ಮಲೆನಾಡಿನಲ್ಲಿ ಅಕೇಶಿಯಾ ವಿರುದ್ಧದ ಕೂಗು ಜನಾಂದೋಲನದ ತೀವ್ರತೆ ಪಡೆದುಕೊಂಡಿದೆ. ಅರಣ್ಯ ನಾಶ ಮತ್ತು ಪರಿಸರ ಹಾನಿಯಿಂದಾಗಿ ನೂರೆಂಟು ಸಮಸ್ಯೆಗಳಲ್ಲಿ ಸಿಲುಕಿರುವ ಮಲೆನಾಡಿಗರನ್ನು, ರಾಜ್ಯ ಬಿಜೆಪಿ ಸರ್ಕಾರದ ಪರಿಸರ ದ್ವಂಸ ನೀತಿ ರೊಚ್ಚಿಗೆಬ್ಬಿಸಿದೆ.
ಸಾಲು ಸಾಲು ಜಲಾಶಯಗಳು, ಗುತ್ತಿಗೆದಾರರ ಲಾಬಿಯ ಸಲ್ಲದ ಅಭಿವೃದ್ಧಿ ಯೋಜನೆಗಳು ಮತ್ತು ಕೃಷಿ ಒತ್ತುವರಿಯಂತಹ ಕಾರಣಗಳಿಂದಾಗಿ ಕಳೆದ ಮೂರ್ನಾಲ್ಕು ದಶಕಗಳಲ್ಲಿ ಮಲೆನಾಡಿನಲ್ಲಿ ಆಗಿರುವ ಅರಣ್ಯ ನಾಶ, ಇಂದು ಅಲ್ಲಿ ಮಂಗ, ಕಾಡುಕೋಣ ಮುಂತಾದ ಕಾಡುಪ್ರಾಣಿಗಳ ಉಪಟಳದಿಂದ ಹಿಡಿದು ತಾಪಮಾನ ಏರಿಕೆ, ಅಂತರ್ಜಲ ಕುಸಿತ, ಅಕಾಲಿಕ ಮಳೆ, ಅತಿವೃಷ್ಟಿ, ಭೂ ಕುಸಿತದಂತಹ ಅನಾಹುತಗಳನ್ನು ಸೃಷ್ಟಿಸಿದೆ. ಇಂತಹ ಹೊತ್ತಲ್ಲಿ ಬರೋಬ್ಬರಿ 80 ಸಾವಿರ ಎಕರೆಯಷ್ಟು ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ಪರಭಾರೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ‘ಪರಿಸರ ಭಯೋತ್ಪಾದನೆ’ಯಾಗಿ ಮಲೆನಾಡಿಗರಿಗೆ ಕಾಣಿಸುತ್ತಿದೆ.


ವಾಸ್ತವವಾಗಿ ಸುಮಾರು 40 ವರ್ಷಗಳ ಹಿಂದೆ ಮೈಸೂರು ಪೇಪರ್ ಮಿಲ್ಸ್(ಎಂಪಿಎಂ) ಕಾಗದ ಕಾರ್ಖಾನೆಯನ್ನು ಸರ್ಕಾರ ಆರಂಭಿಸಿದಾಗ ಅದಕ್ಕೆ ಕಚ್ಛಾವಸ್ತು ಸರಬರಾಜಿಗಾಗಿ ಮಲೆನಾಡಿನ ದಟ್ಟ ಕಾಡಿನ 32,000 