ಇದೇ ಏಪ್ರಿಲ್ 7ರ ಭಾನುವಾರ. ಕೇಂದ್ರ ಚುನಾವಣಾ ಆಯೋಗದ ಆಯುಕ್ತ ವಿಕ್ರಮ್ ಬಾತ್ರಾ ಅವರು ಕಂದಾಯ ಇಲಾಖೆಯ ಕಾರ್ಯದರ್ಶಿಗೊಂದು ಪತ್ರ ಬರೆಯುತ್ತಾರೆ; ಚುನಾವಣಾ ಪೂರ್ವದಲ್ಲಿ ನಡೆಯುವ ಆದಾಯ ತೆರಿಗೆ ಸಂಬಂಧಿ ದಾಳಿಗಳು ನಿಷ್ಪಕ್ಷಪಾತ ಆಗಿರಬೇಕು ಮತ್ತು ಚುನಾವಣಾ ಆಯೋಗಕ್ಕೆ ಆ ಬಗ್ಗೆ ಮಾಹಿತಿ ನೀಡಬೇಕು ಎಂದು ಅದರಲ್ಲಿ ತಾಕೀತು ಮಾಡಲಾಗಿರುತ್ತದೆ. ಈ ಪ್ರಸಂಗ ದೊಡ್ಡ ಸುದ್ದಿಯಾಗುತ್ತದೆ. ಆದರೆ, ಈ ಪತ್ರದಿಂದ ಏನೂ ಪ್ರಯೋಜನ ಆಗಿಲ್ಲವೆಂದು ಅರಿತ ಚುನಾವಣಾ ಆಯೋಗ, ಮಂಗಳವಾರ (ಏ.೯) ಕೇಂದ್ರ ನೇರ ತೆರಿಗೆ ಮಂಡಳಿಯ ನಿರ್ದೇಶಕರು ಮತ್ತು ಕಂದಾಯ ಇಲಾಖೆಯ ಕಾರ್ಯದರ್ಶಿಯನ್ನು ಖುದ್ದು ಕಚೇರಿಗೆ ಕರೆಸಿಕೊಂಡು ಮಾತುಕತೆ ನಡೆಸುತ್ತದೆ.
ಅಸಲಿಗೆ, ಈ ಎಲ್ಲ ಬೆಳವಣಿಗೆಗಳು ನಡೆದದ್ದು, ಮಧ್ಯಪ್ರದೇಶ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರ ಮಾಜಿ ಆಪ್ತ ಕಾರ್ಯದರ್ಶಿ ಪ್ರವೀಣ್ ಕಕ್ಕರ್ ಮತ್ತು ಕಮಲ್ ನಾಥ್ ಅವರ ಮಾಜಿ ಸಲಹೆಗಾರ ರಾಜೇಂದ್ರ ಕುಮಾರ್ ಮಿಗ್ಲಾನಿ ಎಂಬುವರ ಮನೆಗಳಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತೀವ್ರ ಶೋಧ, ತಪಾಸಣೆ ನಡೆಸಿದ ಮರುದಿನದಿಂದ ಎಂಬುದು ವಿಶೇಷ. ಈ ತಪಾಸಣೆಗಳು ನಡೆದ ನಂತರ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಎಂದಿನಂತೆ, “ಆದಾಯ ತೆರಿಗೆ ಇಲಾಖೆಯನ್ನು ಬಿಜೆಪಿ ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ,” ಎಂಬ ದೂರು ಎತ್ತಿಹಿಡಿದವು. ಚುನಾವಣಾ ಆಯೋಗಕ್ಕೂ ಅಹವಾಲು ಸಲ್ಲಿಕೆಯಾಯಿತು. ಬಹುಶಃ ಇಂಥದ್ದೊಂದು ಸಂದರ್ಭಕ್ಕಾಗಿ ಕಾದಿದ್ದ ಚುನಾವಣಾ ಆಯೋಗ, ಕಂದಾಯ ಇಲಾಖೆ ಕಾರ್ಯದರ್ಶಿಗೆ ಗಂಭೀರ ಪತ್ರ ಬರೆಯಿತು.

