ದೇಶದಲ್ಲೆಡೆ ಪ್ರತಿ 30 ವರ್ಷಕ್ಕೊಮ್ಮೆ ಮರು ಭೂಮಾಪನ ಮಾಡಬೇಕೆಂಬ ನಿಯಮವಿದೆ. ಕಳೆದ 54 ವರ್ಷಗಳಲ್ಲಿ ರಾಜ್ಯ ಸರ್ಕಾರ ಇದುವರೆಗೂ ಮರು ಭೂಮಾಪನಕ್ಕೆ ಕೈ ಹಾಕದೆಉಳಿದಿದೆ. ಕೇಂದ್ರ ಸರ್ಕಾರದಿಂದ ಮರು ಭೂಮಾಪನ ಮಾಡಲು ರಾಜ್ಯಕ್ಕೆ 2012-13ರಲ್ಲಿ ರೂ 24 ಕೋಟಿ ಅನುದಾನ ನೀಡಿತ್ತು. ಆದರೆ ಅನುದಾನ ಸಿಕ್ಕಿದರೂ, ಮರು ಭೂ ಮಾಪನ ಮಾಡುವುದಕ್ಕೆ ಆಸಕ್ತಿ ತೋರಿಸದಿರುವುದು ವಿಪರ್ಯಾಸ. ಸಾಕಷ್ಟು ಹಳ್ಳಿಗಳಲ್ಲಿ ರೈತರು, ಸಾಮಾನ್ಯ ಜನರು ತಮ್ಮ ಹೊಲ, ಗದ್ದೆ ಹಾಗೂ ಕೆರೆಗಳು ಒತ್ತುವರಿಯಾಗಿದೆ ತೆರೆವುಗೊಳಿಸಿಕೊಡಿ, ಸರ್ವೆ ಮಾಡಿಕೊಡಿ ಎಂದು ಸುಮಾರು ವರ್ಷದಿಂದ ಹೋರಾಡುತ್ತಲೇ ಇದ್ದಾರೆ. ಆದರೆ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿದರೂ, `ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ’ ಮೌನವಹಿಸಿರುವುದು ದುರಂತ.
2008ರಲ್ಲಿ ದೇಶದ ಎಲ್ಲಾ ರಾಜ್ಯದ ಜಿಲ್ಲೆಗಳಲ್ಲೂ ಭೂಮಾಪನ/ಮರು ಭೂಮಾಪನ ಮಾಡಬೇಕೆಂದು ಕೇಂದ್ರ ಸರ್ಕಾರ ರಾಷ್ಟ್ರೀಯ ಭೂದಾಖಲೆಗಳ ಆಧುನೀಕರಣ ಯೋಜನೆ (NLRMP) ಜಾರಿಗೆ ತಂದಿತು. ನಂತರ ಈ ಯೋಜನೆಯನ್ನು ಏಪ್ರಿಲ್ 2016ರಲ್ಲಿ `ಡಿಜಿಟಲ್ ಇಂಡಿಯಾ ಲ್ಯಾಂಡ್ ರೆಕಾರ್ಡ್ಸ್ ಮೊಡರ್ನೈಶೇಷನ್ ಪ್ರೋಗ್ರಾಂ’ (DILRMP) ಹೆಸರಿನಲ್ಲಿ ಪರಿಷ್ಕರಿಸಲಾಯಿತು (revamped). ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ 323 ಜಿಲ್ಲೆಗಳಿಗೆ ರೂ 909 ಕೋಟಿ ಅನುದಾನ ಹಣವನ್ನು ನಿಗದಿಪಡಿಸಿತು. ಇದರಲ್ಲಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರೂ 695 ಕೋಟಿ ಹಣವನ್ನು ಬಿಡುಗಡೆ ಮಾಡಿತು. ಶೇಕಡ 100ರಷ್ಟು ಅನುದಾನದಲ್ಲಿ ಶೇಕಡ 50 ರಷ್ಟು ಕೇಂದ್ರ ಸರ್ಕಾರ ಮತ್ತು ಶೇಕಡ 50ರಷ್ಟು ಅನುದಾನ ಹಣವನ್ನು ರಾಜ್ಯ ಸರ್ಕಾರ ಭರಿಸಬೇಕೆಂಬ ನಿಯಮವಿದೆ.
