ಸಾರ್ವಜನಿಕರು ಪ್ರತಿಭಟನೆ ಮಾಡೋದು ಸಂವಿಧಾನ ಕೊಟ್ಟ ಮೂಲಭೂತ ಹಕ್ಕು. ಆಡಳಿತ ಪಕ್ಷದ ವೈಫಲ್ಯಗಳನ್ನು ತೋರಿಸುವ ಮಾರ್ಗಗಳಲ್ಲಿ ಪ್ರತಿಭಟನೆಯೇ ಪ್ರಮುಖ ಅಸ್ತ್ರ. ಈ ಪ್ರತಿಭಟನೆಯನ್ನು ತಾಳ್ಮೆಯಿಂದ ಆಲಿಸಬೇಕಾದ ಕೆಲಸವನ್ನು ಆಡಳಿತ ಮಾಡುವ ಮಂದಿ ಮಾಡಬೇಕು. ಸಮಸ್ಯೆಯನ್ನು ಬಗೆಹರಿಸುವ ಪ್ರಮಾಣಿಕ ಪ್ರಯತ್ನ ಮಾಡಬೇಕು. ಆದರೆ ಬಿಜೆಪಿ ಸರ್ಕಾರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಪ್ರತಿಭಟನೆ ಮಾಡುವುದನ್ನು ತಡೆದು, ಹೋರಾಟದ ದನಿಯನ್ನು ಮುಚ್ಚಿಡುವ ಕೆಲಸವನ್ನು ಸಕಲ ರೀತಿಯಲ್ಲೂ ಮಾಡುತ್ತಿದೆ. ಇದೇ ರೀತಿಯ ಕೆಲಸವನ್ನು ಅಂಧ ವಿದ್ಯಾರ್ಥಿಗಳ ಮೇಲೂ ಪ್ರಯೋಗ ಮಾಡಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅಂಗವಿಕಲ ಮಕ್ಕಳನ್ನು ವಿಶೇಷ ಚೇತನ ಮಕ್ಕಳು ಎಂದು ಕರೆಯಿರಿ, ಆ ಮಕ್ಕಳು ದೇವರಿಗೆ ಸಮಾನ ಎಂದು ಭಾಷಣ ಮಾಡ್ತಾರೆ. ಆದರೆ ಈಗ ಅದೇ ಬಿಜೆಪಿಯ ಆಡಳಿತ ಇರುವಂತಹ ರಾಜ್ಯ ಸರ್ಕಾರ ಅಂಧ ಮಕ್ಕಳ ಮೇಲೆ ಕುರುಡು ದರ್ಬಾರ್ ನಡೆಸಿದೆ. ಪ್ರತಿಭಟನೆ ನಡೆಸುತ್ತಿದ್ದ ಮಕ್ಕಳನ್ನು ಪೊಲೀಸ್ ವ್ಯಾನ್‌ಗಳಲ್ಲಿ ತುಂಬಿಕೊಂಡು ನಾಲ್ಕಾರು ಕಿಲೋ ಮೀಟರ್ ದೂರ ಕರೆದುಕೊಂಡು ಹೋಗಿ ಕ್ರೀಡಾಂಗಣದಲ್ಲಿ ಬಿಟ್ಟು ಬಂದಿರುವುದು ನ್ಯಾಯಯುತವೇ? ಇದು ಮಾನವೀಯತೆಯೇ? ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸರ್ಕಾರ ತನ್ನ ಹುಳುಕನ್ನು ಮುಚ್ಚಿಟ್ಟುಕೊಳ್ಳಲು ಈ ರೀತಿಯಾಗಿ ಪೊಲೀಸ್ ಪಡೆ ಬಳಸಿ ಹೋರಾಟ ಹತ್ತಿಕ್ಕುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಅಂಧ ವಿದ್ಯಾರ್ಥಿಗಳಿಗೆ ಸಿದ್ದರಾಮಯ್ಯ ಸರ್ಕಾರ ಉಚಿತ ಲ್ಯಾಪ್‌ಟಾಪ್ ಕೊಡುವ ಯೋಜನೆಯನ್ನು 2014ರಲ್ಲಿ ಘೋಷಣೆ ಮಾಡಿತ್ತು. ಎಸ್‌ಎಸ್‌ಎಲ್‌ಸಿ ಮೇಲ್ಪಟ್ಟ ಅಂಧ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಕೊಡುವುದಾಗಿ ಘೋಷಣೆ ಮಾಡಿ 6 ವರ್ಷಗಳಾದರೂ ಕೂಡ ಇನ್ನು ಲ್ಯಾಪ್‌ಟಾಪ್ ವಿತರಣೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಶ್ರೀಮಂತ ಕುಟುಂಬಗಳ ಮಕ್ಕಳು ಲ್ಯಾಪ್‌ಟಾಪ್ ಸೇರಿದಂತೆ ಆಧುನಿಕ ತಂತ್ರಜ್ಞಾನವನ್ನು ಸ್ವಂತ ಹಣದಿಂದ ಖರೀದಿ ಮಾಡುತ್ತಾರೆ. ಆದರೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲಿರುವ ಹಾಗು ಎನ್‌ಜಿಒಗಳು ನಡೆಸುವ ಪೋಷಣಾ ಮಂದಿರದಲ್ಲಿ ವಾಸ ಮಾಡುವ ಅಂಧ ವಿದ್ಯಾರ್ಥಿಗಳು ಸರ್ಕಾರದ ನೆರವನ್ನೇ ನಂಬಿಕೊಂಡು ಇರುತ್ತಾರೆ.
ವಿಧಾನಸೌಧ ಬಳಿಯ ವಿಶ್ವೇಶ್ವರಯ್ಯ ಟವರ್ ಬಳಿ ವಿಶೇಷ ಚೇತನ ಹಾಗೂ ಹಿರಿಯ ನಾಗರಿಕರಣ ಸಬಲೀಕರಣ ಇಲಾಖೆ ನಿರ್ದೇಶಕರನ್ನು ಭೇಟಿ ಮಾಡಲು 40 ಮಂದಿ ಅಂಧ ವಿದ್ಯಾರ್ಥಿಗಳು ಆಗಮಿಸಿದ್ದರು. ಒಂದೂವರೆ ಗಂಟೆ ಬಳಿಕ ನಿರ್ದೇಶಿಕಿ ಲೀಲಾವತಿ ಭೇಟಿಗೆ ಅವಕಾಶ ಕೊಡಲಾಯ್ತು. ಆದರೆ ಕೇವಲ ನಾಲ್ಕು ಜನರ ಭೇಟಿಗೆ ಮಾತ್ರ ಅವಕಾಶ ಕಲ್ಪಿಸಲಾಯ್ತು. ಇದರಿಂದ ಉಳಿದ ವಿದ್ಯಾರ್ಥಿಗಳು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದರು.
ಕಳೆದೆರಡು ವರ್ಷಗಳಿಂದ ಚುನಾವಣೆ ಇದ್ದಿದ್ದರಿಂದ ನಮಗೆ ಟೆಂಡರ್ ಕರೆಯಲು ಸಾಧ್ಯವಾಗಿಲ್ಲ ಎಂದು ನಿರ್ದೇಶಕಿ ಲೀಲಾವತಿ ಹೇಳಿದ್ದಾರೆ. ಈಗ ಟೆಂಡರ್ ಕರೆದು ಲ್ಯಾಪ್‌ಟಾಪ್ ವಿತರಣೆ ಮಾಡುವ ಭರವಸೆ ನೀಡಿದ್ದಾರೆ. ಆದರೆ ಅಸಮಾಧಾನಕೊಂಡ ಅಂಧ ಮಕ್ಕಳನ್ನು ಸಮಾಧಾನ ಮಾಡುವಲ್ಲಿ ಎಡವಿದ್ದಾರೆ. ಪೊಲೀಸರನ್ನು ಕರೆಸಿ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಪೊಲೀಸರು ಹೆಣ್ಣು ಮಕ್ಕಳು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳನ್ನು ಜೀಪ್‌ಗಳಲ್ಲಿ ತುಂಬಿಕೊಂಡು ಹೋಗಿ ಲಾಂಗ್‌ಫೋರ್ಡ್ ನಗರದ ಹಾಕಿ ಸ್ಟೇಡಿಯಂನಲ್ಲಿ ಇಟ್ಟು ರಾತ್ರಿ ಬಿಟ್ಟು ಕಳುಹಿಸಿದ್ದಾರೆ. ಅಂಧ ಮಕ್ಕಳು ಎನ್ನುವ ಕನಿಕರವಿಲ್ಲದೇ ಅವರು ದಾರಿಯಲ್ಲಿ ಪರದಾಡುವ ಪರಿಸ್ಥಿತಿಯನ್ನು ತಂದೊಡ್ಡಿರುವ ನಮ್ಮ ಆರಕ್ಷಕ ಪಡೆ 40 ಮಕ್ಕಳನ್ನು ಬೆಳಗ್ಗೆಯಿಂದ ಕೂಡಿಟ್ಟು ಕತ್ತಲಾದ ಮೇಲೆ ಬಿಟ್ಟು ಕಳುಹಿಸಿರುವುದು ಅಮಾನವೀಯತೆಗೆ ಸಾಕ್ಷಿಯಾಗಿ ನಿಂತಿದೆ.
