ಪ್ರತಿಪಕ್ಷವಾಗಿರುವ ಬಿಜೆಪಿ ಕಳೆದ 14 ತಿಂಗಳಿನಿಂದ ಮೈತ್ರಿ ಸರ್ಕಾರಕ್ಕೆ ಕೊಟ್ಟ ಸತತ ಕಾಟಕ್ಕೆ ಈಗ ಕೊನೇ ಕ್ಷಣದಲ್ಲಿ ಮಿತ್ರಪಕ್ಷಗಳು ಸೇರಿ ತಿರುಗೇಟು ನೀಡುತ್ತಿವೆಯೇ? ಆ ಮೂಲಕ ಸಿಟ್ಟು ಶಮನ ಮಾಡಿಕೊಳ್ಳಲು ಪ್ರಶ್ನಿಸುತ್ತಿವೆಯೇ? ಇನ್ನೂ ಒಂದೆರಡು ದಿನ ತಳ್ಳಾಡಿ ಅಧಿಕಾರಕ್ಕಾಗಿ ಚಡಪಡಿಸುತ್ತಿರುವ ಬಿಜೆಪಿಯಲ್ಲಿ ಆತಂಕ ಸೃಷ್ಟಿಸುವ ಕೆಲಸ ಮಾಡುತ್ತಿವೆಯೇ?
ವಿಶ್ವಾಸಮತ ಯಾಚನೆ ವಿಚಾರದಲ್ಲಿ ಆಡಳಿತಾರೂಢ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಗುರುವಾರ ಸದನದಲ್ಲಿ ನಡೆದುಕೊಂಡ ರೀತಿ ನೋಡಿದರೆ ಈ ಪ್ರಶ್ನೆಗಳು ಮೂಡುವುದು ಸಹಜ.
ಸದ್ಯದ ಪರಿಸ್ಥಿತಿಯಲ್ಲಿ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ಉಳಿಸಿಕೊಳ್ಳುವುದಂತೂ ಅಸಾಧ್ಯದ ಮಾತು. ಹಾಗೆಂದು ಸುಮ್ಮನೆ ಅಧಿಕಾರದಿಂದ ಇಳಿದು ಹೋದರೆ ಸರ್ಕಾರ ಉರುಳಲು ಕಾರಣವಾದ ಬಿಜೆಪಿ ಮೇಲೆ ಸಿಟ್ಟು ಇಳಿಯುವುದಿಲ್ಲ, ಸೇಡೂ ತೀರುವುದಿಲ್ಲ. ಅದರ ಬದಲು ನಿಯಮಗಳ ನೆಪ, ಸಂವಿಧಾನದ 10ನೇ ಶೆಡ್ಯೂಲ್ ನ ಪ್ರಶ್ನೆಗಳನ್ನು ಎತ್ತಿಕೊಂಡು ವಿಶ್ವಾಸಮತ ಯಾಚನೆ ಕಲಾಪವನ್ನೇ ಮುಂದೂಡುವಲ್ಲಿ ಒಂದು ದಿನದ ಮಟ್ಟಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಯಶಸ್ವಿಯಾಗಿದೆ. ಆ ಮೂಲಕ, ಇನ್ನೇನು ಸರ್ಕಾರ ಉರುಳುತ್ತದೆ. ನಾವು ಅಧಿಕಾರ ಹಿಡಿದಂತೆಯೇ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಬಿಜೆಪಿಗೆ ಕಾಟ ಕೊಟ್ಟಿದೆ. ಅಷ್ಟೇ ಅಲ್ಲ, ವಿಶ್ವಾಸಮತ ಸಾಬೀತಿಗೆ ಕಾಲಾವಕಾಶ ಸಿಕ್ಕಿದ್ದರಿಂದ ರಾಜಿನಾಮೆ ನೀಡಿದ ಶಾಸಕರ ವಿಚಾರದಲ್ಲಿ ಇನ್ನೂ ಆಟವಾಡಬಹುದು (ಒತ್ತಡಕ್ಕೆ ಮಣಿದು ರಾಮಲಿಂಗಾರೆಡ್ಡಿ ರಾಜಿನಾಮೆ ವಾಪಸ್ ಪಡೆದಂತೆ ಇನ್ನೂ ಮೂರ್ನಾಲ್ಕು ಮಂದಿಯನ್ನು ಮನವೊಲಿಸಬಹುದು) ಎಂಬ ಸಂದೇಶ ನೀಡಿ ಬಿಜೆಪಿಯನ್ನು ಆತಂಕಕ್ಕೆ ತಳ್ಳುವಲ್ಲಿಯೂ ಯಶಸ್ವಿಯಾಗಿವೆ.
