ಅಧಿಕಾರ ಕಳೆದುಕೊಳ್ಳುವುದು ರಾಜಕಾರಣಿಯ ಜೀವನದ ಅತ್ಯಂತ ದೊಡ್ಡ ದುರ್ದೆಸೆ. ಮಾಜಿ ಪ್ರಧಾನಿ ಮತ್ತು ಹಿರಿಯ ರಾಜಕಾರಣಿ ದೇವೇಗೌಡರು ಎರಡು ಬಾರಿ ಅಧಿಕಾರ ಕಳೆದುಕೊಂಡಿದ್ದಾರೆ. ಒಮ್ಮೆ, ಪ್ರಧಾನ ಮಂತ್ರಿ ಪದವಿಗೆ 1996 ರಲ್ಲಿ ಹಾರಿದಾಗ, ಮತ್ತೆ ಹನ್ನೊಂದು ತಿಂಗಳ ನಂತರ ಪ್ರಧಾನಿ ಪದದ ಚೌಕದ ಹಾವು ಏಣಿಯ ಆಟದಲ್ಲಿ ಪ್ರಗತಿ ಮಾಡಲಾಗದಾಗ.
ಅವರ ಎರಡನೆಯ ಮಗ, ಎಚ್ ಡಿ ಕುಮಾರಸ್ವಾಮಿಯೂ ಎರಡು ಬಾರಿ ಅಧಿಕಾರ ಅರ್ಧಕ್ಕೆ ಕಳೆದುಕೊಂಡರು. ಒಮ್ಮೆ 2006-07 ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾಗಿ, ಮತ್ತು 2018ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ. ಮೊದಲ ಬಾರಿ ಇಪ್ಪತ್ತು ತಿಂಗಳು ಹಾಗೂ ಎರಡನೆಯ ಬಾರಿ ಹನ್ನೆರೆಡು ತಿಂಗಳು ಅವರು ಅಧಿಕಾರದಲ್ಲಿದ್ದರು.
ಇದಕ್ಕೆ ಮೂರನೆಯ ಉದಾಹರಣೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ. ವಿಧಾನಸಭೆಯ ಅವಧಿ ಮುಗಿಯವರೆಗೂ ಮುಖ್ಯಮಂತ್ರಿಯಾಗಿ ಉಳಿಯಬೇಕೆಂಬುದು ಅವರ ಕನಸು. ಈ ಬಾರಿ ಕೊನೆಗೂ ಮುಖ್ಯಮಂತ್ರಿಯಾಗಿರುವುದಕ್ಕೆ ಸಂತೋಷದಿಂದ ಬೀಗಬೇಕೋ, ಅಥವಾ ಅದರೊಂದಿಗೆ ಬಂದ ಸಮಸ್ಯೆ ಮತ್ತು ಜವಾಬ್ದಾರಿಗಳ ಭಾರದಿಂದ ಕುಗ್ಗಬೇಕೋ ಎನ್ನುವ ಸಂದಿಗ್ಧತೆಯಲ್ಲಿ ಯಡಿಯೂರಪ್ಪ ಇದ್ದಾರೆ. ಪ್ರಸಕ್ತ ವಿಧಾನ ಸಭೆಯ ಉಳಿದ ಅವಧಿಯವರೆಗಾದರೂ ಅವರು ಮುಂದುವರಿಯಬಹುದು ಎನ್ನುವದನ್ನು ಯಾರೂ ಧೈರ್ಯದಿಂದ ಹೇಳುತ್ತಿಲ್ಲ. ಮೇಲಾಗಿ, ಯಾವುದಾದರೂ ಕಾರಣಕ್ಕಾಗಿ ಸಿಕ್ಕ ಅಧಿಕಾರ ಕಳೆದುಕೊಳ್ಳುವುದು ಅವರ ಜಾಯಮಾನವಾಗಿದೆ.
