ಅಂತರ್ಜಾಲವೇ ಇಲ್ಲದ ʼವರ್ಕ್ ಫ್ರಮ್ ಹೋಮ್ʼ!

ಕರೋನಾದ ವಿಷಮ ಕಾಲದಲ್ಲಿ ಗ್ರಾಮ ಪಂಚಾಯತ್‌ಗಳು ತಮ್ಮ ಅಗತ್ಯಗಳನ್ನು ವಾಟ್ಸಾಪ್ ಮೂಲಕ ನೇಮಿಸಿದ ಸ್ವಯಂ ಸೇವಕರಿಗೆ ಸಲ್ಲಿಸಲು ಮನವಿ‌ ಮಾಡುತ್ತಿವೆ. ಖಾಸಗಿ ಕಾಲೇಜುಗಳು ಆನ್ ಲೈನ್ ಕ್ಲಾಸ್ ರೂಮ್ ಶುರುಮಾಡಿವೆ. ಯೂಟ್ಯೂಬಿನ ಮೂಲಕವೂ ಹೊಸ ಕೌಶಲಗಳನ್ನು ಕಲಿಯಬಹುದು. ಕೋರ್ಸೆರಾ, ಇಂಟರ್ನ್ ಶಾಲಾ ಮೂಲಕ ಲಾಕ್ ಡೌನ್ ನ ಬಿಡುವಿನಲ್ಲಿ ಹೊಸ ಕೋರ್ಸ್ ಗಳನ್ನೆ ಓದಬಹುದು. ಮನೆಯಲ್ಲಿ ಹೊತ್ತು ಹೋಗುತ್ತಿಲ್ಲವೆಂದು ಆನ್ ಲೈನ್ ಸ್ಟ್ರೀಮಿಂಗಿನ ಮೊರೆ ಹೋಗಬೇಕೆನಿಸುತ್ತದೆ. ಆದರೆ ಇವೆಲ್ಲವುಗಳಿಗೂ ಅಗತ್ಯವಾದ ಸಿಗ್ನಲ್ ಎಂಬುದು ಮಾತ್ರ ಮಲೆನಾಡಿನ ಗ್ರಾಮೀಣ ಭಾಗಗಳಲ್ಲಿ ಮರೀಚಿಕೆಯೇ ಆಗಿದೆ.

ಕರೋನಾ ಲಾಕ್ ಡೌನ್ ನಿಂದ ಉತ್ತರ ಪ್ರದೇಶದ ಶಮ್ಲಿ ಜಿಲ್ಲೆಯ ತಮ್ಮ ಮೂಲಗ್ರಾಮ ದಂಗ್ರೋಲ್ ನಲ್ಲಿಯೇ ಉಳಿಯುವಂತಾದ ಅಂತರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಅನಿಲ್ ಚೌಧರಿ ಮೊಬೈಲ್ ಸಿಗ್ನಲ್ ಗಾಗಿ ಹರಸಾಹಸ ಪಡುತ್ತಿದ್ದಾರೆ ಎಂಬ ವರದಿ ಪತ್ರಿಕೆಗಳ ಕ್ರೀಡಾಪುಟಗಳಲ್ಲಿ ಪ್ರಮುಖ‌ ಜಾಗವನ್ನೇ ಗಿಟ್ಟಿಸಿತ್ತು. ಆದರೆ ಅತಿ ವೇಗದ 5ಜಿ, ʼವರ್ಕ್ ಫ್ರಮ್ ಹೋಮ್ʼ ಕುರಿತು ಮಾತು ಕೇಳಿಬರುತ್ತಿರುವ ಈ ಕಾಲದಲ್ಲಿ ಭಾರತದ ಲಕ್ಷಾಂತರ ಜನರು ಕರೆ ಮಾಡಲು ಅಗತ್ಯವಿರುವ ಕನಿಷ್ಠ ಮಟ್ಟದ 2ಜಿ ಸಿಗ್ನಲ್ ಗೂ ಪರದಾಡುತ್ತಿರುವ ಸ್ಥಿತಿ ಇದೆ ಅನ್ನೋದು ಕೂಡಾ ಅರಿವಿಗೆ ಬಂದಿದೆ. ಅದರಲ್ಲೂ ಕರೋನಾದಂತಹ ವಿಷಮ ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸಿಗ್ನಲ್ ನಿಂದ ದೊರಕುವ ಸಹಾಯ ಅಷ್ಟಿಷ್ಟಲ್ಲ.

