ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಮಂಡಿಸಿದ ಬಜೆಟ್ ನಲ್ಲಿ ದೇಶದ ಆರ್ಥಿಕ ದುಸ್ಥಿತಿಯನ್ನು ಮರೆ ಮಾಚುವ ಯತ್ನ ಕೂಡ ನಡೆದಿದೆ. ಹಣಕಾಸು ಸಚಿವರು ಮಂಡಿಸಿದ ಎಕಾನಮಿಕ್ ಸರ್ವೇ ಮತ್ತು ಬಜೆಟ್ ನ ಅಂಕಿ ಅಂಶಗಳಲ್ಲಿ ತಾಳ ಮೇಳ ಆಗುತ್ತಿಲ್ಲ ಎಂದು ಮೊದಲಿಗೆ ಬೊಟ್ಟು ಮಾಡಿ ತೋರಿಸಿದವರೇ ಪ್ರಧಾನಮಂತ್ರಿಯ ಆರ್ಥಿಕ ಸಲಹಾ ಮಂಡಳಿ ಸದಸ್ಯ ಮತ್ತು ರಾಷ್ಟ್ರೀಯ ಸಾರ್ವಜನಿಕ ಹಣಕಾಸು ಮತ್ತು ನೀತಿ ಸಂಸ್ಥೆಯ ನಿರ್ದೇಶಕ ರತಿನ್ ರಾಯ್.
ಭಾರತೀಯ ಆರ್ಥಿಕತೆ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುವ ಸಾಧ್ಯತೆ ಇದ್ದು, ಕ್ರಮೇಣ ಬ್ರೆಝಿಲ್ ಅಥವಾ ದಕ್ಷಿಣ ಆಫ್ರಿಕಾದ ಸ್ಥಿತಿ ಎದುರಾಗಲಿದೆ ಎಂದು ಮೂರು ತಿಂಗಳ ಹಿಂದೆ ಎಚ್ಚರಿಕೆ ನೀಡಿದ್ದ ರಾಯ್ ಅವರು, ಬಜೆಟ್ ನಲ್ಲಿ ಆಗಿರುವ ಬಹುದೊಡ್ಡ ಲೋಪದೋಷದ ಬಗ್ಗೆ ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಯಲ್ಲಿ ಲೇಖನ ಪ್ರಕಟಿಸಿದ್ದರು.
ತೆರಿಗೆ ಆದಾಯದಲ್ಲಿ ಸರಿಸುಮಾರು 1.7 ಲಕ್ಷ ಕೋಟಿ ರೂಪಾಯಿ ಕೊರತೆ ಆಗಿದ್ದು, ಅದನ್ನು ಬಜೆಟ್ ನಲ್ಲಿ ಸ್ಪಷ್ಟವಾಗಿ ತೋರಿಸಲಾಗಿಲ್ಲ ಎಂಬುದು ಈಗಾಗಲೇ ವ್ಯಾಪಕವಾಗಿ ಚರ್ಚಿತವಾಗಿದೆ. ಹಣಕಾಸು ಸಚಿವರು ಲೋಕಸಭೆಯಲ್ಲಿ ಹಿಂದಿನ ದಿನ ಪ್ರಕಟಿಸಿದ ಎಕಾನಮಿಕ್ ಸರ್ವೇಯಲ್ಲಿ ತೆರಿಗೆ ಆದಾಯದ ಬಗ್ಗೆ ಇದ್ದ ಅಂಕಿ ಅಂಶವನ್ನು ಮರುದಿನ ಮಂಡಿಸಿದ ಬಜೆಟಿನಲ್ಲಿ ಮರೆ ಮಾಚಲಾಗಿತ್ತು ಎನ್ನುವುದು ತಜ್ಞರು ಬೊಟ್ಟು ಮಾಡಿರುವ ವಿಚಾರ.