ಚುನಾವಣಾ ಆಯೋಗಕ್ಕೇಕೆ ಅಸಮಾಧಾನ?
ಚುನಾವಣಾ ಆಯೋಗವು ಆದಾಯ ತೆರಿಗೆ ಇಲಾಖೆ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಇದು ಮೊದಲೇನಲ್ಲ. ಆದರೆ, ಹೀಗೆ ಆಯುಕ್ತರು ಅಧಿಕೃತವಾಗಿ ಪತ್ರ ಬರೆದು ಗಂಭೀರ ಸಲಹೆ ಕೊಡುವಷ್ಟರ ಮಟ್ಟಕ್ಕೆ ಹೋಗಿರಲಿಲ್ಲವಷ್ಟೆ. ಅಷ್ಟಕ್ಕೂ ಆದಾಯ ತೆರಿಗೆ ಇಲಾಖೆ ಮೇಲೆ ಚುನಾವಣಾ ಆಯೋಗಕ್ಕೆ ಏಕೆ ಈ ಪರಿಯ ಕೋಪ ಬಂದಿತು ಎಂಬುದಕ್ಕೆ ಮುಖ್ಯವಾಗಿ ಎರಡು ಕಾರಣಗಳನ್ನು ಗುರುತಿಸಬಹುದು.
ಒಂದು, ದೂರುಗಳ ಸುರಿಮಳೆ ಆಗುತ್ತಿರುವುದು. ಲೋಕಸಭಾ ಚುನಾವಣೆಯ ನೀತಿಸಂಹಿತೆ ಜಾರಿ ಆದಾಗಿನಿಂದ ಇಲ್ಲಿಯವರೆಗೆ (ಏ.೭) ಆಯೋಗಕ್ಕೆ ಬರೋಬ್ಬರಿ ೪೦,೦೦೦ ದೂರುಗಳು ಸಲ್ಲಿಕೆಯಾಗಿವೆ. ಇದರಲ್ಲಿ ಬಹುಪಾಲು ದೂರುಗಳು, ಕೇಂದ್ರ ಸರ್ಕಾರವು ತನ್ನ ಅಧೀನದಲ್ಲಿರುವ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ವಿಪಕ್ಷಗಳ ನಾಯಕರನ್ನು ಹಣಿಯಲು ಬಳಸುತ್ತಿದೆ, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬ ಒಕ್ಕಣೆ ಹೊಂದಿವೆ ಎನ್ನಲಾಗಿದೆ. ಮೊದಲೇ, ದೂರುಗಳ ವಿಲೇವಾರಿ ವಿಷಯದಲ್ಲಿ ಹೈರಾಣ ಆಗುತ್ತಿರುವ ಚುನಾವಣಾ ಆಯೋಗಕ್ಕೆ ಇಂಥ ದೂರುಗಳು ತಲೆನೋವಾಗಿ ಪರಿಣಮಿಸಿವೆ.
ಎರಡು, ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದ ವೇಳೆ (೨೦೧೮) ಆದಾಯ ತೆರಿಗೆ ಇಲಾಖೆಯಿಂದ ಒಂದು ಸಾರ್ವಜನಿಕ ಪ್ರಕಟಣೆ ಹೊರಬಿದ್ದಿತ್ತು. ಬೇನಾಮಿ ಹಣ ವರ್ಗಾವಣೆ, ದಾಖಲೆ ಇಲ್ಲದ ಹಣ ಸಾಗಣೆ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರೆ ಒಂದು ಕೋಟಿ ರುಪಾಯಿವರೆಗೆ ಹಾಗೂ ಕಪ್ಪುಹಣದ ಕುರಿತು ಮಾಹಿತಿ ನೀಡಿದರೆ ಐದು ಕೋಟಿ ರುಪಾಯಿವರೆಗೆ ಬಹುಮಾನ ನೀಡಲಾಗುತ್ತದೆ ಎಂಬುದು ಪ್ರಕಟಣೆಯ ಸಾರಾಂಶ. ಚುನಾವಣೆ ಹೊತ್ತಿನಲ್ಲಿ, ಚುನಾವಣಾ ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ಆದಾಯ ತೆರಿಗೆ ಇಲಾಖೆಯು ಹೈಜಾಕ್ ಮಾಡಲು ನೋಡಿದ ಈ ಘಟನೆ ಚುನಾವಣಾ ಆಯೋಗದ ದೃಷ್ಟಿಯಲ್ಲಿ ಅಧಿಕ ಪ್ರಸಂಗ ಎನಿಸಿಕೊಂಡಿತು. ಆದರೆ, ಪ್ರಕಟಣೆಯಲ್ಲಿ ಹಪ್ಪುಹಣದ ವಿಷಯವೂ ಇದ್ದಿದ್ದರಿಂದ ಆಯೋಗ ಸುಮ್ಮನಿರಬೇಕಾಯಿತು.