ಉತ್ತರ ಕನ್ನಡದ ಯಲ್ಲಾಪುರ, ಶಿರಸಿ, ಸಿದ್ದಾಪುರ ಸೇರಿದಂತೆ ಮಲೆನಾಡಿನ ಹಲವು ತಾಲೂಕುಗಳ ಗ್ರಾಮಾಂತರ ಪ್ರದೇಶಗಳಲ್ಲಿ ಮೊಬೈಲ್ ಸಿಗ್ನಲ್ ಎಂಬುದು ಮರೀಚಿಕೆಯೇ ಆಗಿದೆ. ಸರ್ಕಾರೀ ಸೇವೆಗಳನ್ನು ಸಹ ಆನ್ ಲೈನ್ ನಲ್ಲಿ ಪಡೆಯುವತ್ತ ವ್ಯವಸ್ಥೆ ಸಾವಧಾನವಾಗಿ ಬದಲಾಗುತ್ತಿದೆ. ಆದರೆ ಕರೆ ಮಾಡಲು ಸಹ ಈ ಭಾಗದ ಹಳ್ಳಿಗಳ ಜನ ಪರದಾಡಬೇಕಿದೆ. ಯಾವ ಗುಡ್ಡ,ಬೆಟ್ಟ ಏರಿದರೆ “ಎಷ್ಟು ಕಡ್ಡಿ” ಸಿಗ್ನಲ್ ಬರಬಹುದೆಂಬ ಲೆಕ್ಕಾಚಾರ ಹಾಕಬೇಕಾದ ಪರಿಸ್ಥಿತಿ ಈಗಲೂ ಇದೆ ಎಂಬುದು ಡಿಜಿಟಲ್ ಇಂಡಿಯಾದ ನೈಜ ಸ್ಥಿತಿಯನ್ನು ತೋರಿಸುತ್ತದೆ. ಎತ್ತರದಲ್ಲಿ ಸಿಗ್ನಲ್ ಬರುತ್ತದೆಂಬ ಕಾರಣಕ್ಕೆ ಮರ ಹತ್ತಿ ಕೂರಬೇಕಾದ ಪರಿಸ್ಥಿತಿಯೂ ಇದೆ.

ಕೆಲವು ವರ್ಷಗಳ ಹಿಂದೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಸದಸ್ಯ ಅನಂತ ಕುಮಾರ್ ಹೆಗ್ಡೆ, ದುರ್ಗಮ‌ ಪ್ರದೇಶಗಳಲ್ಲೂ ಸಂಪರ್ಕ ಸಾಧ್ಯವಾಗುವ ‘ವೈಟ್ ಸ್ಪೇಸ್’ ಅಂತರ್ಜಾಲ ಯೋಜನೆಯ ಪೈಲಟ್ ಅಧ್ಯಯನಕ್ಕೆ ಕರ್ನಾಟಕದಲ್ಲೇ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಗೆ ಒಪ್ಪಿಗೆ ದೊರಕಿದೆ.‌ಈ ಯೋಜನೆ ಯಶ ಕಂಡರೆ ಇಡೀ ಜಿಲ್ಲೆಗೆ ವೇಗದ ಅಂತರ್ಜಾಲ ಸೌಲಭ್ಯ ಲಭಿಸುತ್ತದೆ ಎಂದಿದ್ದರು. ನಂತರ ಈ ಯೋಜನೆಯ ಕಥೆ ಏನಾಯಿತೋ ಏನೋ.

