ಅರಣ್ಯವಾಸಿಗಳ (ಪರಿಶಿಷ್ಟ ಪಂಗಡ ಹಾಗೂ ಪಾರಂಪರಿಕ ಅರಣ್ಯ ನಿವಾಸಿಗಳು) ಹಕ್ಕು ಅರ್ಜಿಯ ಸಂಬಂಧ ಹೊಸದಾಗಿ ಪ್ರಕ್ರಿಯೆ ಆರಂಭಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚಿಸಿದೆ. ಅದರಂತೆ, ಸುಪ್ರೀಂ ಕೋರ್ಟ್ ಮುಂದೆ ಜುಲೈ 24ರಂದು ಸವಿವರವಾದ ಅಫಿಡವಿಟ್ ಸಲ್ಲಿಸಬೇಕಾಗಿರುವುದರಿಂದ, ಈ ಪ್ರಕ್ರಿಯೆಯನ್ನು ಜೂನ್ 30ರೊಳಗೆ ಮುಗಿಸುವಂತೆಯೂ ನಿರ್ದೇಶನ ನೀಡಲಾಗಿದೆ.
ಆದರೆ, ಇತರ ಕೆಲವು ರಾಜ್ಯ ಸರ್ಕಾರಗಳಂತೆ ಕರ್ನಾಟಕವೂ ಈ ಸಂಬಂಧ ಸೂಕ್ಷವಾಗಿ ಕಾರ್ಯ ನಿರ್ವಹಿಸುವ ಒತ್ತಡದಲ್ಲಿದೆ. ಅದಕ್ಕೆ ಕಾರಣ, ಕೆಲವು ರಾಜ್ಯಗಳಂತೆ ಕರ್ನಾಟಕದಲ್ಲಿಯೂ ತಿರಸ್ಕ್ರತಗೊಂಡ ಅರ್ಜಿಗಳ ಸಂಖ್ಯೆ ಅತಿ ಹೆಚ್ಚಿದೆ. ಮಾರ್ಚ್ 6ರಂದು ಬುಡಕಟ್ಟು ವ್ಯವಹಾರಗಳ ಸಚಿವಾಲಯ ಆಯೋಜಿಸಿದ ಸಭೆಯಲ್ಲಿ ಅತಿ ಹೆಚ್ಚು ಸಂಖ್ಯೆ ಅರ್ಜಿಗಳು ತಿರಸ್ಕ್ರತಗೊಂಡ ರಾಜ್ಯಗಳ ಬಗ್ಗೆ ಆಶ್ಚರ್ಯ ವ್ಯಕ್ತವಾಗಿತ್ತು. ಕರ್ನಾಟಕದಲ್ಲಿ ಶೇ.75ರಷ್ಟು ಅರ್ಜಿಗಳು ತಿರಸ್ಕ್ರತಗೊಂಡಿದ್ದವು! ಅದರೆ, ರಾಜ್ಯವೇನು ಈ ನಿಟ್ಟಿನಲ್ಲಿ ಪ್ರಥಮವಲ್ಲ. ಉದಾಹರಣೆಗೆ, ಉತ್ತರಾಖಂಡ (ಶೇ.95), ಉತ್ತರ ಪ್ರದೇಶ (ಶೇ.80) ರಾಜ್ಯಗಳಲ್ಲಿ ಅರ್ಜಿ ತಿರಸ್ಕಾರ ಇನ್ನಷ್ಟು ಹೆಚ್ಚಿತ್ತು. ನಂತರದ ಸಾಲಿನಲ್ಲಿ ಪಶ್ಚಿಮ ಬಂಗಾಳ (ಶೇ.65), ಚತ್ತೀಸಘಡ (ಶೇ.50), ತೆಲಂಗಾಣ (ಶೇ.44), ತಮಿಳುನಾಡು (ಶೇ.33) ರಾಜ್ಯಗಳೂ ಇವೆ.
ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳನ್ನು ಮಾನ್ಯತೆ ಮಾಡುವ) ಅಧಿನಿಯಮ 2006 [Scheduled Tribes and Other Traditional Forest Dwellers (Recognition of Forest Rights) Act 2006] ಅಡಿಯಲ್ಲಿ ಅರಣ್ಯವಾಸ ಹಕ್ಕು ಇತ್ಯರ್ಥಪಡಿಸಲಾಗುತ್ತದೆ. ಈ ಕಾಯ್ದೆಯನ್ವಯ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಸಮಿತಿ/ ಉಪ ವಿಭಾಗ ಮಟ್ಟದ ಸಮಿತಿ /ಗ್ರಾಮ ಮಟ್ಟದ ಅರಣ್ಯ ಹಕ್ಕು ಸಮಿತಿಗಳನ್ನು ರಚಿಸಲಾಗಿರುತ್ತದೆ. ಈ ಹೊಸ ಪ್ರಕ್ರಿಯೆಗೂ ಮೊದಲು, ರಾಜ್ಯದಲ್ಲಿ 2.79 ಲಕ್ಷ ವೈಯಕ್ತಿಕ ಅರ್ಜಿ, 5,849 ಸಮುದಾಯ ಹಕ್ಕು ಅರ್ಜಿಗಳ ಪೈಕಿ (ಒಟ್ಟು 2.84 ಲಕ್ಷ ಅರ್ಜಿ) ಕೇವಲ 15,819 ಅರ್ಜಿಗಳನ್ನಷ್ಟೇ ಪುರಸ್ಕರಿಸಲಾಗಿತ್ತು. ಅಂದರೆ, 2.14 ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು. ಜೊತೆಗೆ, 55,074 ಅರ್ಜಿಗಳು ಇತ್ಯರ್ಥಕ್ಕಾಗಿ ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ, ಎಲ್ಲ ರಾಜ್ಯ ಸರ್ಕಾರಗಳ ಅಫಿಡವಿಟ್ ಆಧರಿಸಿ, ಸುಪ್ರೀಂ ಕೋರ್ಟ್ ಫೆಬ್ರವರಿ 13, 2019ರಂದು ಎಲ್ಲ ಅಕ್ರಮವಾಸಿಗಳನ್ನು ತಕ್ಷಣ ಅರಣ್ಯ ಪ್ರದೇಶದಿಂದ ತೆರವುಗೊಳಿಸುವಂತೆ ಆದೇಶ ನೀಡಿತ್ತು. ಆದರೆ, ನಂತರ ಫೆಬ್ರವರಿ 28ರಂದು ಈ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿ, ರಾಜ್ಯ ಸರ್ಕಾರಗಳಿಗೆ ಪರಿಷ್ಕ್ರತ ಅಫಿಡವಿಟ್ ಸಲ್ಲಿಸುವಂತೆ ಸಮಯ ನೀಡಿತ್ತು.
ಯಾವ ಜಿಲ್ಲೆಯಲ್ಲಿ ಎಷ್ಟು ಅರ್ಜಿ?: ಉತ್ತರ ಕನ್ನಡ – 89,167, ಶಿವಮೊಗ್ಗ – 85,518, ಚಿಕ್ಕಮಗಳೂರು – 24,659, ಬೆಳಗಾವಿ – 17, 424, ಮೈಸೂರು – 7,275.
