ಮೊನ್ನೆ ಕೊರಿಯನ್ ಸಿನಿಮಾ ಪ್ಯಾರಸೈಟ್ ಅತ್ಯುತ್ತಮ ಚಿತ್ರಕ್ಕಾಗಿ ಆಸ್ಕರ್ ಗಳಿಸಿ, ಈ ಪ್ರಶಸ್ತಿ ಪಡೆದ ಮೊದಲ ಇಂಗ್ಲೀಷೇತರ ಚಿತ್ರ ಎಂಬ ಹೆಗ್ಗಳಿಕೆ ಪಾತ್ರವಾಗಿ ಇತಿಹಾಸ ಸೃಷ್ಟಿಸಿತು. ಅದೇ ಸಮಯಕ್ಕೆ ಕರ್ನಾಟಕದಲ್ಲಿ ಒಂದೇ ವಾರ ಒಟ್ಟಿಗೆ 10 ಕನ್ನಡ ಚಿತ್ರಗಳು ಬಿಡುಗಡೆಯಾಗಿ, ಚಿತ್ರಮಂದಿರ ಸಮಸ್ಯೆ ಎದುರಾಗಿ, ಕೊನೆಗೆ ಪ್ರೇಕ್ಷಕರ ಕೊರತೆಯಾಗಿ, ಕನ್ನಡಿಗರೇ ಕನ್ನಡ ಚಿತ್ರ ನೋಡದೆ ಅನ್ಯಾಯ ಮಾಡ್ತಾ ಇದ್ದಾರೆ ಎಂಬ ಕೂಗು ಎದ್ದಿತು. ಈ ಎರಡೂ ಘಟನೆಗಳು ಸಿನಿಮಾಗೆ ಸಂಬಂಧಪಟ್ಟವು ಎಂಬುದು ಬಿಟ್ಟರೆ, ಇವೆರಡರ ನಡುವೆ ಮೇಲ್ನೋಟಕ್ಕೆ ಬೇರೇನೂ ಸಂಬಂಧ ಇಲ್ಲ. ಆದರೆ, ಈ ಬಾರಿಯ ಆಸ್ಕರ್ ನಲ್ಲಿ ಆದ ಸಣ್ಣದೆನಿಸುವ ಆದರೆ ಪ್ರಮುಖವಾದ ಎರಡು ಬದಲಾವಣೆ ಅವು ನೀಡುತ್ತಿರುವ ಸಂದೇಶ ಕನ್ನಡ ಚಿತ್ರರಂಗಕ್ಕೆ ಪ್ರಾಯುಶ: ಪಾಠವಾಗಬಹುದು.
1929ರಲ್ಲಿ ಅಕಾಡೆಮಿ ಪ್ರಶಸ್ತಿಗಳು ಆರಂಭವಾಗಿದ್ದು ಹಾಲಿವುಡ್ ಸಿನಿಮಾಗಳಿಗೆ ಪ್ರಶಸ್ತಿ ನೀಡಲು. ಹೀಗಾಗಿ, ಅಮೇರಿಕಾದಲ್ಲಿ ನಿರ್ಮಾಣವಾದ ಚಿತ್ರಗಳಿಗೆ ಮಾತ್ರ ಪ್ರಶಸ್ತಿ ಮೀಸಲಾಗಿತ್ತು. ನಂತರದಲ್ಲಿ ಅಮೆರಿಕಾದಲ್ಲಿ ಬಿಡುಗಡೆಯಾದ ಇಂಗ್ಲಿಷ್ ಭಾಷೆಯದಲ್ಲದ ಚಿತ್ರಗಳನ್ನು, ಗುರುತಿಸಿ ಗೌರವಿಸಲು ಆರಂಭಿಸಿದರೂ ಕೂಡ ಅದಕ್ಕಾಗಿ ಯಾವುದೇ ಪ್ರಶಸ್ತಿ ಇರಲಿಲ್ಲ. 28 ವರ್ಷದ ನಂತರ 1957ರಲ್ಲಿ ಮೊದಲ ಬಾರಿಗೆ ಬೆಸ್ಟ್ ಫಾರಿನ್ ಲ್ಯಾಂಗ್ವೇಜ್ ಫಿಲ್ಮ್ ವಿಭಾಗ ಆರಂಭವಾಗಿದ್ದು. ಕಳೆದ ವರ್ಷದವರೆಗೂ ಈ ವಿಭಾಗದಲ್ಲೇ ಇಂಗ್ಲೀಷೇತರ ಚಿತ್ರಗಳಿಗೆ ಪ್ರಶಸ್ತಿ ಕೊಡಲಾಗುತ್ತಿತ್ತು. ಈ ಬಾರಿ ಇದರ ಹೆಸರನ್ನು ಬೆಸ್ಟ್ ಇಂಟರ್ ನ್ಯಾಷನಲ್ ಫೀಚರ್ ಫಿಲ್ಮ್ ಎಂದು ಬದಲಿಸಲಾಯಿತು. ಸಣ್ಣದೆನಿಸುವ ಈ ಹೆಸರಿನ ಬದಲಾವಣೆ ಏಕೆ ಮುಖ್ಯವೆಂದರೆ ಫಾರಿನ್ ಫಿಲ್ಮ್ ಎಂಬ ಪರಿಕಲ್ಪನೆ ಈಗ ಇಲ್ಲವಾಗುತ್ತಾ ಇದೆ. ಚಿತ್ರಗಳು ಭಾಷೆಯ, ದೇಶಗಳ ಮಿತಿಯನ್ನು ಮೀರಿ ಕೇವಲ ತಮ್ಮ ಗುಣಮಟ್ಟವನ್ನು ಅವಲಂಬಿಸಿ ವಿಶ್ವದ ಎಲ್ಲಾ ಮೂಲೆಗಳನ್ನು ತಲುಪುತ್ತಿದೆ.
ಈ ಬಾರಿಯ ಅತ್ಯುತ್ತಮ ಚಿತ್ರ ಆಸ್ಕರ್ ಪ್ರಶಸ್ತಿ ಕೊರಿಯಾ ಸಿನಿಮಾಕ್ಕೆ ಸಿಕ್ಕಿರುವುದು ಮೇಲಿನ ಮಾತನ್ನು ಮತ್ತಷ್ಚು ಬಲವಾಗಿ ಪ್ರತಿಪಾದಿಸುತ್ತದೆ. ಇದುವರೆಗೆ ಇಂಗ್ಲಿಷ್ ಚಿತ್ರಗಳಿಗೇ ಮೀಸಲಾಗಿದ್ದ ಈ ಪ್ರಶಸ್ತಿ ಈಗ ಒಂದು ರೀತಿಯಲ್ಲಿ ಪ್ರಪಂಚದ ಎಲ್ಲಾ ಭಾಷೆಯ ಚಿತ್ರಗಳಿಗೆ ತೆರೆದುಕೊಂಡಂತೆ. ಹೀಗಾಗಿ, ಅತ್ಯುತ್ತಮ ಅಂತಾರಾಷ್ಚ್ರೀಯ ಚಿತ್ರ ಪ್ರಶಸ್ತಿಯ ಜೊತೆಗೆ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಕೂಡ ಗಳಿಸಿದ ಪ್ಯಾರೈಸೈಟ್ ಅಲ್ಲೂ ಇತಿಹಾಸ ಸೃಷ್ಚಿಸಿತು. ಅಷ್ಟೇ ಅಲ್ಲದೆ ಹಾಲಿವುಡ್ ಚಿತ್ರಗಳನ್ನು ಹಿಂದಕ್ಕೆ ಹಾಕಿ ಮತ್ತೆರಡು ವಿಭಾಗಗಳಲ್ಲೂ ಪ್ರಶಸ್ತಿ ಪಡೆಯಿತು. ಅಂದರೆ, ಇದುವರೆಗೆ ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಮಾತ್ರ ಕಂಡು ಬರುತ್ತಿದ್ದ ವಿದೇಶಿ ಚಿತ್ರಗಳು ಈಗ ಎಲ್ಲಾ ವಿಭಾಗಗಳಲ್ಲೂ ಹಾಲಿವುಡ್ ಚಿತ್ರಗಳ ಜೊತೆ ಜೊತೆಗೆ ಸ್ಪರ್ಧಿಸಲಿವೆ, ಪ್ರತಿಷ್ಚಿತ ಆಸ್ಕರ್ ಹಾಲಿವುಡ್ ಚಿತ್ರಗಳಿಗೆ ಮಾತ್ರ ಸೀಮಿತವಾಗುವ ಕಾಲ ಮುಗಿದಿದೆ.
