ರಸ್ತೆ, ಉದ್ಯಾನ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ವಿುಸಲಾಗಿರುವ ಧಾರ್ವಿುಕ ಕಟ್ಟಡಗಳ ತೆರವು ಕುರಿತು ಈ ಹಿಂದೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು. ಇದೀಗ ಈ ನಿಟ್ಟಿನಲ್ಲಿ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವಂತೆ ರಿಜಿಸ್ಟ್ರಾರ್ ಜನರಲ್‌ಗೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಮಾಗಡಿ ರಸ್ತೆಯ ಪೊಲೀಸ್ ವಸತಿಗೃಹಗಳ ಸಮುಚ್ಚಯ ಸಮೀಪ ಸಾರ್ವಜನಿಕ ಜಾಗದಲ್ಲಿ ಅಕ್ರಮವಾಗಿ ಸಾಯಿಬಾಬಾ ದೇವಾಲಯ ನಿರ್ವಿುಸಲಾಗಿದೆ ಎಂದು ಆರೋಪಿಸಿ ಎಸ್. ರವೀಂದ್ರ ಮತ್ತಿತರರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ಪೀಠ, ಅನಧಿಕೃತ ಧಾರ್ವಿುಕ ಕಟ್ಟಡಗಳ ತೆರವು ಕುರಿತು ಸ್ವಯಂಪ್ರೇರಿತ ಪಿಐಎಲ್ ದಾಖಲಿಸಲು ರಿಜಿಸ್ಟ್ರಾರ್ ಜನರಲ್‌ಗೆ ಸೂಚಿಸಿತು.
ರಾಷ್ಟ್ರಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಹೊಸ ಪೂಜಾಸ್ಥಳಗಳನ್ನು ನಿರ್ಮಿಸದಂತೆ ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ನಿರ್ದೇಶನ ನೀಡಿತ್ತು. ಈ ನಿರ್ಬಂಧವು ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ ಮತ್ತಿತರ ಎಲ್ಲ ಸಮುದಾಯಗಳ ಪೂಜಾ ಸ್ಥಳಗಳಿಗೆ ಅನ್ವಯಿಸುತ್ತದೆ ಎಂಬುದಾಗಿ ನ್ಯಾಯಮೂರ್ತಿಗಳಾದ ದಲ್ವೀರ್ ಭಂಡಾರಿ ಹಾಗೂ ಮುಕುಂದಾಕಮ್ ಶರ್ಮಾ ಅವರನ್ನೊಳಗೊಂಡ ನ್ಯಾಯಪೀಠವು ತನ್ನ ಮಧ್ಯಂತರ ಆಜ್ಞೆಯೊಂದರಲ್ಲಿ ಹೇಳಿತ್ತು.
“ನ್ಯಾಯಾಲಯವು ಸಾರ್ವಜನಿಕ ಸ್ಥಳಗಳಲ್ಲಿ ಪೂಜಾಸ್ಥಳಗಳನ್ನು ನಿರ್ಮಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ತನಕ ಈ ಆದೇಶವು ಜಾರಿಯಲ್ಲಿರುತ್ತದೆ,” ಎಂಬುದಾಗಿ ನ್ಯಾಯಪೀಠ ಹೇಳಿತ್ತು. ಅಲ್ಲದೆ, ಪ್ರಸಕ್ತ ಅಸ್ತಿತ್ವದಲ್ಲಿರುವ ಪೂಜಾಸ್ಥಳಗಳ ಕುರಿತು ಆಯಾ ರಾಜ್ಯ ಸರ್ಕಾರಗಳು ನಿರ್ಧಾರ ಕೈಗೊಳ್ಳಬೇಕು ಎಂದೂ ಸಲಹೆ ನೀಡಿತ್ತು. “ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಹೊಸ ಪೂಜಾಸ್ಥಳಗಳ ನಿರ್ಮಾಣ ಇಲ್ಲವೆಂದು ರಾಜ್ಯಗಳು ಹಾಗೂ ಕೇಂದ್ರವು ಒಮ್ಮತಕ್ಕೆ ಬಂದಿವೆ,” ಎಂದು ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಮ್ ಮಾಹಿತಿ ನೀಡಿದ ಬಳಿಕ ನ್ಯಾಯಪೀಠ ಈ ನಿರ್ದೇಶನ ಪಾಸು ಮಾಡಿತ್ತು. ಅದಕ್ಕೂ ಮೊದಲು, ಸಾರ್ವಜನಿಕ ಸ್ಥಳವನ್ನು ಒತ್ತುವರಿ ಮಾಡುವ ಮೂಲಕ ಯಾವುದೇ ಪೂಜಾಸ್ಥಳಗಳ ನಿರ್ಮಾಣವಾಗುತ್ತಿಲ್ಲ ಎಂಬುದನ್ನು ಸರ್ಕಾರ ಖಚಿತಪಡಿಸಬೇಕು ಎಂಬುದಾಗಿ 2018ರ ಜು.31ರಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.