ಹಲವು ದಶಕಗಳ ಕಾಲ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದ ಯಡಿಯೂರಪ್ಪನವರು ಅಧಿಕಾರದ ರುಚಿ ನೋಡಿದ್ದೇ 2006 ರಲ್ಲಿ. ಅಂದು ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ಯಡಿಯೂರಪ್ಪ ಉಪಮುಖ್ಯಮಂತ್ರಿಯಾದರು. ಇಪ್ಪತ್ತು ತಿಂಗಳ ನಂತರ ಎರಡು ಪಕ್ಷಗಳ ನಡುವೆ ಆದ ಒಪ್ಪಂದದ ಪ್ರಕಾರ ಅವರು ಮುಖ್ಯಮಂತ್ರಿಯಾಗಬೇಕಾಗಿತ್ತು. ಅದು ಆಗಲಿಲ್ಲ. ಏಕೆಂದರೆ ಒಪ್ಪಂದದ ಪ್ರಕಾರ ಅಧಿಕಾರ ಹಸ್ತಾಂತರ ಮಾಡಲು ಕುಮಾರಸ್ವಾಮಿ ನಿರಾಕರಿಸಿದ್ದರು.
ಅವರು ಮೊದಲ ಬಾರಿ ಮುಖ್ಯಮಂತ್ರಿಯಾದುದು 2008ರಲ್ಲಿ. ಹೊಸ ಚುನಾವಣೆಯಲ್ಲಿ ಬಿಜೆಪಿ ಗೆದ್ದರೂ, ಬಹುಮತದ ಕೊರತೆಯಿಂದ ಪಕ್ಷೇತರರ ಬೆಂಬಲ ಪಡೆದು ಸರಕಾರ ರಚಿಸಿದರು. ಕಮಲ ಕಾರ್ಯಚರಣೆಯ ಮೂಲಕ ವಿರೋಧಿ ಪಕ್ಷದ ಶಾಸಕರನ್ನು ಸೆಳೆದು, ಅವರಿಂದ ರಾಜಿನಾಮೆ ಕೊಡಿಸಿ, ಉಪಚುನಾವಣೆಯಲ್ಲಿ ಅವರನ್ನು ಬಿಜೆಪಿಯಿಂದ ಗೆಲ್ಲಿಸಿ, ಸ್ಥಿರತೆ ಸಾಧಿಸಿದರು. ಅವರ ಖ್ಯಾತಿ ಉತ್ತುಂಗ ಮಟ್ಟಕ್ಕೆ ಏರಿ ಅವರು ಕರ್ನಾಟಕ ರಾಜಕೀಯದ ಪ್ರಶ್ನಾತೀತ ನಾಯಕರೆಂದು ಪರಿಗಣಿಸಲಾಗಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಮಣ್ಣು ಕಚ್ಚಿದ್ದವು. ಅವರು ಅದೇ ರೀತಿಯಲ್ಲಿ ಮುಂದುವರಿದರೆ ಮುಂದಿನ ದಶಕಗಳಲ್ಲಿ, ಬಿಜೆಪಿ ಬಿಟ್ಟರೆ ಇತರ ಯಾವ ಪಕ್ಷಗಳೂ ಮರಳಿ ಅಧಿಕಾರಕ್ಕೆ ಬರುವ ಪರಿಸ್ಥಿತಿ ಇರುತ್ತಿರಲಿಲ್ಲ. ಆದರೂ ಅವರು ಪೂರ್ಣಾವಧಿಯವರೆಗೆ ಸರಕಾರ ಮಾಡಲಿಲ್ಲ. ತಮ್ಮಲ್ಲಿಯ ಒಳಜಗಳದಿಂದ, ಭ್ರಷ್ಟಾಚಾರದಿಂದ ಅವರು ತಮ್ಮ ಸ್ಥಾನ ಕಳೆದುಕೊಂಡರು, ಸೆರೆಮನೆ ವಾಸವನ್ನೂ ಅನುಭವಿಸಿದರು. ಸಿಟ್ಟಿನಿಂದ ಪಕ್ಷದಿಂದ ಹೊರ ಹೋಗಿ ಬೇರೆ ಪಕ್ಷ ಕಟ್ಟಿ ತಾವೂ ಸೋಲು ಅನುಭವಿಸಿದರು ತಮ್ಮ ಮಾತೃಪಕ್ಷವನ್ನೂ ಸೋಲಿಸಿದರು. 2019 ಚುನಾವಣೆಯಲ್ಲಿ ಬಹುಮತ ಪಡೆಯಲಾಗದೆ ಹೊರಿಗಿನವರ ಬೆಂಬಲ ದೊರೆಯುವುದೆಂಬ ಭರವಸೆಯಿಂದ ಮುಖ್ಯಮಂತ್ರಿಗಳಾದ ಅವರು ಎರಡೇ ದಿನಗಳಲ್ಲಿ ರಾಜಿನಾಮೆ ಕೊಡಬೇಕಾಯಿತು.

