ಬಹಳ ವರ್ಷಗಳ ಹಿಂದೆ ಅವಿಭಜಿತ ಜನತಾದಳ ಒಡೆದು ದೇವೆಗೌಡರ ಜಾತ್ಯತೀತ ಜನತಾ ದಳದ (ಜೆಡಿಎಸ್) ಜೊತೆಗೆ ಗುರುತಿಸಿಕೊಂಡ ಸಿದ್ದರಾಮಯ್ಯನವರು ಮಾಡಿದ ಪ್ರಯತ್ನ ಜನರ ಮನಸ್ಸಿನಿಂದ ಮರೆಯಾಗಿದೆ. ಅದು ಜನ್ಮ ತೆಗೆದುಕೊಂಡದ್ದು ಗೌಡರ ಸುಪರ್ದಿನಲ್ಲಿ ತಮಗೆ ರಾಜಕೀಯ ಭವಿಷ್ಯವಿಲ್ಲವೆಂದು ಮನಗಂಡ ಸಿದ್ದರಾಮಯ್ಯವರು ಮಾಡಿದ ಪ್ರಯತ್ನ. ಬಹು ಹುರುಪು, ವೈಭವ ಮತ್ತು ಉತ್ಸಾಹದಿಂದ ಅದರ ಮೊದಲ ಸಮಾವೇಶ ಹುಬ್ಬಳ್ಳಿಯಲ್ಲಿ ನಡೆದು ಕರ್ನಾಟಕ ರಾಜಕೀಯ ಕ್ಷಿತಿಜ ದಲ್ಲಿ ಹೊಸ ನಕ್ಷತ್ರ ಮೂಡುವ ಭರವಸೆಯನ್ನು ಮೂಡಿಸಿ, ನೇಪಥ್ಯಕ್ಕೆ ಸರಿದು ಈಗ ಅದರ ಹೆಸರೇ ಮರೆತು ಹೋಗುವಂತೆ ಆಯಿತು.
ಏಕೆಂದರೆ ಮೊದಲ ಸಮಾವೇಶವಾದ ನಂತರ ಇನ್ನೊಂದು ನಡೆಯಲೇ ಇಲ್ಲ. ಅಹಿಂದ ಒಂದು ವಿಚಾರವಾಗಿ ಹೊಳೆಯಿತೇ ಹೊರತು ರಾಜಕೀಯ ಶಕ್ತಿಯಾಗಿ, ಕಾಂಗ್ರೆಸ್ ಮತ್ತು ಜೆಡಿಎಸ್ ಗಳಿಗೆ ಪರ್ಯಾಯವಾಗಿ ಬೆಳೆಯಲೇ ಇಲ್ಲ. ಸಿದ್ದರಾಮಯ್ಯನವರನ್ನು ಒಳಗೊಂಡು ಹುಬ್ಬಳ್ಳಿ ಸಮಾವೇಶಕ್ಕೆ ಧಾವಿಸಿದ ಯಾರೂ ಅದನ್ನು ಗಂಭಿರವಾಗಿ ತೆಗೆದುಕೊಳ್ಳಲೇ ಇಲ್ಲ. ಸಿದ್ದರಾಮಯ್ಯನವರ ವಿಚಾರದಂತೆ ಅದು ಬೆಳೆದಿದ್ದರೆ, ಅದು ಜೆಡಿಎಸ್ ಪಕ್ಷವನ್ನು ರಾಜಕೀಯವಾಗಿ ದುರ್ಬಲ ಮಾಡಬಹುದಿತ್ತು. ಅದು ಹಾಗೆ ಆಗಲಿಲ್ಲ. ಬಹುಶ: ಈ ಸಂಘಟನಾತ್ಮಕ ದುರ್ಬಲತೆಯನ್ನು ಅರಿತ ದೇವೇಗೌಡರು ಇದರ ಬಗ್ಗೆ ಬಹು ತಲೆಕೆಡಿಸಿಕೊಳ್ಳದೇ, ಈ ವರ್ಗಗಳನ್ನು ಜೆಡಿಎಸ್ ನ ಒಳಗೆ ತರುವ ಪ್ರಯತ್ನವನ್ನೇನೋ ಮಾಡಿದರು. ಆದರೆ ಅದು ಅಷ್ಟು ಫಲಕಾರಿಯಾಗಲಿಲ್ಲ. ದೇವೇಗೌಡರ ಪಕ್ಷವು ಹಳೆಯ ಮೈಸೂರಿನ ಒಕ್ಕಲಿಗರ ಪಕ್ಷವಾಗಿಯೇ ಹೆಸರಾಯಿತೇ ಹೊರತು. ಮುಂಬಯಿ ಮತ್ತು ಹೈದರಾಬಾದ ಕರ್ನಾಟಕದಲ್ಲಿದ್ದ ಅಹಿಂದ ಗುಂಪಿನವರನ್ನು ಸೆಳೆಯಲಾಗಲಿಲ್ಲ.
