ಗುರುವಾರ ಬೆಳಗಿನ ಜಾವ ತಾವು ಮತ್ತು ತಮ್ಮ ಪತ್ನಿ ತಮ್ಮ ಸುದ್ದಿವಾಹಿನಿಯ ಕಚೇರಿಯಿಂದ ಮನೆಗೆ ತೆರಳುತ್ತಿದ್ದಾಗ, ತಮ್ಮ ಕಾರನ್ನು ಅಡ್ಡಗಟ್ಟಿ ಇಬ್ಬರು ವ್ಯಕ್ತಿಗಳು ತಮ್ಮ ಮೇಲೆ ದಾಳಿಗೆ ಯತ್ನಿಸಿದರು. ಆದರೆ, ಅಷ್ಟರಲ್ಲಿ ತಮ್ಮ ಭದ್ರತಾ ಸಿಬ್ಬಂದಿ ಆ ಇಬ್ಬರನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಅರ್ನಾಬ್ ಮುಂಬೈನ ಎನ್ ಎಂ ಜೋಷಿ ಮಾರ್ಗ್ ಪೊಲೀಸ್ ಠಾಣೆಗೆ ಸಲ್ಲಿಸಿರುವ ದೂರಿನಲ್ಲಿ ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ಅರ್ನಾಬ್ ಭದ್ರತಾ ಸಿಬ್ಬಂದಿ ಹಿಡಿದುಕೊಟ್ಟಿರುವ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು, ಅವರ ವಿರುದ್ಧ ಮುಂದಿನ ಕ್ರಮಜರುಗಿಸಿದ್ದಾರೆ.
ಪಲ್ಗಾರ್ ನಲ್ಲಿ ಇಬ್ಬರು ಸಾಧುಗಳನ್ನು ಗುಂಪು ಹಲ್ಲೆ ಮಾಡಿ ಕೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮೌನವನ್ನು ತಮ್ಮ ಟಿವಿ ಶೋನಲ್ಲಿ ಪ್ರಶ್ನಿಸಿದ್ದಕ್ಕೆ ಅವರೇ ಈ ದಾಳಿ ಮಾಡಿಸಿದ್ದಾರೆ. ತಮ್ಮ ಭದ್ರತಾ ಸಿಬ್ಬಂದಿ ಹಿಡಿದುಕೊಂಡಾಗ ಆ ದಾಳಿಕೋರರು ತಾವು ಯುವ ಕಾಂಗ್ರೆಸ್ಸಿನವರಾಗಿದ್ದು, ಪಕ್ಷದ ಉನ್ನತ ವ್ಯಕ್ತಿಗಳ ಸೂಚನೆಯಂತೆ ಈ ಕೃತ್ಯ ಎಸಗಿದ್ದಾಗಿ ಹೇಳಿದರು ಎಂದು ಅರ್ನಾಬ್ ಗುರುವಾರ ಬೆಳಗ್ಗೆ ಘಟನೆ ಕುರಿತ ವೀಡಿಯೋ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ದಾಳಿ ಘಟನೆಯನ್ನು ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಖಂಡಿಸಿವೆ. ಇದೊಂದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಹೇಯ ದಾಳಿ ಎಂದೂ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಸೇರಿದಂತೆ ಕೆಲವು ನಾಯಕರು ಬಣ್ಣಿಸಿದ್ದಾರೆ. ಅಲ್ಲದೆ, ಇದೊಂದು ಕಾಂಗ್ರೆಸ್ ಪ್ರಾಯೋಜಿತ ದಾಳಿ ಎಂದು ಬಿಜೆಪಿ ಆರೋಪಿಸಿದೆ.