ಹೆಕ್ಟೇರ್(ಅಂದಾಜು 80 ಸಾವಿರ ಎಕರೆ) ಅರಣ್ಯ ಭೂಮಿಯನ್ನು 40 ವರ್ಷದ ಲೀಸ್(ಗುತ್ತಿಗೆ) ಆಧಾರದ ಮೇಲೆ ನೀಡಲಾಗಿತ್ತು. ಲೀಸ್ ಅವಧಿ ಮುಗಿದ ಮೇಲೆ ಒಂದು ವೇಳೆ, ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಿಕೊಟ್ಟರೂ ಈ ಭೂಮಿಯನ್ನು ಅರಣ್ಯ ಇಲಾಖೆಗೆ ಮರಳಿಕೊಡಬೇಕು ಎಂದು ಲೀಸ್ನಲ್ಲಿ ಸರ್ಕಾರವೇ ಷರತ್ತು ಹಾಕಿತ್ತು. ಆದರೆ, ಇದೀಗ ಸರ್ಕಾರೇ ತನ್ನದೇ ಷರತ್ತು ಉಲ್ಲಂಘಿಸಿ ಮತ್ತೆ ನಲವತ್ತು ವರ್ಷ ಅವಧಿಗೆ ಈ ಭೂಮಿಯ ಗುತ್ತಿಗೆ ನವೀಕರಿಸಿ ಕಳೆದ ವಾರ ಆದೇಶ ಹೊರಡಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನಲವತ್ತು ವರ್ಷ ಹಿಂದೆ ಹಾಗೆ ಲೀಜ್ ಮೂಲಕ ಪಡೆದ ಆ ಭೂಮಿಯಲ್ಲಿ ಬೆಳೆದುನಿಂತಿದ್ದ ಸಹಜ ಕಾಡನ್ನು ಬುಲ್ಡೋಜರ್ ಹಚ್ಚಿ ನಾಶಮಾಡಿದ ಕಂಪನಿ, ಅಲ್ಲಿ ಮಲೆನಾಡಿನ ಅಂತರ್ಜಲ, ವನ್ಯಜೀವಿಗಳು ಮತ್ತು ಒಟ್ಟಾರೆ ಪರಿಸರಕ್ಕೆ ಮಾರಕವಾದ ಅಕೇಶಿಯಾ ಹಾಗೂ ನೀಲಗಿರಿ ಬೆಳೆದಿದೆ. ಸಾವಿರಾರು ಎಕರೆ ಪ್ರದೇಶದ ಸಹಜ ಕಾಡಿನ ಜಾಗದಲ್ಲಿ ಈ ವಿದೇಶಿ ತಳಿ ಮರಗಳನ್ನು ಬೆಳೆದ ಕಾರಣ ಮಲೆನಾಡಿನ ಪರಿಸರ, ವನ್ಯಜೀವಿ, ಜನಜೀವನ, ಹವಾಮಾನ ಮತ್ತು ನದಿ ಕಣಿವೆಗಳ ಜೊತೆ ಅಂತರ್ಜಲ ಮಟ್ಟದ ಮೇಲೆಯೂ ಸಾಕಷ್ಟು ವ್ಯತಿರಿಕ್ತ ಪರಿಣಾಮಗಳಾಗಿರುವುದು ಹಲವು ವೈಜ್ಞಾನಿಕ ವರದಿಗಳಿಂದ ದೃಢಪಟ್ಟಿದೆ.