ಮೊದಲೇ ನಿಗದಿಯಾದಂತೆ ಸದನದಲ್ಲಿ ವಿಶ್ವಾಸಮತ ಪ್ರಸ್ತಾಪ ಮಂಡಿಸಿದ ಮುಖ್ಯಮಂತ್ರಿಗಳು ಮಾತು ಆರಂಭಿಸುವ ಮುನ್ನವೇ ಕ್ರಿಯಾಲೋಪ ಎತ್ತಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ರಾಜಿನಾಮೆ ನೀಡಿರುವ 15 ಶಾಸಕರು ಪ್ರಸಕ್ತ ಅಧಿವೇಶನದಲ್ಲಿ ಭಾಗವಹಿಸುವಂತೆ ಬಲವಂತ ಮಾಡುವಂತಿಲ್ಲ ಎಂದು ಹೇಳಿದೆ. ಆದರೆ, ಶಾಸಕರು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ನಾನು ಪ್ರತಿವಾದಿ ಅಲ್ಲ. ಶಾಸಕಾಂಗ ಪಕ್ಷದ ನಾಯಕನಾಗಿ ಪಕ್ಷದ ಶಾಸಕರಿಗೆ ವಿಪ್ ನೀಡುವ ಅಧಿಕಾರವನ್ನು ಸಂವಿಧಾನದ 10ನೇ ಶೆಡ್ಯೂಲ್ ನನಗೆ ನೀಡಿದೆ. ಸುಪ್ರೀಂ ಕೋರ್ಟ್ ಆದೇಶದಲ್ಲಿ ನಾನು ಪ್ರತಿವಾದಿ ಅಲ್ಲದೇ ಇರುವಾಗ ವಿಪ್ ನೀಡುವ ನನ್ನ ಅಧಿಕಾರದ ಕಥೆ ಏನು ಎಂದು ಪ್ರಶಿಸಿದರು. ಇದು ವಿಶ್ವಾಸಮತ ಯಾಚನೆ ಕಲಾಪದ ದಿಕ್ಕನ್ನೇ ಬದಲಿಸಿತು. ಹೇಗಾದರೂ ಮಾಡಿ ವಿಶ್ವಾಸಮತ ಯಾಚನೆ ಮುಂದೂಡಿ ಅತೃಪ್ತ ಶಾಸಕರನ್ನು ಮನವೊಲಿಸಿ ಮತ್ತೆ ಕರೆತರಲು ಸಮಯಾವಕಾಶಕ್ಕಾಗಿ ಒದ್ದಾಡುತ್ತಿದ್ದ ಆಡಳಿತ ಪಕ್ಷಗಳಿಗೆ ಸಿದ್ದರಾಮಯ್ಯ ಅವರು ಎತ್ತಿದ ಕ್ರಿಯಾಲೋಪವೇ ಒಂದು ಅಸ್ತ್ರವಾಗಿ ಇಡೀ ದಿನ ವಾಗ್ವಾದ, ಜಗಳಗಳೊಂದಿಗೆ ಕಲಾಪ ಮುಂದೂಡುವಂತೆ ನೋಡಿಕೊಂಡರು.

ಇದರಿಂದ ಆಗಿದ್ದೇನೆಂದರೆ, ಕೋರ್ಟ್ ತೀರ್ಪನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸಿ ಅದರಿಂದ ಹೇಗೆ ಲಾಭ ಪಡೆದುಕೊಳ್ಳಲು ಪ್ರಯತ್ನಿಸಬಹುದು ಎಂಬುದು ಬಹಿರಂಗವಾಯಿತು. ಏಕೆಂದರೆ…
1. ಸಿದ್ದರಾಮಯ್ಯ ಅವರೇ ಹೇಳಿದಂತೆ ಶಾಸಕರ ರಾಜಿನಾಮೆ ಕುರಿತ ಸುಪ್ರೀಂ ಕೋರ್ಟ್ ಪ್ರಕರಣದಲ್ಲಿ ಅವರು ಪ್ರತಿವಾದಿಯಲ್ಲ. ಪ್ರತಿವಾದಿಯಾಗಿದ್ದವರು ಸ್ಪೀಕರ್ ಮತ್ತು ಮುಖ್ಯಮಂತ್ರಿ. ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಅವರಿಬ್ಬರಿಗೆ ಅನ್ವಯವಾಗುತ್ತದೆ. ಮೇಲಾಗಿ, ಕೋರ್ಟ್, ಶಾಸಕರಿಗೆ ಸದನಕ್ಕೆ ಬರುವಂತೆ ಬಲವಂತ ಮಾಡಬೇಡಿ ಎಂದು ಹೇಳಿದೆಯಷ್ಟೇ ಹೊರತು ವಿಪ್ ಜಾರಿ ಮಾಡಬೇಡಿ ಎಂದು ಎಲ್ಲೂ ಹೇಳಿಲ್ಲ. ಹೀಗಾಗಿ ತಾವು ಪ್ರತಿವಾದಿಯೇ ಅಲ್ಲ ಎನ್ನುವ ಸಿದ್ದರಾಮಯ್ಯ ಅವರಿಗೆ ವಿಪ್ ಜಾರಿ ಮಾಡಲು ಯಾವುದೇ ಅಡ್ಡಿ ಇರಲಿಲ್ಲ.