ಈ ನಡುವೆ, ಪಾಲ್ಗಾರ್ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿಕ್ರಿಯಿಸಿಲ್ಲ, ಸಾಧುಗಳ ಮೇಲೆ ದಾಳಿ ನಡೆಸಿರುವುದು ಮುಸ್ಲಿಮರು. ಸೋನಿಯಾ ಗಾಂಧಿಯವರೇ ದಾಳಿಕೋರರಿಗೆ ಕುಮ್ಮಕ್ಕು ನೀಡಿದ್ದಾರೆ ಎಂದು ತಮ್ಮ ಟಿವಿ ಶೋನಲ್ಲಿ ನೇರ ತೀರ್ಪು ನೀಡುವಂತೆ ಮಾತನಾಡಿದ್ದ ಮತ್ತು ಆ ಮೂಲಕ ಪಾಲ್ಗಾರ್ ಘಟನೆಗೂ ಮುಸ್ಲಿಂ ಸಮುದಾಯಕ್ಕೂ ಮತ್ತು ಸೋನಿಯಾ ಗಾಂಧಿಯವರಿಗೂ ಯಾವುದೇ ಸಂಬಂಧವಿಲ್ಲದೇ ಹೋದರೂ ಆ ಘಟನೆಯನ್ನು ಬಳಸಿಕೊಂಡು ವೈಯಕ್ತಿಕ ನಿಂದನೆ ಮಾಡಿದ ಮತ್ತು ಕೋಮುಗಳ ನಡುವೆ ಸಂಘರ್ಷಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅರ್ನಾಬ್ ಗೋಸ್ವಾಮಿ ವಿರುದ್ಧ ಕಾಂಗ್ರೆಸ್ ನಾಯಕರು ಬುಧವಾರವೇ ಛತ್ತೀಸಗಢದಲ್ಲಿ ಎಫ್ ಐಆರ್ ದಾಖಲಿಸಿದ್ದರು. ಛತ್ತೀಸಗಢ ಆರೋಗ್ಯ ಸಚಿವ ಟಿ ಎಸ್ ಸಿಂಗ್ಡೊ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೋಹನ್ ಮರ್ಕನ್ ಅವರು ಅರ್ನಾಬ್ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.

ಈ ಪ್ರಕರಣಗಳು ಗಂಭೀರ ಸ್ವರೂಪಕ್ಕೆ ತಿರುಗುವ ಮುನ್ಸೂಚನೆ ಬುಧವಾರವೇ ಸಿಕ್ಕಿತ್ತು. ಏಕೆಂದರೆ, ಅರ್ನಾಬ್ ಒಬ್ಬ ಪತ್ರಕರ್ತರಾಗಿ ಟಿವಿ ಶೋನಲ್ಲಿ ಮಾತನಾಡುವ ಬದಲು, ಆಧಾರರಹಿತವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಗುರಿಯಾಗಿಸಿಕೊಂಡು ಅತ್ಯಂತ ಹೀನಾಯ ರೀತಿಯಲ್ಲಿ ವಾಗ್ದಾಳಿ ನಡೆಸಿದ್ದರು. ಆ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷೆಯನ್ನು ಗುರಿಯಾಗಿಸಿಕೊಂಡು ಅವರ ಮೇಲೆ ಆಧಾರರಹಿತ ಆರೋಪ ಹೊರಿಸಿದ ಅರ್ನಾಬ್ ವಿರುದ್ಧ ದೇಶದ ವಿವಿಧೆಡೆ ದೂರು ದಾಖಲಿಸಲು ಕಾಂಗ್ರೆಸ್ ಮುಖಂಡರು- ಕಾರ್ಯಕರ್ತರು ಸಜ್ಜಾಗಿದ್ದರು. ಆ ನಿಟ್ಟಿನಲ್ಲಿ ಛತ್ತೀಸಗಢದ ದೂರು ನಾಂದಿ ಹಾಡಿತ್ತು. ಆದರೆ, ಒಂದು ಕಡೆ ತಮ್ಮ ವಿರುದ್ಧ ಹೀಗೆ ಸರಣಿ ದೂರು ದಾಖಲಾಗುತ್ತಿರುವ ಸೂಚನೆ ಸಿಗುತ್ತಿದ್ದಂತೆ, ಅರ್ನಾಬ್ ಇದೀಗ ತಮ್ಮ ಮೇಲೆಯೇ ದಾಳಿ ನಡೆದಿರುವುದಾಗಿ ಪೊಲೀಸರಿಗೆ ದೂರು ನೀಡಿದ್ಧಾರೆ ಮತ್ತು ಆ ದಾಳಿಯನ್ನು ಸೋನಿಯಾ ಅವರೇ ನಡೆಸಿದ್ದಾರೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.
