ವಿಜಯಪುರ ಜಿಲ್ಲೆಯ ಆಲಮಟ್ಟಿ ಆಣೆಕಟ್ಟು ಇಂದು (ಬುಧವಾರ ಜುಲೈ 24, 2019) ರಂದು ಸಂಪೂರ್ಣ ಭರ್ತಿಯಾಗಿದೆ. 123 ಟಿಎಮ್ ಸಿ ನೀರು ಸಂಗ್ರಹದ ಸಾಮರ್ಥ್ಯದ ಈ ಜಲಾಶಯದ ಎತ್ತರ 519.60 ಮೀಟರ್. ಸದ್ಯ 519.12 ಮೀ. ಎತ್ತರದಷ್ಟು ನೀರು ನಿಂತಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಯೋಜನೆಗೆ ಈಗಾಗಲೇ ರಾಜ್ಯ ಸರಕಾರ ಆಡಳಿತಾತ್ಮಕ ಒಪ್ಪಿಗೆ ನೀಡಿದ್ದು ಅದರ ಅನುಷ್ಠಾನಕ್ಕೆ ರೂ. 80 ರಿಂದ 90 ಸಾವಿರ ಕೋಟಿ ರೂ. ಗಳ ಅವಶ್ಯಕತೆಯಿದೆ. ಒಟ್ಟು 22 ಲಕ್ಷ ಎಕರೆ ಜಮೀನನ್ನು ನೀರಾವರಿಗೆ ಒಳಪಡಿಸುವ ಗುರಿ ಹೊಂದಲಾಗಿದ್ದು, ಬಾಗಲಕೋಟೆ ನಗರದ ಒಂದು ಭಾಗವನ್ನೊಳಗೊಂಡು 22 ಹಳ್ಳಿಗಳ ಸುಮಾರು 50 ಸಾವಿರ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕಾಗಿದೆ.
ಕೃಷ್ಣಾ ನದಿ ವಿವಾದದಲ್ಲಿ ತೆಲಂಗಾಣ ರಾಜ್ಯವೂ ಒಳಗೊಂಡಿದ್ದು ಆಲಮಟ್ಟಿ ಆಣೆಕಟ್ಟಿನ ಎತ್ತರ ಹೆಚ್ಚಿಸಲು ತಕರಾರು ತೆಗೆಯುತ್ತಿದೆ. ಆದರೆ, ಸುಪ್ರೀಮ್ ಕೋರ್ಟ್ ಕರ್ನಾಟಕದ ಪರವಾಗಿಯೇ ತೀರ್ಪು ನೀಡಿದ್ದು 524 ಮೀ. ಎತ್ತರಕ್ಕೆ ಅನುಮತಿ ನೀಡಿದೆ. ಈ ಎತ್ತರದಲ್ಲಿ 175 ಟಿಎಮ್ ಸಿ ನೀರು ಸಂಗ್ರಹವಾಗಲಿದೆ.
ಆಲಮಟ್ಟಿಯ ಎಲ್ಲ 24 ಗೇಟುಗಳನ್ನು 524 ಮೀ.ಗೆ ಹೆಚ್ಚಿಸಲು ಸುಪ್ರೀಮ್ ಕೋರ್ಟ್ ಅನುಮತಿ ನೀಡಿದ್ದರೂ ಅದು ಕೇಂದ್ರ ಸರಕಾರದ ಅಧಿಸೂಚನೆಯಲ್ಲಿ ಪ್ರಕಟವಾಗಿಲ್ಲ. ಪ್ರಕಟವಾದ ಮೂರ್ನಾಲ್ಕು ತಿಂಗಳಲ್ಲೇ ಗೇಟುಗಳನ್ನು ಎತ್ತರಿಸುವ ಸರ್ವ ಸಿದ್ಧತೆಗಳನ್ನು ಅಧಿಕಾರಿಗಳು ಮಾಡಿಕೊಂಡಿದ್ದಾರೆ. ಮೂರನೇ ಹಂತದ ಯೋಜನೆಯ ಜಾರಿಗೆ ಬೇಕಾದ ರೂ. 80 ಸಾವಿರ ಕೋಟಿ ಒದಗಿಸಲು ರಾಜ್ಯ ಸರಕಾರಕ್ಕೆ ಸಾಧ್ಯವೇ ಎಂಬುದು ಈಗಿರುವ ಮಿಲಿಯನ್ ಡಾಲರ್ ಪ್ರಶ್ನೆ. ಸದ್ಯ ಒದಗಿಸಿರುವುದು ರೂ 7,000 ಕೋಟಿ! ಹಾಗಾದರೆ ಯೋಜನೆಯ ಅನುಷ್ಠಾನ ಮರೀಚಿಕೆಯಾಗುವದರಲ್ಲಿ ಯಾವ ಸಂಶಯವೂ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಮುಂದೇನು ಎಂಬ ಪ್ರಶ್ನೆ ಭೂತಾಕಾರವಾಗಿ ನಿಂತು ಬಿಡುತ್ತದೆ.