ತಾವು ರಾಜಕೀಯದಲ್ಲಿ ಒಂದು ಸ್ಥಾನ, ಮಾನ್ಯತೆ ಪಡೆಯಬೇಕೆಂದು ಮಾಡಿದ ಉದ್ದೇಶ ಈಡೇರಿದ ಮೇಲೆ ಸಿದ್ದರಾಮಯ್ಯನವರು ಅಹಿಂದವನ್ನು ಮರೆತರು. ತಮ್ಮ ರಾಜಕೀಯ ಜೀವನ ಶುರುವಾದಂದಿನಿಂದ ಕಾಂಗ್ರೆಸ್ ವಿರೋಧಿ ವಿಚಾರಗಳನ್ನು ಮಾಡಿದ ಮತ್ತು ಮೈಗೂಡಿಸಿಕೊಂಡಿದ್ದ ಸಿದ್ದರಾಮಯ್ಯನವರು ಕೊನೆಗೆ ಕಾಂಗ್ರೆಸ್ ಸೇರುವದರ ಮೂಲಕವೇ ತಮ್ಮ ಜೀವನಕ್ಕೆ ಪುನಶ್ಚೇತನ ಪಡೆದರು.
ಕಾಂಗ್ರೆಸ್ ಸೇರಿ, ನೆಹರು ಗಾಂಧಿ ಸಂಸ್ಕ್ರತಿಯನ್ನು ಹೊಗಳಿ, ವಿರೋಧಿ ಪಕ್ಷದ ಧುರೀಣರಾಗಿ, ನಂತರ ಮುಖ್ಯಮಂತ್ರಿಯಾಗಿ ತಮ್ಮ ಜೀವನದ ಮುಖ್ಯ ಉದ್ದೇಶವನ್ನು ಈಡೇರಿಸಿಕೊಂಡರು. 2018 ರ ಚುನಾವಣೆಯಲ್ಲಿ ಎರಡನೆಯ ಬಾರಿ ಮುಖ್ಯಮಂತ್ರಿಯಾಗುವ ಅವಕಾಶವನ್ನು ಮತದಾರರು ಅವರ ಪಕ್ಷಕ್ಕೆ ಬಹುಮತ ಕೊಡದ್ದರಿಂದ ತಪ್ಪಿಸಿಕೊಂಡರು. ಆದರೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ, ಮೈತ್ರಿ ಪಕ್ಷ ಸರಕಾರ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ತಮ್ಮ ಹಿರಿತನವನ್ನು ಪಕ್ಷದಲ್ಲಿ ಕಾಯ್ದುಕೊಂಡಿದ್ದಾರೆ.
