‘ಮಾತು ಮನೆ ಕೆಡಿಸಿತು’ ಎಂಬಂತೆ ಮೈತ್ರಿ ಸರ್ಕಾರ ಉರುಳಿಸುವ ಬಗ್ಗೆ ಪದೇ ಪದೇ ಮಾತನಾಡುತ್ತ, ಸರ್ಕಾರ ರಕ್ಷಿಸಿಕೊಳ್ಳಲು ಆಡಳಿತ ಪಕ್ಷಗಳಿಗೆ ಮುನ್ಸೂಚನೆ ನೀಡುತ್ತಿದ್ದ ರಾಜ್ಯ ಬಿಜೆಪಿ ನಾಯಕರು ಇದೀಗ ಮೌನಕ್ಕೆ ಶರಣಾಗಿದ್ದಾರೆ. ಅಧಿಕಾರದ ಹಪಹಪಿ ಇದ್ದರೂ ಅದನ್ನೆಲ್ಲ ನುಂಗಿಕೊಂಡು ಸುಮ್ಮನಿರಬೇಕಾದ ಪರಿಸ್ಥಿತಿ. ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದು ಆ ಬೆಂಕಿಯನ್ನು ಮತ್ತಷ್ಟು ಹಿಗ್ಗುವಂತೆ ಮಾಡುವ ಮನಸ್ಸಿದ್ದರೂ ಹಾಗೆ ಮಾಡಲು ಸಾಧ್ಯವಾಗದೆ ಕೈ ಕೈ ಹಿಸುಕಿಕೊಡು ಇರಬೇಕಾದ ಅನಿವಾರ್ಯತೆ ಅವರಿಗೆ ಬಂದಿದೆ.
ಇದೆಲ್ಲಕ್ಕೂ ಕಾರಣ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಲ್ಲಿ ಮಹತ್ವದ ಗೃಹ ಖಾತೆಯನ್ನು ವಹಿಸಿಕೊಂಡಿರುವುದು. ಹೌದು, ಅಮಿತ್ ಶಾ ಅವರ ನಿರ್ದೇಶನಕ್ಕೆ ಮಣಿದು ರಾಜ್ಯ ಬಿಜೆಪಿಯವರು ‘ಆಪರೇಷನ್ ಕಮಲ’ಕ್ಕೆ ಬ್ರೇಕ್ ಹಾಕಿದ್ದಾರೆ. ಮೈತ್ರಿ ಪಕ್ಷದ ಶಾಸಕರೇ ರಾಜೀನಾಮೆ ನೀಡಿ ಸರ್ಕಾರವನ್ನು ಅಲ್ಪಮತಕ್ಕೆ ಕುಸಿಯುವಂತೆ ಮಾಡಲಿ. ನಂತರ ನೋಡಿಕೊಳ್ಳೋಣ ಎಂದು ಸುಮ್ಮನಾಗಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಆಪರೇಷನ್ ಕಮಲದ ಮೂಲಕ ಮೈತ್ರಿ ಶಾಸಕರನ್ನು ಸೆಳೆಯಲು ಯತ್ನಿಸಿದ್ದ ರಾಜ್ಯ ಬಿಜೆಪಿ ನಾಯಕರು, ತಮ್ಮ ಬಾಯಿ ಚಪಲದಿಂದಲೇ ಆ ಕಾರ್ಯದಲ್ಲಿ ವಿಫಲರಾಗುವಂತಾಗಿತ್ತು. ‘ಕೂಸು ಹುಟ್ಟುವ ಮುನ್ನವೇ ಕುಲಾವಿ’ ಎಂಬಂತೆ ತಾವು ನಡೆಸುತ್ತಿದ್ದ ಆಪರೇಷನ್ ಕಮಲ ಯಶಸ್ಸು ಸಾಧಿಸುವ ಮುನ್ನವೇ ಅದನ್ನು ಬಹಿರಂಗಪಡಿಸಿ ಆಡಳಿತ ಪಕ್ಷಗಳು ಎಚ್ಚೆತ್ತುಕೊಂಡು ತೇಪೆ ಹಾಕಿಸಿಕೊಳ್ಳುವಂತೆ ಮಾಡುತ್ತಿದ್ದರು. ಈ ಕಾರಣದಿಂದಲೇ ಎರಡು ಬಾರಿ ‘ಲಡ್ಡು ಇನ್ನೇನು ಬಾಯಿಗೆ ಬಿತ್ತು’ ಎನ್ನುವಷ್ಟರಲ್ಲಿ ಬಾಯಿಯನ್ನೇ ಪಕ್ಕಕ್ಕೆ ಸರಿಸಿ ಮೈತ್ರಿ ಸರ್ಕಾರ ಅಪಾಯದಿಂದ ಪಾರಾಗುವಂತಾಗಿತ್ತು.