ಏನು ಹೇಳುತ್ತದೆ ಎಕಾನಮಿಕ್ ಸರ್ವೇ:
ಎಕಾನಮಿಕ್ ಸರ್ವೇ 2018-19 ಭಾಗ ಎರಡರ ಕೊನೆಯಲ್ಲಿ ಅಂಕಿ ಅಂಶಗಳ ಕಂಡಿಕೆ ಪೇಜ್ ಎ59ರಲ್ಲಿ ಅಂಕಣ 2.5ರಲ್ಲಿ ಕೇಂದ್ರ ಸರಕಾರದ ಆಯ ಮತ್ತು ವ್ಯಯಗಳನ್ನು ನೀಡಲಾಗಿದೆ. ಈ ಅಂಕಣದ ಬಲಭಾಗದ ಕೊನೆಯ ಕಾಲಂನಲ್ಲಿ 2018-19ರ ಸಾಲಿನ ಪ್ರೊವಿಷನಲ್ ಎಕ್ಚುವಲ್ಸ್ (ಸಂಗ್ರಹವಾದ ಆದಾಯ) ನೀಡಲಾಗಿದೆ. ಈ ಬಾರಿಯ ಬಜೆಟ್ ಮಾರ್ಚ್ ತಿಂಗಳಲ್ಲಿ ಆಗಿರದೆ ಜುಲೈ ತಿಂಗಳಲ್ಲಿ ಆಗಿರುವುದರಿಂದ ನೈಜವಾದ ಆದಾಯದ ಅಂಕಿ ಅಂಶ ದೊರೆತಿರಬೇಕು ಮತ್ತದು ಕಂಮ್ಟ್ರೋಲರ್ ಜನರ್ ಆಫ್ ಅಕೌಂಟ್ಸ್ ಕಚೇರಿಯಿಂದ ಬಂದಿರುವುದರಿಂದ ಸರಿಯಾಗಿಯೇ ಇರುತ್ತದೆ. ಆದರೆ ಬಜೆಟ್ ನಲ್ಲಿ ತೋರಿಸಿರುವ 2018-19ರ ಪರಿಷ್ಕೃತ ಅಂದಾಜು ಸರ್ಕಾರ ಎಕಾನಮಿಕ್ ಸರ್ವೇಯಲ್ಲಿ ತೋರಿಸಿರುವ ನೈಜ ಆಯ ಮತ್ತು ವ್ಯಯದೊಂದಿಗೆ ತುಲನೆ ಆಗುತ್ತಿಲ್ಲ. ಇದರರ್ಥ ಬಹುದೊಡ್ಡ ಮೊತ್ತದ ಕೊರತೆಯನ್ನು ಜನರಿಂದ ಮಾತ್ರವಲ್ಲದೆ ಲೋಕಸಭೆಯಿಂದ ಮರೆ ಮಾಚುವ ಯತ್ನ ಸರಕಾರದಿಂದ ನಡೆದಿದೆ.
ಬಜೆಟ್ ನಲ್ಲಿ ಆಗಿರುವ ಲೋಪ ಗಂಭೀರ ಪ್ರಮಾಣದಾಗಿದ್ದು, ಸರ್ಕಾರ ಮತ್ತೊಮ್ಮೆ ಪರಿಷ್ಕೃತ ಬಜೆಟ್ ಮಂಡಿಸಬೇಕಾಗುತ್ತದೆ ಎನ್ನುತ್ತಾರೆ ಆರ್ಥಿಕ ತಜ್ಞರು. ಆದರೆ, ಬಜೆಟ್ ಅಂಕಿ ಅಂಶಗಳೆಲ್ಲ ಸಾಚ ಅನ್ನುತ್ತಾರೆ ಹಣಕಾಸು ಸಚಿವರು.