ತಮ್ಮ ರಾಜಕೀಯ ಏರಿಕೆಯಾಗುವ ಕಾಲದಲ್ಲಿ, ಅಹಿಂದವನ್ನು ಸಂಪೂರ್ಣ ಮರೆತ ಸಿದ್ದರಾಮಯ್ಯನವರು, ಈಗ ಒಮ್ಮೆಲೇ ಅದನ್ನು ನೆನೆಸಿಕೊಂಡು ಇನ್ನೊಂದು ಸಮಾವೇಶವನ್ನು ಮಾಡಿ ತಮ್ಮ ರಾಜಕೀಯ ಶಕ್ತಿಯನ್ನು ಮತ್ತೊಮ್ಮೆ ಪ್ರದರ್ಶಿಸುವ ಹವಣಿಕೆಯಲ್ಲಿ ಇದ್ದಾರೆ. ಇದಕ್ಕೆ ಕಾರಣಗಳೂ ಇವೆ. ಮೊದಲನೆಯದಾಗಿ, ಕಾಂಗ್ರೆಸಿನಲ್ಲಿ ಅವರ ಧುರೀಣತ್ವದ ಬಗ್ಗೆ ಹೆಚ್ಚು ಹೆಚ್ಚು ಅಪಸ್ವರಗಳು ಕೇಳುತ್ತಿವೆ. ವಲಸಿಗರಾಗಿ ಕಾಂಗ್ರೆಸಿಗೆ ಬಂದ ಅವರು ಅಸಲಿ ಕಾಂಗ್ರೆಸ್ ಧುರೀಣರಾದ ಮಲ್ಲಿಕಾರ್ಜುನ ಖರ್ಗೆ ಯಂತಹವರನ್ನು ತಮ್ಮ ರಾಜಕೀಯ ಗತ್ತುಗಾರಿಕೆಯಿಂದ ಮೂಲೆಗುಂಪು ಮಾಡುತ್ತಿದ್ದಾರೆ. ಇಂತಹ ಪ್ರಯತ್ನಗಳು ಮುಂದುವರಿದರೆ, ಮುಂದೆ ಒಂದು ದಿನ ಇಡೀ ಕಾಂಗ್ರೆಸ್ ವಲಸಿಗರ ಸೊತ್ತಾಗಬಹುದು. ಎರಡನೆಯದಾಗಿ, ಮೈತ್ರಿ ಪಕ್ಷದ ನಡವಳಿಕೆಯಿಂದ ಬೇಜಾರು ಮಾಡಿಕೊಂಡ ಅವರು ಮುಂದಿನ ವಿಧಾನಸಭೆ ಚುನಾವಣೆ ಅವಧಿಗೂ ಬೇಗ ಬಂದರೆ, ಇರಲಿ ಎಂದು ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ಜೆಡಿಎಸ್ ವರಿಷ್ಟ ನಾಯಕ ದೇವೇಗೌಡರು ಮಧ್ಯಂತರ ಚುನಾವಣೆ ಬೇಗ ನಡೆಯುವದರ ಇಂಗಿತವನ್ನು ತೋರಿಸಿ, ತಮ್ಮ ಪಕ್ಷದ ತಯಾರಿಯನ್ನು ಮಾಡಲಾರಂಭಿಸುವಂತೆ, ಸಿದ್ದರಾಮಯ್ಯನವರೂ ಸಿದ್ಧತೆ ನಡೆಸುವ ತಯಾರಿಲ್ಲಿದ್ದಂತೆ ಕಾಣಿಸುತ್ತಿದೆ. ಮೂರನೆಯದಾಗಿ. ಕಾಂಗ್ರೆಸ್ ವರಿಷ್ಟ ಮಂಡಳಿ ಲೋಕಸಭೆಯ 2014, 2019 ರ ಚುನಾವಣೆಗಳಾದ ನಂತರ ಬಹಳ ದುರ್ಬಲವಾಗಿದೆ. ಒಂದು ವೇಳೆ, ಕಾಂಗ್ರೆಸಿಗೆ ಸವಾಲು ಹಾಕುವ ಸಂದರ್ಭ ಬಂದರೆ, ಅದೂ ಇರಲಿ ಎಂದೂ ತಮ್ಮ ಅಹಿಂದ ಅಭಿಯಾನಕ್ಕೆ ಮತ್ತೆ ಚಾಲನೆ ಕೊಟ್ಟು ಅದನ್ನು ತಮ್ಮದೇ ಆದ ರಾಜಕೀಯ ಶಕ್ತಿಯಾಗಿ ಬೆಳೆಸುವ ಹುನ್ನಾರದಲ್ಲಿ ಇದ್ದಾರೆ.

