ತುಮಕೂರು ಅರಣ್ಯ ವಿಭಾಗ ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ಹಲವಾರು ಮೀಸಲು ಅರಣ್ಯ ಪ್ರದೇಶಗಳನ್ನು ವನ್ಯಜೀವಿ ಸಂರಕ್ಷಿತ ಧಾಮವಾಗಿ ಘೋಷಿಸಲು ಸಾಕಷ್ಟು ಶ್ರಮವಹಿಸಿದೆ. ಯಾವುದೇ ಮೀಸಲು ಅರಣ್ಯವನ್ನು ಉನ್ನತ ದರ್ಜೆಯ ಅರಣ್ಯವಾಗಿ ಘೋಷಿಸಿದಾಗ ಅದಕ್ಕೆ ಹೆಚ್ಚಿನ ರಕ್ಷಣೆ, ಕಾರ್ಯ-ಕೆಲಸಗಳಿಗೆ ಹೆಚ್ಚಿನ ಹಣ ಸಹಾಯ ಹಾಗೂ ಅರಣ್ಯ ರಕ್ಷಣೆಗಾಗಿ ನಿರ್ಬಂಧಗಳನ್ನು ವಿಧಿಸುವ ಅವಕಾಶಗಳು ಲಭ್ಯವಾಗುತ್ತದೆ.
ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಬುಕ್ಕಾಪಟ್ಟಣ ಅರಣ್ಯ ಪ್ರದೇಶವನ್ನು ಇತ್ತೀಚೆಗೆ (ಮೇ 2019) ಚಿಂಕಾರ ಸಂರಕ್ಷಿತ ಧಾಮವಾಗಿ ಘೋಷಣೆ ಮಾಡಲಾಗಿದೆ. ಇದು ಕರ್ನಾಟಕದಲ್ಲಿ ನಶಿಸಿ ಹೋಗುತ್ತಿರುವ ಅಪರೂಪದ ಅರಣ್ಯ ಪ್ರಕಾರದ ರಕ್ಷಣೆಗೆ ವರವಾಗಿ ಪರಿಣಮಿಸಿದೆ.
ಬುಕ್ಕಾ ಪಟ್ಟಣದ ಅರಣ್ಯ ಪ್ರದೇಶ ದಕ್ಷಿಣ ಭಾರತದಲ್ಲಿ ಅಪರೂಪದ ವುಡ್ ಲ್ಯಾಂಡ್ ಸವಾನ್ನ(ಕುರುಚಲು ಕಾಡು- ಹುಲ್ಲುಗಾವಲು) ಪ್ರಕಾರದ ಕಾಡು. ಈ ಪ್ರಕಾರದ ಕಾಡುಗಳು ಅತ್ಯಂತ ಹೆಚ್ಚು ಮನುಷ್ಯನ ಹಸ್ತಕ್ಷೇಪಕ್ಕೆ ಒಳಪಟ್ಟಿರುವ ಕಾಡುಗಳು. ಇಲ್ಲಿನ ಸಸ್ಯ ವರ್ಗಕ್ಕೆ ಹೊಂದಿಕೊಂಡಂತೆ ಚಿಂಕಾರ, ಕೃಷ್ಣ ಮೃಗ, ಕೊಂಡು ಕುರಿ, ಕರಡಿ, ಕತ್ತೆ ಕಿರುಬ ಹಾಗೂ ಚಿರತೆಗಳು ಇಲ್ಲಿ ವಾಸಿಸುತ್ತವೆ. ಕರ್ನಾಟಕದಲ್ಲಿ 3 ಪ್ರಭೇದದ ಹುಲ್ಲೆ(antelope) ಇರುವಂತಹ ಏಕೈಕ ಕಾಡು 148 ಚ. ಕೀ ಮೀ ವಿಸ್ತೀರ್ಣದ ಬುಕ್ಕಾಪಟ್ಟಣ ಅರಣ್ಯ. ಈಗ ಭಾರತದಲ್ಲಿ ನಶಿಸಿಹೋಗಿರುವ ಏಷ್ಯಾದ ಚೀತಾಗಳು ಒಂದು ಕಾಲದಲ್ಲಿ ಈ ಅರಣ್ಯ ಪ್ರದೇಶದಲ್ಲಿ ಇದ್ದವೆಂದು ‘ಗೆಜೆಟಿಯರ್’ನಲ್ಲಿ ದಾಖಲಾಗಿದೆ.

ಇತ್ತೀಚೆಗೆ ಇದುವರೆಗೂ ಜಿಲ್ಲೆಯಲ್ಲಿ ಕಂಡಿರದ ಅಪರೂಪದ ಮೊಟ್ಟೆ ಭಕ್ಷಕ ಹಾವು (Indian Egg Eater) ಈ ಅರಣ್ಯ ಪ್ರದೇಶದಲ್ಲಿ ಕಂಡು ಬಂದಿದೆ. ಈ ಹಾವಿನ ವಿಶೇಷವೆಂದರೆ, ಇದು ಕೇವಲ ಹಕ್ಕಿಗಳ ಮೊಟ್ಟೆಗಳನ್ನು ತಿಂದು ಬದುಕುತ್ತದೆ. ಬೇರೆ ಹಾವುಗಳಂತೆ ಕೀಟಗಳನ್ನಾಗಲೀ ಇನ್ನಿತರ ಯಾವುದೇ ಆಹಾರ ಇಲ್ಲ. ಈ ಮೊದಲು ಮೊಟ್ಟೆ ಭಕ್ಷಕ ಹಾವು ಉತ್ತರ ಭಾರತ ಮತ್ತು ಪಶ್ಚಿಮ ಭಾರತದಲ್ಲಿ ಕಂಡು ಬಂದ ನಿದರ್ಶನಗಳಿವೆ. ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಕಾಣಸಿಕ್ಕಿದೆ. ಈ ಹಾವು ವನ್ಯ ಜೀವಿ ರಕ್ಷಣಾ ಕಾಯ್ದೆಯ ಶೆಡ್ಯೂಲ್ 1 ಜೀವಿ ಆಗಿದೆ. ಈ ಹಾವು 2-2.5 ಅಡಿ ಉದ್ದ ಇರುತ್ತದೆ ಹಾಗೂ ವಿಷಕಾರಿ ಆಗಿರುವುದಿಲ್ಲ.