ಟ್ರಿಲಿಯನ್ ಡಾಲರ್ ಭಾಷೆಯ ಭರವಸೆ:
ದೇಶ ಮತ್ತೊಂದು ಕರಾಳ ಬಿಕ್ಕಟ್ಟಿಗೆ ತೆರೆದುಕೊಳ್ಳುತ್ತಿದೆ. ದೇಶದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸುತ್ತಿದೆ ಎಂಬುದನ್ನು ಇತ್ತೀಚಿಗಿನ ವಿದ್ಯಮಾನಗಳು ತೋರಿಸಿಕೊಟ್ಟಿವೆ. ಹೂಡಿಕೆದಾರರು ಮತ್ತು ಉದ್ಯಮಿಗಳು ಭರವಸೆ ಕಳಕೊಳ್ಳುತ್ತಿದ್ದಾರೆ. ಉತ್ಪನ್ನಗಳು ಮಾರಾಟವಾಗದೆ ಗೋದಾಮುಗಳಲ್ಲಿ ರಾಶಿ ಬಿದ್ದಿದೆ. ಹಣಕಾಸಿನ ಚಲಾವಣೆ ದಿಲ್ಲಿಯಿಂದ ಹಳ್ಳಿತನಕ ಕುಸಿದಿದೆ. ಆದರೂ, ಸರಕಾರ ಮಾತ್ರ ಟ್ರಿಲಿಯನ್ ಡಾಲರ್ ಭಾಷೆಯಲ್ಲಿ ಮಾತನಾಡುತ್ತದೆ, ಆರ್ಥಿಕ ಪರಿಭಾಷೆಯನ್ನು ಕಳಕೊಂಡಿದೆ. ಇದು ಹಸಿದವನಿಗೆ ಒಣ ರೊಟ್ಟಿಯ ಬದಲು ಒಬ್ಬಟ್ಟಿನ ಆಸೆ ಹುಟ್ಟಿಸಿದಂತಿದೆ.
ಪ್ರಧಾನಮಂತ್ರಿಯವರ ಆರ್ಥಿಕ ಸಲಹೆಗಾರರೇ ಇಂತಹ ಕರಾಳ ಆರ್ಥಿಕ ವಿಷಮ ಸ್ಥಿತಿಯ ಬಗ್ಗೆ ಮೂರು ತಿಂಗಳ ಹಿಂದೆಯೇ ಮುನ್ನೆಚ್ಚರಿಕೆ ನೀಡಿದ್ದರು. ಇತ್ತೀಚೆಗೆ ಕೈಗಾರಿಕೋದ್ಯಮಿಗಳು ಕೂಡ ಮಾತನಾಡತೊಡಗಿದ್ದಾರೆ. ಕೇವಲ ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಮಾತ್ರ ಅಲ್ಲದೆ ದೇಶದ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳ ಬಗ್ಗೆ ಕೂಡ ಚರ್ಚೆ ಹುಟ್ಟಿಕೊಂಡಿದೆ.
ಆದಿ ಗೊದ್ರೇಜ್ ಮತ್ತು ಕಿರಣ್ ಮಜುಂದಾರ್ ಶಾ ಅವರು ದೇಶದಲ್ಲಿ ಹೆಚ್ಚುತ್ತಿರುವ ಕಳವಳಕಾರಿ ಘಟನೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿ, ಆರ್ಥಿಕ ಮುಗ್ಗಟ್ಟು ಇರುವುದನ್ನು ತಾವು ಒಪ್ಪದೆ ಇರಲು ಆಗುವುದಿಲ್ಲ ಎಂದಿದ್ದಾರೆ. ಇವರ ಹೇಳಿಕೆಗ ಪೂರಕವಾಗಿ ಅಂಕಿ ಅಂಶಗಳನ್ನು ನೋಡಿದರೆ ಉತ್ಪಾದನ ಕ್ಷೇತ್ರದಲ್ಲಿ ಪ್ರಗತಿ ಕುಂಠಿತ ಆಗಿದೆ. ರಫ್ತು ವ್ಯವಹಾರ ಪ್ರಮಾಣ ಕೂಡ ಕುಸಿದಿದೆ.