ಅಹಿಂದ ವರ್ಗಗಳನ್ನು ಒಟ್ಟುಗೂಡಿಸಿ, ಅವರನ್ನು ರಾಜಕೀಯ ಶಕ್ತಿಯಾಗಿ ಬೆಳೆಸುವುದೊಂದು ಹೊಸ ವಿಚಾರವಲ್ಲ. ಹಿಂದೆ ದಿ. ದೇವರಾಜ ಅರಸರು ಕರ್ನಾಟಕದ ಕಾಂಗ್ರೆಸ ಮುಖ್ಯಮಂತ್ರಿಗಳಾಗಿ ಎಪ್ಪತ್ತರ ದಶಕದಲ್ಲಿ ಇದ್ದಾಗ ಇಂತಹ ಪ್ರಯತ್ನ ನಡೆದಿತ್ತು. ವಿಶೇಷವಾಗಿ ಹಿಂದುಳಿದ ವರ್ಗಗಳನ್ನು ಸಂಘಟಿಸುವ ಪ್ರಯತ್ನ ನಡೆದಿತ್ತು. ಆದರೆ ಅವರ ಮತ್ತು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ನಡುವಿನ ಭಿನ್ನಾಭಿಪ್ರಾಯದಿಂದ ಅದು ಪೂರ್ತಿಯಾಗಲಿಲ್ಲ.
ಹಿಂದುಳಿದ ವರ್ಗಗಳನ್ನು ಸಬಲೀಕರಣ ಮಾಡುವ ಪ್ರಯತ್ನವನ್ನು ದಿ. ಅರಸರಷ್ಟು ಯಾರೂ ಮಾಡಲಿಲ್ಲ. ದಿ. ಇಂದಿರಾ ಗಾಂಧಿಯರಿಗೆ ಸೆಡ್ಡು ಹೊಡೆದಾಗ, ಮತ್ತೆ ಹೋಳಾದ ಕಾಂಗ್ರೆಸಿನ ಇನ್ನೊಂದು ಬಣದ ನಾಯಕರಾಗಿ, ಚುನಾವಣೆಗೆ ಹೋದಾಗ, ಅವರನ್ನು ತಾವೇ ನೆಚ್ಚಿದ ಹಿಂದುಳಿದ ವರ್ಗಗಳು ಅವರ ಕೈಕೊಟ್ಟಿದ್ದು ಅವರನ್ನು ಬಹಳ ನಿರಾಸೆಗೊಳಿಸಿತ್ತು. ಮತ್ತೆ ತೊಂಬತ್ತರ ದಶಕದಲ್ಲಿ, ಸಿದ್ದರಾಮಯ್ಯನವರ ನೇತೃತ್ವದಲ್ಲಿ ಅಹಿಂದ ಸಮಾವೇಶ ಜರುಗಿಸುವ ತನಕ ಈ ವರ್ಗಗಳನ್ನು ಸಂಘಟಿಸುವ ವಿಚಾರವನ್ನು ಯಾರೂ ಮಾಡಿರಲಿಲ್ಲ. ಆಗ ಅವರು ಮಾಡಿದ್ದು ಈ ವರ್ಗಗಳನ್ನು ಸಬಲೀಕರಿಸಬೇಕು ಎಂದಲ್ಲ. ಅದರಿಂದ ಯಾವ ಮತ್ತು ಎಷ್ಟು ರಾಜಕೀಯ ಲಾಭವನ್ನು ಪಡೆಯಬೇಕು ಎನ್ನುವುದಕ್ಕಾಗಿ.