ಕರ್ನಾಟಕ ಚುನಾವಣೆ ವೇಳೆ ಆಗಿದ್ದೇನು?
ಇನ್ನೇನು ನಡೆಯಲಿರುವ ಲೋಕಸಭಾ ಚುನಾವಣೆಯೂ ಸೇರಿದಂತೆ ಇತ್ತೀಚೆಗೆ ನಡೆದ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆಯೂ ಆದಾಯ ತೆರಿಗೆ ಇಲಾಖೆಯ ತಪಾಸಣೆಗಳು ಬಿಜೆಪಿಯೇತರ ಪಕ್ಷಗಳ ನಾಯಕರನ್ನು ಚಿಂತೆಗೆ ದೂಡಿದ್ದವು. ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ, ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಹಾಗೂ ಅವರ ಆಪ್ತರ ಮನೆಗಳಲ್ಲಿ ನಡೆದ ಆದಾಯ ತೆರಿಗೆ ಇಲಾಖೆಯ ತಪಾಸಣೆಗಳ ಉದ್ದೇಶ ಕೂಡ ಚುನಾವಣೆಗೆ ಹೆಚ್ಚು ಹಣ ಹರಿದಾಡದಂತೆ ನೋಡಿಕೊಳ್ಳುವುದೇ ಆಗಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು. ಆದರೆ, ಆದಾಯ ತೆರಿಗೆ ಇಲಾಖೆ ಈ ಆರೋಪವನ್ನು ಇದುವರೆಗೂ ಅಲ್ಲಗಳೆಯುತ್ತಲೇ ಬಂದಿದೆ.
ಕರ್ನಾಟಕದಲ್ಲಿ ಚುನಾವಣೆ ನಡೆದ ವರ್ಷವಾದ ೨೦೧೮ರಲ್ಲಿ ಆದಾಯ ತೆರಿಗೆ ಇಲಾಖೆಯು ಬರೋಬ್ಬರಿ ೫೦ ತಪಾಸಣೆಗಳನ್ನು ನಡೆಸಿದೆ ಮತ್ತು ೫,೨೫೯ ಕೋಟಿ ಮೊತ್ತದ ದಾಖಲೆರಹಿತ ಆಸ್ತಿ ಪತ್ತೆ ಮಾಡಲಾಗಿದೆ ಎಂದು ಕರ್ನಾಟಕ-ಗೋವಾ ವಲಯದ ಆದಾಯ ತೆರಿಗೆ ಪ್ರಧಾನ ಆಯುಕ್ತ ರಜನೀಶ್ ಕುಮಾರ್ ಹೇಳಿಕೆ ಬಿಡುಗಡೆ ಮಾಡಿದ್ದರು. ಈ ದಾಳಿಗಳ ಮೂಲಕ ಕರ್ನಾಟಕ ಚುನಾವಣೆಯಲ್ಲಿ ಹಣ ಹರಿಯುವುದನ್ನು ತಪ್ಪಿಸಲಾಯಿತು. ಇದರಿಂದ ಕಾಂಗ್ರೆಸ್‌ಗೆ ನಷ್ಟವಾಯಿತು ಎಂಬುದು ಆ ಪಕ್ಷದ ಮುಗ್ಧ ಅಭಿಮಾನಿಗಳ ಅಳಲು.

ಮುಂದೇನು?