ಈ ನಡುವೆ, ಏಪ್ರಿಲ್ 16ರಂದು ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯ ಗಡಿಚಿಂಚಲೆ ಎಂಬ ಹಳ್ಳಿಯಲ್ಲಿ ನಡೆದಿದ್ದ ಗುಂಪು ಹಲ್ಲೆಯಲ್ಲಿ ಇಬ್ಬರು ಸಾಧುಗಳು ಹತ್ಯೆಗೀಡಾದ ಪ್ರಕರಣದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಈವರೆಗೆ 109 ಮಂದಿಯನ್ನು ಬಂಧಿಸಿದ್ದು, 9 ಮಂದಿ ಅಪ್ರಾಪ್ತರು ಸೇರಿದಂತೆ ಎಲ್ಲರೂ ಹಿಂದೂ ಬುಡಕಟ್ಟು ವರ್ಗಕ್ಕೆ ಸೇರಿದವರಾಗಿದ್ದು, ದೆಹಲಿ ಬಿಜೆಪಿ ನಾಯಕ ರಿಚಾ ಪಾಂಡೆ ಮಿಶ್ರಾ, ಸುರೇಶ್ ಚೌಹಾಣ್, ಅಶೋಕ್ ಪಂಡಿತ್ ಮತ್ತಿತರರು ಸೇರಿದಂತೆ ಬಿಜೆಪಿ ಐಟಿ ಸೆಲ್ ಮತ್ತು ಇತರ ಹಿಂದುತ್ವ ಗುಂಪುಗಳ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸಿದಂತೆ ಯಾವೊಬ್ಬ ಮುಸ್ಲಿಮರಾಗಲೀ ಅಥವಾ ಕ್ರೈಸ್ತರಾಗಲೀ ಈ ಘಟನೆಯಲ್ಲಿ ಭಾಗಿಯಾಗಿಲ್ಲ. ಇದು ಮಕ್ಕಳು ಕಳ್ಳರು ಎಂಬ ಹಿನ್ನೆಲೆಯಲ್ಲಿ ತಡರಾತ್ರಿ ನಡೆದ ಗುಂಪು ಹಲ್ಲೆ ಘಟನೆ ಎಂದು ಖ್ಯಾತ ಸತ್ಯ ಶೋಧಕ ವೆಬ್ ತಾಣ ಆಲ್ಟ್ ನ್ಯೂಸ್ ಹೇಳಿದೆ.
ಜೊತೆಗೆ ಮುಂಬೈ ಪೊಲೀಸ್, ಮಹಾರಾಷ್ಟ್ರ ಗೃಹ ಸಚಿವರು ಮತ್ತು ಸಿಎಂ ಕೂಡ ಪಾಲ್ಗಾರ್ ಘಟನೆಗೆ ಯಾವುದೇ ಕೋಮುದ್ವೇಷದ ಹಿನ್ನೆಲೆ ಇಲ್ಲ. ಬಂಧಿತರೆಲ್ಲರೂ ಒಂದೇ ಸಮುದಾಯದವರೇ ಮತ್ತು ಮೃತ ಸಾಧುಗಳು ಮತ್ತು ದಾಳಿ ನಡೆಸಿದವರು ಒಂದೇ ಧರ್ಮಕ್ಕೆ ಸೇರಿದವರು ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ಇಷ್ಟೆಲ್ಲಾ ವಾಸ್ತವಾಂಶಗಳ, ಸ್ಪಷ್ಟನೆಗಳ ಹೊರತಾಗಿಯೂ ಪತ್ರಕರ್ತರಾಗಿ ಅರ್ನಾಬ್ ತಮ್ಮ ಸತ್ಯನಿಷ್ಠತೆ ಮತ್ತು ತನಿಖಾ ಮನೋಧರ್ಮವನ್ನು ಬದಿಗಿಟ್ಟು, ಸಂಪೂರ್ಣವಾಗಿ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಕೇವಲ ಈ ಘಟನೆಯ ಬಗ್ಗೆ ಬಹಿರಂಗ ಹೇಳಿಕೆ ನೀಡಲಿಲ್ಲ ಎಂಬುದನ್ನೇ ಮುಂದಿಟ್ಟುಕೊಂಡು ಸೋನಿಯಾರಂಥ ಹಿರಿಯ ನಾಯಕಿಯ ಮೇಲೆ ಅತ್ಯಂತ ಕೆಟ್ಟ ಮಾತುಗಳನ್ನು ಬಳಸಿ ನಿಂದನೆ ಮಾಡಿದ್ದು, ಗಂಭೀರ ಆರೋಪ ಮಾಡಿದ್ದು ಎಷ್ಟು ಸರಿ? ನಿಜವಾಗಿಯೂ ಅರ್ನಾಬ್ ಪತ್ರಕರ್ತರಾಗಿ ನಡೆದುಕೊಂಡಿದ್ದಾರೆಯೇ? ಎಂಬ ಪ್ರಶ್ನೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಧ್ವನಿಸಿದೆ.
