ಕಾರ್ಪೊರೇಟ್ ಪ್ರಸ್ತುತ ಇಡೀ ಜಗತ್ತನ್ನು ಆಳ್ವಿಕೆ ಮಾಡುತ್ತಿರುವ ನೂತನ ವಸಾಹತುಶಾಹಿ ವ್ಯವಸ್ಥೆ (new colonial system). ಇಂದು ಇಡೀ ವಿಶ್ವವನ್ನು ಈ ಹೊಸ ವ್ಯವಸ್ಥೆ ಪರೋಕ್ಷವಾಗಿ ಆಳುತ್ತಿದೆ. ಒಂದರ್ಥದಲ್ಲಿ ಶಬ್ಧವಿಲ್ಲದ ಯುದ್ಧ ನಡೆಯುತ್ತಿದೆ. 1992ರಲ್ಲಿ ಅಂದಿನ ಪ್ರಧಾನ ಮಂತ್ರಿ ಪಿ.ವಿ. ನರಸಿಂಹರಾವ್ ಮುಕ್ತ ಆರ್ಥಿಕ ವ್ಯವಸ್ಥೆಗೆ ಅಂಗೀಕಾರ ನೀಡಿದ ನಂತರ ಇಂತಹ ನೂತನ ವಸಾಹತುಶಾಹಿಗೆ ಭಾರತವೂ ಹೊರತಾಗಿಲ್ಲ.
ವಿದೇಶಿ ನೇರ ಬಂಡವಾಳ ಹೂಡಿಕೆಯ ಅಡಿಯಲ್ಲಿ ಇಂದು ಭಾರತದಲ್ಲಿ ನೂರಾರು ವಿದೇಶಿ ಕಂಪೆನಿಗಳು ಬಂಡವಾಳ ಹೂಡಿವೆ ಹಾಗೂ ದೊಡ್ಡ ದೊಡ್ಡ ಕಂಪೆನಿಗಳನ್ನು-ಕಾರ್ಖಾನೆಗಳನ್ನು ಆರಂಭಿಸಿವೆ. ಅಲ್ಲದೆ, ಇಲ್ಲಿನ ನೆಲ-ಜಲ ಮತ್ತು ಸಂಪನ್ಮೂಲಗನ್ನು ಬಳಸಿ ಸಾವಿರಾರು ಕೋಟಿ ಹಣವನ್ನು ಲಾಭವಾಗಿ ಗಳಿಸುತ್ತಿವೆ. ಆದರೆ, ಹೀಗೆ ಲಾಭ ಗಳಿಸುವ ಕಾರ್ಪೊರೇಟ್ ಕಂಪೆನಿಗಳಿಗೆ ಹತ್ತಾರು ಜವಾಬ್ದಾರಿಗಳೂ ಇವೆ.
ಮುಕ್ತ ಆರ್ಥಿಕತೆಯ ಅಡಿಯಲ್ಲಿ ಭಾರತ ಯಾವ ದೇಶದಲ್ಲಿ ಬಂಡವಾಳ ಹೂಡಿದೆ ಎಂಬ ಕುರಿತು ಯಾವುದೇ ಮಾಹಿತಿ ಇಲ್ಲ. ಆದರೆ, ಭಾರತದಲ್ಲಿ ಬಂಡವಾಳ ಹೂಡಲು ಮುಂದಾಗುವ ವಿದೇಶಿ ಕಂಪೆನಿಗಳಿಗೇನು ಕೊರತೆ ಇಲ್ಲ. ಇಲ್ಲಿನ ಸಂಪನ್ಮೂಲಗಳನ್ನು ಅನುಭವಿಸುತ್ತಿರುವ ಕಾರ್ಪೊರೇಟ್ ಕಂಪೆನಿಗಳು ಈ ನೆಲದ ಸಾಮಾಜಿಕ ಜವಾಬ್ದಾರಿಯನ್ನೂ ಹೊರಬೇಕು ಎಂಬುದು ಪ್ರಜಾಪ್ರಭುತ್ವ ಸಮಾಜವಾದಿ ಜಾತ್ಯಾತೀತ ಗಣರಾಜ್ಯ ದೇಶದ ಕಾನೂನು ಅಥವಾ ಆಶಯ ಹೇಳುತ್ತದೆ.