ಆಸ್ಕರ್ ಕಮಿಟಿ ಎಷ್ಚರ ಮಟ್ಟಿಗೆ ಇತರ ಭಾಷೆಯ ಚಿತ್ರಗಳ ಮೇಲಿನ ಗೌರವಕ್ಕಾಗಿ ಈ ಬದಲಾವಣೆ ತಂದಿತೋ ಗೊತ್ತಿಲ್ಲ. ಆದರೆ, ಇದರ ಮುಖ್ಯ ಉದ್ದೇಶ ಆಸ್ಕರ್ ಗಿರುವ ಪ್ರಸ್ತುತತೆ ಉಳಿಸಿಕೊಳ್ಳುವುದು, ಕಾಲಕ್ಕೆ ತಕ್ಕಂತೆ ಆಗುತ್ತಿರುವ ಬದಲಾವಣೆಗಳನ್ನು ಗೌರವಿಸುವುದು. ಈ ಬದಲಾವಣೆ ಸುಲಭದ ಮಾತಲ್ಲ. ಏಕೆಂದರೆ, ಆಸ್ಕರ್ ವಿಜೇತ ಅತ್ಯುತ್ತಮ ಚಿತ್ರಗಳನ್ನು ನೀವಾಳಿಸಿ ಎಸೆಯುವಂತಹ ಚಿತ್ರಗಳು ಬೇರೆ ಭಾಷೆಗಳಲ್ಲಿ ಬರುತ್ತಲೇ ಇವೆ. ಹಾಲಿವುಡ್ ಚಿತ್ರಗಳಿಗಿರುವ ಜನಪ್ರಿಯತೆ, ಜಾಗತಿಕ ಮಟ್ಟದ ತಲುಪುವಿಕೆ ಇಲ್ಲವಾದ ಕಾರಣ ಅವು ನಡೆಸುವ ವ್ಯವಹಾರ ದೊಡ್ಡದಲ್ಲ ಅಷ್ಟೇ. ಎಲ್ಲಾ ಭಾಷೆಯ ಚಿತ್ರಗಳಿಗೆ ಉತ್ತಮ ವೇದಿಕೆಯಾಗಿರುವ ಪ್ರತಿಷ್ಚಿತ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಪಾಮ್ ಡಿ’ಓರ್ ಪಡೆದ ಚಿತ್ರಗಳನ್ನು ನೋಡಿದರೆ ಅದರ ಅರಿವಾಗುತ್ತದೆ. ಹೀಗಾಗಿ, ತನ್ನೆಲ್ಲಾ ಬಿಗ್ ಬಜೆಟ್, ಅದ್ದೂರಿತನ, ದೊಡ್ಡ ಪ್ರಚಾರ, ಅಪಾರ ಜನಪ್ರಿಯತೆಯ ನಡುವೆಯೂ ಈಗಿನ ಕಾಲಕ್ಕೆ ಸ್ಪಂದಿಸುವ ವಿಶ್ವದ ಚಿತ್ರಗಳೊಂದಿಗೆ ಪೈಪೋಟಿಗೆ ನಿಂತಾಗ ಹಾಲಿವುಡ್ ಸೋಲುವುದು ಖಚಿತ. ಹೀಗಾಗಿ, ತನ್ನದೇ ನೆಲದ, ತನ್ನದೇ ಆಗಬಹುದಾದ ಆಸ್ಕರ್ ಪ್ರಶಸ್ತಿಗಳನ್ನು ಇಂತಹ ದೊಡ್ಡ ಮಟ್ಟದ ಸ್ಪರ್ಧೆಗೆ ತೆರೆಯುವುದು ಸಣ್ಣ ನಿರ್ಧಾರವೇನಲ್ಲ.
