ದೇಶದ ಆರ್ಥಿಕತೆಯು 42 ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿದಿದೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ‘ಫೋರ್ಬ್ಸ್” ಮ್ಯಾಗಜೀನ್ ವರದಿ ಪ್ರಕಟಿಸಿರುವ ನಡುವೆ ಬಿಜೆಪಿಯು 2019ರ ಲೋಕಸಭಾ ಚುನಾವಣೆಗೂ ಮುನ್ನ 2,410 ಕೋಟಿ ರುಪಾಯಿ ದೇಣಿಗೆ ಸಂಗ್ರಹಿಸಿರುವ ಸ್ಫೋಟಕ ಸುದ್ದಿ ಬಹಿರಂಗವಾಗಿದೆ. ಈ ಪೈಕಿ ಅರ್ಧಕ್ಕೂ ಹೆಚ್ಚಿನ ಮೊತ್ತವನ್ನು ಅಗೋಚರ ಮೂಲಗಳಿಂದ ಸಂಗ್ರಹಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ದೇಶದ ಜನತೆಗೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿರುವುದ ಬಗ್ಗೆ ಪಾಠ ಮಾಡುತ್ತಿದೆ!
ದೇಶದಲ್ಲಿ ನಿರುದ್ಯೋಗ ಮಟ್ಟವು ಕಳೆದ 45 ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿದಿದೆ ಎನ್ನುವ ಆತಂಕಕಾರಿ ಸುದ್ದಿಗಳು ಪ್ರಧಾನವಾಗಿ ಚರ್ಚೆಯಾಗುತ್ತಿರುವಾಗ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿರುವ ಬಿಜೆಪಿಯು 2,410 ಕೋಟಿ ರುಪಾಯಿಯ ಪೈಕಿ 1,450 ಕೋಟಿ ರುಪಾಯಿ ಅಂದರೆ ಶೇ. 60ರಷ್ಟು ದೇಣಿಗೆಯನ್ನು ಅನಾಮಿಕವಾದ ಚುನಾವಣಾ ಬಾಂಡ್ ನಿಂದ ಸಂಗ್ರಹಿಸಿರುವುದಾಗಿ ಹೇಳಿಕೊಂಡಿದೆ. ಕಾಂಗ್ರೆಸ್ 918 ಕೋಟಿ ರುಪಾಯಿ ದೇಣಿಗೆ ದೊರೆತಿದ್ದು, 383 ಕೋಟಿ ರುಪಾಯಿ ಅಂದರೆ ಶೇ. 41ರಷ್ಟು ದೇಣಿಗೆ ಅನಾಮಿಕ ಮೂಲಗಳಿಂದ ಸಂಗ್ರಹವಾಗಿದೆ.
2017-18ರ ಅವಧಿಯಲ್ಲಿ ಮೊದಲ ಬಾರಿಗೆ ಚುನಾವಣಾ ಬಾಂಡ್ ಅನ್ನು ಅಸ್ಥಿತ್ವಕ್ಕೆ ತಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಚುನಾವಣಾ ಬಾಂಡ್ ಮೂಲಕ ಸಲ್ಲಿಕೆಯಾದ ಒಟ್ಟು ಮೊತ್ತದ ಪೈಕಿ ಶೇ. 95ರಷ್ಟು ದೇಣಿಗೆಯನ್ನು ತಾನೇ ಪಡೆದು ಸಿಂಹ ಪಾಲು ಎತ್ತುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿತ್ತು. ಅಂದರೆ 222 ಕೋಟಿ ರುಪಾಯಿ ಚುನಾವಣಾ ಬಾಂಡ್ ಪೈಕಿ 210 ಕೋಟಿ ರುಪಾಯಿ ಮೊತ್ತದ ಬಾಂಡ್ ಬಿಜೆಪಿ ತೆಕ್ಕೆಗೆ ಸೇರಿತ್ತು.