ಸಮಾಜದ ಸಂಪನ್ಮೂಲಗಳನ್ನು ಬಳಸಿಕೊಂಡು ಬೆಳೆದವರು ಆ ಸಮಾಜಕ್ಕೆ ಅಲ್ಪವನ್ನಾದರೂ ಮರಳಿ ನೀಡುವ ಸಂತ್ಸಂಪ್ರದಾಯ ಭಾರತಕ್ಕೆ ಹೊಸದೇನಲ್ಲ. ವ್ಯಕ್ತಿಗಳು, ಸಂಘ-ಸಂಸ್ಥೆಗಳು ಸಮಾಜಕ್ಕೆ ಅಪಾರ ಕೊಡುಗೆ ನೀಡಿರುವ ಅನೇಕ ನಿದರ್ಶನಗಳು ನಮ್ಮ ಮುಂದಿವೆ. ಜಮ್ಷೆಡ್ಪುರದ ಟಾಟಾ ಐರನ್ ಅಂಡ್ ಸ್ಟೀಲ್ ಕಂಪೆನಿ ಲಿಮಿಟೆಡ್ (ಈಗಿನ ಟಾಟಾ ಸ್ಟೀಲ್) ನೂರು ವರ್ಷಗಳಷ್ಟು ಹಿಂದೆಯೇ ಸಮಾಜಿಕ ಜವಾಬ್ದಾರಿಯನ್ನು ಸ್ವಯಂ ಪ್ರೇರಣೆಯಿಂದ ನಿರ್ವಹಿಸಿ ಇಡೀ ದೇಶಕ್ಕೆ ಮಾದರಿ ಎನಿಸಿತ್ತು.

ಇದನ್ನೇ ಆಧಾರವಾಗಿಟ್ಟುಕೊಂಡು ದೇಶದಲ್ಲಿ ಹೊಸದಾಗಿ ರಚಿಸಲಾದ ಶಾಸನವೇ “ಕಾರ್ಪೊರೇಟ್ ಕಂಪೆನಿಗಳ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಗಳ” ಶಾಸನ. ಅಸಲಿಗೆ ಈ ಶಾಸನದ ಉದ್ದೇಶ-ಆದರ್ಶಗಳೇನು? ದೇಶದಲ್ಲಿ ಕಾರ್ಪೊರೇಟ್ ಕಂಪೆನಿಗಳ ಜವಾಬ್ದಾರಿ-ಕರ್ತವ್ಯಗಳೇನು? ನಿಜಕ್ಕೂ ಈ ಶಾಸನ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದೆಯೇ? ಈ ಎಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ.
ಕಾರ್ಪೊರೇಟ್ ಕಂಪೆನಿಗಳ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಗಳ ಶಾಸನ
ದೇಶದಲ್ಲಿ ಕಾರ್ಪೊರೇಟ್ ಕಂಪೆನಿಗಳ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಗಳ ಶಾಸನ ದಶಕಗಳಿಂದ ಇದೆಯಾದರೂ ಇದಕ್ಕೆ ಹೆಚ್ಚಿನ ಮೌಲ್ಯ ಇರಲಿಲ್ಲ. ಅಥವಾ ಇದನ್ನು ಪರಿಣಾಮಕಾರಿಯಾಗಿ ಪಾಲಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿತ್ತು ಎನ್ನಬಹುದು. Corporate Social Responsibility (CSR) ಅರ್ಥಾತ್ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಭಾರತದಲ್ಲಿ ಸಾಂಪ್ರದಾಯಿಕವಾಗಿ ಜನೋಪಕಾರಿ ಚಟುವಟಿಕೆಯ ರೂಪದಲ್ಲಿದ್ದು ಅಷ್ಟಾಗಿ ಚರ್ಚೆಗೆ ಒಳಗಾಗದ ವಿಷಯವಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಇದರ ಸ್ವರೂಪ ಬದಲಾಗಿದೆ.
ಈ ಶಾಸನ ನೆಪಮಾತ್ರಕ್ಕೆ ಇದ್ದಾಗ್ಯೂ 2014 ಫೆಬ್ರವರಿ 27 ರಂದು ಪ್ರಕಟಗೊಂಡ ಹೊಸ Companies ACT ಈ ಶಾಸನಕ್ಕೆ ಮತ್ತಷ್ಟು ಬಲ ತಂದಿತ್ತು. ಈ Companies ACT 2013 ಸೆಕ್ಷನ್ 35 ಭಾರತದಲ್ಲಿ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯನ್ನು ಕಡ್ಡಾಯಗೊಳಿಸಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತ್ತು.
