ಹೌದು, ಕೊನೆಗೂ ಮೈತ್ರಿ ಸರ್ಕಾರ ಉರುಳಿ ಕಳೆದ 14 ತಿಂಗಳಿನಿಂದ ನಡೆಯುತ್ತಿದ್ದ ರಾಜಕೀಯ ನಾಟಕದ ಮೊದಲ ಅಂಕಕ್ಕೆ ತೆರೆ ಬಿದ್ದಿದೆ. ಇನ್ನಿರುವುದು ಅಧಿಕಾರಕ್ಕೆ ಬರಲಿರುವ ಬಿಜೆಪಿಯ ‘ಕರ್-ನಾಟಕ’. ಶಾಸಕರಿಂದ ರಾಜಿನಾಮೆ ಕೊಡಿಸಿ ಮೈತ್ರಿ ಸರ್ಕಾರ ಉರುಳಿಸಿದ ಬಿಜೆಪಿ ಮುಂದೆ ಅಂತಹದ್ದೇ ಸಮಸ್ಯೆ ಎದುರಿಸಬೇಕಾಗಿ ಬರಬಹುದು. ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುತ್ತೇನೆ ಎಂದು ಹೇಳಿಕೊಳ್ಳಲು ಬಿಜೆಪಿಯೇನೂ ಸ್ಪಷ್ಟ ಬಹುಮತ ಹೊಂದಿಲ್ಲ. ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಿರುವ ಆ ಪಕ್ಷದಲ್ಲೂ ಸಚಿವ ಸ್ಥಾನ ಸೇರಿದಂತೆ ಸ್ಥಾನಮಾನಕ್ಕಾಗಿ ಪೈಪೋಟಿ ನಡೆಯುವುದು ಖಂಡಿತ. ಹೀಗಾಗಿ ಇದುವರೆಗೆ ಮೈತ್ರಿ ಸರ್ಕಾರ ಯಾವ ರೀತಿ ಈ ಅಧಿಕಾರದ ರಾಜಕಾರಣಕ್ಕೆ ಬಳಲಿತ್ತೋ ಅದೇ ರೀತಿ ಬಿಜೆಪಿಯೂ ಬಳಲಬೇಕಾದ ದಿನ ದೂರವಿಲ್ಲ.
ಒಂದೆಡೆ ಪಕ್ಷ ಕಟ್ಟಿ ಬೆಳೆಸಿ ಅದರೊಂದಿಗೆ ತಾವೂ ಬೆಳೆದು ಅಧಿಕಾರಕ್ಕೆ ಬರುವಂತೆ ಮಾಡಿದವರಿಗೆ ಸರ್ಕಾರ ರಚನೆಯಲ್ಲಿ ಸ್ಥಾನಮಾನ ಕೊಡಲೇ ಬೇಕಾಗುತ್ತದೆ. ಇನ್ನೊಂದೆಡೆ ಅಧಿಕಾರಕ್ಕಾಗಿ ಒಂದು ಸರ್ಕಾರವನ್ನು ಉರುಳಿಸಿ ಬಿಜೆಪಿ ಸೇರಿದವರಿಗೆ ಸ್ಥಾನಮಾನ ನೀಡಲೇಬೇಕಾದ ಅನಿವಾರ್ಯತೆ. ಈ ಎರಡರ ಮಧ್ಯೆ ಸಿಲುಕಿ ಬಿಜೆಪಿ ಸರ್ಕಾರವೂ ಇಕ್ಕಟ್ಟಿಗೆ ಸಿಲುಕಿ ಅಧಿಕಾರ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಉದ್ಭವವಾದರೆ ಅದು ಅಚ್ಚರಿಯಲ್ಲ.
ರಾಜ್ಯದ ರಾಜಕೀಯ ಇತಿಹಾಸವೇ ಅದನ್ನು ಹೇಳುತ್ತದೆ. ಅದಕ್ಕೆ ಹೆಚ್ಚು ದೂರ ಹೋಗಬೇಕಾಗಿಯೂ ಇಲ್ಲ. 2008ರಲ್ಲಿ 110 ಸ್ಥಾನಗಳೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಎದುರಿಸಿದ ಸವಾಲುಗಳೇ ಇದಕ್ಕೆ ಸಾಕ್ಷಿ. ಐವರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಅವರಿಗೆ ಸಚಿವ ಸ್ಥಾನ ನೀಡಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿಜೆಪಿ, ನಂತರದಲ್ಲಿ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಂದ ರಾಜಿನಾಮೆ ಕೊಡಿಸಿ ಅವರನ್ನು ಗೆಲ್ಲಿಸಿ ಸ್ಥಾನಮಾನ ನೀಡಿತು.