ಚುನಾವಣಾ ಆಯೋಗವು ಆದಾಯ ತೆರಿಗೆ ಇಲಾಖೆಯ ತಪಾಸಣೆಗಳ ಬಗ್ಗೆ ಆಕ್ಷೇಪ ಎತ್ತಿರುವುದು, ತಪಾಸಣೆಗಳು ನಿಷ್ಪಕ್ಷಪಾತವಾಗಿರಬೇಕು ಎಂದು ಸಲಹೆ ರೂಪದ ತಾಕೀತು ಮಾಡಿರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ, ಸರಿ. ಆದರೆ, ಪ್ರತಿ ಚುನಾವಣೆ ಹೊತ್ತಿನಲ್ಲೂ ಹೀಗೆ ಮಾಡಿ ಅಭ್ಯಾಸ ಇರುವ ಆದಾಯ ತೆರಿಗೆ ಇಲಾಖೆಗೆ ಅದನ್ನು ನಿಷ್ಪಕ್ಷಪಾತವಾಗಿ ಮಾಡುವುದು ಹೇಗೆಂದು ತೋಚಲಿಕ್ಕಿಲ್ಲ; ಏಕೆಂದರೆ, ಕೇಂದ್ರದಲ್ಲಿ ಅಧಿಕಾರ ಅನುಭವಿಸಿದ ಎರಡೂ ರಾಷ್ಟ್ರೀಯ ಪಕ್ಷಗಳು ಚುನಾವಣೆ ವೇಳೆ ಇಂಥ ತಪಾಸಣೆಗಳನ್ನು ಮಾಡಲು ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಂಡಿವೆ ಎಂಬ ಆರೋಪಗಳಿವೆ. ಇವು ಕೇವಲ ಆರೋಪಗಳಂತೂ ಅಲ್ಲ ಎಂಬುದು ಎಲ್ಲರಿಗೂ ಗೊತ್ತು.
ಚುನಾವಣೆ ವೇಳೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಯಾವುದೇ ಪಕ್ಷದ ನಾಯಕರ ಮನೆಯಲ್ಲಿ ತಪಾಸಣೆ ನಡೆಸಿದರೂ ಅನಧಿಕೃತ ಆಸ್ತಿ ಪತ್ತೆಯಾದ ನಿದರ್ಶನಗಳು ನಮ್ಮ ಮುಂದಿವೆ. ಇನ್ನು, ಚುನಾವಣೆಗೆ ಹೇಗೆಲ್ಲ ಹಣ ಚೆಲ್ಲಲಾಗುತ್ತದೆ ಎಂಬುದು ಕೂಡ ರಹಸ್ಯ ಸಂಗತಿಯೇನಲ್ಲ. ಪಕ್ಷ ಯಾವುದಾದರೂ, ಮುಖಂಡರು ಯಾರೇ ಆದರೂ ಅನಧಿಕೃತ ಆಸ್ತಿ ಹೊಂದಿರುವುದು ಅಪರಾಧವೇ. ಹಾಗಾಗಿ, ಚುನಾವಣಾ ಆಯೋಗದ ಈ ’ನಿಷ್ಪಕ್ಷಪಾತದ ಹೆಜ್ಜೆ’ಯಿಂದ ತೀರಾ ಬದಲಾವಣೆ ಆದೀತು ಎಂದು ನಿರೀಕ್ಷಿಸಲಾಗದು. ಬದಲಿಗೆ, ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದರ ಕುರಿತಂತೆ ಆಯೋಗದ ಅಸಹನೆ ಎನ್ನಬಹುದಷ್ಟೆ. ಸ್ವತಃ ಆಯೋಗದ ಮೇಲೆ ಪಕ್ಷಪಾತದ ಆರೋಪಗಳು ಇರುವಾಗ ಇಂಥದ್ದೊಂದು ಗಂಭೀರ ಸಲಹೆ ನೀಡಲು ಮುಂದಾಯಿತು ಎಂಬ ಕಾರಣಕ್ಕಾದರೂ ನಾವು ಆಯೋಗದ ಕ್ರಮವನ್ನು ಶ್ಲಾಘಿಸಬೇಕಿದೆ.