ಹಲವು ಕಾಲೇಜುಗಳು,ಕಂಪನಿಗಳು ಈಗಾಗಲೇ ‘ಜೂಮ್ ‘ ಆ್ಯಪ್ ನಲ್ಲಿ ಮೀಟಿಂಗ್ ನಡೆಸಿವೆ. ಸಿಗ್ನಲ್ ಸಮಸ್ಯೆಯ ಕಾರಣ ಮೀಟಿಂಗ್ ಕರೆದ ವಿಷಯವೇ ಹಲವು ವಿದ್ಯಾರ್ಥಿಗಳಿಗೆ ತಿಳಿಯಲಿಲ್ಲ. ಬೆಂಗಳೂರಿನ ಖಾಸಗಿ ಕಂಪನಿಯ ಅಕೌಂಟ್ ವಿಭಾಗದಲ್ಲಿ ಕೆಲಸ ಮಾಡುವ ಮಹೇಶ್ ಭಟ್ ಅವರಂತೆ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆಯೂ ಹೆಚ್ಚಿದೆ. ಲಾಕ್ ಡೌನ್ ನಲ್ಲಿ ಮನೆಯಿಂದ ಕೆಲಸ ಮಾಡಬೇಕು. ಯಲ್ಲಾಪುರ ತಾಲೂಕಿನ ಬಾಸಲಿನ ಅವರ ಊರಲ್ಲಿ ಕರೆ ಮಾಡಲು ಅಗತ್ಯವಿರುವ ಸಿಗ್ನಲ್ ಸಹ ಸಿಗುವುದಿಲ್ಲ. ಕನಿಷ್ಟ ಮಟ್ಟದ ಸೇವೆಯನ್ನೂ ನೀಡದ ಬಿಎಸ್ಎನ್ಎಲ್ ಲ್ಯಾಂಡ್ ಲೈನ್ ಫೋನುಗಳನ್ನು ಹಲವು ವರ್ಷಗಳ ಹಿಂದೆಯೇ ಕಿತ್ತೆಸೆಯಲಾಗಿದೆ. ಆದ್ದರಿಂದ ಬೆಂಗಳೂರಲ್ಲಿಯೇ ಉಳಿದಿದ್ದಾರೆ. “ಒಂದುವೇಳೆ ಊರಲ್ಲಿ ಸಿಗ್ನಲ್ ಸಿಗುತ್ತಿದ್ದರೆ ಪೂರ್ಣಾವಧಿ ಮನೆಯಿಂದಲೇ ಕೆಲಸ ಮಾಡುತ್ತಿದ್ದೆ” ಎನ್ನುತ್ತಾರವರು. ಇದರಿಂದ ಬೆಂಗಳೂರಿನ ಮೇಲೆ ಬೀಳುವ ಒತ್ತಡವೂ ಕಡಿಮೆಯಾಗುತ್ತದೆ. ಊರಲ್ಲಿ ಉತ್ತಮ ವೇಗದ ಅಂತರ್ಜಾಲ ದೊರಕಿದರೆ ಊರಿಗೆ ಪೂರ್ಣಾವಧಿಯಲ್ಲಿ ಮರಳುವವರ ಸಂಖ್ಯೆ ಮಲೆನಾಡ ಭಾಗದಲ್ಲಿ ದೊಡ್ಡದಿದೆ. ಈ ಮೂಲಕ ವಿಕೇಂದ್ರೀಕರಣದ ಅವಶ್ಯಕತೆಯನ್ನು ಕರೋನಾ ಹಲವು ಆಯಾಮಗಳಲ್ಲಿ ಒತ್ತಿ ಹೇಳುತ್ತಿದೆ.

ಗ್ರಾಮೀಣ ಭಾಗದಲ್ಲಿ ಬಿಎಸ್ಎನ್ಎಲ್ ಲ್ಯಾಂಡ್ ಲೈನ್ ಸೇವೆ ಗತಿಗೆಟ್ಟ ನಂತರ ಸ್ವಯಂ ಪ್ರೇರಿತರಾಗಿ ಸ್ಥಳೀಯರು ಲ್ಯಾಂಡ್ ಲೈನನ್ನು ಮೊಟಕುಗೊಳಿಸಿದ್ದರು. ಪ್ರತಿ ತಿಂಗಳು ಸೇವಾ ಶುಲ್ಕ ತುಂಬಲು ಎಂದೇ ಲ್ಯಾಂಡ್ ಲೈನ್ ಇಟ್ಟುಕೊಳ್ಳುವುದು, ಒಂದು ಕರೆ ಮಾಡಲೂ ಸಾಧ್ಯವಿಲ್ಲ ಎಂಬ ಮಾತು ಆಗ ಸರ್ವೇಸಾಮಾನ್ಯವಾಗಿತ್ತು. ನಂತರ ಬಿಎಸ್ಎನ್ಎಲ್ ಮೊಬೈಲ್ ಸಿಗ್ನಲ್ ದೊರಕಲಾರಂಭಿಸಿದರೂ ಸಹ ಆ ಸೇವೆಯೂ ಅಷ್ಟಕ್ಕಷ್ಟೇ ಎಂಬತ್ತಿತ್ತು. ಮಳೆಗಾಲದಲ್ಲಿ ಮತ್ತು ವಿದ್ಯುತ್ ಕೈಕೊಟ್ಟ ದಿನಗಳಲ್ಲಿ ಮೊಬೈಲ್ ಸಿಗ್ನಲ್ ಎಂಬುದು ಇದೆ ಎಂಬುದೇ ಮಲೆನಾಡ ಹಳ್ಳಿಗಳಿಗೆ ಮರೆಯುವ ಸ್ಥಿತಿ ನಿರ್ಮಾಣವಾಗುತ್ತಿತ್ತು. ರಾತ್ರಿ ಕರೆ ಮಾಡಲು ಮೊಬೈಲ್ ಸಿಗ್ನಲ್ ಗಾಗಿ ಜೀವವನ್ನು ಮುಷ್ಟಿಯಲ್ಲಿ ಹಿಡಿದು ಹೋಗಬೇಕಾದ ಸ್ಥಿತಿ ಇದೆ ಎಂದರೆ ಅತಿಶಯವಲ್ಲ.