ವ್ಯಕ್ತಿ ಅಥವಾ ಸಂಸ್ಥೆಯು ಕನಿಷ್ಠ 1,000 ರುಪಾಯಿಯಿಂದ 1 ಕೋಟಿ ರುಪಾಯಿ ಮೊತ್ತದ ಚುನಾವಣಾ ಬಾಂಡ್ ಖರೀದಿಸಬಹುದಾಗಿದ್ದು, 2018 ಮಾರ್ಚ್ ನಿಂದ 2019ರ ಅಕ್ಟೋಬರ್ ಅಂತ್ಯಕ್ಕೆ 6,128 ಕೋಟಿ ರುಪಾಯಿ ಮೊತ್ತದ 12,313 ಚುನಾವಣಾ ಬಾಂಡ್ ಅನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಮಾರಾಟ ಮಾಡಿದೆ. ರಾಜಕೀಯ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ಚುನಾವಣಾ ಬಾಂಡ್ ನೀಡುವವರ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ ಎಂದು ನಿಯಮದಲ್ಲಿ ಹೇಳಿರುವುದರಿಂದ ಇದರ ಲಾಭವು ಸಹಜವಾಗಿ ಆಡಳಿತ ಪಕ್ಷಕ್ಕೆ ಹೆಚ್ಚಾಗಿ ದೊರೆಯುತ್ತದೆ ಎಂಬುದು ಸರಳ ತಿಳಿವಳಿಕೆ.
ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಚುನಾವಣಾ ಬಾಂಡ್ ಜಾರಿಗೊಳಿಸಿರುವ ಮೋದಿ ಸರ್ಕಾರದ ನೀತಿಯನ್ನು ಕಟುವಾಗಿ ವಿರೋಧಿಸಿವೆ. ಚುನಾವಣಾ ಬಾಂಡ್ ಜಾರಿಗೆ ತಂದಿರುವುದರಿಂದ ಕಾನೂನಾತ್ಮಕ ಭ್ರಷ್ಟಾಚಾರ ನಡೆಯಲಿದ್ದು, ನಕಲಿ ಕಂಪೆನಿಗಳ ಹಾವಳಿ ಹೆಚ್ಚಲಿದೆ. ಹವಾಲಾ ಹಣದ ಮೂಲಕ ಚುನಾವಣಾ ಬಾಂಡ್ ಖರೀದಿಸಿ ರಾಜಕೀಯ ಪಕ್ಷಗಳಿಗೆ ನೀಡುವ ಸಾಧ್ಯತೆ ವಿಫುಲವಾಗಲಿದೆ. ಇದರಿಂದ ವ್ಯವಸ್ಥೆಯಲ್ಲಿ ಕಪ್ಪು ಹಣ ಚಾಲ್ತಿಗೆ ಬರಲಿದೆ. ವ್ಯಕ್ತಿ ಅಥವಾ ಸಂಸ್ಥೆಯು ಆಡಳಿತ ಪಕ್ಷದಿಂದ ಲಾಭ ಪಡೆಯಲು ಅದಕ್ಕೆ ಬಾಂಡ್ ಮೂಲಕ ದೇಣಿಗೆ ನೀಡಲು ಮುಂದಾಗುವ ಸಾಧ್ಯತೆಯೇ ಹೆಚ್ಚು. ಉದ್ಯಮಿಯೊಬ್ಬ ಲಾಭದ ಕಡೆ ಮುಖ ಮಾಡುವುದರಿಂದ ಆಡಳಿತಗಾರರನ್ನು ಸಂತೈಸುವುದು ಅಘೋಷಿತ ನಿಯಮವಾಗುತ್ತದೆ. ಇದು ಅಂತಿಮವಾಗಿ ಭ್ರಷ್ಟಾಚಾರದ ಮೂಲಕ ಕೊನೆಗೊಳ್ಳುತ್ತದೆ ಎಂದು ವಾದಿಸಿವೆ. ಈ ಸಂಬಂಧ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಮಾಸಾಂತ್ಯದಲ್ಲಿ ಕೋರ್ಟ್ ಈ ಸಂಬಂಧ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಮೋದಿ ಸರ್ಕಾರದ ಈ ವಿವಾದಾತ್ಮಕ ಕಾನೂನಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಹಾಗೂ ಭಾರತೀಯ ಚುನಾವಣಾ ಆಯೋಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಚುನಾವಣಾ ಬಾಂಡ್ ಜಾರಿಯಿಂದ ಪಾರದರ್ಶಕತೆ ಜಾರಿಗೆ ತರಲಾಗದು. ಭ್ರಷ್ಟಾಚಾರಕ್ಕೆ ವ್ಯಾಪಕವಾಗುತ್ತದೆ ಎನ್ನುವ ಮೂಲಕ ವಿರೋಧ ಪಕ್ಷಗಳ ನಿಲುವನ್ನು ಸಮರ್ಥಿಸಿವೆ. ಆರ್ ಬಿ ಐ ಚುನಾವಣಾ ಬಾಂಡ್ ಜಾರಿಗೆ ತರಲು ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು ಎಂಬ ಮಾಹಿತಿ ಬಹಿರಂಗವಾಗಿ ಮೋದಿ ಸರ್ಕಾರವು ತೀವ್ರ ಹಿನ್ನಡೆ ಅನುಭವಿಸಿದೆ.