ಸರ್ಕಾರ ಮತ್ತು ಖಾಸಗಿ ಹೂಡಿಕೆ ಪ್ರಮಾಣ 15 ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿದಿದೆ. ಈ ವರ್ಷ ಜೂನ್ ವೇಳೆಗೆ ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಕಂಪೆನಿಗಳು 43 ಸಾವಿರ ಕೋಟಿ ರೂಪಾಯಿ ಹೂಡಿಕೆ ಘೋಷಣೆ ಮಾಡಿದ್ದು, ಇದು ಕಳೆದ ವರ್ಷಕ್ಕಿಂತ ಶೇಕಡ 87ರಷ್ಟು ಕಡಿಮೆ ಎಂದರೆ ಯೋಜನೆಗಳಲ್ಲಿ ಹೂಡಿಕೆ ಪ್ರಮಾಣ ತೀರ ಕಡಿಮೆ ಆಗಿದ್ದು, ಹಣದ ಚಲಾವಣೆ ಕುಸಿದಿದೆ.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಸರಕಾರದ ಕೈಯಲ್ಲಿ ದುಡ್ಡಿಲ್ಲ. ಮಾತ್ರವಲ್ಲದೆ, ಆದಾಯ ಕೂಡ ನಿರೀಕ್ಷಿಸಿದಷ್ಟು ಬರುತ್ತಿಲ್ಲ. ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಬರುತ್ತಿಲ್ಲ ಎನ್ನುವವರು ಸಾಕಷ್ಟು ಮಂದಿ ಇದ್ದಾರೆ. ನಿರೀಕ್ಷಿಸಿದಷ್ಟು ಜಿ ಎಸ್ ಟಿ ಆದಾಯ ಬರುತ್ತಿಲ್ಲ ಎಂದು ಸರ್ಕಾರವೇ ಹೇಳಿದೆ. ಕಳೆದ ವರ್ಷ ಅಂದಾಜು ಒಂದು ಲಕ್ಷ ಕೋಟಿ ರೂಪಾಯಿ ಜಿ ಎಸ್ ಟಿ ಸಂಗ್ರಹ ಕಡಿಮೆ ಆಗಿದೆ.
ಒಂದೆಡೆ ಸರ್ಕಾರದ ಖಜಾನೆ ಬರಿದಾಗಿರುವುದು, ಇನ್ನೊಂದೆಡೆ ಖಜಾನೆ ತುಂಬಿಸಲು ಅವಕಾಶಗಳೇ ಇಲ್ಲದ ಪರಿಸ್ಥಿತಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, ಮುಂಬಯಿ ಸ್ಟಾಕ್ ಎಕ್ಸ್ ಚೇಂಜ್ ಮುಂತಾದೆಡೆ ಅವರು ಸಂರಕ್ಷಿಸಿಟ್ಟ ನಿಧಿಗಳ ಮೇಲೆ ಕೇಂದ್ರ ಸರಕಾರ ಕೈ ಹಾಕುತ್ತಿದೆ. ಅದಕ್ಕೂ ಒಂದು ಹೆಜ್ಜೆ ಮುಂದೆ ವಿದೇಶದಿಂದ ಸಾಲ ಎತ್ತಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸಿದ್ಧವಾಗಿದೆ ಎಂದರೆ ತುಂಬಾ ಮಂದಿಗೆ ಜೀರ್ಣಿಸಿಕೊಳ್ಳಲು ಅಸಾಧ್ಯವಾದೀತು. ವಿದೇಶದಿಂದ ಸಾಲ ಪಡೆದುಕೊಂಡರೆ ಜೀರ್ಣಿಸಿಕೊಳ್ಳಲು ದೇಶಕ್ಕೂ ಕಷ್ಟ ಆದೀತು ಎಂದು ಆರ್ ಬಿ ಐ ಮಾಜಿ ಗವರ್ನರ್ ರಘುರಾಮ ರಾಜನ್ ಸಹಿತ ಹಲವು ಮಂದಿ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಿದೇಶದಿಂದ ಪಡೆದುಕೊಳ್ಳುವ ಸಾಲ ಮೇಲ್ನೋಟಕ್ಕೆ ಅಗ್ಗದ ದರಕ್ಕೆ ದೊರೆಯುತ್ತದೆ. ಆದರೆ, ಅದರ ಪರಿಣಾಮಗಳು ಅನೇಕ ಇವೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ಇವೆಲ್ಲವೂ ಕೂಡ ದೇಶದ ಆರ್ಥಿಕ ಸಂಕಷ್ಟದ ಕುರುಹುಗಳು ಆಗಿವೆ.