ಮಹತ್ವದ ಸಂಗತಿ ಎಂದರೆ, ಆಪರೇಷನ್ ಕಮಲ ವಿಫಲವಾಗುವಲ್ಲಿ ಕಾರಣವಾಗಿದ್ದು ಪಕ್ಷದಲ್ಲಿರುವ ಕೆಲವರ ಜಾತಿ ಪ್ರೇಮ ಮತ್ತು ಹೊಂದಾಣಿಕೆ ಪ್ರೇಮ. ಜಾತಿ ಕಾರಣಕ್ಕೆ ಬಿಜೆಪಿಯ ಕೆಲವರಿಗೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಲಿಂಗಾಯತ ಸಮುದಾಯದ ಬಿ.ಎಸ್. ಯಡಿಯೂರಪ್ಪ ಕುಳಿತುಕೊಳ್ಳುವುದು ಇಷ್ಟವಿಲ್ಲ. ಹೀಗಾಗಿ ಆಪರೇಷನ್ ಕಮಲದ ಮುಂಚೂಣಿಯಲ್ಲಿದ್ದವರೇ ತಮ್ಮ ಜಾತಿಯ ಇಲ್ಲವೇ ಆಪ್ತ ಪತ್ರಕರ್ತರನ್ನು ಕರೆಸಿ ತಾವು ಮಾಡುತ್ತಿದ್ದ ಸೀಕ್ರೆಟ್ ಆಪರೇಷನ್ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಇನ್ನೊಂದೆಡೆ, ಸರ್ಕಾರದಲ್ಲಿರುವ ತಮ್ಮ ಜಾತಿ, ಸಮುದಾಯದ ನಾಯಕರಿಗೆ ಪರೋಕ್ಷವಾಗಿ ಸಂದೇಶ ರವಾನಿಸುತ್ತಿದ್ದರು. ಇದರಿಂದಾಗಿ ಆಡಳಿತ ಪಕ್ಷದ ಶಾಸಕರು ತಂಡವಾಗಿ ರಾಜೀನಾಮೆ ನೀಡುತ್ತಾರೆ ಎಂಬ ಮಾಹಿತಿ ಸಿಗುತ್ತಿದ್ದಂತೆ ಮೈತ್ರಿ ನಾಯಕರು ಆ ಗುಂಪಿನ ಒಂದಿಬ್ಬರು ಸದಸ್ಯರಿಗೆ ಸ್ಥಾನಮಾನದ ಆಮಿಷವೊಡ್ಡಿ ಗುಂಪು ಒಡೆಯುತ್ತಿದ್ದರು. ಅಲ್ಲಿಗೆ ಆಪರೇಷನ್ ಕಮಲಕ್ಕೆ ಬ್ರೇಕ್ ಬೀಳುತ್ತಿತ್ತು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ಪ್ರಕರಣದಲ್ಲಿ ಎರಡು ಬಾರಿ ಕೂಡ ನಡೆದಿದ್ದು ಇದೇ ಪ್ರಹಸನ.
ಅದರಲ್ಲೂ ಕಳೆದ ಡಿಸೆಂಬರ್-ಜನವರಿಯಲ್ಲೊಮ್ಮೆ ಮತ್ತು ಫೆಬ್ರವರಿಯಲ್ಲಿ ಆಪರೇಷನ್ ಕಮಲ ಬಹುತೇಕ ಯಶಸ್ಸು ಕಾಣುವ ಹಂತದಲ್ಲಿತ್ತು. ಒಂದು ಬಾರಿ ರಮೇಶ್ ಜಾರಕಿಹೊಳಿ ತಂಡ ಮುಂಬೈನಲ್ಲಿ ಅಂತಿಮ ಹಂತದ ಸಭೆಯಲ್ಲಿ ನಿರತವಾಗಿತ್ತು. ಅಷ್ಟರಲ್ಲಿ ಆ ಶಾಸಕರು ಮುಂಬೈನ ಹೋಟೆಲ್ ನಲ್ಲಿರುವ ವೀಡಿಯೋ ಬಹಿರಂಗವಾಯಿತು. ಅದನ್ನು ಬಹಿರಂಗಪಡಿಸಿದವರೂ ಬಿಜೆಪಿ ಮುಂಚೂಣಿ ನಾಯಕರಲ್ಲೊಬ್ಬರು ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುವ ಸಂಗತಿ.