ಇದೀಗ ಮತ್ತೆ ಮೂರನೆಯ ಬಾರಿ ಮುಖ್ಯಮಂತ್ರಿಗಳಾಗಿದ್ದಾರೆ. ಎಷ್ಟು ದಿವಸ ಅವರು ಅಧಿಕಾರದಲ್ಲಿ ಇರಬಹುದು ಎನ್ನುವುದಕ್ಕೆ ಉತ್ತರ ಅವರು ಯಾವ ರೀತಿಯಲ್ಲಿ ತಮ್ಮ ಸುತ್ತಲಿರುವ ಸವಾಲುಗಳನ್ನು ಎದುರಿಸುತ್ತಾರೆ ಎನ್ನುವದರ ಮೇಲೆ ಇದೆ.
ಆದರೆ ವಾತಾವರಣ ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ಅನುಕೂಲಕರವಾಗಿ ಇಲ್ಲ. ರಾಜಕೀಯವಾಗಿ ಹೇಳಬೇಕೆಂದರೆ, ಯಡಿಯೂರಪ್ಪನವರು ಎರಡೆರೆಡು ರಂಗಗಳಲ್ಲಿ, ಅಂದರೆ ಆಂತರಿಕವಾಗಿ ಕರ್ನಾಟಕದಲ್ಲಿ, ಮತ್ತು ಬಾಹ್ಯವಾಗಿ ಹೊಸದಿಲ್ಲಿಯಲ್ಲಿ ತಮ್ಮ ವರಿಷ್ಠರೊಂದಿಗೆ ಏಗಬೇಕಾಗಿದೆ.
ಇತ್ತಿಚಿನ ಸಂಪುಟ ವಿಸ್ತರಣೆ ಕಾರ್ಯ ಯಡಿಯೂರಪ್ಪನವರ ಜವಾಬ್ದಾರಿ ಕಡಿಮೆ ಮಾಡುವ ಬದಲು ಹೊಸ ತಲೆನೋವು ತಂದಿದೆ. ಸಂಪುಟದಲ್ಲಿ ಸ್ಥಾನ ಸಿಗದಿದ್ದವರು ಕುದಿಯುತ್ತಿದ್ದಾರೆ. ಕೆಲವರಂತೂ ಬಂಡಾಯದ ಮಾತು ಆಡುತ್ತಿದ್ದಾರೆ. ಸಂಪುಟ ಸೇರಿದವರು ಖಾತೆ ಹಂಚಿಕೆಯ ಮಾತು ಆಡುತ್ತಿದ್ದಾರೆ. ಇದಕ್ಕೆ ಕಳಶವಿಟ್ಟಂತೆ ಸಂಪುಟದೊಳಗೆ ಬರಲು ಹವಣಿಸುತ್ತಿರುವ “ಅತೃಪ್ತ” ಶಾಸಕರು ತಮಗೆ ಆಶ್ವಾಸನೆ ಕೊಟ್ಟಂತೆ ಪ್ರಮುಖ ಶಾಖೆಗಳ ಮೇಲೆ ಕಣ್ಣು ಇಟ್ಟಿದ್ದಾರೆ. ಆಶ್ವಾಸನೆ ಈಡೇರಿಸದಿದ್ದರೆ, ಆಗುವ ಪರಿಣಾಮಗಳ ಬಗ್ಗೆ ಸೂಚ್ಯವಾಗಿ ಬೆದರಿಕೆಯನ್ನು ಹಾಕಿದ್ದಾರೆ. ಇದು ಏಕೆಂದರೆ, ಅವರ ಬೆಂಬಲವಿಲ್ಲದೇ ಯಡಿಯೂರಪ್ಪ ಸರಕಾರಕ್ಕೆ ವಿಧಾನಸಭೆಯಲ್ಲಿ ಬಹುಮತ ಸಿಗುವದಿಲ್ಲ.