ಹಾಗಿದ್ದೂ, ಆಸ್ಕರ್ ಈ ನಿರ್ಧಾರ ಕೈಗೊಂಡಿದ್ದೇಕೆ ಎಂದು ಯೋಚಿಸಿದರೆ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬಹುದೇನೋ, ಜಾಗತೀಕರಣದ ಈ ಪರ್ವದಲ್ಲಿ ಸಿನಿಮಾ ಎಂಬುದು ಭಾಷೆ, ಪ್ರದೇಶಗಳ ಗಡಿ ದಾಟಿ ಆಗಿದೆ. ಮೊದಲು ವರ್ಲ್ಡ್ ಸಿನಿಮಾ ಎಂಬುದು ಯಾವುದಾದರೋ ಚಿತ್ರೋತ್ಸವಗಳಲ್ಲಿ ಅಥವಾ ಸಿನಿಮಾ ವರ್ಕ್ ಶಾಪ್ ಗಳಲ್ಲಿ ನೋಡಲು ಸಿಗುತ್ತಿತ್ತು ಅಷ್ಟೇ. ಸಿನಿಮಾ ರಂಗಕ್ಕೆ ಸಂಬಂಧಿಸಿದವರು, ಸಿನಿಮಾ ವಿದ್ಯಾರ್ಥಿಗಳು, ಸಿನಿಮಾದ ಬಗ್ಗೆ ಅತೀವ ಆಸಕ್ತಿ ಹೊಂದಿದವರ ಕೈಗೆ ಮಾತ್ರ ಎಟುಕುತ್ತಿತ್ತು. ಈಗ ಪ್ರಪಂಚದ ಯಾವ ಮೂಲೆಯಲ್ಲಿ ತಯಾರಾದ ಚಿತ್ರವನ್ನಾದರೋ ಇನ್ಯಾವುದೋ ಮೂಲೆಯಲ್ಲಿರುವ ಜನ ನೋಡಬಹುದು. ಟಿವಿ, ಕ್ಯಾಸೆಟ್, ಸೀಡಿ ಇವುಗಳೆಲ್ಲದರ ಅಡಚಣೆಯನ್ನು ದಾಟಿ ಸಿನಿಮಾ ಈಗ ನೋಡುಗನ ಕೈಬೆರಳ ತುದಿಗೆ ಬಂದು, ಒಂದು ಕ್ಲಿಕ್ ಗೆ ತೆರೆದುಕೊಳ್ಳುತ್ತಿದೆ. ಬಹುಭಾಷೆಯಲ್ಲಿ ಲಭ್ಯವಿರುವ ಸಬ್ ಟೈಟಲ್ ಗಳು ಭಾಷೆಯ ಅಡಚಣೆಯನ್ನು ತೆಗೆದು ಹಾಕಿವೆ. ಎಷ್ಟೋ ಒಟಿಟಿ ಪ್ಲಾಟ್ ಫಾರ್ಮ್ ಗಳು ಕಂಟೆಂಟ್ ಅನ್ನು ಬಹುಭಾಷೆಯಲ್ಲಿ ಡಬ್ ಮಾಡಿ ನೀಡುತ್ತಿವೆ. ಹೀಗಾಗಿ, ಈಗ ಪ್ರೇಕ್ಷಕನ ಮುಂದೆ ಅಗಾಧ ಆಯ್ಕೆಗಳಿವೆ.
ಒಂದು 25 ವರ್ಷದ ಹಿಂದೆ ಕನ್ನಡ, ಹಿಂದಿ ಮತ್ತು ಯಾವ ಪ್ರದೇಶದಲ್ಲಿದ್ದೇವೆ ಎಂಬುದರ ಆಧಾರದ ಮೇಲೆ ತಮಿಳು, ತೆಲುಗು ಕೊಂಚ ಮಲಯಾಳಂ ಚಿತ್ರಗಳು ನೋಡಲು ಸಿಗುತ್ತಿತ್ತೇನೋ. ಉಳಿದಂತೆ ಬೇರೆ ಭಾರತೀಯ ಭಾಷೆಗಳ ಸಿನಿಮಾಗಳು ಕಾಣುತ್ತಿದ್ದದ್ದು ದೂರದರ್ಶನದ ಭಾನುವಾರ ಮಧ್ಯಾಹ್ನದ ಪ್ರಶಸ್ತಿ ವಿಜೇತ ಚಲನಚಿತ್ರಗಳ ಪ್ರಸಾರ ಸಮಯದಲ್ಲಿ ಮಾತ್ರ. ಹೀಗಾಗಿ, ಆಗ ಸಿನಿಮಾ ಪ್ರೇಮಿಗಳನ್ನು ತೃಪ್ತಿ ಪಡಿಸುವುದು ಸುಲಭವಿದ್ದಿರಬಹುದು. ಈಗ ಕನ್ನಡ ಚಿತ್ರಗಳು ಸ್ಪರ್ಧಿಸಬೇಕಿರುವುದು ಇಡೀ ಜಗತ್ತಿನ ಚಿತ್ರಗಳ ಜೊತೆಗೆ, ಅದನ್ನು ಹಾಲಿವುಡ್ ನಂತಹ ದೊಡ್ಡ ಉದ್ದಿಮೆಯೇ ಅರಿತುಕೊಂಡಿದೆ, ಒಪ್ಪಿಕೊಂಡಿದೆ. ಒಂದು ಹತ್ತು ಪರ್ಷದ ಹಿಂದೆ ಸಾಮಾನ್ಯ ಅಮೇರಿಕನೊಬ್ಬನನ್ನು ಹಾಲಿವುಡ್ ಚಿತ್ರಗಳನ್ನು ತೋರಿಸಿ ಮೆಚ್ಚಿಸುವುದು ಸುಲಭವಿದ್ದಿರಬಹುದು. ಆದರೆ, ಈಗ ಅದು ಸಾಧ್ಯವಿಲ್ಲ. ಕೊರಿಯನ್ ಭಾಷೆಯ ಚಿತ್ರಗಳು ಮತ್ತು ಸೀರೀಸ್ ಗಳು ಕೆಲವೇ ವರ್ಷಗಳಲ್ಲೇ ಜಗತ್ತಿನ ಎಲ್ಲಡೆ ಗಳಿಸಿರುವ ಅಪಾರ ಜನಪ್ರಿಯತೆ ಇದಕ್ಕೆ ಸಾಕ್ಷಿ. ಈ ವಿಷಯದಲ್ಲಿ ಬಾಲಿವುಡ್ ಕೂಡ ಮುಂದಿದೆ. ಹಿಂದಿ ಸಿನಿಮಾಗಳಷ್ಟೇ ಏಕೆ, ಹಿಂದಿಯ ಜನಪ್ರಿಯ ಧಾರವಾಹಿಗಳು ಕೂಡ ಪ್ರಪಂಚದ ಇನ್ಯಾವುದೋ ಮೂಲೆಯಲ್ಲಿ ಡಬ್ ಆಗಿ ಪ್ರಸಾರಗೊಳ್ಳುತ್ತವೆ. ಇದೇ ವೇಳೆ, ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ಹಿಂದಿಗೆ ಡಬ್ ಆದ ದಕ್ಷಿಣದ ಚಿತ್ರಗಳು ಕೋಟಿ ಕೋಟಿ ಬಾಚುತ್ತಿವೆ. ಬಾಲಿವುಡ್ ಕೂಡ ದಕ್ಷಿಣ ಭಾರತದ ಚಿತ್ರಗಳ ಜನಪ್ರಿಯತೆಯನ್ನು ಒಪ್ಪಿಕೊಂಡು, ರಾಜಿ ಮಾಡಿಕೊಂಡಿದೆ.
ಇಷ್ಟೆಲ್ಲಾ ಬದಲಾವಣೆಗಳು ನಡೆದಿರುವಾಗ ಕನ್ನಡ ಭಾಷೆಯಲ್ಲಿದೆ ಎಂಬ ಒಂದೇ ಕಾರಣಕ್ಕೆ ಕನ್ನಡಿಗರು ಕನ್ನಡ ಚಿತ್ರಗಳನ್ನು ಮೊದಲು ನೋಡಬೇಕು ಎಂಬ ನಿರೀಕ್ಷೆಯ ಹಿಂದಿರುವ ಭಾವ ಅರ್ಥವಾಗುವಂತದ್ದೇ ಆದರೂ, ಈಡೇರುವಂತದ್ದಲ್ಲ, ಮಾಸ್ ಸಿನಿಮವೇ ಆಗಲಿ, ಕಲಾತ್ಮಕ ಚಿತ್ರವೇ ಆಗಲಿ ಅಥವಾ ಬ್ರಿಡ್ಬ್ ಫಿಲ್ಮ್ ಆಗಲಿ ಅದು ತನ್ನ ಪ್ರೇಕ್ಷಕನಿಗೆ ಬೇಕಾದ್ದನ್ನು, ಉಳಿದವರಿಗಿಂತ ಚೆನ್ನಾಗಿ ಕೊಟ್ಟರೆ ಮಾತ್ರ ಈ ಸ್ಪರ್ಧೆಯಲ್ಲಿ ಉಳಿಯಬಲ್ಲದು. ಇದರ ಜೊತೆಗೆ, ತಾವು ತಲುಪಲು ಇಚ್ಛಿಸುವ ಪ್ರೇಕ್ಷಕ ವರ್ಗವನ್ನು ತಲುಪುವುದು ಹೇಗೆ, ಅವರನ್ನು ಸೆಳೆಯುವುದು ಹೇಗೆ ಎಂಬ ಬಗ್ಗೆ, ಸಿನಿಮಾ ಡಿಸ್ಚ್ರಿಬ್ಯೂಷನ್ ಮತ್ತು ಮಾರ್ಕೆಟಿಂಗ್ ತಂತ್ರಗಾರಿಕೆಯ ಬಗ್ಗೆಯೂ ಕನ್ನಡ ನಿರ್ಮಾಪಕರು ತುಂಬಾ ಕೆಲಸ ಮಾಡಬೇಕಿದೆ. ಹತ್ತು ಚಿತ್ರ ಒಂದೇ ವಾರ ಬಿಡುಗಡೆ ಮಾಡುವಂತಹ ನಿರ್ಧಾರಗಳು ಕನ್ನಡ ಸಿನಿಮಾ ರಂಗ ಈ ವಿಷಯದಲ್ಲಿ ಯಾವ ಮಟ್ಟದಲ್ಲಿದೆ ಎಂಬ ಬಗ್ಗೆ ಹೇಳುತ್ತದೆ.
ಮಲ್ಚಿಪ್ಲೆಕ್ಸ್ ಗಳೇ ಆಗಲಿ, ಥಿಯೇಟರ್ ಮಾಲಿಕರೇ ಆಗಲಿ ಅವರು ಶುದ್ಧ ವ್ಯವಹಾರಸ್ಥರು. ಅವರಿಗೆ ಕನ್ನಡ ಪ್ರೇಮವಾಗಲಿ. ಕನ್ನಡ ದ್ವೇಷವಾಗಲೀ ಇರುವುದಿಲ್ಲ. ಲಾಭ ತರಬಲ್ಲ ಚಿತ್ರಗಳಿಗೆ ಅವರು ಮಣೆ ಹಾಕುತ್ತಾರೆ. ಇಷ್ಟಕ್ಕೂ, ಥಿಯೇಟರ್ ನಿಂದ ಹೊರಬಿದ್ದ ತಕ್ಷಣ ಆ ಸಿನಿಮಾದ ಆಯಸ್ಸು ಮುಗಿಯಿತು ಎಂಬ ಕಾಲವೂ ಇದಲ್ಲ. ಇತ್ತೀಚೆಗೆ ಸಿನಿಮಾಗಳು ಥಿಯೇಟರ್ ನಲ್ಲಿ ಬಿಡುಗಡೆಯಾದಾಗ ಜನ ಮಾತನಾಡುವುದಕ್ಕಿಂತ ಒಟಿಟಿಯಲ್ಲಿ ಬಂದಾಗ ಮಾತನಾಡುವುದೇ ಹೆಚ್ಚು. ಒಟಿಟಿ ಮೂಲಕ ಹಣ ಗಳಿಕೆ ಸಾಕಷ್ಟಾಗುತ್ತದೋ ಇಲ್ಲವೋ, ಆದರೆ, ಸಿನಿಮಾ ನಿಜಕ್ಕೂ ಚೆನ್ನಾಗಿದ್ದರೆ ಆ ಸಿನಿಮಾಗೆ ಸಿಗಬೇಕಾದ ಮಾನ್ಯತೆಯಂತೂ ದೊರಕಿಯೇ ದೊರಕುತ್ತದೆ. ಒಟಿಟಿ ಗಳಿಗಿರುವ ಈ ಅಪಾರ ಸಾಧ್ಯತೆಯನ್ನು ತಮ್ಮ ಲಾಭಕ್ಕೆ ಬಳಿಸಿಕೊಳ್ಳುವ ಬಗ್ಗೆಯೂ ಕನ್ನಡ ಸಿನಿಮಾ ರಂಗ ಯೋಚಿಸಬೇಕಿದೆ. ಇಷ್ಟೆಲ್ಲಾ ಬೆಳವಣಿಗೆಗಳು ಕೊನೆಗೆ ಹೇಳುವುದು ಒಂದೇ. ಮುಂದೆ ಇನ್ನೂ ಬಿರುಸಾಗಲಿರುವ ಜಾಗತಿಕ ಸ್ಪರ್ಧೆಯಲ್ಲಿ Content is King. ಇದಕ್ಕೆ ಯಾವುದೇ ಪರ್ಯಾಯವಿಲ್ಲ. ದೇಶದಲ್ಲೇ ಅತೀ ಹೆಚ್ಚು ಸಿನಿಮಾಗಳನ್ನು ನಿರ್ಮಿಸುವ ಕನ್ನಡ ಸಿನಿಮಾ ರಂಗ ಆದಷ್ಚು ಬೇಗ ಇದನ್ನು ಅರಿತುಕೊಂಡಷ್ಟು ಒಳ್ಳೆಯದು.