ಮುಖ್ಯ ಕಾರ್ಯದರ್ಶಿಗಳು ಕಟಕಟೆಗೆ
ಈ ಕುರಿತ ಇತ್ತೀಚಿನ ವಿಚಾರಣೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟಿರುವ ಅನಧಿಕೃತ ದೇಗುಲಗಳನ್ನು ತೆರವುಗೊಳಿಸುವಂತೆ ಅಥವಾ ಸ್ಥಳಾಂತರಿಸುವಂತೆ ನೀಡಿರುವ ಆದೇಶ ಪಾಲಿಸಲು ರಾಜ್ಯ ಸರಕಾರಗಳು ವಿಫಲವಾದಲ್ಲಿ ಮುಖ್ಯ ಕಾರ್ಯದರ್ಶಿಗಳು ಸ್ವತಃ ನ್ಯಾಯಾಲಯದ ಮುಂದೆ ಹಾಜರಾಗಬೇಕಾದೀತು ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ. ಈ ವಿಚಾರದಲ್ಲಿ ರಾಜ್ಯಗಳು ತಮ್ಮ ಪ್ರತಿಕ್ರಿಯೆ ದಾಖಲಿಸುವುದಕ್ಕೆ ಎರಡು ವಾರಗಳ ಕಾಲಾವಕಾಶವನ್ನು ನ್ಯಾಯಮೂರ್ತಿ ದಲ್ವೀರ್ ಭಂಡಾರಿ ನೇತೃತ್ವದ ಪೀಠ ನೀಡಿದೆ. ಅನೇಕ ವಿಚಾರಣೆಗಳು ನಡೆದರೂ ರಾಜ್ಯಗಳು ಈ ವಿಷಯದಲ್ಲಿ ಇದುವರೆಗೆ ತಮ್ಮ ಅಫಿಡವಿತ್ ಅಥವಾ ಅನುಷ್ಠಾನ ವರದಿ ಸಲ್ಲಿಸದಿರುವುದರಿಂದ ಸುಪ್ರೀಂ ಕೋರ್ಟ್ ಆಕ್ರೋಶಗೊಂಡಿದೆ.
ರಸ್ತೆ, ಕಾಲುದಾರಿ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಮಂದಿರ, ಮಸೀದಿ, ಚರ್ಚ್, ಗುರುದ್ವಾರ ಅಥವಾ ಇನ್ನಿತರ ಯಾವುದೇ ಆರಾಧನಾಲಯಗಳಿಗೆ ಅವಕಾಶ ನೀಡಬಾರದು. ಇದರಿಂದ ದೇಶಾದ್ಯಂತ ಸಂಚಾರ ಅಡಚಣೆ, ಸ್ಥಳಾಭಾವ ಹಾಗೂ ಜನರಿಗೆ ತೊಂದರೆಯಾಗುತ್ತದೆಂದು ನ್ಯಾಯಪೀಠವು ಆದೇಶ ನೀಡಿತ್ತು. ತಮಿಳುನಾಡಿನಲ್ಲಿ 77,453 ಅನಧಿಕೃತ ಧಾರ್ಮಿಕ ಕಟ್ಟಡಗಳಿದ್ದು, ರಾಜಸ್ಥಾನದಲ್ಲಿ 58,253, ಮಧ್ಯಪ್ರದೇಶದಲ್ಲಿ 51,624, ಮಹಾರಾಷ್ಟ್ರದಲ್ಲಿ 17,385, ಗುಜರಾತಿನಲ್ಲಿ 15,000 ಹಾಗೂ ಕರ್ನಾಟಕದಲ್ಲಿ 2,814 ಸ್ಥಳಗಳ ಅಕ್ರಮ ಒತ್ತುವರಿ ನಡೆದಿದೆ. ದೆಹಲಿಯಲ್ಲಿ 52 ಪ್ರಕರಣ ಕಂಡುಬಂದಿದ್ದರೆ, ಸಿಕ್ಕಿಂ, ಮಿಜೋರಾಂ ಹಾಗೂ ನಾಗಾಲ್ಯಾಂಡಿನಲ್ಲಿ ಯಾವುದೇ ಅನಧಿಕೃತ ಧಾರ್ಮಿಕ ಕಟ್ಟಡಗಳಿಲ್ಲ ಎಂದು ದಾಖಲೆಗಳು ಹೇಳುತ್ತವೆ..