ಆದರೆ, ಇದಕ್ಕೆ ಕಿವಿಗೊಡದ ಮೋದಿ ಸರ್ಕಾರವು ದಾನಿಗಳು ಬಾಂಡ್ ಮೂಲಕ ಚುನಾವಣಾ ಬಾಂಡ್ ನೀಡುವುದರಿಂದ ದಾಖಲೆ ಸ್ಪಷ್ಟವಾಗಿರಲಿದ್ದು, ವ್ಯವಸ್ಥೆಯಲ್ಲಿ ಪಾರದರ್ಶಕತೆ ಜಾರಿಗೆ ಬರಲಿದೆ ಎಂಬ ಪೊಳ್ಳುವಾದ ವಾದ ಮಂಡಿಸುವ ಮೂಲಕ ಅಕ್ರಮ ದಾರಿಯನ್ನು ಸಮರ್ಥಿಸುತ್ತಿದೆ.
ಪಾರದರ್ಶಕತೆಯ ವಾದ ಮಾಡುವ ಮೋದಿ ಸರ್ಕಾರದ್ದು ಘಾತಕ ನಡೆ ಎಂಬುದನ್ನು ಅರಿಯಲು ಪಾಂಡಿತ್ಯ ಬೇಕಿಲ್ಲ. ದೇಣಿಗೆ ರೂಪದಲ್ಲಿ ಪಡೆದ ಚುನಾವಣಾ ಬಾಂಡ್ ಅನ್ನು 15 ದಿನಗಳೊಳಗೆ ನಿಗದಿತ ಬ್ಯಾಂಕ್ ಖಾತೆಯಲ್ಲಿ ಹಣವಾಗಿ ಪರಿವರ್ತಿಸಿಕೊಳ್ಳಬೇಕು ಎಂಬ ನಿಯಮವನ್ನು ಮಾಡಲಾಗಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಮಾತ್ರ ದೇಣಿಗೆ ಪಡೆಯಲು ಅವಕಾಶ ಮಾಡಲಾಗಿದೆ. ಮೋದಿ ಸರ್ಕಾರ ಮಾಡಿರುವ ನಿಯಮಗಳು ಕಣ್ಗಾವಲಿನ ದೃಷ್ಟಿಯಿಂದಲೂ ಮಹತ್ವವಾಗಿದೆ. ಅಧಿಕಾರದಲ್ಲಿರುವ ಪಕ್ಷಕ್ಕೆ ವ್ಯಕ್ತಿ ಅಥವಾ ಸಂಸ್ಥೆಯು ನಿರ್ದಿಷ್ಟ ಪಕ್ಷಕ್ಕೆ ಎಷ್ಟು ದೇಣಿಗೆ ನೀಡಿದ್ದಾರೆ ಎಂದು ತಿಳಿಯುವುದು ಕಷ್ಟವಾಗುತ್ತದೆಯೇ? ಅದರಲ್ಲೂ ಮೋದಿ-ಶಾ ನೇತೃತ್ವದ ಜೋಡಿಯು ವಿರೋಧ ಪಕ್ಷಗಳನ್ನು ಸರ್ವನಾಶ ಮಾಡುವ ಹಠ ತೊಟ್ಟಿರುವಾಗ ಪ್ರತಿಪಕ್ಷಗಳಿಗೆ ದೇಣಿಗೆ ನೀಡುವವರನ್ನು ಅಷ್ಟು ಸುಲಭವಾಗಿ ಬಿಟ್ಟುಬಿಡುತ್ತದೆ ಎಂದು ನಿರೀಕ್ಷಿಸಲಾಗುತ್ತದೆಯೇ? 1 ಕೋಟಿ ರುಪಾಯಿ ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿರುವವರ ಕುರಿತ ಮಾಹಿತಿಗಾಗಿ ಸಲ್ಲಿಕೆಯಾಗಿರುವ ಮಾಹಿತಿ ಹಕ್ಕು ಅರ್ಜಿಗಳಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಇದುವರೆಗೂ ಉತ್ತರಿಸಿಲ್ಲ. ಅಷ್ಟಕ್ಕೂ ಎಸ್ ಬಿ ಐ ಮಾಹಿತಿಯನ್ನು ಗೌಪ್ಯವಾಗಿಡಲು ಮುಂದಾಗಿರುವುದೇಕೆ?