ಈ ಬಗ್ಗೆ ಅರ್ಜಿಗಳನ್ನು ಪುನರ್ ಪರಿಶೀಲಿಸಲು ರಾಜ್ಯ ಸರ್ಕಾರ ಕಾನೂನು ಅಭಿಪ್ರಾಯ ಪಡೆದು ಇದೀಗ ಅರ್ಜಿ ಮರುಪರಿಶೀಲಿಸುವಂತೆ ನಿರ್ದೇಶನ ನೀಡಿದೆ. ಇದರಂತೆ, ಅರ್ಜಿ ತಿರಸ್ಕರಿಸಿದ ಸಮಿತಿಗಳೇ ಮತ್ತೆ ಅದೇ ಅರ್ಜಿಯನ್ನು ಪುನರ್ ಪರಿಶೀಲಿಸಬೇಕು. ರಾಜ್ಯ ಸರ್ಕಾರದ ಪ್ರಕಾರ, ಇಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ತಿರಸ್ಕ್ರತಗೊಳ್ಳಲು ಬೇರೆ ಕಾರಣಗಳಿವೆ. ಅವುಗಳಲ್ಲಿ ಪ್ರಮುಖವೆಂದರೆ, ಜಮೀನು ಕಂದಾಯವೋ, ಅರಣ್ಯವೋ ಎಂಬ ದೃಢೀಕರಣ ಪಡೆಯದೆ ಅರ್ಜಿ ತಿರಸ್ಕರಿಸಲಾಗಿದೆ, ಅಹವಾಲು ಸಲ್ಲಿಸಲು ಅವಕಾಶ ನೀಡಿರುವುದಿಲ್ಲ, ತಿರಸ್ಕ್ರತವಾಗಿರುವ ಬಗ್ಗೆ ಹಿಂಬರಹ ನೀಡಿರುವುದಿಲ್ಲ, ಕೆಲವು ಅರ್ಜಿಗಳನ್ನು ಒಗ್ಗೂಡಿಸಿ ಉಪವಿಭಾಗ ಮಟ್ಟದ ಸಮಿತಿಯಲ್ಲಿ ಸಕಾರಣವಿಲ್ಲದೆ ತಿರಸ್ಕರಿಸಲಾಗಿದೆ.
ಆದರೆ, ಇವೆಲ್ಲದರ ಮಧ್ಯೆ ಅನರ್ಹ ಅರ್ಜಿದಾರರ ಉಪಸ್ಥಿತಿಯನ್ನೂ ಅಲ್ಲಗಳೆಯುವಂತಿಲ್ಲ. ಈ ಹಿಂದೆ ಅರ್ಜಿಗಳ ವಿಚಾರಣೆ ನಡೆಯುತ್ತಿದ್ದಾಗ ಕೇಳಿಬಂದ ದೂರುಗಳು ಇದಕ್ಕೆ ಪುಷ್ಟಿ ನೀಡುತ್ತವೆ. ಇಂತಹ ಕೆಲವು ದೂರುಗಳಲ್ಲಿ ಉಪಲೋಕಾಯುಕ್ತರಿಂದ ವಿಚಾರಣೆ ನಡೆದು, ಮೇಲ್ನೋಟಕ್ಕೆ ಅನರ್ಹ ವ್ಯಕ್ತಿಗಳ ಹೆಸರಿನಲ್ಲಿ ಅರ್ಜಿ ಸಲ್ಲಿಸಿ, ಸ್ವೀಕೃತವೂ ಆದ ಬಗ್ಗೆ ವರದಿಯಾಗಿತ್ತು. 2018ರಲ್ಲಿ ಶಿವಮೊಗ್ಗ ಜಿಲ್ಲೆಯೊಂದರಲ್ಲೇ 2,000 ಎಕರೆ ಅರಣ್ಯ ಭೂಮಿಯ ಹಕ್ಕು ಅನರ್ಹ ವ್ಯಕ್ತಿಗಳ ಪಾಲಾದ ಬಗ್ಗೆ ಸರ್ಕಾರವೇ ಲೋಕಾಯುಕ್ತ ತನಿಖೆಗೆ ಆದೇಶಿಸಿತ್ತು. ಈ ಪ್ರಕರಣ ನಡೆದಿದ್ದು ಸಾಗರ ಹಾಗೂ ಹೊಸನಗರ ತಾಲೂಕುಗಳಲ್ಲಿ.