ಅದೇ ರೀತಿ ಎರಡನೇ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಮ್ಮುಖದಲ್ಲೇ ಮೈತ್ರಿ ಸರ್ಕಾರಕ್ಕೆ ಖೆಡ್ಡಾ ಸಿದ್ಧಪಡಿಸಲಾಗುತ್ತಿತ್ತು. ರಮೇಶ್ ಜಾರಕಿಹೊಳಿ ಸೇರಿದಂತೆ ಕೆಲವು ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದರು. ಅಂತಿಮ ಮಾತುಕತೆಗಾಗಿ ಬಿಜೆಜಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ಹೊರಟಿದ್ದರು. ಯಡಿಯೂರಪ್ಪ ಗುಪ್ತವಾಗಿ ದೆಹಲಿಗೆ ಹೊರಟಿದ್ದರೂ ಕೆಲವರಿಂದ ಈ ಮಾಹಿತಿ ಮಾಧ್ಯಮದವರಿಗೆ ಸಿಗುವಂತೆ ಮಾಡಲಾಯಿತು. ಇದು ಮತ್ತೆ ಸುದ್ದಿಯಾಗಿ ರಮೇಶ್ ಜಾರಕಿಹೊಳಿ ಜತೆಗಿದ್ದ ಶಾಸಕರನ್ನು ಸಂಪರ್ಕಿಸಿ ಅವರಿಗೆ ಸ್ಥಾನಮಾನದ ಆಮಿಷ ನೀಡಿ ಮತ್ತೆ ಆಪರೇಷನ್ ವಿಫಲವಾಗುವಂತೆ ನೋಡಿಕೊಳ್ಳಲಾಯಿತು.
ರಾಜ್ಯ ಬಿಜೆಪಿ ನಾಯಕರ ಈ ಮಾತಿನ ಚಪಲದಿಂದಾಗಿಯೇ ತಮ್ಮ ಪಟ್ಟುಗಳು ವಿಫಲವಾಗಿದ್ದರಿಂದ ಕೆರಳಿದ್ದ ಅಮಿತ್ ಶಾ ಪಕ್ಷದ ರಾಜ್ಯ ನಾಯಕರನ್ನು ತರಾಟೆಗೆ ತೆಗೆದುಕೊಡಿದ್ದರು. ಲೋಕಸಭೆ ಚುನಾವಣೆ ಮುಗಿದು ಹೊಸ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ತೆಪ್ಪಗಿರುವಂತೆ ತಾಕೀತು ಮಾಡಿದ್ದರು. ಈ ಮಧ್ಯೆ ಆಪರೇಷನ್ ಕಮಲ ಕುರಿತ ಆಡಿಯೋ ಕೂಡ ಬಹಿರಂಗಗೊಂಡಿತ್ತು. ಹಾಗಾಗಿ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಉಂಟಾಗಬಾರದು ಎಂಬ ಕಾರಣಕ್ಕೆ ಕಳೆದ ಮಾರ್ಚ್ ತಿಂಗಳಲ್ಲಿ ಆಪರೇಷನ್ ಕಮಲ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.
ಲೋಕಸಭೆ ಚುನಾವಣೆ ಮುಗಿದು ಕೇಂದ್ರದಲ್ಲಿ ಬಿಜೆಪಿ ಅಭೂತಪೂರ್ವ ಸಂಖ್ಯಾಬಲದೊಂದಿಗೆ ಅಧಿಕಾರಕ್ಕೆ ಬಂದ ಬಳಿಕ ಮತ್ತೆ ಆಪರೇಷನ್ ಕಮಲದ ಮಾತು ಶುರುವಾಗಿತ್ತು. ಆದರೆ, ಅಷ್ಟರಲ್ಲಿ ಮೈತ್ರಿ ಪಕ್ಷಗಳಲ್ಲೇ ಗೊಂದಲ ತೀವ್ರಗೊಂಡಿತ್ತು. ಜೆಡಿಎಸ್ ನಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (ತುಮಕೂರು), ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ (ಮಂಡ್ಯ), ಸೋಲರಿದ ಸರದಾರ ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆ (ಗುಲ್ಬರ್ಗಾ) ಸೇರಿದಂತೆ ಮೈತ್ರಿ ಅಭ್ಯರ್ಥಿಗಳ ಸೋಲು ಎರಡೂ ಪಕ್ಷಗಳಲ್ಲಿ ಪರಸ್ಪರ ತಿಕ್ಕಾಟಕ್ಕೆ ಕಾರಣವಾಗಿತ್ತು. ಕೆಲವು ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ತಮಾತನಾಡಿದರು. ಮಂತ್ರಿಗಿರಿಗಾಗಿ ನಾಯಕರ ವಿರುದ್ಧವೇ ತಿರುಗಿ ಬಿದ್ದರು. ಇದರಿಂದ ಮತ್ತಷ್ಟು ಉತ್ಸಾಹಗೊಂಡ ರಾಜ್ಯ ಬಿಜೆಪಿ ನಾಯಕರು ಇನ್ನೇನು ಸರ್ಕಾರ ಉರುಳಿಸಲು ಇದು ಸಕಾಲ ಎಂದು ಸಿದ್ಧವಾಗಿ ನಿಂತಿದ್ದರು.