ಎರಡನೆಯದಾಗಿ, ಹೊಸದಿಲ್ಲಿಯಲ್ಲಿ ಇರುವ ಬಿಜೆಪಿ ವರಿಷ್ಠ ಮಂಡಳಿ ಮೊದಲಿಗಿಂತ ಹೆಚ್ಚು ಬಲಿಷ್ಠವಾಗಿದೆ. ತನ್ನ ಶಕ್ತಿಯನ್ನು ಆಗಾಗ ಪ್ರದರ್ಶಿಸುತ್ತಲೇ ಇದೆ. ಯಾವ ರಾಜ್ಯ ಘಟಕಗಳು ಅವರಿಗೆ ಎದುರಾಡುವಂತಿಲ್ಲ. ಹಾಗಾಗಿ ಯಡಿಯೂರಪ್ಪನವರು ಮೊದಲಿನಂತೆ ವರಿಷ್ಠ ಮಂಡಳಿಯ ಮಾತಿಗೆ ವಿರುದ್ಧವಾಗಿ ಹೋಗುವಂತಿಲ್ಲ. ಮಂತ್ರಿಗಳ ಕಾರ್ಯವೈಖರಿಯ ಮೇಲೆಯೂ ವರಿಷ್ಠ ಮಂಡಳಿ ಕಣ್ಣು ಇಟ್ಟಿರುವುದರಿಂದ ಮುಖ್ಯಮಂತ್ರಿಗಳೂ, ಮಂತ್ರಿಗಳೂ ಹಿಂದಿನಂತೆ ಬೇಕಾಬಿಟ್ಟಿಯಾಗಿ ವರ್ತಿಸುವಂತಿಲ್ಲ. ಕರ್ನಾಟಕದಲ್ಲಿನ ಬಿಜೆಪಿಯ ಆಂತರಿಕ ಸಮಸ್ಯೆಗಳನ್ನು ಬಗೆಹರಿಸುವ ಹೊಣೆಯನ್ನೂ ಯಡಿಯೂರಪ್ಪನವರ ಮೇಲೆ ಹೊರಿಸಿದಂತಿದೆ. ಸಮಸ್ಯೆಗಳು ಪರಿಹಾರವಾಗದಿದ್ದರೆ, ವರಿಷ್ಠ ಮಂಡಳಿ ಈ ವರ್ಷಾಂತ್ಯದಲ್ಲಿ ಮಹಾರಾಷ್ಟದ ಜೊತೆಗೆ ಕರ್ನಾಟಕದಲ್ಲಿಯೂ ಹೊಸ ಚುನಾವಣೆ ಮಾಡಿ, ಹೊಸ ಜನಾದೇಶವನ್ನು ಪಡೆಯಲು ಸಿದ್ದ ಎಂಬ ಇಂಗಿತವನ್ನು ಕೊಟ್ಟಿದ್ದಾರೆ ಎಂದು ಹೊಸದಿಲ್ಲಿಯಿಂದ ವರದಿಗಳು ಸೂಚಿಸಿವೆ.