ಇದಕ್ಕೆ ಸಹಕರಿಸಿದ ಬಳ್ಳಾರಿ ಧಣಿಗಳಿಗೆ ಬೇಕಾದ ಸ್ವಾತಂತ್ರ್ಯ ನೀಡಿದ ಪರಿಣಾಮ ಅಕ್ರಮ ಗಣಿಗಾರಿಕೆಯಂತಹ ಬೃಹತ್ ಅವ್ಯವಹಾರಗಳು ನಡೆಯಿತು. ಡಿನೋಟಿಫಿಕೇಷನ್ ಪ್ರಕರಣದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಲ್ಲದೆ ಜೈಲಿಗೆ ಹೋಗಬೇಕಾಯಿತು. ನಂತರ ಕಾನೂನು ಹೋರಾಟದಲ್ಲಿ ಯಡಿಯೂರಪ್ಪ ಅವರಿಗೆ ಜಯ ಸಿಕ್ಕಿರಬಹುದು. ಆದರೆ, ಅಧಿಕಾರಕ್ಕಾಗಿ ಆಪರೇಷನ್ ನಡೆಸಿದ ತಪ್ಪಿಗೆ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು. ಅಧಿಕಾರ ಉಳಿಸಿಕೊಳ್ಳಲು ಪಕ್ಷ ಮೂರು ಮುಖ್ಯಮಂತ್ರಿಗಳನ್ನು ಕಾಣಬೇಕಾಯಿತು. ನಂತರದಲ್ಲಿ ಬಿಜೆಪಿ ಒಡೆದು ಹೋಳಾಯಿತು. ಯಾವ ಅಧಿಕಾರಕ್ಕಾಗಿ ಬಿಜೆಪಿಗೆ ಬಂದರೋ ಅವರಲ್ಲಿ ಬಹುತೇಕರು ಮೂಲ ಪಕ್ಷಕ್ಕೆ ವಾಪಸಾದರು. ನಂತರದ ಚುನಾವಣೆಯಲ್ಲಿ (2013) ಬಿಜೆಪಿ ಹೀನಾಯವಾಗಿ ಸೋಲಬೇಕಾಯಿತು. ಬಿಜೆಪಿ ತೊರೆದು ಯಡಿಯೂರಪ್ಪ ಕೆಜೆಪಿ ಕಟ್ಟಿದರೂ ದಯನೀಯವಾಗಿ ಸೋತು ಮತ್ತೆ ಬಿಜೆಪಿಯನ್ನೇ ಕೈಹಿಡಿಯಬೇಕಾಗಿ ಬಂತು.
ಈ ಮಧ್ಯೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಭಾವನಾತ್ಮಕವಾಗಿ ಜನವಿರೋಧಿ ನಿಲುವು ತೆಳೆದ ಪರಿಣಾಮ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆಗಲೂ ಆಪರೇಷನ್ ಕಮಲದ ಮೂಲಕ ಸರ್ಕಾರ ರಚಿಸುವ ಪ್ರಯತ್ನ ನಡೆಯಿತಾದರೂ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ಕಾರಣ ಆಪರೇಷನ್ ಸಾಧ್ಯವಾಗದೆ ಕೆಲವೇ ದಿನಗಳಲ್ಲಿ ಯಡಿಯೂರಪ್ಪ ಮತ್ತೊಮ್ಮೆ ಮಾಜಿ ಮುಖ್ಯಮಂತ್ರಿಯಾಗಬೇಕಾಯಿತು. ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು.