ಒಂದುವೇಳೆ ವೇಗದ ಅಂತರ್ಜಾಲ ಬಳಸುವಷ್ಟು ಸಿಗ್ನಲ್ ದೊರಕಿದರೆ ಮಲೆನಾಡ ಹಳ್ಳಿಗಳ ಆರ್ಥಿಕ,ಶೈಕ್ಷಣಿಕ ಪ್ರಗತಿ ಇಮ್ಮಡಿಯಾಗುವುದರಲ್ಲಿ ಸಂದೇಹವಿಲ್ಲ ಎನ್ನುತ್ತಾರೆ ಅಂಕೋಲಾ ತಾಲೂಕಿನ ಡೋಂಗ್ರಿ ಪಂಚಾಯತಿಯ ಪ್ರಶಾಂತ ಹೆಗ್ಗಾರ್. ಡೋಂಗ್ರಿ ಪಂಚಾಯತಿ ವ್ಯಾಪ್ತಿಯಲ್ಲಿ ಉತ್ತಮ ಸಿಗ್ನಲ್ ಸಿಗುವ ಕಾರಣಕ್ಕೆ ಸುತ್ತಮುತ್ತಲಿನ ಗ್ರಾಮ ಪಂಚಾಯತಿಗಿಂತ ಇಲ್ಲಿ ಜನಸಾಮಾನ್ಯರನ್ನು ತ್ವರಿತವಾಗಿ ಸಂಪರ್ಕಿಸಿ ಮಾಹಿತಿ, ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕರೋನಾ ಕಾಲದಲ್ಲಂತೂ ಮೊಬೈಲ್ ಸಿಗ್ನಲ್ ಮತ್ತು ಅಂತರ್ಜಾಲದ ಸದ್ಬಳಕೆ ಹಳ್ಳಿಗಳನ್ನು ಜೋಡಿಸುವ ಕೊಂಡಿಯಾಗಿ ಕೆಲಸ ನಿರ್ವಹಿಸುತ್ತಿದೆ ಎಂಬುದು ಅವರ ನೇರನುಡಿ.