ಸುಪ್ರೀಂ ಕೋರ್ಟ್ ಫೆಬ್ರವರಿ 28, 2019ರ ಆದೇಶದಲ್ಲಿ ಪರಿಷ್ಕೃತ ನಡಾವಳಿ ಪ್ರಕ್ರಿಯೆಯ ದುರ್ಲಾಭವನ್ನು ಅನರ್ಹ ವ್ಯಕ್ತಿಗಳು ಪಡೆಯುವ ಸಾಧ್ಯತೆಯನ್ನೂ ಸ್ಪಷ್ಟಪಡಿಸಿತ್ತು. “ಈ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ಅರಣ್ಯದಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗದವರಿಗೆ ಈ ಆದೇಶಗಳಿಂದ (ತೆರವುಗೊಳಿಸುವ ಆದೇಶ) ಅನ್ಯಾಯವಾಗಿರಬಹುದು. ಆದರೆ, ಅದರ ಜೊತೆಗೆ ಸಾಂಪ್ರದಾಯಿಕ ಅರಣ್ಯವಾಸಿಗಳೆಂಬ ನೆಪದಲ್ಲಿ ಅನುಕೂಲವುಳ್ಳ ಶ್ರೀಮಂತರು, ಉದ್ಯಮಶೀಲರು ಹಾಗೂ ಇತರರು ಅರಣ್ಯ ಪ್ರದೇಶದ ಮೇಲೆ ಹಕ್ಕು ಸ್ಥಾಪಿಸಬಾರದು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳು ತಮ್ಮ ವರದಿಯಲ್ಲಿ ಪ್ರತಿಯೊಂದೂ ಅಂಶವನ್ನೂ ನಮೂದಿಸುವುದು ಅವಶ್ಯ,’’ ಎಂದಿತ್ತು.
ಈ ಎಲ್ಲ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಈ ಬಾರಿ ಸಮಿತಿಗಳು ಪಾಲಿಸಲೇಬೇಕಾದ ವಿವರವಾದ ನಡಾವಳಿಗಳನ್ನು ಪೂರೈಸಿದೆ. ಅರ್ಜಿ ಪುನರ್ ಪರಿಶೀಲನೆ ಸಂದರ್ಭ ಅರಣ್ಯ, ಕಂದಾಯ ಅಧಿಕಾರಿಗಳ ಉಪಸ್ಥಿತಿ ಕಡ್ಡಾಯಗೊಳಿಸಿದೆ. ಅರಣ್ಯ ಹಕ್ಕು ಕಾಯ್ದೆ ಕಲಂ 2(ಡಿ) ಅಡಿ ಅರ್ಜಿಯಲ್ಲಿರುವ ಜಮೀನು ಬರುವುದೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಹೇಳಿದೆ. ಪಂಚನಾಮೆ, ಸ್ಥಳ ತನಿಖಾ ವರದಿ ಪಡೆಯುವಂತೆ ಸೂಚಿಸಿದೆ. ನೈಸರ್ಗಿಕ ನ್ಯಾಯ (natural justice) ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ. ಅರಣ್ಯ ಇಲಾಖೆಯ ಉಪಗ್ರಹ ಹಾಗೂ ಇತರ ತಂತ್ರಜ್ಞಾನ ಮೂಲಕ ಒದಗಿಸುವ ಫೋಟೊಗಳನ್ನು ಅರ್ಜಿಯ ಜೊತೆಗಿರುವ ಸಾಕ್ಷಿಗಳೊಂದಿಗೆ ಹೋಲಿಕೆ ಮಾಡುವಂತೆ ಹೇಳಿದೆ ಹಾಗೂ ಅರ್ಜಿಯಲ್ಲಿ ಹೇಳಲಾಗುವ ಅವಧಿಯನ್ನು ಕಡ್ಡಾಯವಾಗಿ 13-12-2005ಕ್ಕೂ ಮುಂಚಿನಿಂದ ವಾಸವಾಗಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ನಿರ್ದೇಶಿಸಲಾಗಿದೆ.
ಈಗಿರುವ ಕುತೂಹಲ ಇಷ್ಟೆ. ಮೊದಲ ಬಾರಿಗೆ ದಾಖಲೆಯ ಅರ್ಜಿಗಳನ್ನು ತಿರಸ್ಕಿರಿಸಿದ ರಾಜ್ಯದಲ್ಲಿ, ಪುನರ್ ಪರಿಶೀಲನೆ ಬಳಿಕ ಎಷ್ಟು ತಿರಸ್ಕ್ರತಗೊಳ್ಳಲಿದೆ, ಎಷ್ಟು ಪುರಸ್ಕ್ರತಗೊಳ್ಳಲಿದೆ ಎಂಬುದು.