2. ಇನ್ನೊಂದು ರೀತಿಯಲ್ಲಿ ವಿಶ್ಲೇಷಿಸುವುದಾದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇವಲ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಮಾತ್ರವಲ್ಲ, ಸಭಾನಾಯಕರೂ ಹೌದು. ಸಭಾನಾಯಕ ಇಡೀ ಸದನಕ್ಕೆ ನಾಯಕ. ಶಾಸಕಾಂಗ ಪಕ್ಷದ ನಾಯಕರು ಆ ಪಕ್ಷದ ನಾಯಕರಾದರೂ ಸಭಾನಾಯಕರಿಗೆ ನೀಡಿದ ಆದೇಶ ಸದನದ ಎಲ್ಲರಿಗೂ ಅನ್ವಯವಾಗುತ್ತದೆ. ಹೀಗಿರುವಾಗ ಸಿದ್ದರಾಮಯ್ಯ ಅವರು ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಸ್ತಾಪಿಸುವ ಅಗತ್ಯ ಇರಲಿಲ್ಲ.
3. ಮೂರನೇ ವಾದವೆಂದರೆ, ಸುಪ್ರೀಂ ಕೋರ್ಟ್ ಆದೇಶ ಎಂದರೆ ಅದು ದೇಶದ ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ವಿಪ್ ಜಾರಿ ಮಾಡಿದರೆ ತಮಗೆ ತೊಂದರೆಯಾಗುತ್ತದೆ ಎಂದು ಅತೃಪ್ತ ಶಾಸಕರು ಮಂಡಿಸಿದ ವಾದ ಆಧರಿಸಿಯೇ ಶಾಸಕರಿಗೆ ರಕ್ಷಣೆ ಒದಗಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅಂದರೆ, ಶಾಸಕರಿಗೆ ಬಲವಂತ ಮಾಡಬಾರದು ಎಂಬ ಆದೇಶ ಸಿದ್ದರಾಮಯ್ಯ ಅವರಿಗೂ (ಪ್ರತಿವಾದಿಯಲ್ಲದೇ ಇದ್ದರೂ ವಿಪ್ ನೀಡಿದರೆ ಅದು ಬಲವಂತ ಮಾಡಿದಂತೆ) ಅನ್ವಯವಾಗುತ್ತದೆ.
ಆದರೆ, ಸ್ಪೀಕರ್ ಆದಿಯಾಗಿ ಸದನದಲ್ಲಿ ಯಾರೂ ಈ ಅಂಶಗಳನ್ನು ಪ್ರಸ್ತಾಪಿಸಲೇ ಇಲ್ಲ. ಶಾಸಕಾಂಗದ ವ್ಯಾಪ್ತಿಯಲ್ಲಿ ನ್ಯಾಯಾಂಗ ಮಧ್ಯಪ್ರವೇಶಿಸುವುದಕ್ಕಷ್ಟೇ ಚರ್ಚೆ ಸೀಮಿತವಾಯಿತು. ಈ ಬಗ್ಗೆ ವಾದ-ಪ್ರತಿವಾದ, ಗದ್ದಲ, ಕಾನೂನು ಸಲಹೆ… ಹೀಗೆ ನಾನಾ ಪ್ರಕ್ರಿಯೆಗಳು ನಡೆದವು. ಸುಪ್ರೀಂ ಕೋರ್ಟ್ ನ ಈ ಆದೇಶದಿಂದ ಶಾಸಕಾಂಗದ ಅಧಿಕಾರ ಮೊಟಕುಗೊಳಿಸುವಂತಿದೆ. ಶಾಸಕಾಂಗ ಪಕ್ಷದ ನಾಯಕನಿಗೆ ಸಂವಿದಾನದ 10ನೇ ಷೆಡ್ಯೂಲ್ ನಲ್ಲಿ ನೀಡಿರುವ ಅಧಿಕಾರವನ್ನು ಕಿತ್ತುಕೊಂಡಿದೆ ಎಂದೆಲ್ಲಾ ವಿಶ್ಲೇಷಿಸಿ ಸುಪ್ರೀಂ ಕೋರ್ಟ್ ನಿಂದಲೇ ವಿವರಣೆ ಕೇಳುವ ಬಗ್ಗೆ ಚರ್ಚೆಯಾಯಿತು (ಇನ್ನೂ ಅಂತಿಮ ನಿರ್ಧಾರ ಆಗಿಲ್ಲ. ಇನ್ನಷ್ಟು ಕಾನೂನು ಸಲಹೆ ಪಡೆದು ನಾಳೆ ಬೆಳಗ್ಗೆ ನಿರ್ಧರಿಸಬಹುದು). ಇದೆಲ್ಲವನ್ನೂ ಗಮನಿಸಿದಾಗ ಸದನದಲ್ಲಿ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡವಳಿಕೆ, ಮೈತ್ರಿ ಸರ್ಕಾರಕ್ಕೆ ಬಿಜೆಪಿಯವರು 14 ತಿಂಗಳು ಕೊಟ್ಟ ಕಾಟಕ್ಕೆ ಸೇಡು ತೀರಿಸಿಕೊಳ್ಳುವ ಪ್ರಯತ್ನ ಎಂಬಂತೆ ಕಂಡುಬಂತು.