ಈ ಭಾಗದ ಅಡಿಕೆ ಬೆಳೆಗಾರರ ದೊಡ್ಡ ಸಂಸ್ಥೆಯಾದ ಟಿಎಸ್ಎಸ್ ತನ್ನ ಗ್ರಾಹಕರಿಗೆ ಮಾರುಕಟ್ಟೆಯ ಆಗುಹೋಗು, ಅಡಿಕೆ ದರ ಮತ್ತು ಕೃಷಿ ಸಂಬಂಧಿ ಮಾಹಿತಿಗಳನ್ನು ವಾಟ್ಸಾಪ್ ಬ್ರಾಡ್ ಕಾಸ್ಟ್ ಮೂಲಕ ಬಿತ್ತರಿಸುತ್ತದೆ. ಅಂತರ್ಜಾಲ‌ ಸೌಲಭ್ಯದ ಕೊರತೆಯಿಂದ ಇಂತಹ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂಬುದು ಕೊಡ್ಲಗದ್ದೆಯ ನಾರಾಯಣ ದುಂಡಿ ಅವರ ಅಳಲು. ವಾಟ್ಸಾಪಿನಿಂದ ಮಾಹಿತಿ ಪಡೆಯಲೂ 6 ಕೀಮಿ ದೂರದ ಗುಳ್ಳಾಪುರವನ್ನೇ ಅವರು ಅವಲಂಬಿಸಿದ್ದಾರೆ. ಲಾಕ್ ಡೌನ್ ನಿಂದ ಪಾಸ್ ರಹಿತರಿಗೆ ಪೆಟ್ರೊಲ್ ಲಭ್ಯವಿಲ್ಲದ ಕಾರಣ ಅಗತ್ಯವಿದ್ದ ಔಷಧಗಳ ಚೀಟಿಗಳ ಫೊಟೋವನ್ನು ಸ್ವಯಂಸೇವಕರಿಗೆ ವಾಟ್ಸಾಪ್ ಮಾಡಲು ಇಷ್ಟು ದೂರ ನಡೆದು ಕ್ರಮಿಸಿದವರ ಸಂಖ್ಯೆಯೂ ಕಡಿಮೆಯಿಲ್ಲ.

ಸಿಗ್ನಲ್ ಸಮಸ್ಯೆ ಅರಿತು ಸಿಗ್ನಲ್ ಬೂಸ್ಟರ್ ಅಳವಡಿಸುವ ಸಾಹಸಕ್ಕೂ ಕೆಲವರು ಕೈಹಾಕಿದ್ದಾರೆ. ಶಿರಸಿ, ಯಲ್ಲಾಪುರದಲ್ಲಿ ಸಿಗ್ನಲ್ ಬೂಸ್ಟರ್ ಅಳವಡಿಸುವ ಸಂಸ್ಥೆಗಳಿವೆಯಾದರೂ ಅಳವಡಿಸುವ ಹತ್ತಿರದ ಎಲ್ಲ ನೆಟ್ವರ್ಕ್ ಗಳನ್ನೂ ಸೆಳೆಯುವ ಮೊಬೈಲ್ ಬೂಸ್ಟರ್ ನ ಮೊತ್ತ ಕಡಿಮೆಯೇನಿಲ್ಲ. ಕರೋನಾದಿಂದ ಬೇಡಿಕೆ ಹೆಚ್ಚಾಗಿ ದರ ಇನ್ನಷ್ಟು ಹೆಚ್ಚಾಗುವ ಸಂಭವವಿದೆ. ಇಷ್ಟು ಹಣ ಕೊಟ್ಟರೂ ಮಳೆಗಾಲದಲ್ಲಿ ಕೈಕೊಡುವ ಸಾಧ್ಯತೆಯೇ ಹೆಚ್ಚು. ಗ್ರಾಮೀಣರು ಅಂತರ್ಜಾಲ ಬೇಕಿದ್ದರೆ ಇಂಟರ್ನೆಟ್ ಪ್ಯಾಕ್ ಗೊಂದೆ ಅಲ್ಲದೇ ಸಿಗ್ನಲ್ ಬೂಸ್ಟರ್ ಗೂ ಹಣ ಸುರಿಯಬೇಕಾದ ಅನಿವಾರ್ಯತೆಯಿದೆ. ಕರೋನಾದ ದುರಿತ ಕಾಲ ಮೊಬೈಲ್ ಸಿಗ್ನಲ್ ಮತ್ತು ಅಂತರ್ಜಾಲ ವ್ಯವಸ್ಥೆ ಮೂಲಭೂತ ಹಕ್ಕಾಗಬೇಕು ಎಂಬ ಮಲೆನಾಡ ಗ್ರಾಮೀಣರ ಕೂಗಿಗೆ ಇಂಬು ನೀಡಿದೆ. ವಿಕೇಂದ್ರೀಕರಣವೇ ಅಭಿವೃದ್ಧಿಯ ಮದ್ದು ಎಂಬುದನ್ನು ಸಾರಿ ಸಾರಿ ಹೇಳುತ್ತಿದೆ.

ಲೇಖಕರು: ಪತ್ರಿಕೋದ್ಯಮ ವಿದ್ಯಾರ್ಥಿ, ಎಸ್‌ಡಿಎಂ ಕಾಲೇಜು, ಉಜಿರೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...