ಸರ್ಕಾರ ಯೋಜನೆಗಳನ್ನ ಘೋಷಣೆ ಮಾಡುತ್ತದೆ. ಆದರೆ ಜಾರಿ ಮಾಡುವುದಿಲ್ಲ. ಕೇಳಿದರೆ ಪೊಲೀಸರನ್ನು ಬಿಟ್ಟು ಬೆದರಿಸುವ ಕೆಲಸ ಮಾಡುತ್ತದೆ. ಆದರೆ ಅಧಿಕಾರಿಗಳು ಸ್ವಲ್ಪ ಮುತುವರ್ಜಿ ವಹಿಸಿದರೆ, ಅಂಧ ಮಕ್ಕಳ ಸಮಸ್ಯೆ ಬಗೆಹರಿಸುವುದು ದೊಡ್ಡ ಕಷ್ಟವೇನಲ್ಲ. ಸಾಕಷ್ಟು ಜನರು ಮಕ್ಕಳಿಗೆ ಸಹಾಯ ಮಾಡುವ ಉದ್ದೇಶ ಹೊಂದಿರುತ್ತಾರೆ. ದೊಡ್ಡ ದೊಡ್ಡ ಎಂಎನ್‌ಸಿ ಕಂಪನಿಗಳು ಸಹ ಈ ರೀತಿಯ ಮಕ್ಕಳ ನೆರವಿಗೆ ಬರಲು ಸಿದ್ಧರಿರುತ್ತಾರೆ. ಆದರೆ ಹೇಗೆ ಸಹಾಯ ಮಾಡುವುದು ಎನ್ನುವುದು ಗೊತ್ತಿರುವುದಿಲ್ಲ. ಅಂತವರನ್ನು ಗುರುತಿಸಿ ಸಹಾಯ ಹಸ್ತ ಚಾಚುವಂತೆ ಮಾಡುವುದು ದೊಡ್ಡ ಕಷ್ಟವೇನಲ್ಲ. ಆ ಕೆಲಸ ಮಾಡುವ ಜವಾಬ್ದಾರಿ ಇರಬೇಕು. ನಾನು ಸರ್ಕಾರಿ ಅಧಿಕಾರಿ ಎನ್ನುವ ಧಿಮಾಕು ಬಿಟ್ಟು ಕೆಲಸ ಮಾಡುವ ಮನಸ್ಸಿರಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡಿದರೆ ಅಂಧ ಮಕ್ಕಳ ಬಾಳಲ್ಲಿ ಬೆಳಕು ಮೂಡುತ್ತದೆ. ಪ್ರತಿಭಟನೆ ಮಾಡುವ ಮಕ್ಕಳನ್ನು ಕತ್ತಲಿಗೆ ತೆಗೆದುಕೊಂಡು ಹೋಗುವುದೂ ತಪ್ಪಲಿದೆ. ಈ ಬಗ್ಗೆ ಸರ್ಕಾರ ಹಾಗು ಸಚಿವರು ಚಿಂತಿಸಬೇಕಿದೆ.