ದಿಢೀರ್ ಆಸಕ್ತಿಗೆ ಕಾರಣವೇನು?:
ಈ ನಡುವೆ ತೀವ್ರ ನಷ್ಟದ ಸುಳಿಗೆ ಸಿಲುಕಿ ಎಂಪಿಎಂ ಕಾಗದ ಕಾರ್ಖಾನೆ ಮುಚ್ಚಿಹೋಗಿ ದಶಕ ಉರುಳಿದೆ. ಕಾರ್ಖಾನೆಗೆ ಬೀಗ ಬಿದ್ದು ಹತ್ತು ವರ್ಷಗಳಲ್ಲಿ ನೆನಪಾಗದ ಅದರ ಪುನರುಜ್ಜೀವನದ ವಿಷಯ ಸರ್ಕಾರಕ್ಕೆ ಈಗ, ದಿಢೀನರೇ ನೆನಪಾಗಿದೆ. ಅದಕ್ಕೆ ಕಾರಣ, ಸಾರ್ವಜನಿಕ ವಲಯದ ಕಂಪನಿಯ ಮೇಲಿನ ಕಾಳಜಿಯಾಗಲೀ, ಕಾರ್ಮಿಕರ ಬಗೆಗಿನ(ಕೆಲವೇ ನೂರು ಮಂದಿ ಈಗ ಉಳಿದಿರುವುದು) ಕಕ್ಕುಲತೆಯಾಗಲೀ ಅಲ್ಲ. ಬದಲಾಗಿ, ಕಂಪನಿಯ ಹೆಸರಿನಲ್ಲಿರುವ ಈ 80 ಸಾವಿರ ಎಕರೆ ಅಪಾರ ಅರಣ್ಯ ಭೂಮಿಯನ್ನು ಖಾಸಗೀ ದಂಧೆಗೆ ಪರಭಾರೆ ಮಾಡುವ ಲೆಕ್ಕಾಚಾರ ಸರ್ಕಾರದ ತಲೆಯಲ್ಲಿದೆ ಎಂಬುದು ಈ ಅಪಾರ ಭೂಮಿ ವಾಪಸು ಅರಣ್ಯ ಇಲಾಖೆಗೆ ಹೋಗಬೇಕು ಮತ್ತು ಅಲ್ಲಿ ಸಹಜ ಕಾಡು ಬೆಳೆಸಬೇಕು ಎಂದು ಹೋರಾಟ ನಡೆಸುತ್ತಿರುವ ‘ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ’ದ ವಾದ.
ಏಕೆಂದರೆ; ಈ ಅಪಾರ ಪ್ರಮಾಣದ ಅಮೂಲ್ಯ ಅರಣ್ಯ ಭೂಮಿಯ ಮೇಲೆ ಬಿಜೆಪಿಯ ರಾಜ್ಯ ನಾಯಕರು ಮತ್ತು ಕೇಂದ್ರ ನಾಯಕರ ಕಣ್ಣು ಬಿದ್ದಿದೆ. ಕಾರ್ಖಾನೆಯನ್ನು ಪುನರಾರಂಭಿಸುವ ನೆಪದಲ್ಲಿ ಮಲೆನಾಡಿನ ಈ ಭೂಮಿಯನ್ನು ತಮ್ಮ ವಶಕ್ಕೆ ಪಡೆದು, ಅಲ್ಲಿ ವಾಣಿಜ್ಯ ಅರಣ್ಯಬೆಳೆ ಬೆಳೆಯುವ ದಂಧೆ ನಡೆಸಲು ಅವರು ಸಂಚು ಹೂಡಿದ್ದಾರೆ. ಅದಕ್ಕೆ ತಕ್ಕಂತೆ, ಕಾಡು ಉಳಿಸಿ, ಬೆಳೆಸುವ ತನ್ನ ಹೊಣೆಗಾರಿಕೆಯನ್ನೇ ಮರೆತು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಕೂಡ ಅವರಿಗೆ ಸಾಥ್ ನೀಡುತ್ತಿದ್ದಾರೆ.