ಈ ಶಾಸನ 2014ರ ಏಪ್ರಿಲ್ ಮೊದಲ ದಿನದಿಂದ ಜಾರಿಗೆ ಬಂದಿದೆ. ಇದರ ಪ್ರಕಾರ 500 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ಬಂಡವಾಳ ಹೊಂದಿರುವ-ವಾರ್ಷಿಕ 1000 ಕೋಟಿ ರೂ ಅಥವಾ ಅದಕ್ಕಿಂತ ಹೆಚ್ಚಿನ ವ್ಯವಹಾರ ನಡೆಸುವ-ವಾರ್ಷಿಕ 5 ಕೋಟಿ ರೂ ಅಥವಾ ಅದಕ್ಕಿಂತ ಹೆಚ್ಚಿನ ಲಾಭ ಗಳಿಸುವ ಕಂಪೆನಿಗಳು ತಮ್ಮ ನಿವ್ವಳ ಲಾಭದ ಶೇ.2ರಷ್ಟು ಹಣವನ್ನು CSR ಚಟುವಟಿಕೆಗಳಿಗೆ ವ್ಯಯಿಸಬೇಕು. ಅಲ್ಲದೆ, ಇದಕ್ಕಾಗಿ ಕಂಪೆನಿಯ ಆಡಳಿತ ಮಂಡಳಿಯು ಕನಿಷ್ಟ ಓರ್ವ ಸ್ವತಂತ್ರ್ಯ ನಿರ್ದೇಶಕರೂ ಸೇರಿದಂತೆ ಮೂರು ಅಥವಾ ಹೆಚ್ಚಿನ ನಿರ್ದೇಶಕರನ್ನೊಳಗೊಂಡ CSR ಕಮಿಟಿಯನ್ನು ನೇಮಿಸಬೇಕು ಎನ್ನುತ್ತದೆ ಈ ಶಾಸನ.
ಏನಿದು CSR ಚಟುವಟಿಕೆ?:
ವಾರ್ಷಿಕ 5 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಲಾಭ ಗಳಿಸಲು ಕಾರ್ಪೊರೇಟ್ ಕಂಪೆನಿಗಳು ತಮ್ಮ ಲಾಭದ ಶೇ.2ರಷ್ಟು ಹಣವನ್ನು ಸಾಮಾಜಿಕ ಕೆಲಸಕ್ಕೆ ಬಳಸಲೇಬೇಕು ಎನ್ನುತ್ತದೆ Companies ACT 2013 ಸೆಕ್ಷನ್ 135.
ಭಾರತದಲ್ಲಿ ನೂರಾರು ಕಾರ್ಪೊರೇಟ್ ಕಂಪೆನಿಗಳು ಇವೆ. ಈ ಪೈಕಿ ಕಳೆದ ವರ್ಷ ಅತಿಹೆಚ್ಚು ಲಾಭ ಗಳಿಸಿದ TOP-10 ಕಂಪೆನಿಗಳ ಪಟ್ಟಿಯನ್ನು ಸ್ವತಃ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಕಳೆದ ವರ್ಷ ಬಿಡುಗಡೆ ಮಾಡಿದೆ. ಈ ಮಾಹಿತಿಯ ಪ್ರಕಾರ ಕಳೆದ ವರ್ಷ ಕೇವಲ ಈ 10 ಕಂಪೆನಿಗಳು ಈ ದೇಶದಲ್ಲಿ ಗಳಿಸಿರುವ ಲಾಭದ ಪ್ರಮಾಣ ಮಾತ್ರ 223.2 ಬಿಲಿಯನ್ ಡಾಲರ್. ಅಂದರೆ ಉಳಿದ ಕಂಪೆನಿಗಳ ಲಾಭವೂ ಸೇರಿದಂತೆ ಒಂದು ವರ್ಷಕ್ಕೆ CSR FUND ಅಡಿಯಲ್ಲಿ ಸಾಮಾಜಿಕ ಕಾರ್ಯಕ್ಕೆ ಸಂಗ್ರಹವಾಗಬೇಕಾದ ಹಣ ಎಷ್ಟು? ಎಂಬುದನ್ನು ನೀವೆ ಊಹಿಸಿಕೊಳ್ಳಿ.

ಹೀಗೆ ಸಂಗ್ರಹವಾಗುವ ಹಣವನ್ನು ದೇಶದ ಶಿಕ್ಷಣ, ವೈದ್ಯಕೀಯ ಮತ್ತು ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಬಳಸಬೇಕು ಎಂಬುದನ್ನೂ ಸಹ ಈ ಕಾನೂನು ಸ್ಪಷ್ಟವಾಗಿ ಹೇಳುತ್ತದೆ. ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ಕಾರ್ಪೊರೇಟ್ ಕಂಪೆನಿಗಳ ಲಾಭದಿಂದ ಸಂಗ್ರಹಿಸುವ ಶೇ.2 ರಷ್ಟು ಹಣದಲ್ಲಿ ಇಡೀ ದೇಶದಲ್ಲಿರುವ ಎಲ್ಲಾ ಸರ್ಕಾರ ಶಾಲೆಗಳನ್ನು ಹೊಸದಾಗಿ ನಿರ್ಮಿಸಿ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡಬಹುದು, ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿಯವರೂ ನಾಚುವಂತೆ ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ನೀಡಬಹುದು ಎನ್ನುತ್ತವೆ ಅಂಕಿಅಂಶಗಳು. ಆದರೆ, ಇವೆಲ್ಲಾ ಈ ದೇಶದಲ್ಲಿ ಸಾಧ್ಯವಾಗಿದೆಯಾ? ಎಂದು ಹುಡುಕುತ್ತಾ ಹೋದರೆ ಹತ್ತಾರು ಹುಳುಕುಗಳು ಕಾಣಿಸಿಕೊಳ್ಳುತ್ತವೆ.
ಕಾರ್ಪೊರೇಟ್ ಸಾಲಮನ್ನಾ ಎಂಬ ಗಿಮಿಕ್
CSR FUND ಅಡಿಯಲ್ಲಿ ಕಾರ್ಪೊರೇಟ್ ಕಂಪೆನಿಗಳಿಂದ ಸಾಮಾಜಿಕ ಕಾರ್ಯಕ್ಕೆ ವರ್ಷಕ್ಕೆ ಸಾವಿರಾರು ಕೋಟಿ ಸಂದಾಯವಾಗಬೇಕು. ಆದರೆ, ಈ ಹಣವನ್ನು ಸಂಗ್ರಹಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎನ್ನಲಾಗುತ್ತಿದೆ. ಈ ನಡುವೆ ಕಾರ್ಪೋರೇಟ್ ಕಂಪೆನಿಗಳು ನಷ್ಟದಲ್ಲಿವೆ ಎಂದು ಕಳೆದ ವರ್ಷ ಕೇಂದ್ರ ಸರ್ಕಾರ ಮನ್ನಾ ಮಾಡಿರುವ ಕಾರ್ಪೊರೇಟ್ ಸಾಲ ಮಾತ್ರ 1.8 ಲಕ್ಷ ಕೋಟಿ ಎಂದರೆ ಪರಿಸ್ಥಿತಿಯನ್ನು ನೀವೆ ಊಹಿಸಬಹುದು.
ನೂರಾರು ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದರೂ ಸಹ ರೈತರ ಸಾಲವನ್ನು ಮನ್ನಾ ಮಾಡಲು ಹಿಂದೂ ಮುಂದೂ ನೋಡುವ ಇದೇ ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪೆನಿಗಳ ಸಾಲವನ್ನು ಅನಾಯಾಸವಾಗಿ ಮನ್ನಾ ಮಾಡುತ್ತದೆ ಎಂದಾದರೆ ಈ ದೇಶದ ವ್ಯವಸ್ಥೆ ಮತ್ತು ಪರಿಸ್ಥಿತಿ ಯಾವ ಹಂತದಲ್ಲಿದೆ ಎಂಬುದನ್ನು ಮನಗಾಣಬಹುದು. ಇನ್ನೂ ನಿಜಕ್ಕೂ ಕಾರ್ಪೊರೇಟ್ ಕಂಪೆನಿಗಳು ಸಮಾಜಿಕ ಕಾರ್ಯಕ್ಕೆ ಹಣ ಖರ್ಚು ಮಾಡಿವೆಯೇ? ಎಂಬ ಪ್ರಶ್ನೆಗೆ ಉತ್ತರವನ್ನು ನೀವೆ ಹುಡುಕಿಕೊಳ್ಳಿ.