ಹಾಗೆಂದು ಅವರಿಗೂ ಅಧಿಕಾರ ಎಂಬುದು ಹೂವಿನ ಹಾಸಿಗೆಯಾಗಿರಲಿಲ್ಲ. ಸರ್ಕಾರ ರಚನೆಯಾದ ದಿನದಿಂದಲೂ ಅಭದ್ರತೆಯಲ್ಲೇ ಕಾಲ ಕಳೆಯುವಂತಾಯಿತು. ಯಾವಾಗ ಶಾಸಕರು ಪಕ್ಷ, ಸಿದ್ಧಾಂತ, ಜನಾಭಿಪ್ರಾಯ ಬಿಟ್ಟು ಅಧಿಕಾರದ ಹಿಂದೆ ಬಿದ್ದರೋ ಆಗ ಇದೆಲ್ಲಾ ಸಾಮಾನ್ಯ. ಸರ್ಕಾರದ ಆಯಸ್ಸು ಎಷ್ಟು ದಿನ ಎಂದು ಎಣಿಸುತ್ತಲೇ 14 ತಿಂಗಳು ಕಾಲ ತಳ್ಳಬೇಕಾಯಿತು. ಅತೃಪ್ತರ ಗುಂಪನ್ನು ಒಡೆದು ಹಾಗೋ ಹೀಗೋ ಸರ್ಕಾರ ಉರುಳುವುದನ್ನು ಮುಂದೂಡಿಕೊಂಡು ಬಂದರೇ ಹೊರತು ಸಮಸ್ಯೆ ಬಗೆಹರಿಸಲು ಸಾಧ್ಯವಾಗಲಿಲ್ಲ. ಉಳಿಸಿಕೊಳ್ಳಲು ಸಾಕಷ್ಟು ಕಸರತ್ತು ನಡೆಯಿತಾದರೂ ಅಂತಿಮವಾಗಿ ಸರ್ಕಾರ ಉರುಳಿಬಿತ್ತು. ಆಪರೇಷನ್ ಕಮಲ ಯಶಸ್ವಿಯಾಗಿ ಮತ್ತೆ ಬಿಜೆಪಿಗೆ ಅಧಿಕಾರ ರಚಿಸುವ ಅವಕಾಶ ಸಿಕ್ಕಿತು.
ಇದಕ್ಕೆ ಕಾರಣವಾಗಿದ್ದು ಶಾಸಕರ ರಾಜಿನಾಮೆ. ಮೈತ್ರಿ ಸರ್ಕಾರದ ಕಾರ್ಯವೈಖರಿಯಿಂದ ಬೇಸತ್ತು ನಾವು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇವೆ ಎಂದು ಆ ಶಾಸಕರು ಎಷ್ಟೇ ಹೇಳಿದರೂ ಅದರ ಹಿಂದೆ ಆಪರೇಷನ್ ಕಮಲ ಇರುವುದು ಸುಳ್ಳಲ್ಲ. ರಾಜಿನಾಮೆ ನೀಡಿದ ಶಾಸಕರು ತಮ್ಮ ರಾಜಿನಾಮೆ ಅಂಗೀಕಾರವಾದರೆ ಅಥವಾ ಅನರ್ಹಗೊಂಡರೆ ಬಿಜೆಪಿಗೆ ಸೇರುವುದು ಖಂಡಿತ. ಹಾಗೆ ಬಿಜೆಪಿಗೆ ಸೇರಿ ಮತ್ತೆ ಗೆದ್ದು ಬಂದವರಿಗೆ ಅಧಿಕಾರ ಕೊಡಲೇ ಬೇಕು. ಇಲ್ಲದಿದ್ದರೆ ಮತ್ತೆ ಅವರು ಸರ್ಕಾರ ಪತನಕ್ಕೆ ಪ್ರಯತ್ನ ಆರಂಭಿಸುತ್ತಾರೆ. ಏಕೆಂದರೆ, ಪ್ರಸ್ತುತ ರಾಜಿನಾಮೆ ನೀಡಿದ ಶಾಸಕರ ಪೈಕಿ ರಮೇಶ್ ಜಾರಕಿಹೊಳಿ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರೂ ಉಪಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಬಿನ್ನಮತ ಆರಂಭಿಸಿದವರು. ಅವರ ಬೆನ್ನಿಗೆ ನಿಂತಿದ್ದ ಇತರೆ ಶಾಸಕರು ಕೂಡ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದವರೆ. ಹೀಗಾಗಿ ಬಿಜೆಪಿಗೆ ಸೇರಿ ಶಾಸಕರಾಗಿ ಆಯ್ಕೆಯಾದ ಮೇಲೆ ಅಧಿಕಾರ ಸಿಗದೇ ಇದ್ದರೆ ಅವರು ಮತ್ತೆ ಸರ್ಕಾರ ಪತನಕ್ಕೆ ಮುಂದಾಗುವ ತಮ್ಮ ಚಾಳಿ ಬಿಡುವುದಿಲ್ಲ.