ಜೊತೆಗೆ 2002ರ ಗುಜರಾತ್ ಗಲಭೆ ಸಂದರ್ಭದಲ್ಲಿ ವರದಿಗಾರಿಕೆಗೆ ಹೋದಾಗ ತನ್ನ ಮೇಲೆ ಮೋದಿ ಕಡೆಯವರು ದಾಳಿ ನಡೆಸಿದರು ಎಂದು ಹೇಳಿದ್ದ ಹಳೆಯ ಸುಳ್ಳಿನ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿದೆ. ಮೋದಿಯವರ ನಿವಾಸದಿಂದ ಕೇವಲ 50 ಮೀಟರ್ ದೂರದಲ್ಲಿ ತನ್ನ ಮೇಲೆ ದಾಳಿ ನಡೆದಿತ್ತು ಎಂದು ಅರ್ನಾಬ್ 2013ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಸ್ಸಾಂನಲ್ಲಿ ಅರ್ನಾಬ್ ಹೇಳಿದ್ದರು. ಆದರೆ, ವಾಸ್ತವವಾಗಿ ಆ ದಾಳಿ ನಡೆದಿದ್ದರೂ, ಅದರಲ್ಲಿ ದಾಳಿಗೊಳಗಾದವರು ಅರ್ನಾಬ್ ಆಗಿರಲಿಲ್ಲ. ಬದಲಾಗಿ ಮತ್ತೊಬ್ಬ ಪತ್ರಕರ್ತ ರಾಜ್ ದೀಪ್ ಸರದೇಸಾಯಿ ಆಗಿದ್ದರು! ಆದರೆ, ಅರ್ನಾಬ್ ಆ ಪತ್ರಕರ್ತ ತಾವೇ ಎಂದು ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದರು. ಈಗಲೂ ಕೂಡ ಅರ್ನಾಬ್ ಅಂತಹದ್ದೇ ಕಟ್ಟುಕತೆ ಸೃಷ್ಟಿಸಿರಬಹುದೆ ಎಂಬ ಮಾತುಗಳೂ ಕೇಳಿಬಂದಿವೆ.
ಹಾಗೇ ಅರ್ನಾಬ್ ಮೇಲಿನ ಹಲ್ಲೆ ಘಟನೆಯನ್ನು ಖಂಡಿಸಿ ಅರ್ನಾಬ್ ಪರ ಕೂಡ ಸಾಕಷ್ಟು ವಾದಗಳು ಕೇಳಿಬಂದಿವೆ. ಬಹುತೇಕರು ಅರ್ನಾಬ್ ಮೇಲಿನ ದಾಳಿ ಯತ್ನವನ್ನು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಎಂದೇ ಬಣ್ಣಿಸಿ, ಪತ್ರಿಕಾ ಸ್ವಾತಂತ್ರ್ಯ ರಕ್ಷಣೆಗೆ ಕೇಂದ್ರ ಸರ್ಕಾರ ದಾಳಿಯ ಕುರಿತು ಉನ್ನತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ಧಾರೆ. ಸದ್ಯಕ್ಕಂತೂ ದೇಶದಲ್ಲಿ ಸಾಮಾಜಿಕ ಜಾಲತಾಣಗಳ ಮಟ್ಟಿಗೆ ಈ ದಾಳಿ ಘಟನೆ ಕರೋನಾ ಸೋಂಕು ಸೇರಿದಂತೆ ಉಳಿದೆಲ್ಲಾ ವಿಷಯಗಳನ್ನು ಬದಿಗೆ ಸರಿಸಿ, ದೇಶವ್ಯಾಪಿ ಚರ್ಚೆಯ ಸಂಗತಿಯಾಗಿದೆ.