ಆದರೆ, 2016-17ರಲ್ಲಿ ನಡೆಸಲಾದ ಪರಿಶೀಲನೆಯಲ್ಲಿ ರಾಜ್ಯ ಸರ್ಕಾರಗಳ ಪೂರ್ಣ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಇದರಂತೆ, ಒಟ್ಟು 111 ಜಿಲ್ಲೆಗಳಲ್ಲಿ ಮಾತ್ರ ಭೂಮಾಪನ/ ಮರು ಭೂಮಾಪನ ಆರಂಭಿಸಲಾಗಿತ್ತು. ಹಾಗಾಗಿ, ಒಟ್ಟು ಅನುದಾನದ ಪೈಕಿ ರೂ 380 ಕೋಟಿ ಅನುದಾನ ಹಣ ಕೇಂದ್ರ ಸರ್ಕಾರದ ಬಳಿ ಹಾಗೆ ಉಳಿದಿದೆ.
ಕರ್ನಾಟಕ್ಕೆ, ರಾಷ್ಟ್ರೀಯ ಭೂದಾಖಲೆಗಳ ಆಧುನೀಕರಣ ಯೋಜನೆ (NLRMP) ಇದ್ದಾಗ ರೂ 13 ಕೋಟಿ ಮತ್ತು ಡಿಜಿಟಲ್ ಇಂಡಿಯಾ ಲ್ಯಾಂಡ್ ರೆಕಾರ್ಡ್ಸ್ ಮೊಡರ್ನೈಶೇಷನ್ ಪ್ರೋಗ್ರಾಂ (DILRMP)ನಲ್ಲಿ ರೂ 11 ಕೋಟಿ ಸೇರಿದಂತೆ ಒಟ್ಟು ರೂ 24 ಕೋಟಿ ಅನುದಾನ ನೀಡಲಾಗಿತ್ತು.
16.07.2019ರಂದು ಕೇಂದ್ರದ ಗ್ರಾಮೀಣ ಅಭಿವೃದ್ದಿ ಇಲಾಖೆ, ರಾಜ್ಯಗಳು ಬಳಸಿಕೊಂಡಿರುವ ಅನುದಾನ ಮತ್ತು ಉಳಿಸಿಕೊಂಡಿರುವ ಅನುದಾನದ ವರದಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಕರ್ನಾಟಕಕ್ಕೆ ರೂ 11 ಕೋಟಿ ಅನುದಾನವನ್ನು ಇದುವರೆಗೂ ಬಳಸಿಕೊಂಡಿಲ್ಲ ಎಂಬುದು ಬೆಳಕಿಗೆ ಬಂದಿದೆ. ಆದರೆ ರಾಜ್ಯದ ಇಲಾಖೆಯ ಅಧಿಕಾರಿಗಳು “ರೂ 8-10 ಕೋಟಿ ಅನುದಾನ ಹಣವನ್ನು ಈಗಾಗಲೇ ಬಳಸಿಕೊಂಡಿದ್ದೇವೆ. ಅಂಕಿ ಅಂಶಗಳನ್ನು ಸಿದ್ಧಪಡಿಸಿದ ನಂತರ ವರದಿಯನ್ನು ಕೇಂದ್ರಕ್ಕೆ ಸಲ್ಲಿಸುತ್ತೇವೆ” ಎಂದು ಹೇಳುತ್ತಿದ್ದಾರೆ. ಮರು ಭೂಮಾಪನ ಕೆಲಸಕ್ಕೆ ಕೈ ಹಾಕದೆ, ರೂ 10 ಕೋಟಿ ಅನುದಾನ ಹಣವನ್ನು ಯಾವ ಕೆಲಸಕ್ಕೆ ಬಳಸಿಕೊಂಡಿದ್ದಾರೆ ಎಂಬುದು ಇನ್ನೂ ಗೊತ್ತಿಲ್ಲ.