ಅಮಿತ್ ಶಾರಿಂದ ಬಂತು ಸುಮ್ಮನಿರಿ ಎಂಬ ಸಂದೇಶ
ಅಷ್ಟರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರಿಂದ ಸುಮ್ಮನಿರಿ ಎಂಬ ಸಂದೇಶವೊಂದು ಬಂದಿತ್ತು. ಮೈತ್ರಿ ಸರ್ಕಾರವನ್ನು ಅಲ್ಪಮತಕ್ಕೆ ಕುಸಿಯುವಂತೆ ಮಾಡಲು ಹಿಂದೆ ನಡೆದ ಪ್ರಯತ್ನದ ವೇಳೆ ನಿಮ್ಮ ನಡವಳಿಕೆಯೇ ಆ ಪ್ರಯತ್ನವನ್ನು ವಿಫಲ ಮಾಡಿತ್ತು. ಇದೇ ನಡವಳಿಕೆ ಮುಂದುವರಿಸಿಕೊಂಡು ಮತ್ತೊಮ್ಮೆ ಪ್ರಯತ್ನಿಸಿ ಕೈ ಸುಟ್ಟುಕೊಳ್ಳಬೇಡಿ. ಇದರಿಂದ ನಿಮಗೆ ಮಾತ್ರವಲ್ಲ, ಕೇಂದ್ರ ಸರ್ಕಾರಕ್ಕೂ ಅವಮಾನವಾಗುತ್ತದೆ. ನೀವು ಸರ್ಕಾರ ಉರುಳಿಸುವ ಪ್ರಯತ್ನ ಮಾಡಿದಾಗ ಅದಕ್ಕೆ ಪಕ್ಷವಾಗಿ ನಾವು ಬೆಂಬಲಕ್ಕೆ ನಿಲ್ಲಬೇಕಾಗುತ್ತದೆ. ಆದರೆ ಈಗ ನಾನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮಾತ್ರವಲ್ಲ, ಕೇಂದ್ರ ಗೃಹ ಸಚಿವನೂ ಆಗಿದ್ದೇನೆ. ಹೀಗಾಗಿ ಕೇಂದ್ರದ ಗೃಹ ಸಚಿವರೇ ರಾಜ್ಯದ ಸರ್ಕಾರವೊಂದನ್ನು ಉರುಳಿಸಲು ಪೌರೋಹಿತ್ಯ ವಹಿಸಿದ್ದಾರೆ ಎಂಬ ಆರೋಪ ಬರುತ್ತದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಅವಮಾನ ಆಗುವುದರ ಜತೆಗೆ ಕಾನೂನು ಸಮರಕ್ಕೂ ದಾರಿಯಾಗಬಹುದು. ಆದ್ದರಿಂದ ಮೈತ್ರಿ ಶಾಸಕರೇ ಸರ್ಕಾರವನ್ನು ಅಲ್ಪಮತಕ್ಕೆ ಕುಸಿಯುವಂತೆ ನೋಡಿಕೊಳ್ಳಲಿ. ಅದುವರೆಗೆ ನೀವು ಸುಮ್ಮನಿರಿ ಎಂಬ ಸಂದೇಶವನ್ನು ಅಮಿತ್ ಶಾ ಕಳುಹಿಸಿದ್ದಾರೆ ಎಂದು ಗೊತ್ತಾಗಿದೆ.
ಮುಂದೇನು?
ಸದ್ಯದ ಮಾಹಿತಿ ಪ್ರಕಾರ ಮೈತ್ರಿ ಶಾಸಕರೇ ಸರ್ಕಾರವನ್ನು ಅಲ್ಪಮತಕ್ಕೆ ಕುಸಿದ ಬಳಿಕ ಬಿಜೆಪಿ ಹೊಸ ಸರ್ಕಾರ ರಚನೆಯ ಹಕ್ಕು ಮಂಡಿಸುತ್ತದೆ. ಇಲ್ಲವೇ ಒಬ್ಬ ವ್ಯಕ್ತಿ-ಒಂದು ಹುದ್ದೆ ನಿಯಮನದ ಅನ್ವಯ ಅಮಿತ್ ಶಾ ಅವರು ಬಿಜೆಪಿಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸ ಅಧ್ಯಕ್ಷರು ಆಯ್ಕೆಯಾದ ಬಳಿಕ ಆಪರೇಷನ್ ಕಮಲ ಮುಂದುವರಿಯುತ್ತದೆ. ಅದುವರೆಗೆ ಮೈತ್ರಿ ಶಾಸಕರು ತಾವಾಗಿಯೇ ತಿರುಗಿಬೀಳದಿದ್ದರೆ ಮೈತ್ರಿ ಸರ್ಕಾರ ಸೇಫ್.