ಕೆಲ ದಶಕಗಳ ಹಿಂದೆ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತ ದಲ್ಲಿ, ಇಂತಹ ವರ್ಗಗಳನ್ನು ರಾಜಕೀಯ ಶಕ್ತಿಯಾಗಿ ಬೆಳೆಯುವಂತೆ ಒಂದು ಪ್ರಯೋಗ ನಡೆದಿತ್ತು. ಅಂದಿನ ಮುಖ್ಯಮಂತ್ರಿ, ಮಾಧವಸಿಂಗ್ ಸೋಳಂಕಿ ಮತ್ತು ಪ್ರದೇಶ ಕಾಂಗ್ರೆಸ ಆದ್ಯಕ್ಷರಾಗಿದ್ದ ಜೀನಾಭಾಯಿ ದೋರ್ಜಿ ಯವರು ಒಂದು ಸಾಮಾಜಿಕ ಇಂಜಿನಿಯರಿಂಗ್ ಪ್ರಯೋಗವನ್ನು ಮಾಡಿದ್ದರು. ಅದರ ಆಂಗ್ಲ ಹೆಸರು “ಖ್ಯಾಮ್” (ಕೆ. ಎಚ್. ಏ. ಎಂ.) ಎಂದು. ಕ್ಷತ್ರಿಯ, ಹರಿಜನ, ಹಿಂದುಳಿದವರು, ಮತ್ತು ಆದಿವಾಸಿಗಳನ್ನು ಕಾಂಗ್ರೆಸ ವೇದಿಕೆಯ ಮೇಲೆ ತಂದು ಹೊಸ ರಾಜಕೀಯ ಶಕ್ತಿ ಉದಯವಾಗುವಂತೆ ನೋಡಿಕೊಳ್ಳುವುದು. ಅದು ಶುರುವಾದಾಗ ಅದನ್ನು ವಿಶೇಷ ಅಸ್ತ್ರವನ್ನಾಗಿ ಉಪಯೋಗಿಸಿಕೊಂಡು ಕಾಂಗ್ರೆಸ್ ಗುಜರಾತ್ ಚುನಾವಣೆಗಳಲ್ಲಿ ಜಯಮಾಲೆಯನ್ನು ಗಳಿಸಿತು ಕೂಡ. ಅದು ಬಹಳ ದಿವಸ ಟಿಕಾಯಿಸಲಿಲ್ಲ. ಎಷ್ಟು ವೇಗ ಬಂದಿತೋ ಅಷ್ಟೇ ವೇಗದಲ್ಲಿ ಅದರ ಅವನತಿಯೂ ಆಯಿತು. ಇದಕ್ಕೆ ಮುಖ್ಯ ಕಾರಣ, ಈ ಪ್ರಯೋಗದ ಪ್ರವರ್ತಕರ ರಾಜಕೀಯ ಹಿನ್ನಡೆ ಮತ್ತು ಸ್ಥಾನ ಪಲ್ಲಟ. ಸೋಳಂಕಿ ಮತ್ತು ದೋರ್ಜಿಯವರ ನಂತರ ಬಂದ ಇತರರು ಅದನ್ನು ಮುಂದುವರಿಸಲಿಲ್ಲ ಅಥವಾ ಅವರಿಗೆ ಈ ಸಾಮಾಜಿಕ ಇಂಜಿನಿಯರಿಂಗ್ ಪ್ರಯೋಗದಲ್ಲಿ ಆಸಕ್ತಿ ಇರಲಿಲ್ಲವೆಂದು ಕಾಣುತ್ತದೆ. ಬಿಹಾರದಂತೆ ಗುಜರಾತನಲ್ಲಿಯೂ ಹಿಂದುಳಿದ ವರ್ಗಗಳನ್ನು ಅವರಂತೆ ಇರುವ ಇನ್ನಿತರ ವರ್ಗಗಳೊಡನೆ ಸೇರಿಸಿ, ಹೊಸ ರಾಜಕೀಯ ಶಕ್ತಿಯನ್ನಾಗಿ ಬೆಳೆಸುವ ಪ್ರಯತ್ನ ಫಲಕಾರಿಯಾಗಲಿಲ್ಲ.