ತಮ್ಮ ರಾಜಕೀಯ ನೀತಿಗಳನ್ನು ಅನುಷ್ಟಾನ ಮಾಡಲು ಹೆಣಗಾಡುತ್ತಿರುವ ಸರಕಾರದಿಂದಾಗಿ ಹಲವು ಮಂದಿ ತಜ್ಞರು, ಅಧಿಕಾರಿಗಳು ಆರ್ಥಿಕ ಇಲಾಖೆಗಳಿಂದ ಹೊರಬರುತ್ತಿದ್ದಾರೆ. ಆರ್ ಬಿ ಐಯಲ್ಲಿದ್ದ ಆಡಳಿತರೂಢ ಪಕ್ಷದ ಮುಖಂಡರ ಪ್ರೀತಿ ಪಾತ್ರರಾದ ಹಿರಿಯ ಅಧಿಕಾರಿಗಳೇ ರಾಜಿನಾಮೆ ನೀಡಿ ಹೊರಬಂದಿದ್ದಾರೆ.
ಯಾರು ಏನೇ ಹೇಳಲಿ ಸರ್ಕಾರ ಮಾತ್ರ ಆರ್ಥಿಕ ಪರಿಸ್ಥಿತಿಯ ಬಗ್ಗೆ ಜನರಿಂದ ಮುಚ್ಚಿಡಲು ಯತ್ನಿಸುತ್ತಿರುವುದು ಖಚಿತವಾಗಿದೆ. ಸರಕಾರ ಟ್ರಿಲಿಯನ್ ಡಾಲರ್ ಬಣ್ಣದ ಹೋಲಿಕೆ ನೀಡಿದರೂ ಆರ್ಥಿಕ ಪರಿಸ್ಥಿತಿ ಈಗಾಗಲೇ ಮಾಸಿಕ ವೇತನದ ಉದ್ಯೋಗಿಗಳನ್ನು ಹೊರತು ಪಡಿಸಿ ಉದ್ಯಮಿಗಳಿಂದ ತೊಡಗಿ ಜನಸಾಮಾನ್ಯನ ತನಕ ಬಾಧಿಸತೊಡಗಿರುವುದು ಕಂಡು ಬರುತ್ತದೆ. ಕೇಂದ್ರ ಸರಕಾರದ ಆದಾಯ ಸಂಗ್ರಹದ ಕೊರತೆ ನೇರವಾಗಿ ರಾಜ್ಯಗಳ ಮೇಲೆ ಕೂಡ ಪ್ರತಿಕೂಲ ಪರಿಣಾಮ ಬೀರಲಿದೆ. ಜಿಎಸ್ಟಿ ಮತ್ತು ಇತರ ತೆರಿಗೆ ಸಂಗ್ರಹದಲ್ಲಿ ಕುಸಿತವಾದರೆ ರಾಜ್ಯದ ಅನುದಾನದ ಪಾಲಿನಲ್ಲಿ ಕೂಡ ಕಡಿತ ಆಗುತ್ತದೆ. ಕೇಂದ್ರದ ತೆರಿಗೆ ಮತ್ತು ಅನುದಾನದ ಮೇಲೆ ಆಯ ವ್ಯ ಸಿದ್ಧಪಡಿಸುವ ರಾಜ್ಯ ಸರಕಾರಗಳು ಇಂತಹ ಪರಿಸ್ಥಿತಿಯಲ್ಲಿ ಆರ್ಥಿಕವಾಗಿ ಇಕ್ಕಟ್ಟಿದೆ ಸಿಲುಕಲಿವೆ.