ಖಾಸಗಿ ಲಾಭಿ:
ಭಾರತದಲ್ಲಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯನ್ನು ಲಾಭಕ್ಕೆ ಬಳಸಿಕೊಳ್ಳುವಂತಿಲ್ಲ ಎಂದು ಕಾನೂನು ಹೇಳುತ್ತವೆ. ಆದರೆ, ವಿಪರ್ಯಾಸ ನೋಡಿ ಭಾರತದ ಮಟ್ಟಿಗೆ ಇಂದಿನ ದಿನಗಳಲ್ಲಿ ಅತ್ಯಂತ ಯಶಸ್ವಿ ಉದ್ಯಮ ಎಂದರೆ ಶಿಕ್ಷಣ ಮತ್ತು ಆರೋಗ್ಯ ವಿಭಾಗ. ಕೇಂದ್ರ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲೂ ಮುಕ್ತ ವಿದೇಶ ಹೂಡಿಕೆಗೆ ಅವಕಾಶ ಕಲ್ಪಿಸಿರುವುದು ಈ ಉದ್ಯಮ ಇನ್ನಷ್ಟು ಬೆಳೆಯಲು ಸಹಕಾರಿಯಾಗಿದೆ.
ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ವರ್ಷವೊಂದಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಮಾಡಿಕೊಳ್ಳುವ ಲಾಭ ಲಕ್ಷಾಂತರ ಕೋಟಿಯನ್ನು ದಾಟುತ್ತಿದೆ.
2016ರ ಅಂಕಿಅಂಶದ ಪ್ರಕಾರ ಭಾರತದಲ್ಲಿ TOP-10 ಆಸ್ಪತ್ರೆ ಒಕ್ಕೂಟಗಳು ಒಂದು ವರ್ಷಕ್ಕೆ ಗಳಿಸಿರುವ ಲಾಭ 163 ಮಿಲಿಯನ್ ಅಮೆರಿಕನ್ ಡಾಲರ್. ಈ ಪ್ರಮಾಣ 2019ರ ವೇಳೆಗೆ ಶೇ.30 ರಷ್ಟು ಅಧಿಕವಾಗಿದೆ ಎನ್ನಲಾಗುತ್ತಿದೆ. ಇನ್ನೂ ಶಿಕ್ಷಣ ಸಂಸ್ಥೆಯ ಲಾಭ 200 ಮಿಲಿಯನ್ ಡಾಲರ್ ವ್ಯವಹಾರವನ್ನು ದಾಟುತ್ತಿದೆ ಎನ್ನುತ್ತಿವೆ ಅಧಿಕೃತ ಮಾಹಿತಿಗಳು.
ಖಾಸಗಿ ವಲಯದಲ್ಲಿ ಶಿಕ್ಷಣ ಹಾಗೂ ಆಸ್ಪತ್ರೆ ಕ್ಷೇತ್ರಗಳು ಈ ಪ್ರಮಾಣದ ಲಾಭ ಗಳಿಸುತ್ತಿರುವ ಕಾರಣದಿಂದಲೇ ಇಂದು ಖಾಸಗಿ ಲಾಭಿ ಅಧಿಕವಾಗಿದೆ. ಪರಿಣಾಮ ಸಾರ್ವಜನಿಕ ವಲಯದಲ್ಲಿ ಸೇವೆ ಎಂದೇ ಪರಿಗಣಿಸಲಾಗಿರುವ ಸರ್ಕಾರಿ ಆಸ್ಪತ್ರೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಮೂಲಭೂತ ಸೌಲಭ್ಯಗಳು ಇಲ್ಲದೆ ಇಂದು ಹಳ್ಳಹಿಡಿದಿವೆ. ಇದರ ಹಿಂದೆ ಖಾಸಗಿ ಲಾಭಿ ಇಲ್ಲ ಎಂದು ಹೇಳುವಷ್ಟು ಮತ್ತು ಅದನ್ನು ನಂಬುವಷ್ಟು ಮೂರ್ಖರಲ್ಲ ಭಾರತೀಯರು. ಇನ್ನೂ ಇದೇ ಕಾರಣಕ್ಕೆ CSR FUND ಕೂಡ ಸರಿಯಾಗಿ ಸಂಗ್ರಹಿಸಲಾಗುತ್ತಿಲ್ಲ ಎಂಬುದನ್ನು ಬೇರೆ ಬಿಡಿಸಿ ಹೇಳಬೇಕಿಲ್ಲ.