ರಾಜ್ಯದ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಸುಮಾರು 4,000ಕ್ಕೂ ಹೆಚ್ಚು ಸಿಬ್ಬಂದಿಗಳಿದ್ದು ಮರು ಭೂಮಾಪನ ಮಾಡಲು ಮುಂದಾಗದಿರುವುದು ವಿಪರ್ಯಾಸ. 2019ರಲ್ಲಿ, 6 ಜಿಲ್ಲೆಗಳಲ್ಲಿ ಮರು ಭೂಮಾಪನ ಮಾಡಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ. “ಪ್ರಸ್ತುತ ವರ್ಷದಲ್ಲಿ ಬೆಂಗಳೂರು ನಗರ ಸೇರಿದಂತೆ ರಾಮನಗರ, ತುಮಕೂರು ಹಾಸನ, ಉತ್ತರಕನ್ನಡ, ಬೆಳಗಾವಿ ಜಿಲ್ಲೆಗಳಲ್ಲಿ ಮರು ಭೂಮಾಪನ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಇದಕ್ಕೆ ರೂ 76 ಕೋಟಿ ಹಣ ಬೇಕಾಗುತ್ತದೆ. ಇನ್ನು ಮೂರು ತಿಂಗಳ ಒಳಗೆ ಕೆಲಸವನ್ನು ಪ್ರಾರಂಭಿಸುತ್ತೇವೆ. ಅರಂಭದಲ್ಲಿ ಕೇಂದ್ರ ಸರ್ಕಾರದ ಭೂಮಾಪನ ಇಲಾಖೆಯವರು,ರಾಜ್ಯದಲ್ಲಿ ಮರು ಭೂಮಾಪನ ಕೆಲಸವನ್ನು ಪ್ರಾರಂಭಿಸುತ್ತಾರೆ. ” ಎಂದು ಇಲಾಖೆಯ ಅಧಿಕಾರಿಗಳೊಬ್ಬರು ಹೇಳಿದರು. ಈ ಮಾತನ್ನು ಕಳೆದ 5-6 ವರ್ಷಗಳಿಂದಲೂ ಹೇಳುತ್ತಲೇ ಇದ್ದಾರೆ. ಆದರೆ ಇದನ್ನು ಕಾರ್ಯರೂಪಕ್ಕೆ ತರುವುದು ಯಾವಾಗ ಎಂಬುದು ಪ್ರಶ್ನೆಯಾಗಿದೆ.
ಡಿಜಿಟಲ್ ಇಂಡಿಯಾ ಲ್ಯಾಂಡ್ ರೆಕಾರ್ಡ್ಸ್ ಮೊಡರ್ನೈಶೇಷನ್ ಪ್ರೋಗ್ರಾಂ (DILRMP) ಅಡಿಯಲ್ಲಿ 50 ಕೋಟಗಿಂತ ಹೆಚ್ಚು ಅನುದಾನ ಪಡೆದುಕೊಂಡಿರುವ ರಾಜ್ಯಗಳು

ಮತ್ತೊಂದು ದೊಡ್ಡ ದುರಂತ ಎಂದರೆ, ಕಂದಾಯ ಇಲಾಖೆಯು, ರಾಜ್ಯದಲ್ಲಿ 11,77,930 ಎಕರೆ ಸರ್ಕಾರ ಭೂಮಿ ಒತ್ತುವರಿಯಾಗಿದೆ ಎಂಬ ಮಾಹಿತಿಯನ್ನು ಕೊಟ್ಟಿದೆ. ಹೀಗಿರುವಾಗ ದಶಕಗಳಿಂದ ಮರು ಭೂಮಾಪನ ಮಾಡಿಸುವುದಕ್ಕೆ ತಡ ಮಾಡುತ್ತಿರುವುದು ಏಕೆ? ರೈತರು, ಸಾಮಾನ್ಯ ಜನರು ದಶಕಗಳಿಂದ ಭೂಮಿ, ಹೊಲ, ಗದ್ದೆ ಒತ್ತುವರಿಯಾಗಿದೆ, ವ್ಯವಸಾಯ ಮಾಡುವ ಭೂಮಿಯನ್ನೇ ಕಿತ್ತುಕೊಳ್ಳಲಾಗಿದೆ, ಎಂದು ಪ್ರತಿದಿನ ವಿಧಾನ ಸೌಧದಕ್ಕೆ ಅಲೆಯುತ್ತಿದ್ದಾರೆ.
ರಾಜ್ಯದಲ್ಲಿ ಈಗ ನಿಗದಿಪಡಿಸಿಕೊಂಡಿರುವ 6 ಜಿಲ್ಲೆಗಳಲ್ಲಿ ಮರು ಭೂಮಾಪನ ಕೆಲಸ ಪ್ರಾರಂಭಿಸಿ, ಮುಗಿಸಿ, ಎಲ್ಲರಿಗೂ ಆರ್.ಟಿ.ಸಿ (RTC) ಒದಗಿಸಬೇಕಾದರೆ ಕನಿಷ್ಠ 5 ವರ್ಷಗಳೇ ಬೇಕು. ಇನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮರು ಭೂಮಾಪನ ಮಾಡಿ ಮುಗಿಸುವುದರಲ್ಲಿ ಎಷ್ಟು ದಶಕಗಳು ಕಳೆದು ಹೋಗುವುದೋ ಗೊತ್ತಿಲ್ಲ. ಇದರ ಜೊತೆಗೆ 11 ಲಕ್ಷ ಎಕರೆ ಒತ್ತುವರಿಯಾಗಿರುವ ಭೂಮಿ, ವಿವಾದಿತ ಭೂಮಿಯ ಸಮಸ್ಯೆಯನ್ನು ಬಗೆಹರಿಸುವುದು ಕೂಡ ಸರ್ಕಾರಕ್ಕೆ ಸವಾಲಾಗಿದೆ.