ಈ ಬಾರಿ ಬಿಜೆಪಿಗೆ ಇನ್ನೂ ಕಷ್ಟ
2008ರಲ್ಲಿ ಅಧಿಕಾರಕ್ಕೆ ಬಂದಾಗ ಆಪರೇಷನ್ ಕಮಲದ ಮೂಲಕ ಸರ್ಕಾರವನ್ನು ಭದ್ರ ಮಾಡಿಕೊಂಡಿದ್ದ ಬಿಜೆಪಿಗೆ ಈ ಬಾರಿ ಸರ್ಕಾರ ಉಳಿಸಿಕೊಳ್ಳುವುದು ಬಹಳ ಕಷ್ಟ. ಪಕ್ಷಾಂತರಿಗಳಿಗೆ ಮಣೆ ಹಾಕಿ ಪಕ್ಷದಲ್ಲೇ ಇದ್ದು ಗೆದ್ದು ಬಂದವರಿಗೆ ಅಸಮಾಧಾನವಾಗುವುದು ಸಹಜ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹಣವಂತರೇ (ಉದ್ಯಮ, ರಿಯಲ್ ಎಸ್ಟೇಟ್, ವ್ಯಾಪಾರ… ಹೀಗೆ ನಾನಾ ಮೂಲಗಳಿಂದ ಶ್ರೀಮಂತರಾದವರು) ಹೆಚ್ಚು. ಚುನಾವಣೆಯಲ್ಲಿ ಗೆದ್ದು ಬರಲು ಸಾಕಷ್ಟು ವೆಚ್ಚ ಮಾಡಿರುವ ಅವರು ಅದನ್ನು ವಾಪಸ್ ಪಡೆಯಲು ಅಧಿಕಾರ ಬಯಸುತ್ತಾರೆ. ಅದು ಸಿಗದೇ ಇದ್ದರೆ ಅವರಿಗೆ ಪಕ್ಷವೂ ಬೇಡ, ಸರ್ಕಾರವೂ ಬೇಡ. ಅಂತಹ ಅಸಮಾಧಾನ ಆಡಳಿತ ಪಕ್ಷದಲ್ಲಿ ಆರಂಭವಾದಾಗ ಅದರ ಎಲ್ಲಾ ಲಾಭ ಪಡೆಯಲು ಪ್ರತಿಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಸಿದ್ಧವಾಗಿರುತ್ತದೆ. ಅಧಿಕಾರಕ್ಕಾಗಿ ಶಾಸಕರಿಗೆ ಆಪರೇಷನ್’ ಯಾವ ರೀತಿ ಮಾಡಬೇಕು ಎಂಬುದಕ್ಕೆ ಬಿಜೆಪಿಯೇ ದಾರಿ ಹೇಳಿಕೊಟ್ಟಿದೆ. ಮೇಲಾಗಿ ತಮ್ಮ ಸರ್ಕಾರ ಉರುಳಿಸಿದ ಸಿಟ್ಟು ಬಿಜೆಪಿ ಮೇಲಿರುತ್ತದೆ. ಹೀಗಾಗಿ ಪ್ರತಿ ಹಂತದಲ್ಲೂ ಬಿಜೆಪಿ ಸರ್ಕಾರಕ್ಕೆ ಅಂತ್ಯ ಹಾಡಲು ತುದಿಗಾಲಲ್ಲಿ ನಿಲ್ಲುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಅಸಮಾಧಾನಿತ ಆಡಳಿತ ಪಕ್ಷದವರನ್ನು ಸೆಳೆದು ಮತ್ತೆ ಅಧಿಕಾರಕ್ಕೆ ಬರಲು ಕಾಯುತ್ತಿರುತ್ತಾರೆ. ತಮ್ಮ ಗುರಿ ಈಡೇರಿಸಿಕೊಳ್ಳಲು ಆಡಳಿತ ಪಕ್ಷಕ್ಕೆ ತೊಂದರೆ ನೀಡುತ್ತಲೇ ಇರುತ್ತಾರೆ. ಹೀಗಾಗಿ ಸದ್ಯ ಅಲ್ಪವಿರಾಮ ಬೀಳುತ್ತಿರುವ ರಾಜಕೀಯ ‘ಕರ್-ನಾಟಕ’ ಕೆಲ ದಿನಗಳ ನಂತರ ಮತ್ತೆ ಮುಂದುವರಿಯುವುದು ಸ್ಪಷ್ಟ.