ಮತದಾರರಿಗೆ ಹಣ, ಹೆಂಡದ ಆಮಿಷ ಒಡ್ಡುವ ಮೂಲಕ ಇಡೀ ಚುನಾವಣಾ ವ್ಯವಸ್ಥೆಯನ್ನು ರಾಜಕೀಯ ಪಕ್ಷಗಳು ಹಾಳು ಮಾಡಿವೆ. ಮತದಾರರನ್ನು ಸಂತೃಪ್ತಿಗೊಳಿಸಲು ಹಣ ನೀಡುವುದು ಅನಿವಾರ್ಯ ಎಂಬ ಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ. ಈಗ ಚುನಾವಣಾ ಬಾಂಡ್ ಜಾರಿಗೊಳಿಸುವ ಮೂಲಕ ಅಕ್ರಮವಾಗಿ ಹಣ ಸಂಗ್ರಹಿಸಿ ಅದನ್ನು ಮತದಾರರಿಗೆ ಹಂಚುವುದು ಹಾಗೂ ಚುನಾವಣಾ ವೆಚ್ಚಕ್ಕೆ ವಿನಿಯೋಗಿಸುವ ಮೂಲಕ ಚುನಾವಣೆ ಗೆಲ್ಲುವ ತಂತ್ರವನ್ನು ಬಿಜೆಪಿ ಜಾರಿಗೊಳಿಸಿದೆ. ಅಧಿಕಾರದಲ್ಲಿರುವ ಪಕ್ಷಕ್ಕೆ ಸಹಜವಾಗಿ ಹೆಚ್ಚಿನ ಚುನಾವಣಾ ಬಾಂಡ್ ಲಾಭ ದೊರೆಯುವುದರಿಂದ ಇದು ನೇರವಾಗಿ ಚುನಾವಣೆಯಲ್ಲಿ ಪ್ರಭಾವ ಬೀರುತ್ತದೆ ಎನ್ನುವುದು ವಿರೋಧ ಪಕ್ಷಗಳು, ತಜ್ಞರು ಹಾಗೂ ಭಾರತೀಯ ಚುನಾವಣಾ ಆಯೋಗದ ವಾದ. ಚುನಾವಣಾ ಬಾಂಡ್ ಜಾರಿಗೊಳಿಸಿರುವ ಬಿಜೆಪಿಯು ಭ್ರಷ್ಟಾಚಾರವನ್ನು ಕಾನೂನು ಬದ್ಧಗೊಳಿಸಿದೆ ಎಂಬ ವಾದ ಮೇಲಿನ ದೃಷ್ಟಿಯಿಂದ ಅರ್ಥಪೂರ್ಣವಾಗಿ ಕಾಣುತ್ತದೆ.
ಬಿಜೆಪಿಯು ಅಧಿಕಾರಕ್ಕೆ ಬಂದಾಗಿನಿಂದ ಅದರ ದೇಣಿಗೆ ಸಂಗ್ರಹವೂ ವ್ಯಾಪಕವಾಗಿ ಹೆಚ್ಚಳವಾಗಿದೆ ಎಂಬುದನ್ನು ಪ್ರಜಾಸತ್ತೀಯ ಸುಧಾರಣಾ ಸಂಸ್ಥೆ (ಎಡಿಆರ್) ದಾಖಲೆಗಳ ಮೂಲಕ ತೆರೆದಿಟ್ಟಿದೆ. 2016-17ನೇ ಸಾಲಿನಲ್ಲಿ 1,000 ಕೋಟಿ ರುಪಾಯಿಯಷ್ಟು ದೇಣಿಗೆ ಸಂಗ್ರಹಿಸಿದ್ದ ಕಮಲ ಪಾಳೆಯವು 2018-19ರ ಸಾಲಿನಲ್ಲಿ 2,410 ಕೋಟಿ ರುಪಾಯಿ ದೇಣಿಗೆ ಸಂಗ್ರಹಿಸುವ ಮೂಲಕ ಏರುಗತಿಯ ಹಾದಿಯಲ್ಲಿದೆ. ಅಧಿಕಾರ, ತನಿಖಾ ಸಂಸ್ಥೆಗಳ ದುರ್ಬಳಕೆಯ ಮೂಲಕ ಉದ್ಯಮಿಗಳನ್ನೂ ಹೆದರಿ ದೇಣಿಗೆ ಸಂಗ್ರಹಿಸುವುದು ಯಾವುದೇ ಆಡಳಿತಕ್ಕೆ ಕಷ್ಟವಾಗಲಾರದು. ಇದಕ್ಕೆ ಬಿಜೆಪಿಯೂ ಹೊರತಲ್ಲ.