ಅರಣ್ಯ ಇಲಾಖೆ ಹೊಣೆಗೇಡಿತನ:
“ನಮ್ಮ ಒಕ್ಕೂಟದ ನಿಯೋಗ ಕಳೆದ ತಿಂಗಳು ಬೆಂಗಳೂರಿಗೆ ಹೋಗಿ ರಾಜ್ಯದ ಅರಣ್ಯದ ಕಸ್ಟೋಡಿಯನ್ ಆದ ಪಿಸಿಸಿಎಪ್(ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ) ಅವರನ್ನು ಭೇಟಿ ಮಾಡಿ ಈ ಅಪಾರ ಭೂಮಿಯನ್ನು ಯಾವುದೇ ಕಾರಣಕ್ಕೂ ಮತ್ತೆ ಲೀಸ್ ಗೆ ನೀಡಕೂಡದು. ಕನಿಷ್ಟ ಬೇರೆ ಬೇರೆ ಕಾರಣಕ್ಕೆ ಈಗಾಗಲೇ ಆಗಿರುವ ಪರಿಸರ ಹಾನಿಯ ಪರಿಣಾಮವನ್ನು ಕೆಲಮಟ್ಟಿಗಾದರೂ ತಡೆಯುವ ನಿಟ್ಟಿನಲ್ಲಿ ಈ ಭೂಮಿಯಲ್ಲಿ ಸಹಜ ಕಾಡು ಬೆಳೆಸಬೇಕು ಎಂದು ಒತ್ತಾಯಸಿದಾಗ, ತಮ್ಮ ಹೊಣೆಗಾರಿಕೆಯನ್ನೇ ಮರೆತು ಮಾತನಾಡಿದ ಅವರು, ಈ ವಿಷಯದಲ್ಲಿ ನಾನೇನೂ ಮಾಡಲಾಗದು. ನೀವು ಮುಖ್ಯಮಂತ್ರಿಗಳ ಮಕ್ಕಳನ್ನು ಭೇಟಿಯಾಗಿ ಎಂದು ಹೇಳಿದರು. ಇಂತಹ ಹೊಣೆಗೇಡಿತನದ ಪರಿಣಾಮವಾಗಿ ಈಗ ಮತ್ತೆ ಲೀಸ್ ವಿಸ್ತರಿಸಿದ್ದಾರೆ. ಹಾಗಾಗಿ ನಾವು ಹೋರಾಟ ತೀವ್ರಗೊಳಿಸುವ ನಿರ್ಧಾರ ಮಾಡಿ, ನಾಳೆ(ಜ.7) ಶಿವಮೊಗ್ಗದ ಸಿಸಿಎಫ್ ಕಚೇರಿ ಮುತ್ತಿಗೆ ಹಮ್ಮಿಕೊಂಡಿದ್ದೇವೆ” ಎಂದು ಒಕ್ಕೂಟದ ಸಂಚಾಲಕರಲ್ಲಿ ಒಬ್ಬರಾದ ಕೆ ಪಿ ಶ್ರೀಪಾಲ್ ಹೇಳಿದರು.

ಉಸಿರೆತ್ತದ ಮಂಡಳಿಗಳು:
“ಕಾರ್ಪೊರೇಟ್ ಕಂಪನಿಗಳೊಂದಿಗೆ ರಾಜಕಾರಣಿಗಳೂ, ಅಧಿಕಾರಿಗಳು ಕೈಜೋಡಿಸಿದ್ದಾರೆ. ಈ ನಾಡದ್ರೋಹಿ, ಜನದ್ರೋಹಿ ವಿಷವರ್ತುಲ, ಇಡೀ ಮಲೆನಾಡಿನ ಅರಣ್ಯ ಪ್ರದೇಶವನ್ನೇ ತಮ್ಮ ಕಬ್ಜಕ್ಕೆ ಪಡೆದು, ಮಲೆನಾಡು ಮಾತ್ರವಲ್ಲದೆ, ಇಡೀ ರಾಜ್ಯಕ್ಕೇ ಶುದ್ಧ ಗಾಳಿ, ನೀರು, ಅಪಾರ ಮೂಲಿಕೆಗಳನ್ನು ನೀಡುವ ಕಾಡನ್ನೇ ಸರ್ವನಾಶ ಮಾಡುವ ಹೊಂಚು ಹೂಡಿದೆ. ಜಗತ್ತಿನ ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶಗಳಲ್ಲಿ ಒಂದಾದ ಪಶ್ಚಿಮಘಟ್ಟದ ಸಹ್ಯಾದ್ರಿ ಶ್ರೇಣಿಯನ್ನೇ ತಮ್ಮ ಜಹಗೀರು ಮಾಡಿಕೊಳ್ಳಲು