ಬ್ರಿಟಿಷ್ ಆಡಳಿತದ ಸಮಯದಲ್ಲಿ ಚಿನ್ನದ ಗಣಿಗಾರಿಕೆಗೆ ಒಳಪಟ್ಟಿದ್ದ ಈ ಪ್ರದೇಶ ನಂತರದ ವರ್ಷಗಳಲ್ಲಿ ಲಾಭದಾಯಕವಲ್ಲದ ಕಾರಣದಿಂದ ಮುಚ್ಚಲ್ಪಟ್ಟಿತ್ತು. ಪರಿಸರ ಸ್ನೇಹಿ ಯೋಜನೆಯ ಹೆಸರಿನಲ್ಲಿ ಇಲ್ಲಿನ ಗುಡ್ಡಗಳ ಮೇಲೆ ವಿಂಡ್ ಮಿಲ್ ಗಳನ್ನು(ಗಾಳಿ ವಿದ್ಯುತ್ ಯಂತ್ರ) ಸ್ಥಾಪಿಸಲಾಯಿತು. ಇದರಿಂದ ಅಗತ್ಯವಾದ 18 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾದರೂ ವನ್ಯಜೀವಿಗಳಿಗೆ ಅಡಚನೆಯಾಗಿ ಪರಿಣಮಿಸಿತು.

ಅರಣ್ಯದ ನಡುವೆ ಹಾದುಹೋಗುವ ರಾ.ಹೆ 234ರ ಅಗಲೀಕರಣ ಆಗುತ್ತಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ. ಶರವೇಗದಲ್ಲಿ ಬರುವ ವಾಹನಕ್ಕೆ ಸಿಕ್ಕ ಪ್ರಾಣಿಗಳು ಮತ್ತು ಸರಿಸೃಪಗಳು ಸಾವಿಗೀಡಾಗುತ್ತವೆ. ಇದನ್ನು ತಪ್ಪಿಸಲು ರಸ್ತೆ ವೇಗ ಮಿತಿ , ರಸ್ತೆ ಉಬ್ಬುಗಳು ಮುಂತಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಮಧ್ಯ ಪ್ರದೇಶದ ಅರಣ್ಯ ಪ್ರದೇಶದ ಮಧ್ಯೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರ್ಮಾಣ ಕಾರ್ಯದ ಹಂತದಲ್ಲಿಯೇ ಪ್ರಾಣಿಗಳ ಓಡಾಟಕ್ಕೆ ಅನುಕೂಲವಾಗುವಂತೆ ಸುರಂಗ ಮಾರ್ಗಗಳನ್ನು ನಿರ್ಮಿಸಲಾಗಿತ್ತು. ಅದೇ ರೀತಿ ರಾ.ಹೆ 234ರ ಅಗಲೀಕರಣ ಸಂದರ್ಭದಲ್ಲಿಯೂ ಮಾಡುವುದು ಉತ್ತಮ.
ಅರಣ್ಯದ ನಡುವೆ ನೂರಾರು ಎಕರೆಯಲ್ಲಿ ಗಿಡಗಳನ್ನು ಬೆಳೆದು ನೈಜ ಅರಣ್ಯಕ್ಕೆ ಮಾರಕವಾಗಿ ಪರಿಣಮಿಸಿರುವ ತೋಟಗಾರಿಕೆ ಇಲಾಖೆಯ ನರ್ಸರಿಯನ್ನು ಸ್ಥಳಾಂತರಿಸಿ ಹುಲ್ಲುಗಾವಲುಗಳನ್ನು ಉಳಿಸಬೇಕಾಗಿದೆ. ಮಿತಿ ಮೀರಿದ ಮನುಷ್ಯ ಚಟುವಟಿಕೆಗಳನ್ನು, ಕುರಿಗಾಹಿಗಳನ್ನು ಹಾಗೂ ಕಳ್ಳಬೇಟೆಯನ್ನು ನಿಯಂತ್ರಿಸಲು ಅರಣ್ಯ ಇಲಾಖೆಗೆ ತುರ್ತಾಗಿ ಹೆಚ್ಚಿನ ಸಿಬ್ಬಂದಿ ಹಾಗೂ ಕಳ್ಳಬೇಟೆ ಶಿಬಿರಗಳ ಅಗತ್ಯವಿದೆ. ಸರ್ಕಾರ ಈ ಬಗ್ಗೆ ಇನ್ನಷ್ಟು ಗಮನಹರಿಸಿ ಈ ಅಪರೂಪದ ಅರಣ್ಯವನ್ನು ಉಳಿಸಬೇಕಾಗಿದೆ.
ಲೇಖಕರು ಮಧ್ಯ ಪ್ರದೇಶದಲ್ಲಿ ನಾಚ್ಯುರಲಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.