ದಿ. ದೇವರಾಜ ಅರಸರ ಕಾಲದಲ್ಲಿ ನಡೆದ ಪ್ರಯತ್ನ ಫಲಕಾರಿಯಾಗಿದ್ದರೆ, ಕರ್ನಾಟಕದ ರಾಜಕೀಯ ಇತಿಹಾಸವೇ ಬದಲಾಗುತ್ತಿತ್ತೋ ಏನೋ. ಅದು ಬೇರೆ ವಿಷಯ. ಅರಸರ ನಂತರ ಸಿದ್ದರಾಮಯ್ಯನವರ ಕಾಲದಲ್ಲಿ ಹಿಂದೆ ಆದ ಪ್ರಯತ್ನ ಫಲಿಸದಿರುವುದಕ್ಕೆ ಒಂದು ಕಾರಣವೆಂದರೆ ಕರ್ನಾಟಕದಲ್ಲಿ ಹಿಂದುಳಿದವರು ಎಂದರೆ ಕುರುಬರು ಎಂಬ ತಿಳುವಳಿಕೆ ಇದೆ. ಅಂತಹ ಪ್ರಸಂಗದಲ್ಲಿ, ಹಿಂದುಳಿದ ವರ್ಗದಲ್ಲಿ ಕುರುಬರನ್ನು ಬಿಟ್ಟು ಕುರುಬರಲ್ಲದ ಹಿಂದುಳಿದವರೆಲ್ಲರೂ, ತಮಗೆ ರಾಜಕೀಯ ಸ್ಥಾನಮಾನ, ಅವಕಾಶಗಳಿಗೆ ಚ್ಯುತಿ ಬರುವುದೇನೋ ಎನ್ನುವ ಭಯ ಕಾಡುತ್ತಿದೆ. ಈಗ ಪರಿಶಿಷ್ಟ ವರ್ಗಕ್ಕೆ ಲಮಾಣಿಗಳನ್ನು ಸೇರಿಸಿದರೆ ತಮಗಿದ್ದ ಅವಕಾಶ ತಪ್ಪುವುದೇನೋ ಎಂದು ಮೂಲ ಪರಿಶಿಷ್ಟ ವರ್ಗಗಳು ಪರಿತಪಿಸುವ ಹಾಗೆ.
ಹೀಗಾಗಿ ಸಿದ್ದರಾಮಯ್ಯನವರು ಝಳಪಿಸಬೇಕೆಂದು ಬಯಸಿರುವ ಅಹಿಂದ ಅಸ್ತ್ರವು ಅವರಿಗೆ ಬೇಕಾದ ರಾಜಕೀಯ ಫಲವನ್ನು ಇಂದಿನ ಪರಿಸ್ಥಿತಿಯಲ್ಲಿ ತಂದೀತೇ, ಎನ್ನುವುದು ಮುಖ್ಯ ಪ್ರಶ್ನೆ. ಏಕೆಂದರೆ ಜೆಡಿಎಸ್ ಹಾಗೂ ಬಿಜೆಪಿ ನಾಯಕರೂ ಕೂಡ ಈಗ ಹೆಚ್ಚು ಕಡಿಮೆ ಇದೇ ಭಾಷೆಯಲ್ಲಿ ಮಾತನಾಡಲಾರಂಭಿಸಿದ್ದಾರೆ.