ಹೊರಟಿದ್ದಾರೆ. ದುರಂತೆವೆಂದರೆ ಇಂತಹ ಪರಿಸರ ಘಾತಕ ಕೃತ್ಯವನ್ನು ತಡೆಯಬೇಕಾದ ರಾಜ್ಯ ಜೀವ ವೈವಧ್ಯ ಮಂಡಳಿಯಾಗಲೀ, ವನ್ಯಜೀವಿ ಮಂಡಳಿಯಾಗಲೀ ಈ ಬಗ್ಗೆ ಉಸಿರೆತ್ತುತ್ತಿಲ್ಲ. ಇಂತಹ ಅನಾಹುತಕಾರಿ ಕ್ರಮವನ್ನೂ ಪ್ರಶ್ನಿಸುವ ತಾಕತ್ತು ಇಲ್ಲ ಎಂದಾದರೆ, ಕನಿಷ್ಟ ಆ ಕುರಿತ ಸಾರ್ವಜನಿಕ ಹೇಳಿಕೆ ನೀಡುವ ಮಟ್ಟಿನ ಪರಿಸರ ಬದ್ಧತೆ ಇಲ್ಲವೆಂದಾರೆ, ಆ ಮಂಡಳಿಗಳು ಮತ್ತು ಅದರ ಅಧ್ಯಕ್ಷ, ಪದಾಧಿಕಾರಿಗಳು ಇರುವುದು ಸಾರ್ವಜನಿಕ ತೆರಿಗೆ ಹಣದ ಲೂಟಿಗಾಗಿಯೇ” ಎಂಬುದು ಮತ್ತೊಬ್ಬ ಹೋರಾಟಗಾರ ಅಖಿಲೇಶ್ ಚಿಪ್ಳಿ ಅವರ ಪ್ರಶ್ನೆ.
ಈ ಗಂಭೀರ ಆರೋಪದ ಬಗ್ಗೆ ಪ್ರತಿಧ್ವನಿ ರಾಜ್ಯ ವನ್ಯಜೀವಿ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರನ್ನು ಸಂಪರ್ಕಿಸಿದಾಗ, “ಮಲೆನಾಡಿನಲ್ಲಿ ಏಕಜಾತಿ ನೆಡುತೋಪು ಬೇಡ ಮತ್ತು ಎಂಪಿಎಂ ಲೀಜ್ ಮುಂದುವರಿಸುವುದು ಬೇಡ ಎಂದು ನಾವು 2015ರಲ್ಲೇ ಹೇಳಿದ್ದೆವು. ಅದಾದ ಬಳಿಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷನಾದ ಬಳಿಕವೂ ಕೆಲವು ಸಂದರ್ಭದಲ್ಲಿ ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದೆ. ಆದರೆ, ಈ ಲೀಜ್ ನವೀಕರಣದ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ. ಆ ಬಗ್ಗೆ ನಮ್ಮ ಅಭಿಪ್ರಾಯವನ್ನೂ ಸರ್ಕಾರ ಕೇಳಿಲ್ಲ” ಎಂದರು. ಆದರೆ ಕಳೆದ ಆರು ತಿಂಗಳಿನಿಂದ ಮಲೆನಾಡಿನಲ್ಲಿ ನಿರಂತರ ಹೋರಾಟ ನಡೆಯುತ್ತಿದೆ. ಲೀಸ್ ಮುಂದುವರಿಕೆ ಬೇಡ, ಆ ಭೂಮಿಯನ್ನು ವಾಪಸು ಅರಣ್ಯ ಇಲಾಖೆಗೆ ವಹಿಸಿ ಎಂದು ಕೂಗು ಎದ್ದಿದೆ. ಆ ಹಿನ್ನೆಲೆಯಲ್ಲಿ ನೀವೇ ಸರ್ಕಾರದ ಮುಂದೆ ಜನರ ಪರ, ಪರಿಸರದ ಪರ ವಕಾಲತು ವಹಿಸಬೇಕಿತ್ತಲ್ಲವೆ? ಎಂಬ ಪ್ರಶ್ನೆಗೆ ಅವರು ಸ್ಪಷ್ಟ ಉತ್ತರ ನೀಡಲೇಇಲ್ಲ!