ಇದಕ್ಕಿಂತ ಮಹತ್ವವಾದ ಸವಾಲು ಎಂದರೆ ಮಹಾಪೂರ ಹಾವಳಿಯ ಪ್ರಕರಣವನ್ನು ಸರಕಾರ ಹೇಗೆ ನಿಭಾಯಿಸಬಹುದು ಎನ್ನುವುದು. ಮಂತ್ರಿಮಂಡಳದ ರಚನೆ ಅದರಲ್ಲಿ ಯಾರ ಯಾರ ಹೆಸರು ಇರಬೇಕು ಎನ್ನುವ ಧಾವಂತದಲ್ಲಿ ಬಿಜೆಪಿ ಶಾಸಕರಿಗೆ ಮಹಾಪೂರದ ಹಾವಳಿಯ ಬಗ್ಗೆ ವಿಚಾರ ಮಾಡಲು ಸಮಯವೇ ಸಿಕ್ಕಿಲ್ಲ. ಅಧಿಕೃತ ವರದಿಗಳ ಪ್ರಕಾರ ಮತ್ತು ಕೆಲವು ಪ್ರತ್ಯಕ್ಷದರ್ಶಿಗಳ ಪ್ರಕಾರ, ಅಂದಾಜು ಮಾಡಲಾಗದಷ್ಟು ಹಾನಿ ಕರ್ನಾಟಕದಲ್ಲಿ ಆಗಿದೆ. ಸಂತ್ರಸ್ತ ಜನರ ಪರಿಸ್ಥಿತಿ ತುಂಬಾ ಕಳವಳ ತರುವಂತಹದಿದೆ. ಹಳ್ಳಿಗಳಲ್ಲಿ ಮನೆಗಳು ಬಿದ್ದಿವೆ, ಬೆಳೆ ಹಾಳಾಗಿದೆ. ನೀರಿನಿಂದ ಭೂಮಿಯ ಮೇಲ್ಮಮಣ್ಣು ಕೊಚ್ಚಿಕೊಂಡು ಹೋಗಿದೆ. ಸಂತ್ರಸ್ತರಿಗೆ ಜೀವನೋಪಾಯ ಕಲ್ಪಿಸಬೇಕಾಗಿದೆ. ಕುಡಿಯುವ ನೀರು ಒದಗಿಸಬೇಕಿದೆ ಮತ್ತು ಜನರ ಆರೋಗ್ಯ ರಕ್ಷಣೆಗೆ ಯುದ್ಧೋಪಾದಿಯಲ್ಲಿಕಾರ್ಯಕ್ರಮ ಬೇಕಿದೆ. ಕೊಚ್ಚಿಕೊಂಡು ಹೋದ ರಸ್ತೆ ಮತ್ತು ಸೇತುವೆಗಳ ಪುನರ್ ನಿರ್ಮಾಣ ಕಾರ್ಯ ಆಗಬೇಕು.
ನೂತನವಾಗಿ ಅಧಿಕಾರ ಸ್ವೀಕರಿಸಿದ ಮಂತ್ರಿಗಳು ಇನ್ನು ತಮ ತಮಗೆ ಯೋಜಿಸಲಾದ ಜಿಲ್ಲಾ ಉಸ್ತುವಾರಿ ಕಾರ್ಯವನ್ನು ಮಾಡಲು ಆರಂಭಿಸಬೇಕು. ಇವುಗಳಿಗೆ ಹಣ ಒದಗಿಸುವುದು ಕಷ್ಟದ ಕಾರ್ಯ. ಇದು ಮಾಡಲು ಸಾಧ್ಯವೇ? ಇದು ಆಗುವ ತನಕ ಯಡಿಯೂರಪ್ಪನವರು ಅಧಿಕಾರದಲ್ಲಿ ಇರುತ್ತಾರೆಯೇ. ಯಡಿಯೂರಪ್ಪನವರ ಒಂದು ದೌರ್ಬಲ್ಯವೆಂದರೆ, ಅವರು ಒಂಟಿ ಸಲಗದಂತೆ ಕೆಲಸ ಮಾಡುತ್ತಾರೆಯೇ ಹೊರತು ಇತರರ ಜೊತೆಗೆ, ಇತರರನ್ನು ಜೊತೆಗೆ ಕರೆದುಕೊಂಡು ಕೆಲಸ ಮಾಡುವುದು ಅವರಿಗೆ ತಿಳಿದಿಲ್ಲ. ಅವರಿಗೆ ಮಾತಿಗೊಮ್ಮೆ, ಅಗತ್ಯವಿರಲಿ, ಇಲ್ಲದಿರಲಿ “ಬೌಂಡರಿ” ಹೊಡೆಯುವ ಅಭ್ಯಾಸವಿದೆ. ಪೂರ್ತಿ ಅವಧಿಗೆ ಸರಕಾರ ನಡೆಸಲಾಗದ ಪಟ್ಟಿಯಲ್ಲಿ ಯಡಿಯೂರಪ್ಪ ಮತ್ತೆ ಸೇರುವರೆ? ಕಾದು ನೋಡಬೇಕಿದೆ.