ಎರಡು ಲಕ್ಷ ಹೆಕ್ಟೇರ್ ಗಿಂತಲೂ ಅಧಿಕ ಜಮೀನು ನೀರಾವರಿಗೆ ಒಳಪಡುವ ಯೋಜನೆಗಳನ್ನು “ರಾಷ್ಟ್ರೀಯ ಯೋಜನೆ” ಎಂದು ಘೋಷಿಸಲು ಅವಕಾಶವಿದೆ. ಆಲಮಟ್ಟಿ ಯೋಜನೆಯಿಂದ ಸುಮಾರು ಆರು ಲಕ್ಷ ಹೆಕ್ಟೇರ್ ಗಿಂತಲೂ ಅಧಿಕ ಜಮೀನು ನೀರಾವರಿಗೆ ಒಳಪಡಲಿದ್ದು ಇದನ್ನು “ರಾಷ್ಟ್ರೀಯ ಯೋಜನೆ” ಎಂದು ಘೋಷಿಸಲು ಕೇಂದ್ರದ ಮೇಲೆ ಒತ್ತಡ ತರುವ ಕೆಲಸವನ್ನು ರಾಜ್ಯದ ಸಂಸದರು, ವಿಶೇಷವಾಗಿ ಬಿಜೆಪಿ ಸಂಸದರು ಮಾಡಬೇಕಾಗಿದೆ. ಇಲ್ಲದಿದ್ದರೆ ಯೋಜನೆಯ ಅನುಷ್ಠಾನ ಹತ್ತು ವರ್ಷವಾದರೂ ಸಾಧ್ಯವಿಲ್ಲ. ಅದು ಕೇವಲ ಕನಸಿನ ಮಾತಾಗಿಯೇ ಉಳಿಯುವುದು ನಿಶ್ಚಿತ.
ಕೃಷ್ಣಾ ನದಿ ನೀರಿನ ವಿವಾದದಲ್ಲಿ ಕರ್ನಾಟಕದ ವಿರುದ್ಧ ಸೆಣಸುತ್ತಿರುವ ಮಹಾರಾಷ್ಟ್ರ ಮತ್ತು ತೆಲಂಗಾಣ ಸರ್ಕಾರಗಳು ಇತ್ತೀಚೆಗೆ ಕೈಗೂಡಿಸಿರುವುದನ್ನು ಕರ್ನಾಟಕ ಗಂಭೀರವಾಗಿ ತೆಗೆದುಕೊಳ್ಳಬೇಕು. ಮಹಾದಾಯಿ ನದಿ ನೀರಿನ ವಿವಾದದಲ್ಲಿ ಕರ್ನಾಟಕಕ್ಕೆ ಹಂಚಿಕೆಯಾದ 13 ಟಿ ಎಮ್ ಸಿ ನೀರಿನ ಸಂಬಂಧವೂ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಇನ್ನೂ ಹೊರಡಿಸಬೇಕಾಗಿದೆ. ನ್ಯಾಯಮೂರ್ತಿ ಜೆ. ಎಮ್. ಪಾಂಚಾಲ ನೇತೃತ್ವದ ನ್ಯಾಯಮಂಡಳಿಯು ತನ್ನ ತೀರ್ಪು ನೀಡಿ ಬರುವ ಆಗಸ್ಟ್ 14 ಕ್ಕೆ ಒಂದು ವರ್ಷವಾಗುತ್ತದೆ!
ರಾಜ್ಯದ ಸಂಸದರು ಮಹಾದಾಯಿ ಮತ್ತು ಕೃಷ್ಣಾ ಯೋಜನೆಗಳ ಜಾರಿಗೆ ಕೇಂದ್ರದ ಮೇಲೆ ಒತ್ತಡ ತರುವಂತೆ ಮಾಡುವುದು ನೀರಾವರಿ ಹೋರಾಟಗಾರರ ಕರ್ತವ್ಯವಾಗಿದೆ. ಈ ದಿಸೆಯತ್ತ ಮುಂಬಯಿ ಕರ್ನಾಟಕದ ಏಳು ಜಿಲ್ಲೆಗಳ ಹೋರಾಟಗಾರರು ಒಗ್ಗಟ್ಟು ಪ್ರದರ್ಶಿಸುವುದು ಇಂದಿನ ಅವಶ್ಯಕತೆಯಾಗಿದೆ.