ಪರಿಸರ ರಕ್ಷಿಸಬೇಕಾದ, ವನ್ಯಜೀವಿಗಳ ಹಿತ ಕಾಯಬೇಕಾದ ಮತ್ತು ಅದಕ್ಕೆಂದೇ ನೇಮಕಗೊಂಡಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ಇಂತಹ ಜಾಣತನ ತೋರುತ್ತಿರುವುದು ಸಹಜವಾಗೇ ಮಲೆನಾಡಿಗರಲ್ಲಿ ಆ ಸಂಸ್ಥೆಗಳು ಮತ್ತು ಅವುಗಳಲ್ಲಿ ಆಯಕಟ್ಟಿನ ಸ್ಥಾನಗಳಲ್ಲಿ ಕೂತು ಸಾರ್ವಜನಿಕ ತೆರಿಗೆ ಹಣ ಪೋಲು ಮಾಡುತ್ತಿರುವವರ ವಿರುದ್ಧ ಆಕ್ರೋಶ ಮಡುಗಟ್ಟಿದೆ.
ಜನಹೋರಾಟಕ್ಕೆ ಬೆಂಬಲ:
ಆದರೆ, ಈ ನಡುವೆ ಮಲೆನಾಡಿಗರ ಹೋರಾಟಕ್ಕೆ ನಾಡಿನ ಉದ್ದಗಲದಿಂದ ಸಾಹಿತಿಗಳು, ಪರಿಸರ ಹೋರಾಟಗಾರರು, ರೈತ ನಾಯಕರು, ಪತ್ರಕರ್ತರು, ಚಿಂತಕರು ಸೇರಿದಂತೆ ವಿವಿಧ ವಲಯಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ದೊಡ್ಡ ಮಟ್ಟದ ಸಂಚಲನ ಉಂಟಾಗಿದ್ದು, ಘೋಷಣೆ, ಪೋಸ್ಟರು, ಲೇಖನಗಳು ಈ ಸಮಸ್ಯೆಯ ಬಗ್ಗೆ ರಾಜ್ಯದ ಜನಸಾಮಾನ್ಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ.
ಬಯಲ ಬಂಧೀಖಾನೆ ಆತಂಕ:
ಈ ನಡುವೆ, ಮಲೆನಾಡಿನ ಹಳ್ಳಿಗಾಡಿನಲ್ಲಿಯೂ ಎಂಪಿಎಂ ನೆಡುತೋಪು ಲೀಸ್ ಅವಧಿಯನ್ನು ಮುಂದಿನ ನಲವತ್ತು ವರ್ಷಗಳಿಗೆ ನವೀಕರಿಸಿರುವುದು ಆತಂಕ ತಂದಿದೆ.
ಏಕೆಂದರೆ, ಈ ಬಾರಿ ಹಿಂದಿನಂತೆ ಕಂಪನಿ ಸರ್ಕಾರಿ ಸಂಸ್ಥೆಯಾಗಿ ಉಳಿಯುವುದಿಲ್ಲ ಮತ್ತು ಖಾಸಗೀ ಕಾರ್ಪೊರೇಟ್ ತೆಕ್ಕೆ ಹೋದ ಮೇಲೆ ಕಾರ್ಖಾನೆಯಲ್ಲಿ ಹಿಂದಿನಂತೆ ಕಾಗದವನ್ನೇ ಉತ್ಪಾದಿಸಬೇಕು ಎಂಬುದನ್ನು ಕೂಡ ಮಾರಾಟದ ಷರತ್ತಿನಲ್ಲಿ ಸರ್ಕಾರ ಉಲ್ಲೇಖಿಸಿಲ್ಲ. ಹಾಗಾಗಿ ಕಂಪನಿ ಖರೀದಿಸುವವರು ಈ ಜಾಗದಲ್ಲಿ ಲಾಭದ ಅರಣ್ಯಬೆಳೆ ಬೆಳೆದರೆ ಅದರ ರಕ್ಷಣೆಗಾಗಿ ಬೃಹತ್ ಬೇಲಿ, ಕಂದಕ, ಕಾಂಪೌಂಡ್ ವ್ಯವಸ್ಥೆಗಳನ್ನು ಮಾಡಿದರೆ, ಈ ನೆಡುತೋಪುಗಳ ಮೂಲಕ ಹಾದುಹೋಗುವ ಸಂಪರ್ಕ ರಸ್ತೆಗಳು ಬಂದ್ ಆಗಲಿವೆ. ಹಳ್ಳಿ ಮೂಲೆಮೂಲೆಯಲ್ಲಿ ಅಭೇಧ್ಯ ಬೇಲಿಗಳು ಏಳಲಿವೆ. ಗೋಡೆಗಳು ತಲೆ ಎತ್ತಲಿವೆ. ಆಗ ಮಲೆನಾಡಿನ ಹಳ್ಳಿಗಳ ಸಂಪರ್ಕ, ಮನೆ-ಮನೆಯ ಸಂಪರ್ಕಕ್ಕೇ ಸಂಚಕಾರ ಬರಲಿದೆ. ಒಂದು ರೀತಿಯಲ್ಲಿ ಮಲೆನಾಡಿಗೇ ಬೇಲಿಹಾಕಿ, ಮಲೆನಾಡನ್ನು ಬಯಲ ಬಂಧೀಖಾನೆ ಮಾಡುವ ಅಪಾಯವಿದೆ ಎಂಬ ಆತಂಕ ಕೂಡ ಎದುರಾಗಿದೆ.

ಹಾಗಾಗಿ, “ನಮ್ಮ ಬದುಕಿನ ಮೇಲೆ ಮತ್ತೊಬ್ಬರ ಬೀಗ ಬೀಳುವುದನ್ನು ಈಗಲೇ ವಿರೋಧಿಸದಿದ್ದರೆ, ನಾಳೆ ನಮ್ಮ ಕಾಡಿನ ಮೇಲೆ, ಕಾಡಿನ ಜೀವಿಗಳ ಮೇಲೆ, ನಮ್ಮ ಹೊಳೆ-ಹಳ್ಳ-ನದಿ-ಕಣಿವೆಗಳ ಮೇಲೆ ದೊಣ್ಣೆ ನಾಯಕನ ಅಪ್ಪಣೆಯ ತೂಗುಗತ್ತಿ ಬೀಳಲಿದೆ. ನಮ್ಮ ಮನೆಗೆ ನಾವು ಹೋಗಲೂ ಆ ಕಂಪನಿಯ ಪರ್ಮೀಷನ್ ಪಡೆಯಬೇಕಾದ ದೈನೇಸಿ ಸ್ಥಿತಿಗೆ ಮಲೆನಾಡು ಸರಿಯಲಿದೆ. ಆ ಕಾರಣಕ್ಕಾಗಿಯಾದರೂ ನಾವು ಸರ್ಕಾರ ಮತ್ತು ಕಾರ್ಪೊರೇಟ್ ಕಂಪನಿಗಳ ಈ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸುತ್ತೇವೆ” ಎಂಬುದು ಮಲೆನಾಡಿನ ರೈತ ಮುಖಂಡ ಕಂಬಳಗೆರೆ ರಾಜೇಂದ್ರ ಅವರ ಹೇಳಿಕೆ.
ಒಟ್ಟಾರೆ, ಒಂದು ಕಡೆ ಪರಿಸರ ನಾಶ, ಮತ್ತೊಂದು ಕಡೆ ತಮ್ಮದೇ ಮನೆಗಳ ಮುಂದೆ ಬೇಲಿಗಳು ಏಳುವ ಆತಂಕದಲ್ಲಿ ಮಲೆನಾಡಿಗರಿದ್ದಾರೆ. ಆ ಹಿನ್ನೆಲೆಯಲ್ಲೇ ಸಿಎಂ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಗುರುವಾರ ನಡೆಯಲಿರುವ ಹೋರಾಟ ಸಾಕಷ್ಟು ಕುತೂಹಲ ಮೂಡಿಸಿದೆ.
