ಮೊಬೈಲ್ ಫೋನ್ ಮೂಲಕ ಅಂತರ್ಜಾಲ ಬಳಸುವುದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲಿದೆ. ಮತ್ತೊಬ್ಬರ ಸ್ವಾತಂತ್ರ್ಯಕ್ಕೆ ಅಡಚಣೆಯಾಗದಂತೆ ತನ್ನ ಅಧ್ಯಯನ ವಿಧಾನವನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವನ್ನು ಹದಿನೆಂಟು ವರ್ಷ ವಯಸ್ಸು ಮೇಲ್ಪಟ್ಟ ವಿದ್ಯಾರ್ಥಿಗೆ ನೀಡಬಹುದಾಗಿದೆ. ಕೇರಳದ ಶಾಲೆಗಳಲ್ಲಿ ಡಿಜಿಟಲೀಕರಣ ಉತ್ತೇಜಿಸಲಾಗುತ್ತಿದೆ. ಆಧುನಿಕ ತಂತ್ರಜ್ಞಾನವು ಪ್ರಾಥಮಿಕ ಶಿಕ್ಷಣವೂ ಸೇರಿದಂತೆ ಎಲ್ಲಾ ಕಡೆ ತನ್ನ ಸ್ಥಾನವನ್ನು ಪಡೆದುಕೊಳ್ಳುತ್ತಿದೆ. ಆದ್ದರಿಂದ ಮೊಬೈಲ್ ಫೋನ್ ಬಳಕೆಯು ಅಂತರ್ಜಾಲದ ಮೂಲಕ ಎಲ್ಲ ಲಭ್ಯ ಮೂಲಗಳಿಂದ ಜ್ಞಾನ ಸಂಗ್ರಹಿಸುವ ಅವಕಾಶವನ್ನು ವಿದ್ಯಾರ್ಥಿಗೆ ನೀಡುತ್ತದೆ. ಅದರಿಂದ ಅವರು ಉತ್ತಮ ಸಾಧನೆ ಮಾಡಬಹುದಾಗಿದೆ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬಹುದಾಗಿದೆ” ಎಂಬುದಾಗಿ ವಿವರಿಸಿದ್ದಾರೆ.

ವಿದ್ಯಾರ್ಥಿ ನಿಲಯಗಳಲ್ಲಿ ಮೊಬೈಲ್ ಫೋನ್ ಬಳಕೆ ಕುರಿತ ನಿರ್ಬಂಧವು ಲಿಂಗ ತಾರತಮ್ಯದಿಂದ ಸಹ ಕೂಡಿದೆ. ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್ ಬಳಕೆ ಕುರಿತ ಯಾವುದೇ ನಿರ್ಬಂಧಗಳಿಲ್ಲ. ಆದರೆ ವಿದ್ಯಾರ್ಥಿನಿಯರಿಗೆ ಮಾತ್ರ ನಿರ್ಬಂಧ ವಿಧಿಸಲಾಗಿದೆ ಎಂಬ ಅಂಶವನ್ನು ನ್ಯಾಯಾಲಯದ ಗಮನಕ್ಕೆ ಅರ್ಜಿದಾರರು ತಂದಿದ್ದರು.
ಮೊಬೈಲ್ ಫೋನ್ ಬಳಕೆ ನಿರ್ಬಂಧವನ್ನು ಶಿಕ್ಷಣದಲ್ಲಿ ಶಿಸ್ತು ತರಲು ವಿಧಿಸಲಾಗಿದೆ. ಇದಕ್ಕೆ ವಿದ್ಯಾರ್ಥಿನಿಯರ ಪೋಷಕರು ಸಹ ಸಮ್ಮತಿಸಿದ್ದಾರೆ ಎಂಬುದಾಗಿ ಕಾಲೇಜು ಆಡಳಿತ ಮಂಡಳಿ ನ್ಯಾಯಾಲಯದ ಎದುರು ತನ್ನ ಕ್ರಮ ಸಮರ್ಥಿಸಿಕೊಂಡಿತ್ತು.
ಆದರೆ, ಈ ವಾದವನ್ನು ಒಪ್ಪದ ನ್ಯಾಯಾಲಯ, “ಯಾವ ಸಮಯದಲ್ಲಿ ಮೊಬೈಲ್ ಫೋನ್ ಬಳಸಬೇಕೆಂಬ ಆಯ್ಕೆಯನ್ನು ವಿದ್ಯಾರ್ಥಿಗೇ ಬಿಡಬೇಕು. ಈ ಆಯ್ಕೆಯ ಸ್ವಾತಂತ್ರ್ಯವನ್ನು ಇತರ ವಿದ್ಯಾರ್ಥಿಗಳಿಗೆ ಅಡಚಣೆಯಾಗದಂತೆ ಬಳಸಬೇಕೆಂಬ ನಿರ್ಬಂಧವನ್ನು ಬೇಕಿದ್ದರೆ ವಿಧಿಸಬಹುದಾಗಿದೆ. ಅದೇ ಸಂದರ್ಭದಲ್ಲಿ ಅರ್ಜಿದಾರರು ತಮ್ಮ ಖಾಸಗಿತನದ ಹಕ್ಕನ್ನು ಅನುಭವಿಸುವಾಗ, ಅದು ಮತ್ತೊಬ್ಬರ, ಅದರಲ್ಲೂ ತಮ್ಮ ಕೊಠಡಿಯಲ್ಲಿ ನೆಲೆಸಿರುವ ಸಹಪಾಠಿ ವಿದ್ಯಾರ್ಥಿಗಳ ಖಾಸಗಿತನದ ಹಕ್ಕಿನ ಮೇಲೆ ಅತಿಕ್ರಮಣ ಮಾಡದಂತೆ ಎಚ್ಚರವಹಿಸಬೇಕಾಗುತ್ತದೆ” ಎಂದು ತೀರ್ಪಿನಲ್ಲಿ ಸಲಹೆ ನೀಡಿದೆ.